ADVERTISEMENT

ಗಾರ್ಮೆಂಟ್ಸ್‌ ಕಾರ್ಮಿಕರ ಹೋರಾಟದ ಹಾದಿಯನ್ನು ಕಂಡಿರಾ...

ಬಾಲಕೃಷ್ಣ ಪಿ.ಎಚ್‌
Published 6 ಸೆಪ್ಟೆಂಬರ್ 2025, 0:09 IST
Last Updated 6 ಸೆಪ್ಟೆಂಬರ್ 2025, 0:09 IST
<div class="paragraphs"><p>ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ&nbsp;ಸೂಜಿ–ದಾರದೊಂದಿಗಿನ ಬದುಕು: ಬೆಂಗಳೂರಿನಲ್ಲಿ ಗಾರ್ಮೆಂಟ್‌ ಕೆಲಸ ಮತ್ತು ಹೋರಾಟ’ ಕಾರ್ಯಕ್ರಮ</p></div>

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಸೂಜಿ–ದಾರದೊಂದಿಗಿನ ಬದುಕು: ಬೆಂಗಳೂರಿನಲ್ಲಿ ಗಾರ್ಮೆಂಟ್‌ ಕೆಲಸ ಮತ್ತು ಹೋರಾಟ’ ಕಾರ್ಯಕ್ರಮ

   

‘ಕಾರ್ಮಿಕರ ನ್ಯಾಯಕ್ಕಾಗಿ ಕೈಜೋಡಿಸೋಣ ಬನ್ನಿ’ ಎಂಬ ಘೋಷವಾಕ್ಯವಿದ್ದ ಫಲಕವನ್ನು ಪುಟ್ಟ ಮಗುವೊಂದು ಕೈಯಲ್ಲಿ ಹಿಡಿದಿದೆ; ಆ ಮಗುವಿನ ಇನ್ನೊಂದು ಕೈ ಹಿಡಿದು ತಾಯಿ ನಡೆಯುತ್ತಿದ್ದಾಳೆ, ಭವಿಷ್ಯನಿಧಿ ನಿಯಮಗಳಲ್ಲಿ ತಂದ ಬದಲಾವಣೆ ವಿರೋಧಿಸಿ ಬೀದಿಗಿಳಿದ ನೌಕರರು ರೋಷಾವೇಷದ ಹೋರಾಟಕ್ಕೆ ಅಣಿಯಾಗುತ್ತಿದ್ದಾರೆ, ಕೋವಿಡ್‌ನಂತಹ ದುರಿತ ಕಾಲದಲ್ಲಿ ಪರಿಹಾರವನ್ನೂ ಕೊಡದೆ ಏಕಾಏಕಿ ತಮ್ಮನ್ನು ಹೊರದಬ್ಬಿದ ಕಾರ್ಖಾನೆಯ ಮುಂದೆ ನಿಂತ ಕಾರ್ಮಿಕರಲ್ಲಿ ಅಸಹಾಯಕತೆಯ ನಡುವೆಯೂ ನ್ಯಾಯಕ್ಕಾಗಿ ಹೋರಾಡುವ ಹಂಬಲ ಹರಳುಗಟ್ಟಿದೆ...

ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಇತ್ತೀಚೆಗೆ ನಡೆದ ‘ಸೂಜಿ–ದಾರದೊಂದಿಗಿನ ಬದುಕು: ಬೆಂಗಳೂರಿನಲ್ಲಿ ಗಾರ್ಮೆಂಟ್‌ ಕೆಲಸ ಮತ್ತು ಹೋರಾಟ’ ಎಂಬ ಕಾರ್ಯಕ್ರಮ, ಬಹುತೇಕ ಮಹಿಳೆಯರೇ ಇರುವ ಗಾರ್ಮೆಂಟ್ಸ್‌ ಕಾರ್ಮಿಕರ ಬದುಕನ್ನೂ ಹೋರಾಟದ ಹಾದಿಯನ್ನೂ ಏಕಕಾಲಕ್ಕೆ ಕಟ್ಟಿಕೊಟ್ಟಿತು.

ADVERTISEMENT

ಗಾರ್ಮೆಂಟ್ಸ್‌ ಆ್ಯಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ (ಜಿಎಟಿಡಬ್ಲ್ಯುಯು) ಮತ್ತು ಗಾರ್ಮೆಂಟ್ ಮಹಿಳಾ ಕಾರ್ಮಿಕರ ಮುನ್ನಡೆ ಸಂಘಟನೆಗಳು ತಮ್ಮ ಎರಡು ದಶಕಗಳ ಹೋರಾಟವನ್ನು ಸಾರ್ವಜನಿಕರೆದುರು ಇಡಲು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು.

ಜಾಗೃತಿ ಕಾರ್ಯಕ್ರಮ, ರ್‍ಯಾಲಿ, ತರಬೇತಿಯಷ್ಟೇ ಅಲ್ಲದೆ ಕಾರ್ಮಿಕ ಗೀತೆ, ಕಾರ್ಮಿಕ ಕಾನೂನಿನ ವಿವರ, ಗಾರ್ಮೆಂಟ್ಸ್‌ ಮಾಲೀಕರು ಬಾಲಕಾರ್ಮಿಕರನ್ನು ನೇಮಿಸಿಕೊಂಡಿರುವುದನ್ನು ಬಿಚ್ಚಿಡುವ ಹೋರಾಟಗಳೆಲ್ಲ ಬರವಣಿಗೆ, ಚಿತ್ರ, ಇನ್ಫೋಗ್ರಾಫಿಕ್ಸ್‌ ರೂಪದಲ್ಲಿ ಗೋಡೆಯ ಮೇಲೆ ರಾರಾಜಿಸಿದವು. ನಮ್ಮ ಗಾರ್ಮೆಂಟ್ಸ್‌ ಕಾರ್ಮಿಕರು ಸಿದ್ಧಪಡಿಸುವ ಬಟ್ಟೆಗಳು ಯಾವ ಯಾವ ದೇಶಗಳಿಗೆ ರಫ್ತಾಗುತ್ತವೆ ಎಂಬುದನ್ನು ಜಗತ್ತಿನ ಭೂಪಟದಲ್ಲಿ ತೋರಿಸಲಾಗಿತ್ತು. ಸಿದ್ಧಉಡುಪು ತಯಾರಿಸಲು ಕಾರ್ಖಾನೆಗಳಲ್ಲಿ ಬಳಸುವ ಹೊಲಿಗೆಯಂತ್ರ ಗಮನ ಸೆಳೆಯಿತು. ಉಪನ್ಯಾಸಕಿ ಸ್ವಾತಿ ಶಿವಾನಂದ್‌ ಅವರ ನೇತೃತ್ವದಲ್ಲಿ ಬಿಡುಗಡೆಯಾದ ‘ಗಾರ್ಮೆಂಟ್ಸ್‌ ವರ್ಕರ್ಸ್‌ ಆರ್ಕೈವ್‌’ ಎಂಬ ವೆಬ್‌ಸೈಟ್‌, ಈ ಮಾಹಿತಿಗಳನ್ನೆಲ್ಲ ದಾಖಲಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಹೊಲಿಗೆಯಂತ್ರ
ಹಕ್ಕುಗಳಿಗಾಗಿ, ಬದುಕಿಗಾಗಿ ಹೋರಾಟ ಮಾಡುತ್ತಾರೆ. ಆದರೆ, ಆ ಹೋರಾಟವನ್ನು, ಅದರಿಂದ ಸಮಾಜಕ್ಕೆ ಸಿಕ್ಕ ಕೊಡುಗೆಯನ್ನು, ಅವರ ಬದುಕನ್ನು ದಾಖಲಿಸುವುದಿಲ್ಲ. ಇವೆಲ್ಲವನ್ನೂ ದಾಖ ಲಿಸಿ  ತಿಳಿಸುವ ಸಲುವಾಗಿ ‘ಗಾರ್ಮೆಂಟ್‌ ವರ್ಕರ್ಸ್‌ ಆರ್ಕೈವ್‌’ ಎಂಬ ವೆಬ್‌ಸೈಟ್‌ ಆರಂಭಿಸಲಾಗಿದೆ.
ಸ್ವಾತಿ ಶಿವಾನಂದ್‌, ಉಪನ್ಯಾಸಕಿ, ವೆಬ್‌ಸೈಟ್‌ ರೂವಾರಿ
ಭಾರತದ ವಸ್ತುಗಳಿಗೆ ಅಮೆರಿಕದಲ್ಲಿ ಟ್ರಂಪ್‌ ಸುಂಕ ಜಾಸ್ತಿ ಮಾಡಿದರೆ ಇಲ್ಲಿ ಸುಮಾರು ಜನ ಕೆಲಸ ಕಳೆದುಕೊಳ್ಳುತ್ತಾರೆ. ಈ ಬಗ್ಗೆ ಚಿಂತನೆ ನಡೆಸಲು ಈ ಪ್ರದರ್ಶನ ನಾಂದಿಯಾಯಿತು.
ದು.ಸರಸ್ವತಿ, ಹೋರಾಟಗಾರ್ತಿ
ಬೆಂಗಳೂರನ್ನು ಐ.ಟಿ ಹಬ್‌ ಎನ್ನಲಾಗುತ್ತದೆ. ಆದರೆ ಗಾರ್ಮೆಂಟ್ಸ್‌ ಕ್ಷೇತ್ರಕ್ಕೂ ಜಾಗತಿಕ ವ್ಯಾಪ್ತಿ ಇದೆ. ಈ  ಕಾರ್ಮಿಕರೂ ಅಷ್ಟೇ ಪ್ರಮಾಣದಲ್ಲಿ ವಿದೇಶಿ ವಿನಿಮಯಕ್ಕೆ ಕಾರಣರಾಗಿದ್ದಾರೆ. ಆದರೂ ಇವರು ಮಾತ್ರ ಅವ್ಯಕ್ತರಾಗಿಯೇ ಉಳಿಯುವುದೇಕೆ ಎನ್ನುವುದರ ಅವಲೋಕನಕ್ಕಾಗಿ ಈ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು.
ಪ್ರತಿಭಾ ಆರ್‌., ಅಧ್ಯಕ್ಷೆ, ಜಿಎಟಿಡಬ್ಲ್ಯುಯು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.