ADVERTISEMENT

ಉಗುರಿನ ಅಂದಕೆ...

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:30 IST
Last Updated 25 ಮಾರ್ಚ್ 2022, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಉದ್ದನೆಯ, ನೀಳವಾದ ಉಗುರು ಎಂದರೆ ಯಾವ ಹೆಣ್ಣುಮಕ್ಕಳು ಇಷ್ಟಪಡುವುದಿಲ್ಲ ಹೇಳಿ? ಚೆಂದದ ನುಣುಪಾದ ಉಗುರು ಬೆಳೆಸಿ ಅದಕ್ಕೆ ಬಣ್ಣದ ರಂಗು ನೀಡುವುದೆಂದರೆ ಹೆಣ್ಣುಮಕ್ಕಳಿಗೆ ಬಹಳ ಪ್ರೀತಿ. ಹೀಗೆ ಉದ್ದನೆಯ ಉಗುರು ಬಿಡುವುದು ಹಲವು ಹೆಣ್ಣುಮಕ್ಕಳ ಕನಸೂ ಹೌದು. ಆದರೆ ಎಲ್ಲರಿಗೂ ಇದು ಸಾಧ್ಯವಾಗುವುದಿಲ್ಲ. ಆದರೆ ಉಗುರು ಬೆಳೆಸುವುದು ಅಸಾಧ್ಯ ಎಂದೇನಲ್ಲ. ಕೆಲವೊಂದು ಸರಳವಿಧಾನದಿಂದ ಉಗುರಿನ ಆರೋಗ್ಯ ಕಾಪಾಡಿಕೊಂಡು ಸುಂದರವಾಗಿಸಿಟ್ಟುಕೊಳ್ಳುವ ಜೊತೆಗೆ ಸದೃಢವಾಗಿಸಿಕೊಳ್ಳಲೂ ಸಾಧ್ಯವಿದೆ. ಅದು ಹೇಗೆ? ಇಲ್ಲಿದೆ ಟಿಪ್ಸ್‌...

ನಿಂಬೆರಸ

ನಿಂಬೆರಸದಲ್ಲಿರುವ ವಿಟಮಿನ್‌ ಸಿ ಅಂಶವು ಉಗುರಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕೆ ನೀವು ಮಾಡಿಬೇಕಿರುವುದು ಇಷ್ಟೇ. ನಿಂಬೆಹಣ್ಣನ್ನು ಎರಡು ಭಾಗ ಮಾಡಿಕೊಂಡು ಕೈ ಹಾಗೂ ಕಾಲಿನ ಉಗುರಿನ ಮೇಲೆ ಚೆನ್ನಾಗಿ ಉಜ್ಜಬೇಕು, ನಂತರ ಬಿಸಿನೀರಿನಲ್ಲಿ ತೊಳೆದುಕೊಳ್ಳಬೇಕು. ಇದು ಉಗುರಿನ ಹೊಳಪು ಹೆಚ್ಚುವಂತೆ ಮಾಡಿ ಉಗುರನ್ನು ಸ್ವಚ್ಛಗೊಳಿಸಿ ಬ್ಯಾಕ್ಟೀರಿಯಾ ಮುಕ್ತಗೊಳಿಸುತ್ತದೆ.

ADVERTISEMENT

ತೆಂಗಿನೆಣ್ಣೆ ‌‌

ತೆಂಗಿನೆಣ್ಣೆಯನ್ನು ಉಗುರು ಬೆಚ್ಚಗಾಗುವವರೆಗೆ ಬಿಸಿ ಮಾಡಿ. ಅದನ್ನು ಉಗುರುಗಳ ಮೇಲೆ ಮಸಾಜ್‌ ಮಾಡಬೇಕು. ತೆಂಗಿನೆಣ್ಣೆಯಲ್ಲಿ ವಿಟಮಿನ್‌ ಇ ಅಂಶವಿದೆ. ಅಲ್ಲದೇ ಆ್ಯಂಟಿಆ್ಯಕ್ಸಿಡೆಂಟ್ ಅಂಶವೂ ಅಧಿಕವಿದ್ದು ಉಗುರಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಮಲಗುವ ಮೊದಲು ತೆಂಗಿನೆಣ್ಣೆಯಲ್ಲಿ ಉಗುರಿಗೆ ಮಸಾಜ್ ಮಾಡಿಕೊಳ್ಳಿ.

ಆಲಿವ್‌ ಎಣ್ಣೆ

ಕೆಲವರಿಗೆ ಉಗುರಿನ ಬೆಳವಣಿಗೆಯಲ್ಲೇ ಸಮಸ್ಯೆ ಇರುತ್ತದೆ. ಒಬ್ಬರಿಗೆ ಉಗುರು ಬೇಗನೆ ತುಂಡಾಗುತ್ತದೆ. ಇನ್ನೂ ಕೆಲವರಿಗೆ ಸಿಪ್ಪೆ ಏಳುತ್ತಿರುತ್ತದೆ. ಇಂಥ ತೊಂದರೆ ಇರುವವರು ಉಗುರಿಗೆ ಆಲಿವ್ ಎಣ್ಣೆ ಚಿಕಿತ್ಸೆ ಮಾಡಬೇಕು. ಇದು ಉಗುರಿನ ಆಳದವರೆಗೆ ಇಳಿದು ಒಳಪದರವನ್ನು ತಲುಪುತ್ತದೆ. ಇದು ಉಗುರಿನ ಸುತ್ತಲಿನ ಚರ್ಮದ ಶುಷ್ಕತೆಯನ್ನು ನಿವಾರಿಸುತ್ತದೆ. ಅಲ್ಲದೇ ಸುಗಮ ರಕ್ತಸಂಚಾರಕ್ಕೂ ಅನುವು ಮಾಡಿಕೊಟ್ಟು ಉಗುರಿನ ಬೆಳವಣಿಗೆಗೆ ಸಹಕರಿಸುತ್ತದೆ. ಆಲಿವ್‌ ಎಣ್ಣೆಯನ್ನು ಕೊಂಚ ಬಿಸಿ ಮಾಡಿ ಉಗುರು ಹಾಗೂ ಉಗುರಿನ ಸುತ್ತಲೂ ಐದು ನಿಮಿಷಗಳ ಕಾಲ ಮಸಾಜ್‌ ಮಾಡಿಕೊಂಡು ಬೆಳಿಗ್ಗೆ ಬಿಸಿನೀರಿನಿಂದ ತೊಳೆಯಿರಿ.

ನೇಲ್‌ ಆರ್ಟ್‌ ಹಾಗೂ ಉಗುರು ಬಣ್ಣ

ನೇಲ್‌ ಆರ್ಟ್‌ (ಉಗುರಿನ ಮೇಲೆ ಚಿತ್ತಾರ ಮೂಡಿಸಿಕೊಳ್ಳುವುದು), ಪ್ಲಾಸ್ಟಿಕ್‌ ಅಥವಾ ಆಕ್ರಿಲಿಕ್ ಉಗುರುಗಳನ್ನು ಹಚ್ಚಿಕೊಂಡು ಕೈಗಳ ಅಂದ ಹೆಚ್ಚಿಸಿಕೊಳ್ಳುವುದು ಇಂದಿನ ಟ್ರೆಂಡ್‌. ಆದರೆ ಇವು ಉಗುರಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಯಾವಾಗಲಾದರೂ ಒಮ್ಮೆ ಈ ರೀತಿ ಉಗುರಿನ ಸಿಂಗಾರ ಮಾಡಿಕೊಳ್ಳುವುದರಲ್ಲಿ ತಪ್ಪೇನಿಲ್ಲ. ಆದರೆ ನಿಯಮಿತವಾಗಿ ಮಾಡುವುದರಿಂದ ಉಗುರಿನ ಬೆಳವಣಿಗೆಗೆ ತೊಂದರೆ ಉಂಟಾಗಬಹುದು. ಉಗುರಿನ ಅಂದ ಹೆಚ್ಚಿಸುವ ಸಲುವಾಗಿ ಬಣ್ಣ ಹಚ್ಚಿಕೊಳ್ಳುವ ಮುನ್ನ ನೀವು ಹಚ್ಚುವ ಉಗುರಿನ ಬಣ್ಣದ ಗುಣಮಟ್ಟವನ್ನು ಪರಿಶೀಲಿಸಿ ಹಾಗೂ ನಿಮಗೆ ಯಾವುದಾದರೂ ಬಣ್ಣಗಳ ಅಲರ್ಜಿ ಇದ್ದರೆ, ಅದನ್ನು ಖಚಿತಪಡಿಸಿಕೊಂಡು ಮುಂದುವರಿಯಿರಿ.

ಹಸಿರು ತರಕಾರಿ ಸೇವನೆ

ಸೊಪ್ಪು, ತರಕಾರಿ ಸೇವನೆ ಉಗುರಿನ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ತುಂಬಾ ಸಹಕಾರಿ. ಅದರಲ್ಲೂ ಆಹಾರದಲ್ಲಿ ನಿಯಮಿತವಾಗಿ ಕೊತ್ತಂಬರಿ ಸೊಪ್ಪನ್ನು ಸೇವಿಸುವುದರಿಂದ ಉಗುರು ಸದೃಢವಾಗುತ್ತದೆ. ಜೊತೆಗೆ ಆಹಾರದಲ್ಲಿ ಹೆಚ್ಚು ಹೆಚ್ಚು ಸೊಪ್ಪು ಇರುವಂತೆ ನೋಡಿಕೊಳ್ಳಿ.

ಜೇನುತುಪ್ಪ

ಜೇನುತುಪ್ಪದಲ್ಲಿ ಹಲವು ಬಗೆಯ ಬ್ಯಾಕ್ಟೀರಿಯಾ ಹಾಗೂ ಸೋಂಕು ನಿವಾರಣಾ ಅಂಶವಿದೆ. ಜೇನುತುಪ್ಪ ಹಾಗೂ ನಿಂಬೆರಸವನ್ನು ಮಿಶ್ರಣ ಮಾಡಿ ಉಗುರಿಗೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಬೇಕು. ನಂತರ ಅದನ್ನು ಬಿಸಿನೀರಿನಿಂದ ತೊಳೆಯಬೇಕು. ಹೀಗೆ ವಾರದಲ್ಲಿ 2 ಬಾರಿ ಮಾಡುವುದರಿಂದ ಉಗುರು ಸದೃಢವಾಗಿ ಬೆಳೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.