ರವಿಯನ್ನು ನಿಗೂಢವಾದ ತಾವಿನಲ್ಲಿ ಕೂಡಿಹಾಕಿ ಬಂದಿದೆಯೇನೋ ಎಂಬಂತೆ ಜಿಟಿಜಿಟಿ ಸುರಿಯುವ ಮಳೆ, ಎಷ್ಟೆಲ್ಲ ಬೆಚ್ಚನೆಯ ನೆನಪುಗಳನ್ನೂ ತನ್ನೊಂದಿಗೆ ಹೊತ್ತು ತರುತ್ತದೆ. ಮಲೆಸೀಮೆಯಲ್ಲಿ ಮುದ ನೀಡಿದ ಅಂದಿನ ಮುಸಲಧಾರೆ, ಕಾಂಕ್ರೀಟ್ ಕಾಡಿನ ಧಾವಂತದ ಬದುಕಿನಲ್ಲೂ ನವಿರುಕ್ಕಿಸುವ ಇಂದಿನ ವರ್ಷಧಾರೆಯ ನೆನಪಿನ ಸಿಂಚನ ಲೇಖಕಿ ಸಹನಾ ಹೆಗಡೆ ಅವರಿಂದ
ಮಳೆಗಾಲದಲ್ಲಿ ಯಾವುದೇ ದಿನ ಕರೆ ಮಾಡಿ, ‘ಅಮ್ಮಾ ಹೇಗಿದ್ದೀಯಾ? ಏನು ಮಾಡುತ್ತಿದ್ದೀಯಾ?’ ಎಂದು ಕೇಳಿದರೆ, ‘ಎಂತಾ ಮಾಡದೇ? ಕರೇ ಮಳೆಗಾಲ’ ಎಂಬ ಉತ್ತರ ಅಮ್ಮನ ಕಡೆಯಿಂದ ಖಚಿತ. ತಿಂಗಳಾನುಗಟ್ಟಲೆ ಕಪ್ಪಗೆ ದಟ್ಟವಾಗಿ ಕಟ್ಟಿಕೊಂಡ ಮೋಡ, ಎಡೆಬಿಡದೇ ಸುರಿಯುವ ಮಳೆ, ಕಡಿದುಹೋಗುವ ವಿದ್ಯುತ್ ಸಂಪರ್ಕ ಜೊತೆಗೆ, ಮಳೆಗಾಲ ಕಾಲಿಡುವ ಮುಂಚೆಯೇ ಅಂಗಳ, ಬಾಗಿಲು, ಗೋಡೆ, ಕಿಟಕಿಗಳನ್ನೆಲ್ಲ ಜಡಿಮಳೆಯಿಂದ ರಕ್ಷಿಸಿಕೊಳ್ಳಲು ಕಟ್ಟಿಕೊಂಡ ಜಡಿತಟ್ಟಿ. ಸೂರ್ಯ ಮೊದಲೇ ರಜೆಯ ಮೇಲಿದ್ದಾನೆ, ಅಳಿದುಳಿದ ಬೆಳಕಿಗೂ ಮನೆಯೊಳಗೆ ಬರಲು ಹಲವು ಹದಿನೆಂಟು ಅಡಚಣೆಗಳು. ಹೀಗಿದ್ದಾಗ ಮಳೆಗಾಲ ಕರಿ ಮಳೆಗಾಲವಾಗದೆ ಇನ್ನೇನಾದೀತು?
ಬಿಳಿ ಮಳೆಗಾಲ ಇದ್ದಿದ್ದರೆ! ವಯಸ್ಸಾದವರು, ಕಾಯಿಲೆ-ಕಸಾಲೆಯಿಂದ ಬಳಲುತ್ತಿರುವವರು ಅಂಗಳದಲ್ಲಿ ಆಗೀಗ ಕೈಕಾಲು ಆಡಿಸಬಹುದಿತ್ತು, ಬಿಸಿಲು ಮುಖ ತೋರಿಸಿದಾಗ ಅದರ ಕಾವಿಗೆ ಮೈಯೊಡ್ಡಿಕೊಳ್ಳಬಹುದಿತ್ತು. ಆದರೆ ಬೆಂಗಳೂರಿನಂಥ ಬೆಂಗಳೂರಿನಲ್ಲಿಯೇ ಬಿಳಿ ಮಳೆಗಾಲ ಎನ್ನುವುದು ಕನಸು. ಹಾಗಿದ್ದಾಗ ಪಶ್ಚಿಮಘಟ್ಟದ ಸೆರಗಿನಲ್ಲಿರುವ, ಹಸಿರನ್ನೇ ಹಾಸಿ ಹೊದ್ದಿರುವ ನಮ್ಮೂರಿನಲ್ಲಿ ಇದೆಲ್ಲ ಆಗುವ ಮಾತಲ್ಲ ಬಿಡಿ.
ಇಂತಹುದೇ ಒಂದು ಕರಿ ಮಳೆಗಾಲದ ದಿನ. ಬಹುಶಃ ನಾಲ್ಕನೆಯ ತರಗತಿಯಲ್ಲಿದ್ದೆ. ಸಹಪಾಠಿಯೊಬ್ಬಳು ‘ಹೊಟ್ಟೆನೋವು, ಮನೆಗೆ ಹೋಗುತ್ತೇನೆ’ ಎಂದು ಅಕ್ಕೋರನ್ನು ಪೀಡಿಸತೊಡಗಿದಳು. ಚಿಕ್ಕಹುಡುಗಿ, ಅವಳ ಜೊತೆ ನಾನೂ ಹೋಗುವುದೆಂದಾಯಿತು. ಅರ್ಧ ದಾರಿ ಸಾಗಿದ್ದೆವು. ಗಾಳಿ–ಮಳೆ ಜೋರಾಯಿತು. ಅಲ್ಲೊಂದು ಇಲ್ಲೊಂದು ಬಿಡಿಬಿಡಿ ಮನೆ. ನಡುವೆ ಕಾಡೇ ಕಾಡು. ಇದ್ದ ಒಂದೇ ಛತ್ರಿಯನ್ನು ಇಬ್ಬರೂ ಸೇರಿ ಹಿಡಿದುಕೊಂಡರೂ ಗಾಳಿಯ ರಭಸಕ್ಕೆ ಅದು ಮೊಗಚಿಕೊಂಡೇ ಬಿಟ್ಟಿತು. ತೊಟ್ಟ ಬಟ್ಟೆಯ ಜೊತೆಗೆ ಪಾಟಿ-ಪುಸ್ತಕಗಳೂ ಒದ್ದೆಮುದ್ದೆ. ಎಲ್ಲೆಡೆಯಿಂದ ನುಗ್ಗಿಬರುವ ನೀರು. ಸಹಾಯಕ್ಕೆ ಕರೆಯೋಣವೆಂದರೆ ಹತ್ತಿರದಲ್ಲಿ ಯಾರೂ ಕಾಣಿಸುತ್ತಿಲ್ಲ. ಒಬ್ಬರಿಗೊಬ್ಬರು ಆತುಕೊಂಡು ನಡುಗುತ್ತಲೇ ಸುಮಾರು ಸಮಯ ಕಳೆದಾಯಿತು.
ಅವಳನ್ನು ಮನೆಗೆ ಬಿಡಹೋದರೆ ತಿರುಗಿ ಬರುವಾಗ ನಾನು ಒಬ್ಬಂಟಿ. ನನ್ನನ್ನು ಬಿಡಲು ಬಂದರೆ ತಿರುಗಿ ಹೋಗುವಾಗ ಅವಳು ಒಬ್ಬಂಟಿ. ಈ ನಡುವೆ ಅವಳ ಹೊಟ್ಟೆನೋವು ಮರೆತೇಹೋಯಿತು. ಅಂತೂ ಅವಳು ತನ್ನ ಮನೆ ಕಡೆ, ನಾನು ನನ್ನ ಮನೆ ಕಡೆ ಹೋಗುವುದು ಎಂದು ನಿರ್ಧರಿಸಿಯಾಯಿತು. ಅವಳ ಮನೆಗೆ ಹೋಗಬೇಕೆಂದರೆ, ಚಿಕ್ಕದೊಂದು ಹಳ್ಳವನ್ನು ದಾಟಲೇಬೇಕಿತ್ತು. ಗುಡ್ಡಬೆಟ್ಟಗಳಿಂದ ಹರಿದುಬಂದ ಕೆನ್ನೀರಿನ ಭೋರ್ಗರೆತಕ್ಕೆ ಅದುರುತ್ತಿದ್ದ ಅಡಿಕೆಮರದ ಸಂಕವನ್ನು ದಾಟಿ ಅಂದು ಮನೆ ಸೇರಿದಳು ಗೆಳತಿ. ವಿಷಾದದ ಸಂಗತಿಯೆಂದರೆ, ಮುಂದೊಂದು ದಿನ ಸಂಸಾರದಲ್ಲಿ ಸಂತಸದಿಂದ ಅವಳು ಮೈಮರೆತಿದ್ದಾಗ, ಜೀವನದಿಗೆ ಅಡ್ಡಲಾಗಿ ಜವರಾಯ ಹಾಕಿದ ಸಂಕವನ್ನು ದಾಟಲು ಮಾತ್ರ ಅವಳಿಗೆ ಆಗಲೇ ಇಲ್ಲ.
ನಿತ್ಯವೂ ಹನ್ನೆರಡು ಕಿಲೊಮೀಟರ್ ಪಯಣಿಸಿ ಹೈಸ್ಕೂಲಿಗೆ ಹೋಗುತ್ತಿದ್ದ ಸಮಯ. ಮಳೆಗಾಲದಲ್ಲಂತೂ ನಡೆದುಹೋಗಿ ಬಸ್ ನಿಲ್ದಾಣ ತಲುಪುವ ಮೊದಲೇ ಸಮವಸ್ತ್ರ ತೋಯ್ದು ತೊಪ್ಪೆಯಾಗಿರುತ್ತಿತ್ತು. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಂದ ನಡೆದು ಬರುತ್ತಿದ್ದ ಎಲ್ಲ ಹೆಣ್ಣುಮಕ್ಕಳ ಅವಸ್ಥೆಯೂ ಇದೇ ಆಗಿತ್ತು. ದಪ್ಪನೆಯ ನೀಲಿ ಕಾಟನ್ ಲಂಗದಿಂದ ಇಳಿದು ನೆಲದುದ್ದಕ್ಕೂ ಹರಿಯುತ್ತಿದ್ದ ನೀರು. ಸಂಜೆ ಮನೆ ಸೇರುವಷ್ಟರಲ್ಲಿ ಕಟಗುಟ್ಟುವ ಹಲ್ಲುಗಳು, ಬಿಳಿಚಿ, ನೆರಿಗೊಂಡ ಕೈಕಾಲು ಬೆರಳುಗಳು. ಅಮ್ಮಂದಿರು ಜೀವಂತವಾಗಿಟ್ಟಿದ್ದ ಅಡುಗೆ ಒಲೆಯೋ ಬಚ್ಚಲ ಬೆಂಕಿಯೋ ಅಥವಾ ಹೊಡಸಲ ಕಾವೋ ಅವುಗಳಲ್ಲಿ ಮತ್ತೆ ಉಸಿರನೂದಬೇಕು.
ಇಂತಹ ಜೋರು ಮಳೆಯಲ್ಲಿಯೇ ಊರಿನ ಭತ್ತದ ಗದ್ದೆಗಳಲ್ಲಿ ಭರಪೂರ ನೆಟ್ಟಿಯ ಕೆಲಸ. ಕಂಬಳಿ-ಗೊರಬುಗಳನ್ನು ಹೊದ್ದ ಹೆಮ್ಮಕ್ಕಳು, ಸುರಿಯುವ ಧಾರಾಕಾರ ಮಳೆಗೆ ಬೆನ್ನೊಡ್ಡಿ, ಮೊಳಕಾಲುದ್ದ ಕೆಸರು ನೀರಿನಲ್ಲಿ ಸೊಂಟ ಬಗ್ಗಿಸಿ ಅಗೆ ಕೀಳಬೇಕು, ಸಸಿ ನೆಡಬೇಕು. ಊಟದ ವಿರಾಮದಲ್ಲಿ ಶಾಲೆಯಿಂದ ಮನೆಗೆ ಬಂದಿದ್ದೇ ಯಾರದಾದರೂ ನೆರವಿನಲ್ಲಿ ಗದ್ದೆಗೆ ಓಡುತ್ತಿದ್ದೆ. ಆಗ ಕಿತ್ತ, ನೆಟ್ಟ ಭತ್ತದ ಸಸಿಗಳು ಕೊಟ್ಟ ಖುಷಿಗೆ ಮತ್ತೆ ಪಕ್ಕಾಗಬೇಕೆಂದೆನಿಸುತ್ತದೆ. ತಮಾಷೆ, ನಗು, ಕಾಲೆಳೆಯುವುದರ ಜೊತೆಗೆ ಎಲ್ಲರೂ ಸೇರಿ ಹಾಡುತ್ತಿದ್ದ ಆ ಹಾಡು ಅದೆಷ್ಟು ರಾಗಬದ್ಧ. ಅಮರಿಕೊಂಡ ಕಷ್ಟ-ಕೋಟಲೆ, ಚಿಕ್ಕ ಪುಟ್ಟ ನಲಿವು ನೆಮ್ಮದಿಯ ಭಾವಗಳೆಲ್ಲ ಗದ್ದೆಯ ಅರಲಿನಲ್ಲಿ ಹೆಂಗಳೆಯರ ಕೊರಳಿನಲ್ಲಿ ಬಿರಿದು ಹಾಡಾಗಬೇಕು.
ತಿಂಗಳಾನುಗಟ್ಟಲೆ ಹೊಡೆಯುವ ಮಳೆಯಿಂದ ರೋಸಿಹೋದ ಮಲೆನಾಡಿಗರನ್ನು ಅರ್ಥಾತ್ ಮಳೆನಾಡಿಗರನ್ನು ‘ಹೇಗಿದೆ ಮಳೆಗಾಲ?’ ಎಂದು ಕೇಳಿನೋಡಿ. ‘ಸುಡುಗಾಡು ಮಳೆಗಾಲ, ಬೇಜಾರು ಹಿಡಿದುಹೋಯಿತು’ ಎಂಬ ಉತ್ತರ ಬರದಿದ್ದರೆ ಹೇಳಿ. ಸುಡುಗಾಡಿಗೂ ಹೋಗಲಾರದಷ್ಟು ಮಳೆ ಹೊಯ್ಯುವಲ್ಲಿ ಮಳೆಗಾಲವೇ ಸುಡುಗಾಡಾಗಿಬಿಡುತ್ತದೆ!
ಗಿಡಮರಗಳೆಲ್ಲ ಹಸಿರು ಬಣ್ಣ ತಳೆದಿವೆ, ಹಾದಿಬದಿಯೆಲ್ಲ ಶುಭ್ರವಾಗಿದೆ, ಬೋಂಡ-ಬಜ್ಜಿ ಮಾಡುವುದಕ್ಕೆ ಸಕಾಲ, ಕಾಫಿ ಡಿಕಾಕ್ಷನ್ ಸ್ವಲ್ಪ ಹೆಚ್ಚೇ ಹಾಕಿಡಿ, ಆಫೀಸಿನಿಂದ ಬೇಗ ಮನೆಯತ್ತ ಮುಖ ಮಾಡಿ, ಕುತ್ತಿಗೆ ಉದ್ದ ಮಾಡಿ ಕಾಯುವ ಒಂದಾದರೂ ಜೀವ ಅಲ್ಲಿರುತ್ತದೆ ಇತ್ಯಾದಿ ಮೃದುಮಧುರ ಭಾಷೆಯೊಂದು ಮಳೆಗಾಲದಲ್ಲಿ ಮನಕ್ಕೆ ಮುದ ನೀಡಬೇಕಿತ್ತು. ದೌರ್ಭಾಗ್ಯವೆಂದರೆ, ಅಂತಹ ಪದಪುಂಜಗಳನ್ನು ಕೇಳದೆ ದಶಕಗಳೇ ಕಳೆದುಹೋದವು. ಧಾರಾಕಾರ ಮಳೆಯನ್ನು ‘ಕುಂಭದ್ರೋಣ ಮಳೆ’, ‘ಮುಸಲಧಾರೆ’ ಎಂಬೆಲ್ಲ ಕಿವಿಗೆ ಹಿತವಾದ ಸುಂದರ ಶಬ್ದಗಳನ್ನು ಬಳಸಿ ಸಾಹಿತಿಗಳು, ಕವಿ-ಕವಯಿತ್ರಿಯರು ಬಣ್ಣಿಸುವ ಕಾಲವೊಂದಿತ್ತು. ಈಗ ಕೇಳಿಬರುವುದೆಲ್ಲವೂ ‘ರಣಭೀಕರ’. ಬೀಳುವ ಹತ್ತಾರು ಹನಿಗಳೂ ಮಳೆಯಲ್ಲ, ಮಳೆರಾಯನ ‘ರಣಕೇಕೆ’, ‘ರುದ್ರ ನರ್ತನ’. ಹಗಲಿರುಳೂ ಈ ರಣಗಳದೇ ಅನುರಣನ!
ಬಿಡಿ, ಗಮನ ಬೇರೆಡೆಗೆ ಹರಿಸೋಣ ಎಂದುಕೊಂಡರೆ, ಮನೆಯಲ್ಲೊಂದೇ ಅಲ್ಲ ಸಾಮಾಜಿಕ ಮಾಧ್ಯಮಗಳಲ್ಲಿಯೂ ಒಣಗದ ಬಟ್ಟೆಗಳದೇ ವಾಸನೆ. ಯಾರು ಎಷ್ಟು ಸೆಟ್ ಒಳಬಟ್ಟೆಗಳನ್ನು ಇಟ್ಟುಕೊಂಡು ಮಳೆಗಾಲವನ್ನು ಮ್ಯಾನೇಜ್ ಮಾಡುತ್ತಿದ್ದಾರೆ ಎನ್ನುವ ಅಂಕಿಸಂಖ್ಯೆ ಸಹಿತ ಘನಗಂಭೀರ ಚರ್ಚೆ!
ಮಳೆಗಾಲ ಎಂದರೆ ಬರೀ ಬೋಂಡ-ಬಜ್ಜಿ-ಕಾಫಿಯೇ ಆಯಿತೆನ್ನಬೇಡಿ. ಥಂಡಿಯಲ್ಲಿ ಶಾಲೆಯಿಂದ ಬರುವ ಮಕ್ಕಳಿಗಾಗಿ ಮಲೆನಾಡಿನ ಅಮ್ಮಂದಿರು ಆ ಭಾಗದಲ್ಲಷ್ಟೇ ಸಿಗುವ ಕರಿಬಾಳೆ ಹಣ್ಣನ್ನು ಸುಲಿದು ನಿಗಿನಿಗಿ ಕೆಂಡದ ಮೇಲೆ ಸುಟ್ಟೋ ಸಿಪ್ಪೆಸಹಿತ ಬಬ್ಬೂದಿಯಲ್ಲಿ ಬೇಯಿಸಿಯೋ ಇಡುತ್ತಿದ್ದರಲ್ಲ. ಅಂಗಿ-ಚಡ್ಡಿ-ಲಂಗ-ಪಲಕಗಳನ್ನು ಒಣಗಿಸಿಕೊಳ್ಳುತ್ತಲೇ ಬದಿಯಲ್ಲಿರುವ ಹಲಸಿನ ಬೀಜಗಳನ್ನು ಒಲೆಗೆ ಹಾಕಿ, ಅವು ಢಮಾರೆಂದು ಹೊಟ್ಟಿ, ಅಮ್ಮ-ದೊಡ್ಡಮ್ಮ, ಚಿಕ್ಕಮ್ಮ, ಅತ್ತೆ, ಅಜ್ಜಿ ಎಂದು ಯಾರಾದರೊಬ್ಬರಿಂದ ಬಯ್ಯಿಸಿಕೊಳ್ಳದಿದ್ದರೆ ಅದೂ ಒಂದು ಬಾಲ್ಯವೇ? ಬೇಸಿಗೆಯಲ್ಲಿ ಆಯ್ದು ಶೇಖರಿಸಿಟ್ಟುಕೊಂಡ ಗೇರುಬೀಜಗಳನ್ನು ಹದವಾಗಿ ಸುಟ್ಟು ತಿನ್ನುವುದೂ ಮಳೆಗಾಲದ ಸುಖಗಳಲ್ಲೊಂದು.
ಮಲೆನಾಡಿನ ಅದರಲ್ಲಿಯೂ ಶಿರಸಿ-ಸಿದ್ದಾಪುರ ಸೀಮೆಗಳಲ್ಲಿ ಮಳೆಗಾಲದಲ್ಲಿ ಮಾತ್ರ ಮಾಡುತ್ತಿದ್ದ ವಿಶೇಷ ಸಿಹಿ ತಿನಿಸು ಉಂಡ್ಲೆಕಾಳನ್ನು ಯಾರಾದರೂ ಮಾಡಿದ್ದಾರಾ ನೋಡೋಣ ಬನ್ನಿ. ಅಂದಹಾಗೆ, ಶ್ರಾಯದಲ್ಲಿ ಹೇರಳವಾಗಿ ಸಿಗುವಾಗ ಬಿಡಿಸಿ ಉಪ್ಪುನೀರಿಗೆ ಹಾಕಿಟ್ಟ ಹಲಸಿನಕಾಯಿಯ ತೊಳೆಗಳನ್ನು ಕೃಷ್ಣಾಷ್ಟಮಿಯಂತಹ ಹಬ್ಬ-ಹರಿದಿನಗಳಲ್ಲಿ ಅಥವಾ ನೆಂಟರ ನೆಪದಲ್ಲಿ ಬೀಸಿ, ಕಾಸಿ ಹದವಾಗಿ ಕರಿದು ಮಾಡುತ್ತಿದ್ದ ಈ ಕರಿಕಂದು ಗೋಲಿಗಳ ಜೊತೆಗೆ ಮಲೆನಾಡಿಗೇ ವಿಶೇಷವಾದ ಉಪ್ಪಾಗೆ ತುಪ್ಪವಿರದಿದ್ದರೆ ಕರಿ ಮಳೆಗಾಲಕ್ಕೆ ಕಳೆಕಟ್ಟುವುದಾದರೂ ಹೇಗೆ? ಹೇಳಿ.
ಅಬ್ಬರದ ಮಳೆಯಲ್ಲಿಯೇ ಕೊಡೆ ಅಮಾವಾಸ್ಯೆ ಬರುತ್ತದೆ. ಹೊಸದಾಗಿ ಮದುವೆಯಾದ ಮಗಳ ಮನೆಗೆ ನೆಂಟರೊಡನೆ ಹಬ್ಬಕ್ಕೆ ಕರೆಯಲು ಹೋಗುತ್ತಾನೆ ಅಪ್ಪ. ಭೀಮನ ಅಮಾವಾಸ್ಯೆಯಂದು ವ್ರತವಿದ್ದವರ ಮನೆಯಲ್ಲಿ ಸಂಭ್ರಮ ದುಪ್ಪಟ್ಟು. ಪೂಜೆ ಮುಗಿಸಿ, ಹಬ್ಬದೂಟ ಉಂಡು ಮನೆಯತ್ತ ಮುಖ ಮಾಡುತ್ತೇನೆ ಎನ್ನುವ ಅಳಿಯನ ಕೈಗೆ ಮುಗುಳ್ನಗುತ್ತ ಹೊಸ ಕೊಡೆಯನ್ನಿಡುತ್ತಾರೆ ಮಾವ.
ಮಲೆನಾಡಿನಲ್ಲಿ, ಅದರಲ್ಲೂ ವಿಶೇಷವಾಗಿ ಅಲ್ಲಿನ ಗ್ರಾಮೀಣ ಭಾಗದ ಕೆಲವು ಸಮುದಾಯಗಳಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ ಈ ಸಂಪ್ರದಾಯ. ಇಷ್ಟು ಕಾಲ ಮುದ್ದಿನಿಂದ ಬೆಳೆಸಿದ ಮಗಳನ್ನು ಧಾರೆಯೆರೆದು ಕೊಟ್ಟಿದ್ದೇನೆ, ಯಾವ ತೊಂದರೆಯೂ ಬಾಧಿಸದಂತೆ ಅವಳನ್ನು ಬಾಳಿಸಿಕೋ ಎಂದು ಸೂಚ್ಯವಾಗಿ, ಸಾಂಕೇತಿಕವಾಗಿ ಹೇಳಲು ಬಳಸಿಕೊಂಡರೇ ಈ ಸಂಪ್ರದಾಯವನ್ನು?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.