ನಿಶ್ಚಲ ದೊಡ್ಡಮನಿ
ವಾಯುಮಾಲಿನ್ಯವನ್ನು ನೋಡಿದಾಗೆಲ್ಲ ಆತಂಕದ ಜತೆಗೆ ಅದನ್ನು ಕಡಿಮೆ ಮಾಡುವ ದಾರಿ ಯಾವುದು ಎಂಬ ಪ್ರಶ್ನೆ ತೀವ್ರವಾಗಿ ಕಾಡುತ್ತದೆ. ಅದನ್ನೇ ಸ್ಫೂರ್ತಿಯಾಗಿ ತೆಗೆದುಕೊಂಡ ದುಬೈನಲ್ಲಿ ವಾಸಿಸುತ್ತಿರುವ ಕನ್ನಡತಿ ನಿಶ್ಚಲ ದೊಡ್ಡಮನಿ ಮತ್ತು ಅವರ ತಂಡ ಹೊಸದೊಂದು ದಾರಿಯನ್ನು ಕಂಡುಕೊಂಡಿದೆ.
ಸ್ವಚ್ಛಗಾಳಿಯನ್ನು ಪಸರಿಸುವ ಉದ್ದೇಶದಿಂದ ‘ಬಯೋಗ್ರೋ’ ಎನ್ನುವ ಉತ್ಪನ್ನವನ್ನು ಈ ತಂಡ ರೂಪಿಸಿದೆ. ವಾತಾವರಣದಲ್ಲಿ ಹೇರಳವಾಗಿ ಲಭ್ಯವಿರುವ ಕಾರ್ಬನ್ ಡೈ ಆಕ್ಸೈಡ್ ಮತ್ತು ಅಮೋನಿಯಾವನ್ನು ಸಂಯೋಜಿಸಿ ತಯಾರಿಸಿದ ರಸಗೊಬ್ಬರವೇ ‘ಬಯೋಗ್ರೋ’ . ಇದರ ಬಳಕೆಯಿಂದ ಬೆಳೆಯುವ ಸಸ್ಯಗಳು ಮಾಲಿನ್ಯವನ್ನು ತೊಡೆದುಹಾಕುವಲ್ಲಿ ಮಹತ್ತರ ಪಾತ್ರವನ್ನು ವಹಿಸುವುದರ ಜತೆಗೆ ಸುಸ್ಥಿರ ಕೃಷಿಗೂ ಸಹಕಾರಿಯಾಗಿದೆ ಎಂಬುದು ತಂಡದ ನಿಶ್ಚಿತ ಅಭಿಪ್ರಾಯ.
ಆಕ್ಸ್‌ಫರ್ಡ್ ಬ್ಯುಸಿನೆಸ್ ಸ್ಕೂಲ್ ಗುರುಶೀಲ್ಸ್ ಹೋಲ್ಡಿಂಗ್ಸ್ ಸಹಯೋಗದೊಂದಿಗೆ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಸುಮಾರು 47 ದೇಶಗಳ 600 ತಂಡಗಳು ಭಾಗವಹಿಸಿದ್ದವು. ಅಂತಿಮ ಸುತ್ತಿಗೆ ಐದು ತಂಡಗಳು ಮಾತ್ರ ಆಯ್ಕೆಯಾದವು. ಆ ಐದು ತಂಡಗಳು ಅಬುಧಾಬಿಯಲ್ಲಿ ನಡೆದ ವಿಚಾರಸಂಕಿರಣದಲ್ಲಿ ತಮ್ಮ ಯೋಜನೆಗಳನ್ನು ಪ್ರಸ್ತುತ ಪಡಿಸಿದವು. ಕೊನೆಗೆ ಭಾರತ, ಯುಇ ಹಾಗೂ ಕೊರಿಯಾ ಮೂರು ತಂಡಗಳು ಆಯ್ಕೆಯಾದವು.
ಕರ್ನಾಟಕದಲ್ಲಿಯೇ ಹುಟ್ಟಿದ್ದರೂ, ಬೆಳೆದಿದ್ದೆಲ್ಲ ದುಬೈನಲ್ಲಿಯೇ. ದೆಹಲಿಯ ವಾಯುಮಾಲಿನ್ಯವೇ ಈ ಯೋಜನೆಯ ರೂಪುಗೊಳ್ಳಲು ಸ್ಪೂರ್ತಿ. ನಮ್ಮ ತಂಡದಲ್ಲಿ ಐದು ಮಂದಿ ಇದ್ದು, ಉಳಿದವರು ಕೇರಳ ಹಾಗೂ ಕೋಲ್ಕತ್ತ ಮೂಲದವರು. ಇಬ್ಬರಿಗೆ ವಿಜ್ಞಾನದಲ್ಲಿ ಆಸಕ್ತಿ ಇದ್ದು, ರಾಸಾಯನಿಕಗಳ ಸಂಯೋಜನೆ ಬಗ್ಗೆ ಹಲವು ಮೂಲಗಳಿಂದ ಮಾಹಿತಿ ಪಡೆದು, ಸಿದ್ಧ ಮಾಡಲಾಯಿತು. ವಾಣಿಜ್ಯ ಬಳಕೆಗೂ ಈ ರಸಗೊಬ್ಬರ ಸಿಗುವಂತೆ ಮಾಡಲು ಉಳಿದವರು ಯೋಜನೆ ಹಾಕಿದರು. ಸದ್ಯಕ್ಕೆ ಇದು ಪ್ರಾಯೋಗಿಕ ಹಂತದಲ್ಲಿಯೇ ಇದೆ. 12ನೇ ತರಗತಿಯ ಬೋರ್ಡ್ ಎಕ್ಸಾಂ ಬರೆಯುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಈ ಉತ್ಪನ್ನವನ್ನು ಇನ್ನಷ್ಟು ರೈತಸ್ನೇಹಿಯಾಗಿ ಮಾಡುವ ಉದ್ದೇಶವಿದೆ ಎನ್ನುತ್ತಾರೆ ನಿಶ್ಚಲ ದೊಡ್ಡಮನಿ.
ಈ ರಾಸಾಯನಿಕಗಳ ಸಂಯೋಜನೆ ಬಹಳ ಸರಳವಾಗಿದೆ. ಆದರೆ, ಅದನ್ನು ನಾವು ರಸಗೊಬ್ಬರ ತಯಾರಿಕೆಯಲ್ಲಿ ಬಳಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ವಿಸ್ತರಿಸುವ ಯೋಜನೆ ಇದೆ ಎನ್ನುತ್ತಾರೆ ಅವರು.⇒v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.