ರಂಗ ತರಬೇತಿ
‘1990ರ ಶುರು. ಹೊಸಪೇಟೆಯಲ್ಲಿ ನಾವು ಇದ್ದ ಕೊಳೆಗೇರಿಯಲ್ಲಿ ಮಹಿಳೆಯೊಬ್ಬರನ್ನು ವರದಕ್ಷಿಣೆಗಾಗಿ ಜೀವಂತ ಸುಟ್ಟಿದ್ದರು. ನಾನಾಗ ಐದನೇ ತರಗತಿಯಲ್ಲಿದ್ದೆ. ಆ ಕ್ರೌರ್ಯ ಸಾಧಾರಣ ಘಟನೆ ಎಂಬಂತೆ ಜನ ಸುಮ್ಮನಿದ್ದರು. ಏನಾಗಿದೆ ಎಂದು ತಿಳಿಯದ ವಯಸ್ಸು. ಆದರೆ ಮಹಿಳೆಯರು ಅನುಭವಿಸುತ್ತಿದ್ದ ಹಿಂಸೆ, ಮಹಿಳೆಯರ ಬಗ್ಗೆ ಸಹಾನುಭೂತಿಯೇ ತೋರದ ಸಮಾಜದ ಕರ್ಮಠ ಮನಸ್ಸುಗಳ ಪರಿಚಯವಾಗಿತ್ತು’ ಎನ್ನುತ್ತಾ ಬಾಲ್ಯದ ನೆನಪುಗಳ ಸುರುಳಿ ಬಿಚ್ಚಿದರು ಸಹನಾ ಪಿಂಜಾರ.
ಈ ಘಟನೆಯನ್ನು ಪ್ರತಿಭಟಿಸಿ ಕಲಾವಿದರೂ ಆದ ಸಾಮಾಜಿಕ ಕಾರ್ಯಕರ್ತ ಸೋದರಮಾವ ಪಿಂಜಾರ ಅಬ್ದುಲ್ಲಾ ಸಂಘಟಿಸಿದ ರಂಗಭೂಮಿ ಆಧಾರಿತ ಹೋರಾಟದಲ್ಲಿ ಸಹನಾ ಭಾಗಿಯಾದರು. ‘ವರದಕ್ಷಿಣೆ’ ಎನ್ನುವ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಿದರು. ಸಂತ್ರಸ್ತ ಮಹಿಳೆಯ ಕುಟುಂಬಕ್ಕೆ ಬೆಂಬಲ ಹರಿದುಬಂತು. ದೋಷಿಗಳಿಗೆ ಶಿಕ್ಷೆಯಾಯಿತು. ಸಹನಾ ಅವರು ಮುಖ್ಯಪಾತ್ರದಲ್ಲಿದ್ದ ಈ ನಾಟಕ ಬಳ್ಳಾರಿ ಜಿಲ್ಲೆಯಾದ್ಯಂತ 80 ಪ್ರದರ್ಶನ ಕಂಡಿತು. ಬೀದಿ ನಾಟಕವೊಂದು ಮಾಡಿದ ಈ ಬದಲಾವಣೆ, ಅದಕ್ಕಿದ್ದ ಪ್ರಚೋದಕ ಶಕ್ತಿ ಅವರ ಮೇಲೆ ಅಗಾಧ ಪರಿಣಾಮ ಬೀರಿತು.
ಘನತೆಯಿಂದ ಬದುಕುವ ಹಕ್ಕನ್ನೇ ಕಳೆದುಕೊಂಡಿದ್ದ ಕೊಳೆಗೇರಿ ನಿವಾಸಿಗಳ ಜೀವ ಹಿಂಡುತ್ತಿದ್ದ ವರದಕ್ಷಿಣೆ ಕಿರುಕುಳ, ಮಾನವ ಕಳ್ಳಸಾಗಣೆ ಮುಂತಾದ ಸಾಮಾಜಿಕ ಪಿಡುಗುಗಳ ಜೊತೆ ಮೂಢನಂಬಿಕೆಗಳೂ ಸೇರಿ ಬದುಕು ಇನ್ನಷ್ಟು ದುರ್ಭರವಾಗಿತ್ತು. ಇವೆಲ್ಲದರ ವಿರುದ್ಧ ಬೀದಿ ನಾಟಕಗಳ ಮೂಲಕವೇ ಜಾಗೃತಿ ಮೂಡಿಸಿದರು. ಕೇರಿಗೆ ಬೇಕಾದ ಮೂಲ ಸೌಕರ್ಯವನ್ನೂ ಬೀದಿ ನಾಟಕದ ಚಳವಳಿಯಿಂದಲೇ ದಕ್ಕಿಸಿಕೊಂಡರು. ಬಡತನ, ಹಸಿವನ್ನು ಕಂಡು ಬೆಳೆದಿದ್ದ ಸಹನಾಗೆ ರಂಗಭೂಮಿಯೇ ಹೋರಾಟದ ಅಸ್ತ್ರವಾಯಿತು.
ಹಿಂದುಳಿದ ಪಿಂಜಾರ ಸಮುದಾಯದವರಾದ ಅವರ ಕುಲಕಸುಬು ಗಾದಿ ತಯಾರಿಕೆ. ಹತ್ತಿಯನ್ನು ಸಂಸ್ಕರಿಸಿ ಹಾಸಿಗೆ ತಯಾರಿಸುವುದು ಪೋಷಕರ ಕೆಲಸ. ಬಾಲ್ಯದಿಂದಲೇ ಚುರುಕಾಗಿದ್ದ ಸೊಸೆ ಶಿಕ್ಷಣದಿಂದ ದೂರವಾಗಬಾರದು ಎಂದು ಹುಟ್ಟೂರು ಬಳ್ಳಾರಿಯ ಎಚ್. ವೀರಾಪುರದಿಂದ ಹೊಸಪೇಟೆಯ ಆಜಾದ್‌ನಗರಕ್ಕೆ ಕರೆದುಕೊಂಡು ಬಂದು ಶಿಕ್ಷಣ ಕೊಡಿಸಿದ್ದು ಅಬ್ದುಲ್ಲಾ. ಮೂಲ ಸೌಕರ್ಯ ಇಲ್ಲದ ಶಾಲೆಗೆ ಹೋಗುವುದನ್ನು ಸಬೂಬು ಹೇಳಿ ತಪ್ಪಿಸಿಕೊಳ್ಳುತ್ತಿದ್ದ ಸಹನಾಗೆ ಅಬ್ದುಲ್ಲಾರ ನಾಟಕ ತರಬೇತಿ, ಪ್ರದರ್ಶನಗಳು ಆಪ್ತವಾಗಿಬಿಟ್ಟವು. ಕಣ್ಣಲ್ಲಿ ದಾಖಲಾದ ದೃಶ್ಯಗಳು ಮನಸ್ಸಲ್ಲಿ ಅಚ್ಚೊತ್ತಿದವು. ನಟನೆ ಸಲೀಸಾಗಿ ಒಲಿದು ಬಿಟ್ಟಿತು. ಬಾಲ್ಯದಲ್ಲೇ ಬೀದಿ ನಾಟಕವೊಂದರಲ್ಲಿ ಅಭಿನಯಿಸಿದರು. ಸೊಸೆಯ ಭವಿಷ್ಯ ಅಂದೇ ಅಬ್ದುಲ್ಲಾರ ಕಣ್ಣ ಮುಂದೆ ಇತ್ತು.
ಸೋದರಮಾವನವರೊಂದಿಗೆ ಚಳವಳಿಯ ಭಾಗವಾಗಿದ್ದುಕೊಂಡೇ ಶಿಕ್ಷಣ ಪಡೆದರು. ನೀನಾಸಂ ರಂಗ ತರಬೇತಿ ಮುಗಿಸಿ, ದೆಹಲಿಯ ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಪದವಿ ಪೂರೈಸಿ, ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪಡೆದರು. ಪಿಂಜಾರ ಸಮುದಾಯದಲ್ಲಿ ಪಿಎಚ್.ಡಿ ಪದವಿ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಅವರದು. ಬಳಿಕ ರಂಗಭೂಮಿಯಲ್ಲಿಯೇ ವೃತ್ತಿ ಕಟ್ಟಿಕೊಂಡರು. ‘16ನೇ ವಯಸ್ಸಿನಲ್ಲಿ ನೀನಾಸಂ ತರಬೇತಿ ಪಡೆದೆ. ಅಲ್ಲಿ ಭಾಷೆ ಕಲಿಕೆಯ ಪ್ರಾಮುಖ್ಯತೆಯ ಬಗ್ಗೆ ತಿಳಿಯಿತು. ಇಡೀ ಬ್ಯಾಚ್‌ನಲ್ಲಿ ನಾನೇ ಚಿಕ್ಕವಳು. ಅಲ್ಲಿ ಖ್ಯಾತನಾಮರಿಂದ ಪಡೆದ ತರಬೇತಿ ನನ್ನನ್ನು ಇನ್ನಷ್ಟು ಮಾಗಿಸಿತು. ರಾಷ್ಟ್ರೀಯ ನಾಟಕ ಶಾಲೆ ನನ್ನ ಕಲಾ ಜೀವನಕ್ಕೆ ಹೊಸ ತಿರುವು ನೀಡಿತು. ಅಲ್ಲಿ ಕಲಿತದ್ದನ್ನು ಊರಿನ ನಾಟಕದಲ್ಲಿ ಪ್ರಯೋಗಿಸಿದೆ. ಹೊಸರೂಪ ಪಡೆದ ನಾಟಕಗಳು ಜನರಿಗೂ ಇಷ್ಟವಾಗತೊಡಗಿತು. ನಮ್ಮ ಚಳವಳಿಗೆ ಇನ್ನಷ್ಟು ವೇಗ ನೀಡಿತು’ ಎಂದು ತಮ್ಮ ರಂಗಭೂಮಿ ಪಯಣವನ್ನು ತೆರೆದಿಟ್ಟರು.
2011ರಲ್ಲಿ ಹೊಸಪೇಟೆಯ ಕೊಳೆಗೇರಿಗೆ ಮತ್ತೆ ಮರಳಿದ ಅವರು, ಅಬ್ದುಲ್ಲಾರು ಕಟ್ಟಿದ ‘ಭಾವೈಕ್ಯತಾ ವೇದಿಕೆ’ ಮೂಲಕ ಚಳವಳಿ ಮುಂದುವರಿಸಿದರು. ಸಮಾಜದ ನೋವುಗಳಿಗೆ ಕಲೆಯ ಮೂಲಕ ಸಾಂತ್ವನ ನೀಡುವ ಪ್ರಯತ್ನ ಮುಂದುವರಿಯಿತು. ಪತಿ ರಿಯಾಜ್ ಸಿಹಿಮೊಗ್ಗೆ ಅವರೊಂದಿಗೆ ಸೇರಿ ‘ಬಹುತ್ವ ಪ್ರತಿಷ್ಠಾನ’ ಎನ್ನುವ ಸಂಘಟನೆ ಕಟ್ಟಿ ಆಸಕ್ತರಿಗೆ ಉಚಿತ ನಾಟಕ ಶಿಬಿರಗಳನ್ನು ಸಂಘಟಿಸಿದರು. ಶಿಬಿರಕ್ಕೆ ಬಂದವರನ್ನು ಒಗ್ಗೂಡಿಸಿ ಸಮಾಜದ ಅಶಕ್ತರಿಗೆ, ನೋವುಗಳಿಗೆ ದನಿಯಾಗುವ ಕೆಲಸ ಮಾಡಿದರು. ‘ಪವಾಡ ಗುಟ್ಟು’, ‘ಹುಡುಗಿ ಓದಲೇಬೇಕು’, ‘ವಿಸರ್ಜನೆ’, ‘ಓ ಮತದಾರ ಪ್ರಭುವೇ’ ಎನ್ನುವ ಬೀದಿ ನಾಟಕಗಳ ಮೂಲಕ ಜನರನ್ನು ಎಚ್ಚರಿಸುವ ಕೆಲಸ ಮಾಡಿದರು.
ಮೊದಲ ಶಿಬಿರಕ್ಕೆ ಸ್ಥಳ ಸಜ್ಜುಗೊಳಿಸಿ, ಬಂದ ಅತಿಥಿಗಳನ್ನು ಕುಳ್ಳಿರಿಸಿ ಗಂಟೆಗಳು ಕಾದರೂ, ಒಂದು ಮಗುವೂ ಬಾರದಿದ್ದಾಗಿನ ನಿರಾಸೆಯ ಬಗ್ಗೆ ಹೇಳುವಾಗ ಅವರ ಧ್ವನಿ ಕಂಪಿಸುತ್ತದೆ. ಮನೆ ಮನೆಗೆ ತೆರಳಿ ಶಿಬಿರಕ್ಕೆ ಮಕ್ಕಳನ್ನು ಆಹ್ವಾನಿಸಿ, ಅನಾಥಾಶ್ರಮಗಳ ಮಕ್ಕಳನ್ನು ಕರೆತಂದು ಅವರಿಗೆ ಹಾಡು, ನೃತ್ಯದ ತರಬೇತಿ ನೀಡುತ್ತಾರೆ. ದಿನ ಕಳೆದಂತೆ ಶಿಬಿರಕ್ಕೆ ಬರುವವರ ಸಂಖ್ಯೆ ಹೆಚ್ಚಳವಾಗುತ್ತದೆ. ವರ್ಷಕ್ಕೆ 40-50 ವಿದ್ಯಾರ್ಥಿಗಳಿಗೆ ರಂಗ ತರಬೇತಿ ಸಿಗುತ್ತಿದೆ. ಈ ಶಿಬಿರಗಳು ಅರ್ಧದಲ್ಲಿ ಶಾಲೆ ಬಿಟ್ಟವರಿಗೆ ಮತ್ತೆ ಶಿಕ್ಷಣ ದಾರಿ ತೋರಿದೆ.
ಹಲವರಿಗೆ ಜೀವನೊತ್ಸಾಹದ ಚಿಲುಮೆಯಾಗಿದೆ. ಆತ್ಮವಿಶ್ವಾಸದ ಮೆಟ್ಟಿಲುಗಳಾಗಿವೆ. ಹೊಸಪೇಟೆಯ ಎಂಜಿನಿಯರಿಂಗ್ ವಿದ್ಯಾರ್ಥಿ ಸಂದೀಪ್ ಕುಮಾರ್ ನಾಯಕ್ ಶಿಬಿರದಲ್ಲಿ ಸಿಕ್ಕ ತರಬೇತಿಯಿಂದಾಗಿ, ತನ್ನ ಜೀವನದ ಕಥೆಯನ್ನೇ ಬಿಂಬಿಸುವ ‘ಡುಮ್ಮ ಎಂದರೆ ಡಮ್ಮಿ ಅಲ್ಲ’ ಎನ್ನುವ ನಾಟಕ ಬರೆದು ಹೆಚ್ಚು ತೂಕದ ದೇಹ ಹೊಂದಿರುವ ವ್ಯಕ್ತಿಗಳ ಸಂಕಟಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಆ ಕಥೆಯನ್ನು ಸಹನಾ ಹಾಗೂ ಅವರ ತಂಡ ಅದ್ಭುತವಾಗಿ ರಂಗಮಂಚದಲ್ಲಿ ಪ್ರದರ್ಶಿಸಿದೆ. ಅವರಿಗೆ ಹೇಳಲು ಇಂತಹ ಹತ್ತಾರು ನಿದರ್ಶನಗಳಿದ್ದವು.
ನಾಟಕದ ಸೆಟ್‌ಗಳಿಗೆ ಆಧುನಿಕ ಸ್ಪರ್ಶ ನೀಡಿ, ಏಕತಾನತೆ ದೂರವಾಗಿಸುವ ಪ್ರಯತ್ನ ಗಮನಾರ್ಹವಾದುದು. ವಿಶಿಷ್ಟವಾದ ಬೆಳಕು, ವೇಷಭೂಷಣ ಬಳಸಿ ರಂಗಕ್ಕೆ ಹೊಸ ಬಣ್ಣ ನೀಡುವ ಪ್ರಯತ್ನ ಮಾಡಿದ್ದಾರೆ. ಸೆಟ್‌ಗಳನ್ನು ತಯಾರಿಸಲು ಸ್ಥಳೀಯವಾಗಿ ಲಭ್ಯವಿರುವ ವಸ್ತುಗಳನ್ನೇ ಬಳಸುತ್ತಾರೆ. ನೋಡುಗರಿಗೆ ಏಕತಾನತೆ ಕಾಡದಿರಲು ದೃಶ್ಯಗಳ ನಡುವೆ ಸೆಟ್‌ಗಳನ್ನು ಬದಲಾಯಿಸುವ ಹೊಸ ಪ್ರಯೋಗಕ್ಕೂ ಕೈ ಹಾಕಿದ್ದಾರೆ. ಈ ಹೊಸತನ ಕಂಡು ಹಲವು ಸೇವಾ ಹಾಗೂ ಸರ್ಕಾರಿ ಸಂಸ್ಥೆಗಳು ಸಹನಾ ಅವರ ತಂಡದ ಸಹಯೋಗದೊಂದಿಗೆ ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳ ಕುರಿತು ಹಲವು ಕಡೆಗಳಲ್ಲಿ ನಾಟಕಗಳನ್ನು ಪ್ರದರ್ಶಿಸಿವೆ. ಶಿಬಿರಗಳ ಹೊರತಾಗಿಯೂ ದೇಶದಾದ್ಯಂತ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ. ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ನಾಮನಿರ್ದೇಶನಗೊಂಡಿದ್ದಾರೆ.
ಬಾಲ್ಯದಿಂದಲೇ ಹೊಸತನಕ್ಕೆ ಮಿಡಿಯುತ್ತಿದ್ದ ಅವರ ಉತ್ಸಾಹವೇ ರಂಗಭೂಮಿಯಲ್ಲಿ ಹೊಸ ಪ್ರಯತ್ನಗಳಿಗೆ ಪ್ರಚೋದನೆ ನೀಡಿದೆ. ಶಿಸ್ತು, ವೈಚಾರಿಕತೆ ಸೋದರಮಾವನಿಂದ ಬಂದವು. ‘ರಸ್ತೆಯಲ್ಲಿ ನೃತ್ಯ ಮಾಡುವ ನಿನ್ನ ಮಗಳನ್ನು ಮದುವೆ ಮಾಡಿಕೊಳ್ಳುವವರು ಯಾರು’ ಎಂದು ಪೋಷಕರನ್ನು ಮೂದಲಿಸಿದವರಿಗೆ ಸಾಧನೆಯ ಮೂಲಕ ಅವರು ಉತ್ತರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.