ADVERTISEMENT

ಫ್ಯಾಷನ್ ಡ್ರೆಸ್‌ ವಯಸ್ಸಿನ ಹಂಗೇಕೆ?

ಪ್ರಜಾವಾಣಿ ವಿಶೇಷ
Published 26 ಜುಲೈ 2019, 19:30 IST
Last Updated 26 ಜುಲೈ 2019, 19:30 IST
Kedarnath promotion
Kedarnath promotion   

ಇತ್ತೀಚೆಗೆ ದೆಹಲಿಯ ವಿಮಾನ ನಿಲ್ದಾಣದ ಲೌಂಜ್‌ನಲ್ಲಿ ಹಿರಿಯ ಸಿನಿಮಾ ಕಲಾವಿದೆ ನೀನಾ ಗುಪ್ತಾ ಪ್ರವೇಶಿಸಿದಾಗ ಅಲ್ಲಿದ್ದ ಮಹಿಳಾ ಪ್ರಯಾಣಿಕರೇ ಮುಂದೆ ಬಂದು ಮೆಚ್ಚುಗೆ ಸೂಚಿಸಿದರಂತೆ. ಅರವತ್ತರ ವಯಸ್ಸಿನ ನೀನಾ ಮಿನಿ ಷಾರ್ಟ್ಸ್‌ ಹಾಗೂ ಟಿ ಷರ್ಟ್‌ನಲ್ಲಿ ಆರಾಮವಾಗಿ ಓಡಾಡುತ್ತಿದ್ದುದು ಹಲವರ ಕಣ್ಣು ತಿರುಗುವಂತೆ ಮಾಡಿತ್ತು. ಅಲ್ಲಿ ‘ಈ ವಯಸ್ಸಿನಲ್ಲಿ ಬೇಕಿತ್ತಾ?’ ಎಂಬ ಪಿಸುನುಡಿ ಇರಲಿಲ್ಲ. ದೆಹಲಿಯಲ್ಲಿ ನಡೆದ ನಾಟಕ ಪ್ರದರ್ಶನಕ್ಕೂ ಇದೇ ತೆರನಾದ ಉಡುಪು ಧರಿಸಿದ್ದ ಆಕೆ ಆ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಾಗ ಅಭಿಮಾನಿಗಳು ಹೊಗಳಿಕೆಯ ಮಾತುಗಳನ್ನು ಸುರಿಸಿದ್ದರು.

ಈಗ ದೆಹಲಿಯಿಂದ ಬೆಂಗಳೂರಿನ ಎಂ.ಜಿ.ರಸ್ತೆಗೆ ಬನ್ನಿ. ಷಾರ್ಟ್ಸ್‌, ಮಿನಿ, ಮೈಕ್ರೊ ಉಡುಪು ಧರಿಸಿದ ವಿದೇಶಿ ವೃದ್ಧೆಯರು ಓಡಾಡಿದರೆ ಯಾರ ಕಣ್ಣೂ ಹೊರಳದು, ಬಾಯಿಯೂ ಪಿಸು ನುಡಿಯದು. ಭಾರತೀಯ ಮಹಿಳೆ, 50–60ರ ಆಜುಬಾಜಿನವಳು ಇಂತಹ ದಿರಿಸು ತೊಟ್ಟವಳು ಎದುರಾದರೂ ‘ವಯಸ್ಸಾದರೂ ಮಾಡ್‌ ಡ್ರೆಸ್‌ ಹಾಕಿಕೊಂಡಿದ್ದಾರೆ ನೋಡಿ. ಅವರಿಗೆ ಒಪ್ಪುತ್ತೆ ಅಲ್ವೇ’ ಎಂಬ ಮಾತು, ನೋಟದ ಹಿಂದೆ ವಯಸ್ಸೇನೂ ವಿಶೇಷ ಎನಿಸುವುದಿಲ್ಲ.

ವಯಸ್ಸಾದ ಮೇಲೆ ಟ್ರೆಂಡಿ ಡ್ರೆಸ್‌, ಫ್ಯಾಷನ್‌ ಉಡುಪುಗಳನ್ನು ತೊಡಬಾರದು ಎಂಬ ನಿಲುವು ನಿಧಾನವಾಗಿ ಬದಲಾಗುತ್ತಿದೆ.

ADVERTISEMENT

‘ಯಾಕೆ ತೊಡಬಾರದು? ವಯಸ್ಸಿಗೆ ತಕ್ಕಂತೆ ಉಡುಪು ಧರಿಸಬೇಕು ಎಂಬ ಮಾತು ಈಗ ಬದಲಾಗುತ್ತಿರುವ ಫ್ಯಾಷನ್‌ನಂತೆ ಔಟ್‌ಡೇಟೆಡ್‌. ನನ್ನ ಗ್ರಾಹಕರಲ್ಲಿ ಹೆಚ್ಚಿನವರು 50ಕ್ಕಿಂತ ಹೆಚ್ಚು ವಯಸ್ಸಾದವರು. ಡಿಸೈನರ್‌ ಗೌನ್‌ ಮಾತ್ರವಲ್ಲ, ರಿಪ್ಡ್‌, ಟಾರ್ನ್‌ ಜೀನ್ಸ್‌, ಜೆಗ್ಗಿಂಗ್‌ ಮೊದಲಾದವುಗಳನ್ನು ಕೇಳಿ ಖರೀದಿಸುವವರು ಈ ಗ್ರಾಹಕರೇ’ ಎನ್ನುತ್ತಾರೆ ಬೆಂಗಳೂರಿನಲ್ಲಿ ಫ್ಯಾಷನ್‌ ಉಡುಪುಗಳ ರಿಟೇಲ್‌ ಮಳಿಗೆ ನಡೆಸುತ್ತಿರುವ ಆಲಿಯಾ ಅದೀಬ್‌.

ನಿಮ್ಮ ಸುತ್ತಮುತ್ತ ಒಮ್ಮೆ ಚಿತ್ತ ಹರಿಸಿ. 25ರ ಯುವತಿಯರು ಧರಿಸುವ ಜಂಪ್‌ ಸೂಟ್‌ ಅನ್ನು 50ರ ಆಜುಬಾಜಿನವರೂ ಧರಿಸಿ ಖುಷಿ ಪಡುತ್ತಾರೆ. ಉಡುಪಿಗೆ ವಯಸ್ಸಿನ ತಡೆಯೇಕೆ ಅಲ್ಲವೇ?

ಸಾಮಾಜಿಕ ಜಾಲತಾಣದ ಪ್ರಭಾವ

ಈ ವಿಷಯದಲ್ಲಿ ಸಾಮಾಜಿಕ ಜಾಲತಾಣ ಹೆಚ್ಚಿನ ಪ್ರಭಾವ ಬೀರುತ್ತಿದೆ. 50 ವರ್ಷ ಮೀರಿದ ಮಹಿಳೆಯರು, ದೇಹವನ್ನು ಫಿಟ್‌ ಆಗಿ ಇಟ್ಟುಕೊಂಡವರು ಸ್ಟೈಲಿಷ್‌ ಆದ ಉಡುಪು ಧರಿಸಿ ಫೋಟೊ ಹಾಕಿಕೊಳ್ಳುವುದು ಇತರ ಮಹಿಳೆಯರು ಈ ವಿಷಯದಲ್ಲಿ ಸ್ವತಂತ್ರ ಮನೋಭಾವ ತಳೆಯಲು ಕಾರಣ. ಆಧುನಿಕ ಉಡುಪು ಧರಿಸುವ ಆಸೆಯನ್ನು ಅದುಮಿಟ್ಟುಕೊಂಡಿದ್ದ ಹಲವರ ಆತ್ಮವಿಶ್ವಾಸ ಹೆಚ್ಚಲೂ ಇದೇ ಕಾರಣ. ಜೊತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ಹೆಚ್ಚಾಗಿದ್ದು, 40–50 ರ ನಂತರವೂ ಬೊಜ್ಜಿಲ್ಲದ, ಫಿಟ್ ಆದ ದೇಹ ಇಟ್ಟುಕೊಂಡು ಯಾವುದೇ ರೀತಿಯ ಉಡುಪು ಧರಿಸಿದರೂ ನಿಭಾಯಿಸಬಲ್ಲರು.

ಷಾಪಿಂಗ್‌ಗೆ ಹೋದಾಗ ಕೆಲವರಾದರೂ ಗಮನಿಸಿರಬಹುದು, ತಾಯಿ– ಮಗಳು ಇಬ್ಬರೂ ಒಂದೇ ರೀತಿಯ ಉಡುಪು ಖರೀದಿಸುವುದು, ಮಗಳೇ ತಾಯಿಗೆ ‘ಮಮ್ಮಾ, ಈ ಡ್ರೆಸ್‌ನಲ್ಲಿ ನೀನು ಸೂಪರ್‌ ಆಗಿ ಕಾಣಿಸುತ್ತೀಯ. ನನಗಿಂತ ಚೆನ್ನಾಗಿ ನಿನಗೇ ಈ ಉಡುಪು ಚೆನ್ನಾಗಿ ಒಪ್ಪುತ್ತದೆ’ ಎಂದು ಮಾತನಾಡಿಕೊಳ್ಳುವುದನ್ನು ಕೇಳಿರಬಹುದು.

‘ಬೆಂಗಳೂರಿನ ಮಾಲ್‌ಗೆ ಹೋದರೆ ಹೆಣ್ಣುಮಕ್ಕಳೇ ತಮ್ಮ ತಾಯಿಗೆ ನವನವೀನ ಮಾದರಿಯ ಡ್ರೆಸ್‌ ಆಯ್ಕೆ ಮಾಡಿ ಟ್ರಯಲ್‌ ರೂಮ್‌ಗೆ ಕಳಿಸುವುದನ್ನು ನೋಡಿದ್ದೇನೆ. ಬದಲಾವಣೆಗೆ ನಾವೆಷ್ಟು ವೇಗವಾಗಿ ತೆರೆದುಕೊಳ್ಳುತ್ತಿದ್ದೇವೆ ಎಂಬುದು ಇದನ್ನು ನೋಡಿದರೆ ಗೊತ್ತಾಗುತ್ತದೆ’ ಎನ್ನುವ ಕೇರಳದ ಮಾಧ್ಯಮ ಸಂಸ್ಥೆಯೊಂದರ ಉದ್ಯೋಗಿ ಶ್ರೀದೇವಿ, ವರ್ಷಗಳ ಹಿಂದೆ ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ.

‘ಉಡುಪಿನ ಮಳಿಗೆಯ ಹೊರಗಡೆ ಪ್ರದರ್ಶಿಸಿದ ಹೊಸ ವಿನ್ಯಾಸದ ಡ್ರೆಸ್‌ ಹಿಡಿಸಿತು. ಅಂಗಡಿಯೊಳಗೆ ಹೋಗಿ ಕೇಳಿದರೆ ಮಾರಾಟದ ಕೌಂಟರ್‌ನಲ್ಲಿದ್ದ ಹುಡುಗಿ ‘‘ಮೇಡಂ ಅದು ಯಂಗ್‌ಸ್ಟರ್ಸ್‌ ಹಾಕಿಕೊಳ್ಳುವ ಉಡುಪು’’ ಎನ್ನಬೇಕೆ! ‘‘ನನಗಲ್ಲ, ಮಗಳಿಗೆ’’ ಎಂದು ಹೇಳಿ ಮುಜುಗರ ತಪ್ಪಿಸಿಕೊಂಡೆ’ ಎನ್ನುವ ಅವರು, ‘ನಾವು ಬದಲಾಗಲು ಸಮಾಜ ಇನ್ನೂ ಬಿಡುತ್ತಿಲ್ಲ ಎಂದುಕೊಂಡಿದ್ದೆ. ಅದರೆ ಇತ್ತೀಚಿಗೆ ಈ ಬದಲಾವಣೆಯ ಗಾಳಿ ಬೀಸುತ್ತಿದೆ’ ಎಂದು ನಗುತ್ತಾರೆ.

ಕೆಲವು ವರ್ಷಗಳ ಹಿಂದೆ ಹಿಂದಿ ಸಿನಿಮಾ ನಟಿ ಕಾಜೋಲ್‌ ಈ ವಿಷಯದಲ್ಲಿ ದಿಟ್ಟವಾಗಿ ಮಾತನಾಡಿದ್ದರು. ‘ನಲ್ವತ್ತು ದಾಟಿದ ಕೂಡಲೇ ಮಹಿಳೆಯರು ಕಂದು, ಬಿಸ್ಕತ್‌ ರಂಗಿನಂತಹ ಡಲ್‌ ಬಣ್ಣಗಳ ಉಡುಪಿಗೆ, ಸೀರೆಗಳಿಗೆ ಸೀಮಿತವಾಗಬೇಕೆ?’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಲ್ಲದೇ, ತಾವು ಧರಿಸುವ ಗಾಢ ರಂಗಿನ ಉಡುಪುಗಳನ್ನು ಸಮರ್ಥಿಸಿಕೊಂಡಿದ್ದರು.

ಬದಲಾಗಬೇಕು ಮಾನಸಿಕ ಸ್ಥಿತಿ

ಉಡುಪು ಮಾತ್ರವಲ್ಲ, ಲಿಪ್‌ಸ್ಟಿಕ್‌ ರಂಗು ಕೂಡ ಅಷ್ಟೇ. ಗಾಢ ಕೆಂಪು ರಂಗನ್ನು ಆಯ್ಕೆ ಮಾಡಿಕೊಳ್ಳುವ ಉದ್ದೇಶದಿಂದ ಹೋದರೆ, ಕೌಂಟರ್‌ನಲ್ಲಿದ್ದವರು ಕಂದು ಬಣ್ಣದ ಲಿಪ್‌ಸ್ಟಿಕ್‌ಗಳಿರುವ ಪೆಟ್ಟಿಗೆ ಮುಂದಿಡುತ್ತಾರೆ. ಚಪ್ಪಲಿಗೆ ಅಂಗಡಿಗೆ ಹೋಗಿ ಎತ್ತರ ಹಿಮ್ಮಡಿಯ ಶೂ ನೋಡುತ್ತ ನಿಂತರೆ, ಚಪ್ಪಟೆ ಚಪ್ಪಲಿಯತ್ತ ಅಂಗಡಿಯಾತ ಗಮನ ಸೆಳೆದು ಹುಳ್ಳಗೆ ನಗುತ್ತಾನೆ. ಕಿವಿಗೆ ದೊಡ್ಡದಾದ ಹೂಪ್‌ ರಿಂಗ್‌ ಕೇಳಿದರೂ ಇದೇ ತರಹದ ಪ್ರತಿಕ್ರಿಯೆ. ಇವರ ಸಹವಾಸವೇ ಬೇಡ ಎಂದು ಎಷ್ಟೋ ಮಹಿಳೆಯರು ಮಾಲ್‌ನಲ್ಲಿ ತಮಗೆ ಬೇಕಾದಂತೆ ತಿರುಗಾಡಿಕೊಂಡು ಇಷ್ಟದ ಆಕ್ಸೆಸ್ಸರಿಗಳನ್ನು ಆಯ್ಕೆ ಮಾಡಿಕೊಳ್ಳುವುದಿದೆ. ಮಹಾನಗರಗಳ ಮಹಿಳೆಯರಿಗೇನೋ ಈ ಆಯ್ಕೆಗಳಿರುತ್ತವೆ. ಆದರೆ ಪುಟ್ಟ ಪಟ್ಟಣಗಳಲ್ಲಿ ಈ ಸೌಲಭ್ಯವೂ ಇರುವುದಿಲ್ಲ, ಫ್ಯಾಷನ್‌ ಉಡುಪು ಧರಿಸಿ ಓಡಾಡಲೂ ಧೈರ್ಯ ಸಾಲುವುದಿಲ್ಲ.

‘ಸೀರೆಯ ಬ್ಲೌಸ್‌ ಹೊಲಿಸಲು ದರ್ಜಿಯ ಅಂಗಡಿಗೆ ಹೋಗಿದ್ದೆ. ಈಗೆಲ್ಲ ಬ್ಲೌಸ್‌ ಕತ್ತಿನ ವಿನ್ಯಾಸ ತರಾವರಿ ಮಾಡುತ್ತಾರಲ್ಲ ಎಂದು ಡಿಸೈನ್‌ ಪುಸ್ತಕ ಹುಡುಕಲು ಹೊರಟರೆ, ‘‘ಮೇಡಂ, ನಿಮಗೆ ಮಾಮೂಲು ರೌಂಡ್‌ ಅಥವಾ ಸ್ಕ್ವೇರ್‌ ನೆಕ್‌ ವಿನ್ಯಾಸ ಹೊಂದುತ್ತದೆ’’ ಎನ್ನಬೇಕೆ! ಕಿರಿಕಿರಿಯಾಗಿ ಆನ್‌ಲೈನ್‌ನಲ್ಲಿ ನನಗೆ ಬೇಕಾದ ರೆಡಿ ಬ್ಲೌಸ್‌ ತರಿಸಿಕೊಂಡೆ’ ಎನ್ನುತ್ತಾಳೆ ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವ ಮೇಧಾ ಲೋಕೇಶ್‌.

ಪುರುಷರಿಗೆ ಡ್ರೆಸ್‌ಕೋಡ್‌ ಇಲ್ಲವೇ?

ತಮಾಷೆಯೆಂದರೆ ಮಹಿಳೆಯರಿಗೆ ‘ಡ್ರೆಸ್‌ ಸೆನ್ಸ್‌’ ಬಗ್ಗೆ ಉಪದೇಶಿಸುವವರು ಪುರುಷರ ಉಡುಪಿನ ಮಾರ್ಗದರ್ಶಿ ಸೂತ್ರಗಳ ಬಗ್ಗೆ ಹೇಳುವುದಿಲ್ಲ. ಸಸ್ಪೆಂಡರ್‌ ಇರುವ ಪ್ಯಾಂಟ್‌ ತೊಟ್ಟ ವೃದ್ಧನಿಗೆ ‘ಹೊಟ್ಟೆ ಮೇಲೆ ಪ್ಯಾಂಟ್‌ ನಿಲ್ಲುವುದಿಲ್ಲ’ ಎಂದು ಸಮರ್ಥಿಸಿಕೊಳ್ಳುತ್ತಾರೆ. ಜೀನ್ಸ್‌ ಮತ್ತು ಟಿ ಷರ್ಟ್‌ ತೊಟ್ಟ ವೃದ್ಧನಿಗೆ ‘ಎಷ್ಟು ಜೀವನ ಪ್ರೀತಿ ಇದೆ ನೋಡಿ’ ಎಂದು ಮೆಚ್ಚುಗೆ ಸೂಚಿಸುತ್ತಾರೆ. ಬರ್ಮುಡಾ, ಷಾರ್ಟ್ಸ್‌ ಹಾಕಿಕೊಂಡು ಓಡಾಡಿದರೆ, ‘ಈ ವಯಸ್ಸಿನಲ್ಲೂ ದೇಹವನ್ನು ಹೇಗೆ ಫಿಟ್‌ ಇಟ್ಟುಕೊಂಡಿದ್ದಾರೆ’ ಎಂದು ಹೊಗಳುತ್ತಾರೆ.

ಮಹಿಳೆ ನಲ್ವತ್ತರ ಒಳಗೆ ದೇಹವನ್ನು ಚೂರುಪಾರು ತೋರಿಸುವ ಡ್ರೆಸ್‌ ಧರಿಸಿದರೆ ಅದು ‘ಕೂಲ್‌’. ನಲ್ವತ್ತರ ನಂತರ ಅದೇ ಡ್ರೆಸ್‌ ಕೆಂಗಣ್ಣಿಗೆ ಗುರಿಯಾಗಿ ಆ ‘ಕೂಲ್‌’ ಕರಗಿಬಿಡುತ್ತದೆ. ಹೆಚ್ಚೆಂದರೆ ಕತ್ತು, ಕತ್ತಿನ ಹಿಂಭಾಗ, ಮೊಳಕೈನಿಂದ ಮಣಿಕಟ್ಟಿನವರೆಗೆ ನಿಮ್ಮ ತ್ವಚೆ ಇಣುಕಿ ಹಾಕಬಹುದು. ಆದರಾಚೆ ಬೇಡವೇ ಬೇಡ ಎಂಬ ನೋಟ, ಮಾತುಗಳು.

ಆದರೆ ಈಗ ‘ವಯಸ್ಸಿಗೆ ತಕ್ಕಂತೆ ಉಡುಪು ಧರಿಸಿ’ ಎಂಬ ಮಾತು ಹಿಂದೆ ಸರಿದಿದೆ. ಏನಿದ್ದರೂ ಮನಸ್ಸಿಗೆ ಹಿಡಿಸಿದ, ಆ ಉಡುಪು ಧರಿಸಿದರೂ ಆತ್ಮವಿಶ್ವಾಸದಿಂದ ಓಡಾಡಬಲ್ಲೆ ಎಂಬ ನಂಬಿಕೆ ಇದ್ದರೆ ಸಾಕು.

ಸಾಂಪ್ರದಾಯಿಕ ಉಡುಪಿನತ್ತ ಯುವತಿಯರ ಆಕರ್ಷಣೆ

ಹಿಂದಿ ನಟಿ ಆಲಿಯಾ ಭಟ್‌ ಮಿಲೇನಿಯಲ್‌ ತಲೆಮಾರಿನ ಐಕಾನ್‌. ಆಕೆ ಸಿನಿಮಾ ಪ್ರಚಾರದ ಸಂದರ್ಭದಲ್ಲಿ, ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ ಸಾಂಪ್ರದಾಯಕ ಉಡುಪುಗಳಾದ ಸೀರೆ, ಲೆಹಂಗಾ, ಸಲ್ವಾರ್‌ ಧರಿಸಿ ಗಮನ ಸೆಳೆಯುತ್ತಾಳೆ. ಇನ್ನೊಬ್ಬಳು ಯುವ ನಟಿ ಸಾರಾ ಅಲಿ ಖಾನ್‌. ಆಕೆಯ ನೆಚ್ಚಿನ ಉಡುಪು ಸಲ್ವಾರ್‌ ಕಮೀಜ್‌ ಅಂತೆ.

ಕಳೆದ ದಶಕಕ್ಕೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯ ಯುವತಿಯರು ಸಾಂಪ್ರದಾಯಿಕ ಸೀರೆಗೆ ಮರಳುತ್ತಿರುವುದು ನಿಚ್ಚಳವಾಗಿದೆ. ಸೀರೆಯ ಸೌಂದರ್ಯ, ಅದರ ಮೆರುಗಿಗೆ, ಕಲಾತ್ಮಕ ವಿನ್ಯಾಸಕ್ಕೆ, ಆಧುನಿಕ ಶೈಲಿಯಲ್ಲಿ ಉಡಬಹುದಾದ ರೀತಿಗೆ, ವೈವಿಧಯಮಯವಾದ ಬ್ಲೌಸ್‌ಗಳಿಗೆ ಮರುಳಾದ ಯುವತಿಯರು ತಮ್ಮ ಸೀರೆಗಳ ಸಂಗ್ರಹವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.