ADVERTISEMENT

ಕಾಲ್ಬೆರಳಿನ ವೈಯಾರಕ್ಕೆ ಕಾಲುಂಗುರ ಸೊಬಗು!

ಭಾರ್ಗವಿ ಕೆ.ಆರ್.
Published 19 ಮಾರ್ಚ್ 2020, 19:30 IST
Last Updated 19 ಮಾರ್ಚ್ 2020, 19:30 IST
A pair of perfectly pedicured toes.Perfectly Pedicured
A pair of perfectly pedicured toes.Perfectly Pedicured   

ಬೆಳ್ಳಿ ಕಾಲುಂಗುರ ಕಾಲ್ಬೆರಳಿನ ಚಂದಕ್ಕೆ ಹಿಡಿದ ಕೈಗನ್ನಡಿಯಂತೆ. 3-5 ಸುತ್ತಿನ ಕಾಲುಂಗುರ ಆಧುನಿಕತೆಗೆ ತಕ್ಕಂತೆ ಬದಲಾಗಿದೆ. ಒಂದು ಕಾಲದಲ್ಲಿ ಗಂಡನ ಮನೆಯವರು ತೊಡಿಸಿದ ಕಾಲುಂಗುರವೇ ಅವಳ ಪಾಲಿಗೆ ಕೊನೆಯತನಕ ಉಳಿಯಬೇಕಿತ್ತು; ಮತ್ತೆ ಅದನ್ನು ತೆಗೆಯುವ ಮಾತೇ ಇರಲಿಲ್ಲ. ಆದರೆ ಬೆಳ್ಳಿ ಕಾಲುಂಗುರಕ್ಕೀಗ ಆಭರಣ ವಿನ್ಯಾಸಕರು ಆಧುನಿಕತೆಯ ಸ್ಪರ್ಶ ಕೊಟ್ಟಿದ್ದಾರೆ.

ಅಷ್ಟೇ ಅಲ್ಲದೆ ಇವುಗಳು ತೀರಾ ದುಬಾರಿ ಏನಲ್ಲ. ಕೈಗೆಟಕುವ ದರದಲ್ಲಿ ದೊರೆಯುತ್ತವೆ. ಹೆಣ್ಣಿಗೆ ಆಭರಣವೇ ಭೂಷಣ ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಈಗ ಬೆಳ್ಳಿ ಕಾಲುಂಗುರವು ತನ್ನ ಹಳೆಯ ರೂಪವನ್ನು ತೊರೆದು ತರಹೇವಾರಿ ರೀತಿಯಲ್ಲಿ ಸಿಗುತ್ತಿದೆ ಎಂದರೆ ಫ್ಯಾಷನ್‌ಪ್ರಿಯರಿಗೆ ಇನ್ನೇನು ಬೇಕು ಹೇಳಿ?

ಕಾಲ್ಬೆರಳಿನ ಸೌಂದರ್ಯ

ADVERTISEMENT

ಕಾಲ್ಬೆರಳಿನ ಉಗುರುಗಳಿಗೆ ರಂಗು ಹಚ್ಚಿ ಅದಕ್ಕೆ ಸುಂದರವಾದ ಕಾಲುಂಗುರ ಹಾಕಿದಾಗ ಅವುಗಳಿಗೆ ನಿಮ್ಮ ದೃಷ್ಟಿಯೆ ತಗುಲಬಹುದು!. ಇನ್ನು ಮಾರುಕಟ್ಟೆಯಲ್ಲಿ ನಾನಾ ರೀತಿಯ ಕಾಲುಂಗುರಗಳು ಕಣ್ಣಿಗೆ ಬೀಳುವಾಗ ಯಾರ ಚಿತ್ತ ತಾನೆ ಅತ್ತ ಹೋಗದೆ ಇರುತ್ತದೆ?

ಸರಳವಾದ ಚಿನ್ನದ ಕಾಲುಂಗುರ

ಸರಳವಾದ ತೆಳುವಾದ ಚಿನ್ನದ ಕಾಲುಂಗುರ ಲಾವಣ್ಯಮಯ ನೋಟ ನೀಡುತ್ತದೆ. ತೆಳುವಾದ ಎರಡರಿಂದ ಮೂರು ಸುತ್ತು ಹೊಂದಿರುವುದರಿಂದ ಸರಳವಾಗಿದ್ದರೂ ವಿಭಿನ್ನವಾಗಿ ಕಾಣಿಸುತ್ತದೆ.

ಪ್ರಕೃತಿಯ ಒಡನಾಟವನ್ನು ಇಷ್ಟಪಡುವವರು ಅದಕ್ಕೆ ಹೊಂದುವಂತಹ ವಿನ್ಯಾಸಗಳಿರುವ ಕಾಲುಂಗುರವನ್ನು ಧರಿಸಿ ಖುಷಿಪಡಬಹುದು. ಚಿನ್ನ ಅಥವಾ ಬೆಳ್ಳಿ ಕಾಲುಂಗುರದಲ್ಲಿ ಸೂರ್ಯ, ಚಂದ್ರ, ನಕ್ಷತ್ರಗಳ ಚಿತ್ತಾರವಿರುವ ವಿನ್ಯಾಸಗಳನ್ನು ಮೂಡಿಸಬಹುದು.

ಬೆಳ್ಳಿ ಕಾಲುಂಗುರದಲ್ಲಿ ವಜ್ರ

ಯಾವುದಾದರೂ ವಿಶೇಷ ಸಂದರ್ಭಗಳಿದ್ದಲ್ಲಿ ಬೆಳ್ಳಿಯ ಜೊತೆ ವಜ್ರವಿರುವ ಕಾಲುಂಗುರಗಳು ಹೊಳೆಯುತ್ತ ಎಲ್ಲರ ಗಮನ ಸೆಳೆಯುತ್ತವೆ. ಅಷ್ಟೇ ಅಲ್ಲದೆ ಇದು ಬಹಳ ಆಕರ್ಷಣೀಯವಾಗಿ ಕಾಣುತ್ತದೆ. ಇದಕ್ಕೆ ಪ್ರೆಸ್‌ ಮಾಡುವ ಸೌಲಭ್ಯ ಇರುವುದರಿಂದ ಯಾವ ರೀತಿಯ ಬೆರಳುಗಳಿಗಾದರೂ ಹಾಕುವುದು ಸುಲಭ.

ನಿಮಗೆ ಅಮೂಲ್ಯ ಹರಳು ಅದೃಷ್ಟ ತರುತ್ತದೆ, ಅದರಿಂದ ಶುಭವಾಗುತ್ತದೆ ಎಂಬ ನಂಬಿಕೆ ಇದ್ದಲ್ಲಿ ನಿಮ್ಮ ಅದೃಷ್ಟದ ಹರಳು ಯಾವುದು ಎಂದು ತಿಳಿದುಕೊಂಡು ಅದನ್ನು ಬೆಳ್ಳಿ ಕಾಲುಂಗುರಕ್ಕೆ ಹಾಕಿಸಿಕೊಳ್ಳಬಹುದು. ನಿಮಗೆ ಬಹಳ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಬಹುದು.

ಸಾಂಪ್ರದಾಯಿಕ ಕಾಲುಂಗುರ

ಬೆಳ್ಳಿಗೆ ಸ್ವಲ್ಪ ಆ್ಯಂಟಿಕ್‌ ಸ್ಪರ್ಶ ನೀಡಿದ ಹೊಸ ವಿನ್ಯಾಸದ ಕಾಲುಂಗುರಗಳೂ ಈಗ ಲಭ್ಯ. ಇದು ಸೀರೆಯಂತಹ ಸಾಂಪ್ರದಾಯಿಕ ಉಡುಗೆಯ ಜೊತೆ ಸುಂದರವಾಗಿ ಕಾಣಿಸುತ್ತದೆ. ಇದರಲ್ಲಿ ಹರಳನ್ನು ಕೂರಿಸಿದ ಸ್ವಲ್ಪ ದೊಡ್ಡದಾದ ಕಾಲುಂಗುರ ಈಗ ಟ್ರೆಂಡಿಯಾಗಿದೆ.

ಮಣಿಗಳನ್ನು ಪೋಣಿಸಿ ಅದರಿಂದ ಮಾಡಿದ ಕಾಲುಂಗುರಗಳೂ ಸಿಗುತ್ತವೆ. ಇವುಗಳನ್ನು ಪ್ರಯಾಣ ಮಾಡುವಾಗ ಧರಿಸಬಹುದು. ಇವು ಒಂದು ರೀತಿಯ ಆಧುನಿಕತೆಯ ಸೊಬಗು ನೀಡುತ್ತವೆ.

ಯಾವುದಾದರೂ ವಿಶೇಷ ಸಮಾರಂಭಕ್ಕೆ ನೀವು ಲೆಹೆಂಗಾ, ಚೋಲಿ ಹಾಕಿದರೆ ಚಿನ್ನದಲ್ಲಿ ಹೂವುಗಳ ಚಿತ್ತಾರ ಮಾಡಿದ ರಾಜಸ್ಥಾನಿ ಶೈಲಿಯ ಕಾಲುಂಗುರ ವಿಶೇಷವಾಗಿ ನಿಮ್ಮ ಕಾಲ್ಬೆರಳನ್ನು ಕಂಗೊಳಿಸುವಂತೆ ಮಾಡುತ್ತದೆ.

ಸೊಬಗು ಹೆಚ್ಚಿಸುವ ಮುತ್ತಿನ ಕಾಲುಂಗುರ

ಮತ್ತಷ್ಟು ಫ್ಯಾಷನ್‌ ಮಾಡುವ ಹಂಬಲವಿದ್ದರೆ, ಒಂದಿಷ್ಟು ಮುದ್ದು-ಮುದ್ದಾದ ನೋಟ ಬೇಕಿದ್ದಲ್ಲಿ ಸಣ್ಣ ಮುತ್ತುಗಳನ್ನು ಪೋಣಿಸಿದ ಕಾಲುಂಗುರ ನಿಮ್ಮ ಕಾಲ್ಬೆರಳಿನ ಸಿಂಗಾರವನ್ನು ಹೆಚ್ಚಿಸುತ್ತದೆ.

ಹೆಣ್ಣು ಇನ್ನೊಂದು ಜೀವಕ್ಕೆ ಜನ್ಮ ನೀಡುವ ದಿನಗಳು ಸಮೀಪಿಸಿದಂತೆ ಅವಳ ಮನಸ್ಸೆಲ್ಲ ನಿರೀಕ್ಷೆ, ತಳಮಳದಿಂದ ಇರುತ್ತದೆ. ಈ ಸಂದರ್ಭಕ್ಕೆ ಸೂಕ್ತವಾಗುವಂತಹ ಕಂದಮ್ಮನ ಪುಟ್ಟ ಕಾಲ್ಬೆರಳಿನ ಆಕಾರದ ಕಾಲುಂಗುರ ವಿಶೇಷವಾದ ಅರ್ಥವನ್ನು ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.