ADVERTISEMENT

ಕುಟುಂಬಕ್ಕಿರಲಿ ‘ಗೃಹಮಂತ್ರಿ’ಯ ಬಜೆಟ್‌!

ಲಲಿತಾ ಕೆ ಹೊಸಪ್ಯಾಟಿ.
Published 1 ಫೆಬ್ರುವರಿ 2019, 19:30 IST
Last Updated 1 ಫೆಬ್ರುವರಿ 2019, 19:30 IST
BUDGET-BHOOMIKA
BUDGET-BHOOMIKA   

ಸುಖ ಸಂಸಾರಕ್ಕೆ ಹಣವೇ ಪ್ರಧಾನವಲ್ಲ. ಆದರೂ ಜೀವನ ನಿರ್ವಹಣೆ ಎಂದು ಬಂದರೆ ಹಣವೇ ಮುಖ್ಯವಾಗಿ ಬಿಡುತ್ತದೆ. ಹಣದ ಮಹತ್ವ ಅರಿಯಬೇಕಾದರೆ ಕುಟುಂಬದ ಸದಸ್ಯರಿಗೆಲ್ಲ ಮನೆಯ ಖರ್ಚುವೆಚ್ಚದ ಬಗ್ಗೆ ತಿಳಿವಳಿಕೆ ಇರಬೇಕು. ತಮ್ಮ ಖರ್ಚುಗಳನ್ನು ನಿಯಂತ್ರಿಸುವ ಮೂಲಕಜವಾಬ್ದಾರಿ ಹೊತ್ತ ಅಮ್ಮನಿಗೋ ಅಕ್ಕನಿಗೋ ಅಜ್ಜಿಗೋ ಅತ್ತೆಗೋ ಸಹಕರಿಸುವುದು ಸಾಧ್ಯವಾಗುತ್ತದೆ. ಊಟ, ತಿಂಡಿ– ತಿನಿಸು, ಟೀ, ಬಿಸ್ಕೆಟ್, ತರಕಾರಿ, ಸಿನಿಮಾ, ಬಟ್ಟೆ, ಹಬ್ಬ ಎಲ್ಲದರಲ್ಲೂ ದುಂದುಗಾರಿಕೆಗೆ ಕಡಿವಾಣ ಹಾಕಿದರೆ ಆ ತಿಂಗಳ ಮನೆಯ ಖರ್ಚು ನೋಡಿಕೊಳ್ಳುವ ಯಜಮಾನತಿಯ ಕೆಲಸ ಹೂ ಎತ್ತಿಟ್ಟಂತೆ ಸುಲಭ.

ಉದ್ಯೋಗಸ್ಥೆಯೋ ಗೃಹಿಣಿಯೋ ಸಿಂಗಲ್‌ ಮದರ್‌, ವಿಧವೆ.. ಹೀಗೆ ಶೇ 71ರಷ್ಟು ಮಹಿಳೆಯರು ಒಂದಲ್ಲ ಒಂದು ರೀತಿಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರಂತೆ. ಕುಟುಂಬದಲ್ಲಿ ಮನೆಯ ಯಜಮಾನ ಒಬ್ಬನೇ ಅಥವಾ ಗಂಡ–ಹೆಂಡತಿ ಇಬ್ಬರೂ ದುಡಿದರೂ ಬಹುತೇಕ ಮನೆಗಳಲ್ಲಿ ಸಂಸಾರದ ನಿರ್ವಹಣೆಯ ಹೊಣೆ ಆಕೆಯದ್ದೇ. ನೀರಿನ ಬಿಲ್ಲು, ಕರೆಂಟ್ ಬಿಲ್ಲು ಎಲ್ಲಾ ಆಯಾ ವೇಳೆಗೆ ಕಟ್ಟಿದರೆ ಮಾತ್ರ ಮರುದಿನ ಮನೆಯಲ್ಲಿ ನೀರು, ಬೆಳಕು ಕಾಣಬಹುದು. ಬೆಳಿಗ್ಗೆ ಪೇಪರ್, ಹಾಲು ಹಾಕುವ ಹುಡುಗರಿಂದ ಹಿಡಿದು ರಾತ್ರಿ ಸೀಟಿ ಊದಿ ಎಚ್ಚರಿಸುವ ಗೂರ್ಖಾನವರೆಗೂ ಅವಳೇ ನೋಟಿನ ಲೆಕ್ಕ ಮಾಡಿ ಹಂಚಬೇಕು. ಮನೆಗೆ ಬಂದ ಅತಿಥಿಗಳನ್ನು ಯಾವುದೇ ಕೊರತೆ ಇರದಂತೆ ನೋಡಿಕೊಳ್ಳಬೇಕು. ವಿಶೇಷ ಅಡುಗೆ ಮಾಡಿ ಉಣಬಡಿಸುವುದರ ಜೊತೆಗೆ ಅವರು ಊರಿಗೆ ತೆರಳುವಾಗ ಉಡುಗೊರೆ ಕೊಡುವ ಜವಾಬ್ದಾರಿಯೂ ಆಕೆಯದ್ದೇ.

ಇಷ್ಟಾದರೆ ಮುಗಿಯಲಿಲ್ಲ, ಅಡುಗೆಯ ಜೊತೆ ಸ್ವಚ್ಛತೆ, ಇಸ್ತ್ರಿ, ಬಟ್ಟೆ ಜೊಡಣೆ, ತರಕಾರಿ ತರುವುದು, ಮನೆಯಲ್ಲಿ ಸದಾ ಆರೋಗ್ಯಕರ ವಾತಾವರಣ ಇರುವಂತೆ ನೋಡಿಕೊಳ್ಳುವುದು, ಮಕ್ಕಳ ಆರೋಗ್ಯ ಕೆಡದಂತೆ ಜೋಪಾನ ಮಾಡಿಕೊಳ್ಳಬೇಕು. ಜೊತೆಗೆ ಹಬ್ಬ– ಹರಿದಿನಗಳಿಗೂ ಸಜ್ಜಾಗಬೇಕು.

ADVERTISEMENT

ಅವಳಿಗೂ ಹೆಚ್ಚು ಹಣ ಖರ್ಚು ಮಾಡಬಾರದು, ಉಳಿಸಬೇಕು ಎಂಬ ತಿಳಿವಳಿಕೆ ಇರುತ್ತದೆ. ತಿಂಗಳ ಖರ್ಚು ಇಂತಿಷ್ಟೇ ಎಂದೂ ಗೊತ್ತು. ಅಕಸ್ಮಾತ್‌ ಅತ್ತೆಗೊ, ಮಾವನಿಗೊ, ಮಕ್ಕಳಿಗೊ ಕಾಯಿಲೆ ಬಂದರೆ... ಅಡುಗೆಗಿಂತ ಆರೋಗ್ಯವೇ ಮುಖ್ಯವಾಗುತ್ತದೆ. ಮಧ್ಯಮ ವರ್ಗದ, ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿ ತಿಂಗಳ ಕೊನೆ ಬಂದರಂತೂ ಕೇಳುವುದೇ ಬೇಡ. ಮನೆಯ ಯಜಮಾನನೇ ಕೈ ಖರ್ಚಿಗೆ ಹೆಂಡತಿಯ ಮುಂದೆ ಕೈ ಒಡ್ಡುವಾಗ ಇಂತಹ ಸಂದರ್ಭಗಳನ್ನು ತುಂಬಾ ಎಚ್ಚರಿಕೆಯಿಂದ ನಿಭಾಯಿಸಬೇಕಾಗುತ್ತದೆ.

ಅದೇ ತಿಂಗಳು ಮದುವೆಗೆ ಕರೆಯುವ ಬಂಧುಗಳು. ಬಿಡಲು ಸಾದ್ಯವಿಲ್ಲ. ದೂರದ ಊರು. ಇಬ್ಬರು ಹೋದರೂ ಖರ್ಚು ಹೆಚ್ಚು. ಅಂತಹ ಸಂದರ್ಭಗಳನ್ನು ಅವಳು ನಿಭಾಯಿಸಲೇಬೇಕು. ಪ್ರೀತಿಯ ಗೆಳತಿ. ಗೆಳತಿಯ ಮಗಳ ಮದುವೆಗೆ ಹೋಗಲಾರದೇ ಸುಳ್ಳು ಹೇಳುವ ಹಾಗೂ ಇಲ್ಲ. ಸ್ನೇಹ ಮುರಿಯದಂತೆ ಕಾಪಾಡಿಕೊಳ್ಳಬೇಕು. ಕನಿಷ್ಠ ಕೊರಿಯರ್‌ನಲ್ಲಾದರೂ ಉಡುಗೊರೆ ಕಳಿಸುವುದನ್ನು ಮರೆಯುವಂತಿಲ್ಲ. ಈ ಎಲ್ಲ ಹೆಚ್ಚುವರಿ ಖರ್ಚುಗಳು ಕೈಯಲ್ಲಿದ್ದ ಕಾಸನ್ನು ಕರಗಿಸಿಬಿಡುತ್ತವೆ.ಆದರೆ ಕೈಗೆ ಬರುವ ಹಣ ಮಾತ್ರ ಪ್ರತಿ ತಿಂಗಳೂ ಅಷ್ಟೇ ಅಂಕಿಯದ್ದಾಗಿರುತ್ತದೆ.

ಖರ್ಚಿನ ಮೆಲೆ ನಿಗಾ ಇರಲಿ

ಖರ್ಚಿನ ಮೇಲೆ ನಿಗಾ ಇಡುವುದನ್ನೇ ‘ಟ್ರಾಕ್ ಯುವರ್ ಎಕ್ಸಪೆನ್‌ಸ್ಸ್‌’ ಎನ್ನುವುದು. ಮೊದಲೇ ಆಯಾ ತಿಂಗಳ ಖರ್ಚಿನ ಅಂದಾಜು ಮಾಡಿ ಬಜೆಟ್‌ ತಯಾರಿಸಿಕೊಳ್ಳಿ. ನೀರಿನ ಬಿಲ್‌, ವಿದ್ಯುತ್‌, ಫೋನ್‌ ಬಿಲ್‌ನ ಮೇಲೆ
ಶೇ 5ರಷ್ಟು ಹೆಚ್ಚುವರಿ ಹಣ ಲೆಕ್ಕ ಹಾಕಿ.

ಬಾಡಿಗೆ, ಕಿರಾಣಿ, ಹಾಲು– ತುಪ್ಪ, ತರಕಾರಿ, ಕೆಲಸದವರಿಗೆ, ಗ್ಯಾಸ್‌, ಆಸ್ಪತ್ರೆ, ಪ್ರಯಾಣಕ್ಕೆ, ಟಿ.ವಿ ಕೇಬಲ್, ಪತ್ರಿಕೆ ಮ್ಯಾಗಜಿನ್, ಇಸ್ತ್ರಿ, ಮಕ್ಕಳ ಶಾಲೆ, ಟ್ಯೂಷನ್‌ ಫೀ .. ಪಟ್ಟಿ ಬೆಳೆಯುತ್ತ ಹೋಗುತ್ತದೆ. ಎಲ್ಲವನ್ನೂ ಲೆಕ್ಕ ಮಾಡಿಟ್ಟುಕೊಂಡಂತೆ, ಜಮಾದ ಬಗ್ಗೆಯೂ ಅವಳಿಗೆ ಲೆಕ್ಕ ಗೊತ್ತಿರಬೇಕು. ಅಂದಾಗ ಮಾತ್ರ ಯಾವುದರಲ್ಲಿ ಉಳಿಸಲು ಸಾಧ್ಯ ಎಂಬುದು ತಿಳಿಯುತ್ತದೆ.

ಆಯಾ ತಿಂಗಳ ಖರ್ಚು ಮೊದಲೇ ತಯಾರಿಸಿಕೊಳ್ಳಬೇಕು. ಉದಾ ಬಾಡಿಗೆ, ವಿದ್ಯಾಭ್ಯಾಸ, ವಿಮೆ, ಮೊಬೈಲ್ ರೀಚಾರ್ಜ್‌, ಪೇಪರ್, ಹಾಲು, ಕಿರಾಣಿ ಬಿಲ್ಲುಗಳು ಕಡ್ಡಾಯ ಖರ್ಚುಗಳಿಗೆ ವಿನಾಯಿತಿ ತೋರಬಾರದು. ತರಕಾರಿ, ದಿನಸಿ, ಬಾಡಿಗೆ, ವಿದ್ಯಾಭ್ಯಾಸ, ಆರೋಗ್ಯ ಮುಂತಾದವುಗಳಿಗೆ ಖರ್ಚು ಕಡ್ಡಾಯ.

ಮನರಂಜನೆ, ಪಾರ್ಟಿ, ದುಬಾರಿ ಬಟ್ಟೆ ಖರೀದಿ, ಮಾರುಕಟ್ಟೆಗೆ ಬಂದ, ಮಾಲ್‌ಗಳಿಗೆ ಹೋಗಿ ಇದ್ದ ವಸ್ತುಗಳನ್ನೇ ಮತ್ತೊಮ್ಮೆ ‘ಬೈ ಒನ್ ಗೆಟ್ ಒನ್‌ ಫ್ರೀ’ ಎಂದು ತರುವುದು ನಿಲ್ಲಿಸಬೇಕು.

ಖರ್ಚಿಗೆ ತಕ್ಕಂತೆ ಗಳಿಕೆ ಹೆಚ್ಚುವುದಿಲ್ಲ. ಆದಾಯ ಮೀರಿ ಖರ್ಚು ಹೆಚ್ಚಬಾರದಲ್ಲವೆ? ಅದಕ್ಕಾಗಿಯೇ ಖರ್ಚು ಕಡಿಮೆ ಮಾಡಬೇಕು. ಅಗತ್ಯವಿಲ್ಲ ಎನ್ನುವ ವಸ್ತುಗಳನ್ನು ಖರೀದಿಸುವ ಅಗತ್ಯವಿಲ್ಲ. ಆದರೆ ಕೆಲವು ಬೇಕೇಬೇಕಾದ ಅಗತ್ಯಗಳಿಗೆ ಕಡಿವಾಣವನ್ನೂ ಇರಬಾರದು. ಅಗತ್ಯಗಳಿಗೂ ಬೇಡಿಕೆಗಳಿಗೂ ವ್ಯತ್ಯಾಸಗಳಿವೆ.

ತಿಂಗಳ ಖರ್ಚಿನ ಬಿಲ್ಲು ಆದಷ್ಟು ತಿಂಗಳಿಂದ ತಿಂಗಳಿಗೆ ಏರಬಾರದು. ಮನೆಯ ಸದಸ್ಯರು ಇಬ್ಬರಿದ್ದಾಗಲೂ ನಾಲ್ಕೈದು ಜನರಿದ್ದಾಗಲೂ ಖರ್ಚು ಒಂದೇ ರೀತಿ ಇರಬಾರದು. ಗೃಹಿಣಿ ಮನೆ ಖರ್ಚಿನಲ್ಲಿಯೇ ಅಲ್ಪಸ್ವಲ್ಪ ಉಳಿಸುವುದೂ ಅಗತ್ಯ. ಖರ್ಚಿಗೆ ಹಣ ಹೊಂದಿಸಲು ಕಷ್ಟವಾದಾಗ ಕೂಡಿಟ್ಟ ಹಣ ಉಪಯೋಗಕ್ಕೆ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಅರಿತು ನಡೆಯುವ ಸಂಗಾತಿಯಿದ್ದರೆ ಎಲ್ಲವನ್ನೂ ಚಿಂತೆಯಿಲ್ಲದೇ ನಿಭಾಯಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.