ADVERTISEMENT

ಮುಟ್ಟಿನ ರಜೆ: ವಿವಿಧ ಕ್ಷೇತ್ರಗಳ ಮಹಿಳೆಯರ ಅಭಿಪ್ರಾಯ ಇಲ್ಲಿದೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2025, 23:30 IST
Last Updated 17 ಅಕ್ಟೋಬರ್ 2025, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   
ಮಹಿಳಾ ಉದ್ಯೋಗಿಗಳಿಗೆ ತಿಂಗಳಿಗೊಂದು ‘ಮುಟ್ಟಿನ ರಜೆ’ ನೀಡುವ ಸರ್ಕಾರದ ನಿರ್ಧಾರಕ್ಕೆ ಮಹಿಳಾ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಋತುಚಕ್ರದ ವಿಷಯದಲ್ಲಿ ಸಮಾಜವನ್ನು ಸ್ಪಂದನಶೀಲವಾಗಿಸುವ ಈ ನಡೆಯ ಬಗ್ಗೆ ವಿವಿಧ ಕ್ಷೇತ್ರಗಳ ಮಹಿಳೆಯರ ಪ್ರಾತಿನಿಧಿಕ ಅಭಿಪ್ರಾಯ ಇಲ್ಲಿದೆ:

ನಿಜಕ್ಕೂ ಒಳ್ಳೆಯ ಸಂಗತಿ

ಮುಟ್ಟಿನ ಸಂದರ್ಭದಲ್ಲಿ ದೇಹ ಹಾಗೂ ಮನಸ್ಸು ಹಲವು ರೀತಿಯ ಏರಿಳಿತವನ್ನು ಕಾಣುತ್ತದೆ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ, ಇಂಥ ಸಂದರ್ಭದಲ್ಲಿ ಸ್ವಲ್ಪ ಸಮಯ ವಿಶ್ರಾಂತಿ ಸಿಕ್ಕರೂ ಹೆಣ್ಣುಮಕ್ಕಳು ಮತ್ತೆ ಕೆಲಸದಲ್ಲಿ ಆಸಕ್ತಿಯಿಂದ ತೊಡಗಿಕೊಳ್ಳಲು ಸಹಾಯವಾಗುತ್ತದೆ. ಮುಟ್ಟಿನ ಸಂದರ್ಭದಲ್ಲಿ ಒಂದು ರಜೆ ಸಿಗುವುದು ನಿಜಕ್ಕೂ ಒಳ್ಳೆಯ ಸಂಗತಿ. ಮೊದಲಿಗೆ, ಹೆಣ್ಣುಮಕ್ಕಳಿಗೆ ಆಗುವ ಈ ಕಷ್ಟವನ್ನು ಒಪ್ಪಿಕೊಂಡು, ಅದಕ್ಕೆ ಅನುಗುಣವಾಗಿ ಯೋಚಿಸಿರುವುದು ಒಳ್ಳೆಯ ಬೆಳವಣಿಗೆ. ಸೂಕ್ತ ರೀತಿಯಲ್ಲಿ ಸ್ಪಂದಿಸಿರುವ ಸರ್ಕಾರದ ಈ ನಡೆಯನ್ನು ಶ್ಲಾಘಿಸುತ್ತೇನೆ. ಇದರ ನಡುವೆ, ಮುಟ್ಟಿನ ನೋವು ಎಲ್ಲರಿಗೂ ಒಂದೇ ರೀತಿ ಇರುವುದಿಲ್ಲ ಎನ್ನುವುದೂ ನಿಜ. ವೈಯಕ್ತಿಕ ನೋವಿನ ನಡುವೆಯೂ ವೃತ್ತಿಪರವಾಗಿಯೂ ಹೆಣ್ಣುಮಕ್ಕಳು ಯೋಚಿಸಬೇಕು.
– ಸಾರಾ ಫಾತಿಮಾ, ಡಿಸಿಪಿ

ಸೂಕ್ಷ್ಮ ಸಂಗತಿಗಳಿವೆ

ಕಂಡಕ್ಟರ್‌ ಕೆಲಸ ಹೇಗೆಂದು ಗೊತ್ತೇ ಇದೆ. ಇಪ್ಪತ್ತೆರಡು ವರ್ಷಗಳಿಂದ ಈ ವೃತ್ತಿಯಲ್ಲಿದ್ದೇನೆ. ಆ ದಿನಗಳಲ್ಲಿ ಗಂಡಸರ ಮಧ್ಯೆಯೆಲ್ಲಾ ಓಡಾಡಿ ಟಿಕೆಟ್ ನೀಡುವುದು ಎಂದರೆ, ಹಿಂಸೆಯೇ ಆಗುತ್ತದೆ. ಒಮ್ಮೊಮ್ಮೆ ನಮ್ಮ ದೇಹದಲ್ಲಿ ಒಂದು ರೀತಿಯ ವಾಸನೆ ಬರುತ್ತದೆ. ಇದು ಬೇರೆಯವರಿಗೂ ಗೊತ್ತಾಗುತ್ತದೇನೋ ಎಂದು ನೆನೆಸಿಕೊಂಡು ಹಿಂಸೆಯಾಗುತ್ತದೆ. ಕೆಲವು ವರ್ಷಗಳ ಹಿಂದಿನ ಮಾತು. ಒಮ್ಮೆ ನನಗೆ ಎದ್ದು ಹೋಗಿ ಟಿಕೆಟ್‌ ಕೊಡಲು ಸಾಧ್ಯವೇ ಆಗಲಿಲ್ಲ. ಇದರಿಂದ ನನಗೆ ನೋಟಿಸ್‌ ನೀಡಲಾಯಿತು. ಮುಟ್ಟಿನ ಸಮಸ್ಯೆಯನ್ನೇ ಬರೆದು ಉತ್ತರ ಕೊಟ್ಟೆ. ಆದರೂ ನನಗೆ ದಂಡ ವಿಧಿಸಿದ್ದರು. ಇಂಥ ಸಮಯದಲ್ಲಿ ಶೇ 10ರಷ್ಟು ಬಸ್‌ ಚಾಲಕರು ಹೆಣ್ಣುಮಕ್ಕಳ ಸಮಸ್ಯೆ ಅರ್ಥ ಮಾಡಿಕೊಳ್ಳುತ್ತಾರಷ್ಟೆ. ಹಿಂಸೆಯಾದರೆ ಮಾರ್ಗ ಮಧ್ಯೆ ಇಳಿದುಕೊಳ್ಳುವ ಅನುಕೂಲವೂ ಮೂಲಸೌಕರ್ಯವೂ ನಮಗಿಲ್ಲ. ಹೀಗಾಗಿ ಒಬ್ಬ ಮಹಿಳೆಯಾಗಿ, ಮಹಿಳಾ ಕಂಡಕ್ಟರ್‌ ಆಗಿ ನಾನು ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ.
– ಜ್ಯೋತಿ, ದೊಡ್ಡಬಳ್ಳಾಪುರ, ಬಿಎಂಟಿಸಿ ಬಸ್‌ ಚಾಲಕಿ

ಸಂವೇದನಾಶೀಲರಾಗಲಿ

ADVERTISEMENT
ಮುಟ್ಟಿನ ಸಂದರ್ಭದಲ್ಲಿ ಮಹಿಳೆಯರಿಗೆ ವಿಶ್ರಾಂತಿ ಬೇಕು ಎನ್ನುವುದನ್ನೇ ಮರೆತಿದ್ದೇವೆ. ಉದ್ಯೋಗಸ್ಥ ಪುರುಷ‌ ಮತ್ತು ಮಹಿಳೆಯರ ಜವಾಬ್ದಾರಿಗಳನ್ನು ಹೋಲಿಕೆ ಮಾಡಿದಾಗ ಮಹಿಳೆ ಮೇಲೆ‌ಯೇ ಹೊರೆ ಹೆಚ್ಚು. ಮಹಿಳೆಗೆ ‘ಆ ದಿನ’ಗಳಲ್ಲಿ ವಿಶ್ರಾಂತಿ ತೀರಾ ಅಗತ್ಯ ಎನ್ನುವುದನ್ನು‌ ಸಮಾಜ ಒಪ್ಪಿಕೊಳ್ಳಬೇಕು. ಆ ಕೆಲಸ ಆಗಬೇಕೆಂದರೆ ಇಂಥ ಸಂವೇದನಾತ್ಮಕ ಕಾನೂನುಗಳ ಜಾರಿಯ ಅಗತ್ಯ ಇದ್ದೇ ಇರುತ್ತದೆ. ಮಾಡಬೇಕು. ಆಗ ಜನರಲ್ಲಿ ಸ್ವಲ್ಪವಾದರೂ ಭಯ ಹುಟ್ಟುತ್ತದೆ. ಲಿಂಗಸೂಕ್ಷ್ಮ,‌ ಮಹಿಳಾಪರವಾದ ಸರ್ಕಾರದ ನಿರ್ಧಾರವು ಯಶಸ್ವಿಯಾಗಬೇಕಾದರೆ ಮೊದಲು ಗಂಡಸರನ್ನು ಸಂವೇದನಾಶೀಲರನ್ನಾಗಿ ಮಾಡಬೇಕು. ಆಗ ಮಹಿಳೆಯು ಮುಟ್ಟು ಮತ್ತು ಆ ದಿನಗಳ ನೋವಿನ ಬಗ್ಗೆ ಯಾವುದೇ ಮುಜುಗರ ಇಲ್ಲದೆ ಮುಕ್ತವಾಗಿ ಹೇಳಿಕೊಂಡು ರಜೆ ಪಡೆಯಬಹುದು. ಅಂತಹ ವಾತಾವರಣವನ್ನು ಉದ್ಯೋಗಸ್ಥ ಸಂಸ್ಥೆಗಳು ನಿರ್ಮಾಣ‌ ಮಾಡಬೇಕು.
– ಮಮತಾ ಸಾಗರ, ಕವಯಿತ್ರಿ

ಹೊಣೆಗಾರಿಕೆ ನಮ್ಮದೇ

ಸರ್ಕಾರದ ಈ ಕ್ರಮವು ಖಾಸಗಿ ಮತ್ತು ಸರ್ಕಾರಿ ಉದ್ಯೋಗ ವಲಯದಲ್ಲಿ ಒಂದೇ ರೀತಿ ಪ್ರಯೋಜನಕಾರಿ ಆಗಲಾರದು ಎನ್ನುವುದು ಗಮನಿಸಬೇಕಾದ ಅಂಶ. ಮುಟ್ಟಿನ ದಿನಗಳಲ್ಲಿ ಬಹುತೇಕ ಹೆಣ್ಣುಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕವಾಗಿ ಅನೇಕ ಬದಲಾವಣೆಗಳಾಗುವುದರಿಂದ, ಈ ದಿನಗಳಲ್ಲಿ ಸಿಗುವ ರಜೆಯು ಅವರನ್ನು ಸ್ವಲ್ಪ ಮಟ್ಟಿಗೆ ಒತ್ತಡ ಮುಕ್ತರನ್ನಾಗಿಸುತ್ತದೆ. ಹೆಣ್ಣಿನ ಋತುಚಕ್ರದ ಬಗ್ಗೆ ಸಾರ್ವಜನಿಕ ಸಂವೇದನೆಯನ್ನು ರೂಪಿಸಲು ಸಹಾಯವಾಗುತ್ತದೆ ಮತ್ತು ಹೆಣ್ಣುಮಕ್ಕಳು ತಮ್ಮ ಋತುಚಕ್ರದ ಬಗ್ಗೆ ಮುಕ್ತವಾಗಿ ಮಾತನಾಡುವ ವಾತಾವರಣವನ್ನು ಸೃಷ್ಟಿಸುತ್ತದೆ. ಆದರೆ, ಮನರಂಜನಾ ಕ್ಷೇತ್ರದಲ್ಲಿ ಈ ರಜೆಯಿಂದ ಪೂರ್ವನಿಗದಿತ ಕಾರ್ಯಕ್ರಮ ಅಥವಾ ಚಿತ್ರೀಕರಣಕ್ಕೆ ಅಡ್ಡಿಯಾಗಬಹುದು. ಇದರಿಂದ ಕಲಾವಿದರು ತಮ್ಮ ಅವಕಾಶವನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಅವಶ್ಯಕತೆ ಇದ್ದರೆ ಮಾತ್ರ ರಜೆ ತೆಗೆದುಕೊಳ್ಳುವ ಮೂಲಕ ನಾವೂ ನಮ್ಮ ಹೊಣೆಗಾರಿಕೆಯನ್ನು ತೋರುವುದು ಅಗತ್ಯವಾಗಿರುತ್ತದೆ. ಸರ್ಕಾರದ ಈ ಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಉದ್ಯೋಗದಾತ ಸಂಸ್ಥೆಗಳ ಜವಾಬ್ದಾರಿ ಎಷ್ಟಿರುತ್ತದೆಯೋ ಅಷ್ಟೇ ಹೊಣೆ ಉದ್ಯೋಗಸ್ಥ ಮಹಿಳೆಯರಾಗಿ ನಮ್ಮದೂ ಆಗಿರಬೇಕು.
– ಶೃತಿ ಪ್ರಹ್ಲಾದ್, ಗಾಯಕಿ

‘ಹೆಚ್ಚುವರಿ ಹೊರೆ’ಯಲ್ಲ

ಉದ್ಯೋಗಸ್ಥ‌ ಮಹಿಳೆಯರಿಗೆ ಬಹುತೇಕ ಸಂದರ್ಭಗಳಲ್ಲಿ ಮುಟ್ಟಿನ ರಜೆ ಪಡೆಯಬೇಕಾದ ಅನಿವಾರ್ಯ ಸ್ಥಿತಿ ಇದ್ದರೂ ರಜೆ ಕೇಳಲು ಹಿಂಜರಿಯುತ್ತಾರೆ. ಆದರೆ ಈಗ ಸರ್ಕಾರ ಇದನ್ನು ಅರಿತು ಮಹಿಳಾ ಪರ ಉತ್ತಮ ನಿರ್ಣಯ ಕೈಗೊಂಡಿದೆ. ಆದರೆ ನಮ್ಮ ನಟನಾ ಕ್ಷೇತ್ರಕ್ಕೆ ಇದು ಅನ್ವಯಿಸದು. ಶೂಟಿಂಗ್ ಇದ್ದಾಗ ಮುಟ್ಟಿನ ರಜೆ ಪಡೆಯಲೇಬೇಕಾದದ್ದು ಅನಿವಾರ್ಯವಾದರೆ ಅನಾರೋಗ್ಯದ ಕಾರಣ ಹೇಳಿ ಬಿಡುವು ಪಡೆಯುತ್ತೇವೆ. ಆಗ ಬೇರೆ ಸೀನ್ ಶೂಟಿಂಗ್ ಮಾಡುತ್ತಾರೆ. ಎಲ್ಲರಿಗೂ ಈ ಬಗೆಯ ರಜೆಯ ಅಗತ್ಯ ಇಲ್ಲದೇ ಇರಬಹುದು. ಕೆಲವರಿಗೆ ಅದೊಂದು ತೀರಾ ಸಾಮಾನ್ಯವಾದ ಸಂಗತಿಯಾದರೆ, ಮತ್ತೆ ಕೆಲವರು ತುಂಬಾ ನೋವು, ಕಿರಿಕಿರಿ ಅನುಭವಿಸುತ್ತಾರೆ. ಉದ್ಯೋಗದಾತರು ಈ ರಜೆಯನ್ನು ಹೆಚ್ಚುವರಿ ಹೊರೆ ಎಂದು ಭಾವಿಸಿ ಮಹಿಳೆಯರನ್ನು ಕೆಲಸಕ್ಕೆ ನೇಮಿಸಿಕೊಳ್ಳುವಲ್ಲಿ ನಿರಾಸಕ್ತಿ ತೋರಬಾರದು. ಮಾನವೀಯ ನೆಲೆಯಲ್ಲಿ ಇದನ್ನು ಪರಿಗಣಿಸಬೇಕು.
– ಐಶಾನಿ ಶೆಟ್ಟಿ, ನಟಿ

ನಿರೂಪಣೆ: ರೂಪಾ ಕೆ.ಎಂ., ಅಭಿಲಾಷ ಬಿ.ಸಿ., ಕೀರ್ತಿಕುಮಾರಿ ಎಂ., ಸಿಂಧು ಕೆ.ಟಿ., ಸುಕೃತ ಎಸ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.