ADVERTISEMENT

ಫ್ಯಾಷನ್‌: ಉಲ್ಲನ್‌ ಫ್ಯೂಷನ್‌ವೇರ್‌

ರೂಪಾ .ಕೆ.ಎಂ.
Published 18 ನವೆಂಬರ್ 2022, 19:30 IST
Last Updated 18 ನವೆಂಬರ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಳಿಗಾಲಕ್ಕೆ ಉಲ್ಲನ್‌ ಬಟ್ಟೆಗಳು ಬೆಚ್ಚಗಿನ ಭಾವ ನೀಡುತ್ತವೆ. ಚಳಿಯಿಂದ ರಕ್ಷಣೆ ಪಡೆಯಲು, ಚರ್ಮ ಬಿರುಕು ಬಿಡದಂತೆ ನೋಡಿಕೊಳ್ಳಲು ಉಲ್ಲನ್‌ ಸಹಕಾರಿ. ಮೊದಲೆಲ್ಲ ಉಲ್ಲನ್ ಎಂದರೆ ಸ್ವೆಟರ್‌ ಎನ್ನುವಂತಾಗಿತ್ತು. ಆದರೆ, ಈಗ ಉಲ್ಲನ್‌ ದಾರ ಬಳಸಿ ಬಗೆ ಬಗೆಯ ಟ್ರೆಂಡಿಂಗ್‌ ದಿರಿಸುಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿ ಮಾರ್ಡ್ರನ್‌ ಹಾಗೂ ಫ್ಯೂಷನ್‌ ವೇರ್‌ಗಳಿಗೆ ಎಲ್ಲಿಲ್ಲದ ಬೇಡಿಕೆ ಇದೆ. ಹೀಗಾಗಿ ಸ್ವೆಟರ್‌ ಜಾಗವನ್ನು ಹಲವು ದಿರಿಸುಗಳು ಆಕ್ರಮಿಸಿಕೊಂಡಿವೆ. ಸ್ವೆಟರ್‌ ಹಾಗೂ ಜಾಕೆಟ್‌ನ ಸಂಯೋಜಿತ ರೂಪ ಶ್ಯಾಕೆಟ್ಸ್‌, ಸ್ವೆಟರ್‌ ಹಾಗೂ ಶರ್ಟ್‌ನ ಸಂಯೋಜಿತ ರೂಪ ಸ್ವೆಟ್‌ ಶರ್ಟ್‌ ಹೀಗೆ ಹಲವು ಫ್ಯೂಷನ್‌ಗಳು ಚಳಿಗಾಲಕ್ಕೆ ’ಕ್ಯಾಷ್ಯುಯೆಲ್‌ ವೇರ್’ ಎನಿಸಿವೆ.

ಪಫರ್‌ ಕೋಟ್‌: ಚಳಿಗಾಲಕ್ಕೆ ಅಗತ್ಯವಿರುವ ಔಟ್‌ಫಿಟ್‌ಗಳಲ್ಲಿ ಇದು ಒಂದು. ಜೀನ್ಸ್‌ ಮೇಲೆ ಸುಲಭವಾಗಿ ತೊಡಬಲ್ಲ, ಸರಳ ಎನಿಸಿದರೂ ರಿಚ್‌ ಲುಕ್‌ ನೀಡುವ ಪಫರ್‌ ಕೋಟ್‌ಗಳು ಬಿಳಿ, ಕಂದು ಹಾಗೂ ಕಪ್ಪು ಬಣ್ಣಗಳು ಟ್ರೆಂಡ್‌ನಲ್ಲಿವೆ. ಜೀನ್ಸ್‌ ಮತ್ತು ಟೀ ಶರ್ಟ್‌ ಮೇಲೆ ಉದ್ದನೆಯ ಪಫರ್‌ ಕೋಟ್‌ಗಳು ಧರಿಸಿದರೆ ಚೆನ್ನಾಗಿ ಕಾಣುತ್ತದೆ.

ಶ್ಯಾಕೆಟ್ಸ್‌: ಶರ್ಟ್‌ ಮತ್ತು ಜಾಕೆಟ್‌ನ ಸಂಯೋಜಿತ ರೂಪವೇ ಶ್ಯಾಕೆಟ್ಸ್‌. ಶರ್ಟ್‌ ಮತ್ತು ಜಾಕೆಟ್‌ ಎರಡನ್ನೂ ಒಟ್ಟಿಗೆ ಹಾಕಿಕೊಂಡ ಫೀಲ್‌ ಬರುವಂಥ ಶ್ಯಾಕೆಟ್ಸ್‌ಗಳು ಚಳಿಗಾಲದ ವಾರ್ಡ್‌ರೋಬ್‌ನಲ್ಲಿ ಇರಬೇಕಾದ ದಿರಿಸು. ಕಂದು, ಕಪ್ಪು, ಬಿಳಿ ಹೀಗೆ ವೈರುಧ್ಯ ಬಣ್ಣದ ಕಾಂಬಿನೇಷನ್‌ಗಳಲ್ಲಿ ಬರುವ ಈ ಉಲ್ಲನ್‌ ಶ್ಯಾಕೆಟ್ಸ್‌ಗಳು ಆಫೀಸಿಗೂ ಹೇಳಿ ಮಾಡಿಸಿದ ಉಡುಗೆ. ಚೌಕುಳಿ ವಿನ್ಯಾಸ ಇರುವ ಶ್ಯಾಕೆಟ್ಸ್‌ಗಳು, ದೊಗಲೆ ಶ್ಯಾಕೆಟ್ಸ್‌ಗಳನ್ನೇ ಹೆಚ್ಚು ಟ್ರೆಂಡಿಂಗ್‌ನಲ್ಲಿವೆ.

ADVERTISEMENT

ಕೃತಕ ಉಣ್ಣೆ ಕೋಟ್‌: ಇದು ನೋಡಲು ಉಣ್ಣೆಯಿಂದ ಮಾಡಿದಂತೆ ಕಾಣಿಸಿದರೂ ಕೃತಕ ಉಣ್ಣೆ ಬಳಸಿ ಮಾಡಿದ ದಿರಿಸುಗಳು. ಇದನ್ನು ಹಾಕಿಕೊಂಡಾಗ ಸಾಮಾನ್ಯವಾಗಿ ಕೃತಕ ಉಣ್ಣೆಯಿಂದ ಮಾಡಿದ ಪರ್ಸ್‌ಗಳು, ಇತರೆ ಆ್ಯಕ್ಸೆಸರಿಗಳನ್ನು ಧರಿಸಿದರೆ ಮುದ್ದಾಗಿ ಕಾಣಬಹುದು.

ದೊಗಲೆ ಕೋಟ್‌: ಇದು ದೊಗಲೆ ದಿರಿಸಾದರೂ ನೋಡಲು ಆಕರ್ಷಕ ವಾಗಿ ಕಾಣುತ್ತದೆ. ಹಿಮಚ್ಛಾದಿತ ಪ್ರದೇಶಗಳಿಗೆ ಪ್ರವಾಸ ಹೋಗುವವರು ಸಾಮಾನ್ಯವಾಗಿ ಖರೀದಿಸುವ ಕೋಟ್‌ಗಳಿವು. ಮೈಗೆ ಫಿಟ್ ಆಗಿ ಕೂರುವ ದಿರಿಸಿಗಿಂತಬಹುತೇಕ ಚಳಿಗಾಲದ ದಿರಿಸುಗಳು ದೊಗಲೆಯಾಗಿಯೇ ಇರುತ್ತವೆ ಅನ್ನುವುದು ವಿಶೇಷ.

ಕುರ್ತಾ: ಗಾಢ ಬಣ್ಣ ಹಾಗೂ ತಿಳಿ ಎರಡೂ ಬಗೆಯ ಬಣ್ಣಗಳಲ್ಲಿ ಲಭ್ಯವಿರುವ ಉಲ್ಲನ್‌ ದಾರ ಬಳಸಿ ಮಾಡಿದ ಕುರ್ತಾಗಳಿವು. ನಿತ್ಯ ಬಳಕೆಗೆ ಹೇಳಿ ಮಾಡಿಸಿದ ದಿರಿಸಾಗಿದ್ದು, ಇದನ್ನು ಧರಿಸಿದರೆ ಚಳಿಯಿಂದ ರಕ್ಷಣೆ ಪಡೆಯಲು ಮತ್ತೊಂದು ದಿರಿಸು ಹಾಕಿಕೊಳ್ಳುವ ಅಗತ್ಯವಿರುವುದಿಲ್ಲ. ಎಲ್ಲ ಬಣ್ಣದ ಜೀನ್ಸ್‌ ಪ್ಯಾಂಟ್‌ ಮೇಲೂ ಆರಾಮಾಗಿ ತೊಡಬಹುದಾದ ಕುರ್ತಾಗಳಿವು. ಸಣ್ಣ ಸಣ್ಣ ಕಸೂತಿ ಮಾಡಿದ ಉಲ್ಲನ್‌ ಕುರ್ತಾಗಳೂ ಸದ್ಯಕ್ಕೆ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ.

ಸ್ವೆಟ್‌ ಶರ್ಟ್‌/ಟಾಪ್‌ : ಉಲ್ಲನ್‌ ದಾರಗಳಿಂದ ಮಾಡಿದ ತುಂಬು ತೋಳಿನ ದಿರಿಸು ಇವು. ವೆಸ್ಟರ್ನ್‌ ಲುಕ್‌ ಇರುವ ಈ ಶರ್ಟ್‌ಗಳು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚು. ಸ್ವೆಟರ್‌ ಹಾಗೂ ಶರ್ಟ್‌ರ ಸಂಯೋಜಿತವೇಸ್ವೆಟ್‌ ಶರ್ಟ್‌ ಹಾಗೂ ಟಾಪ್‌ಗಳು.

ಜೀನ್ಸ್‌ ಕೋಟ್‌: ಎಲ್ಲ ಬಗೆಯ ಟೀ ಶರ್ಟ್ ಹಾಗೂ ಕುರ್ತಾಗಳಿಗೆ ಜೀನ್ಸ್‌ ಬಟ್ಟೆಯ ಕೋಟ್‌ಗಳು ಒಪ್ಪುತ್ತವೆ. ಈ ಕೋಟ್‌ ಮೇಲೆ ಉಲ್ಲನ್‌ ದಾರಗಳಿಂದ ಮಾಡಿದ ಕತ್ತಿನಪಟ್ಟಿ ಅಥವಾ ಕಸೂತಿ ನೋಡಬಹುದು. ಚಳಿಯಿಂದ ರಕ್ಷಣೆ ಸಿಗುವುದಲ್ಲದೇ ಜೀನ್ಸ್ ಕೋಟ್‌ ಫ್ಯಾಷನೇಬಲ್‌ ಆಗಿಯೂ ಕಾಣುತ್ತದೆ. ಹೆಚ್ಚಾಗಿ ಗಾಢ ನೀಲಿ, ಅರ್ಧ ಬಿಳಿ– ಅರ್ಧ ನೀಲಿ, ತಿಳಿ ನೀಲಿ, ಹಸಿರು ಮಿಶ್ರಿತ ನೀಲಿ, ಕಪ್ಪು ನೀಲಿ ಹೀಗೆ ಬಗೆ ಬಗೆಯ ಬಣ್ಣಗಳಲ್ಲಿ ಜೀನ್ಸ್ ಕೋಟ್‌ ಲಭ್ಯವಿದೆ. ಹೆಚ್ಚಾಗಿ ತಿಳಿ ಬಣ್ಣದ ಟೀ ಶರ್ಟ್ ಅಥವಾ ಕುರ್ತಾಗಳಿಗೆ ಜೀನ್‌ ಕೋಟ್‌ ಒಪ್ಪುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.