ADVERTISEMENT

ಹೊರೆಯಾದರೆ ಪೊರೆದವರು... ಹೆತ್ತವರ ಹೊಣೆ: ಮಗನಿಗಾ-ಮಗಳಿಗಾ?

ಸುಶೀಲಾ ಡೋಣೂರ
Published 21 ಮಾರ್ಚ್ 2025, 23:30 IST
Last Updated 21 ಮಾರ್ಚ್ 2025, 23:30 IST
<div class="paragraphs"><p>ಕುಟುಂಬ (ಸಾಂದರ್ಭಿಕ ಚಿತ್ರ)</p></div>

ಕುಟುಂಬ (ಸಾಂದರ್ಭಿಕ ಚಿತ್ರ)

   
ಆಸ್ತಿಯ ವಿಚಾರ ಬಂದಾಗ ಹಕ್ಕು ಸಾಧಿಸಲು ಎಲ್ಲಿದ್ದರೂ ಓಡಿ ಬರುವ ಮಗ/ಮಗಳು, ಹೆತ್ತವರನ್ನು ಸಾಕುವ ಕರ್ತವ್ಯ ಎದುರಾದಾಗ ನೆಪಗಳ ಕೊರಳಿಗೆ ಜೋತು ಬೀಳುತ್ತಾರೆ. ಹೆತ್ತವರ ಜವಾಬ್ದಾರಿಯ ಬಗ್ಗೆ ಮತ್ತೆ ಚರ್ಚೆಗಳು ಬುಗಿಲೆದ್ದ ಈ ಹೊತ್ತು ಮಗನಷ್ಟೇ ಅಲ್ಲ, ಮಗಳ ಕರ್ತವ್ಯಗಳ ಕಡೆಗೂ ಕಣ್ತೆರೆದು ನೋಡಬೇಕಾದ ಅಗತ್ಯವೆದ್ದಿದೆ.

ಹಿರಿಯರನ್ನು ಪ್ರೀತ್ಯಾದಾರಗಳಿಂದ ನೋಡಿಕೊಳ್ಳಬೇಕು. ಜೀವನದ ಸಂಧ್ಯಾಕಾಲದಲ್ಲಿ ಅದೆಷ್ಟೊ ಹಿರಿಯ ಜೀವಗಳು ನೋವು, ಸಂಕಟ, ಅವಮಾನ, ನಿರ್ಲಕ್ಷ್ಯದಿಂದ ತತ್ತರಿಸುತ್ತಿವೆ. ಬದಲಾದ ಕಾಲಘಟ್ಟದಲ್ಲಿ ಎರಡು ಹೊತ್ತಿನ ಊಟ ಸಿಗುವುದೇನೂ ಸರಿ, ಒಂದು ಹಿಡಿ ಪ್ರೀತಿ ಮಾತ್ರ ಮರೀಚಿಕೆಯಾಗುತ್ತಿದೆ.

ಇತ್ತೀಚೆಗಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ ಪಾಟೀಲ ಹಿರಿಯ ಜೀವಗಳನ್ನು ನಿರ್ಲಕ್ಷಿಸಿ, ಬೇಜವಾಬ್ದಾರಿತನದಿಂದ ನಡೆದುಕೊಳ್ಳುವ ಮಕ್ಕಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಹಿರಿಯರ ಹೊಣೆಗಾರಿಕೆಯ ವಿಚಾರ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ADVERTISEMENT

ಹೆತ್ತವರನ್ನು ನೋಡಿಕೊಳ್ಳಬೇಕಾದ ಕರ್ತವ್ಯ ಮಗನದೇ? ಮಗಳದೇ?

ಮಗನದೂ ಹೌದು, ಆದರೆ ಮಗಳು ಇದರಿಂದ ನುಣುಚಿಕೊಳ್ಳುವ ಹಾಗಿಲ್ಲ ಎನ್ನುವುದನ್ನು ಸುಮಾರು ಮೂರು ದಶಕಗಳ ಹಿಂದೆಯೇ ಭಾರತೀಯ ನ್ಯಾಯಾಲಯ ಸ್ಪಷ್ಟಪಡಿಸಿದೆ. ಹೆತ್ತವರಿಗೆ ಊಟ-ವಾಸ-ಆರೋಗ್ಯ ಮಾತ್ರವಲ್ಲ, ಮಾನಸಿಕ ಸ್ವಾಸ್ಥ್ಯಕ್ಕೆ ಬೇಕಾಗುವ ಅಗತ್ಯಗಳನ್ನೂ ಪೂರೈಸಬೇಕಾದುದು ಮಕ್ಕಳ ಕರ್ತವ್ಯ. ಮಗನಿಲ್ಲದ ಸಂದರ್ಭಗಳಲ್ಲಿ ಅಥವಾ ಮಗನಿಗೆ ಶಕ್ತಿ ಇಲ್ಲದ, ಅನುಕೂಲಗಳಿಲ್ಲದ ಪರಿಸ್ಥಿತಿಗಳಲ್ಲಿ ಆ ಕರ್ತವ್ಯಗಳನ್ನು ಮಗಳು ನಿರ್ವಹಿಸಬೇಕು ಎನ್ನುವುದನ್ನು ನ್ಯಾಯಾಲಯ 1987ರ ಪ್ರಕರಣವೊಂದರಲ್ಲಿ ತಿಳಿಸಿದೆ.

ಎಷ್ಟೊಂದು ಕಾನೂನುಗಳಿದ್ದರೂ, ನಿಯಮಗಳಿದ್ದರೂ, ತಲೆಯ ಮೇಲೆ ಸಮಾಜದ ಎಚ್ಚರಿಕೆಯ ಗಂಟೆ ಹೊಡೆದುಕೊಳ್ಳುತ್ತಲೇ ಇದ್ದರೂ... ಮಕ್ಕಳು ಕರ್ತವ್ಯಗಳನ್ನೂ, ಮಮಕಾರವನ್ನೂ ಮರೆಯುತ್ತಲೇ ಇದ್ದಾರೆ. ಪರಿಣಾಮವಾಗಿ ಮನೆಯ ಹಿರಿಯರನ್ನು ಆಸ್ಪತ್ರೆಗಳಲ್ಲಿ, ಬೀದಿಗಳಲ್ಲಿ, ಬಸ್ ನಿಲ್ದಾಣಗಳಲ್ಲಿ, ರೈಲುಗಳಲ್ಲಿ ಬಿಟ್ಟು ಹೋಗುವ ಹೇಯ ಕೃತ್ಯಗಳು ವರದಿಯಾಗುತ್ತಲೇ ಇವೆ.

ಆಸ್ತಿಯಲ್ಲಿರುವ ಪಾಲು, ಆರೈಕೆಯಲ್ಲಿ ಯಾಕಿಲ್ಲ?

ಆಸ್ತಿಯ ವಿಚಾರ ಬಂದಾಗ ಇರುವ ಕೆಲಸಗಳನ್ನೆಲ್ಲಾ ಬದಿಗೊತ್ತಿ ಬಂದು, ಹೆಸರು ಸೇರಿಸುವ ಮಕ್ಕಳು ಜವಾಬ್ದಾರಿಯ ಮಾತು ಬಂದಾಗ, ಮನೆ ಚಿಕ್ಕದು, ಮಕ್ಕಳು ಸಣ್ಣವರು, ನೋಡಿಕೊಳ್ಳಲು ಯಾರೂ ಇಲ್ಲ, ಆಸ್ಪತ್ರೆ ದೂರ... ಎನ್ನುವ ನೆಪಗಳ ಕೊರಳಿಗೆ ಜೋತು ಬೀಳುತ್ತಾರೆ.

ಕೆಲ ಸಂದರ್ಭಗಳಲ್ಲಿ ಗಂಡುಮಕ್ಕಳಿಗೆ ಹೆತ್ತವರನ್ನು ಸಲುಹಬೇಕೆನ್ನುವ ಮನಸಿರುತ್ತದೆ. ಆರ್ಥಿಕ ಶಕ್ತಿ ಇರುವುದಿಲ್ಲ. ಅದಿದ್ದರೆ ಪತ್ನಿಯ ಅಸಹಕಾರ. ಹಾಗೆಯೇ ಹೆಣ್ಣುಮಕ್ಕಳಿಗೂ ಕೆಲವೊಮ್ಮೆ ಪರಿಸ್ಥಿತಿಗಳು ವೈತಿರಿಕ್ತವಾಗಿರಬಹುದು. ಮತ್ತೆ ಕೆಲ ಸಂದರ್ಭಗಳಲ್ಲಿ ಮಗಳ ಮನೆಯಲ್ಲಿದ್ದರೆ ಹೊರೆ ಎನ್ನುವ ಹಿರಿಯರ ಮನಸ್ಥಿತಿಯೂ ಮಗನ ಮನೆಗೇ ಅಂಟಿಕೊಳ್ಳುವಂತೆ ಮಾಡಬಹುದು.

‘ಹೆತ್ತವರನ್ನು ಮಗನೇ ನೋಡಿಕೊಳ್ಳಬೇಕು’ ಎನ್ನುವ ಮಗಳ ಮಾತಿಗೂ; ‘ಅವರು ನಮಗೇನು ಆಸ್ತಿ ಇಟ್ಟಿದ್ದಾರಾ? ಮಗಳೂ ಸರಿಸಮ ದುಡಿಯುತ್ತಾಳಲ್ಲ’ ಎಂಬ ಸೊಸೆಯ ವಾದಕ್ಕೂ, ‘ನಾನೇ ಯಾಕೆ ಸಾಕಬೇಕು? ಇನ್ನೊಬ್ಬ ಮಗನಿಲ್ಲವೆ?’ ಎನ್ನುವ ಮಗನ ಮಾತಿಗೂ ಕಾನೂನಿನಲ್ಲಿ ಸ್ಪಷ್ಟ ಉತ್ತರಗಳಿವೆ, ಕಟ್ಟುನಿಟ್ಟಿನ ಮಾರ್ಗಸೂಚಿಗಳಿವೆ ಎನ್ನುತ್ತಾರೆ ಹಿರಿಯ ವಕೀಲೆ ಅಂಜಲಿ ರಾಮಣ್ಣ.

ಹಿರಿಯರ ಪೋಷಣೆಯ ವಿಚಾರ ಬಂದಾಗ ಮಗ–ಮಗಳು ಎನ್ನುವ ಪ್ರಶ್ನೆ ಬರುವುದಿಲ್ಲ, ಇಬ್ಬರಿಗೂ ಸಮಾನ ಹಕ್ಕು, ಸಮಾನ ಕರ್ತವ್ಯ ಎಂದು ಕೋರ್ಟ್ 1987ರಲ್ಲಿಯೇ ನಿಚ್ಚಳವಾಗಿ ಹೇಳಿದೆ. (ಪ್ರಕರಣ- Mrs.Vijaya Manohar Arbat vs Kashi Rao Rajaram Sawai And Another on 18 February, 1987).

‘ಮಕ್ಕಳು ಜವಾಬ್ದಾರಿಯಿಂದ ನುಣುಚಿಕೊಳ್ಳಲೆತ್ನಿಸುತ್ತಾರೆ ಎಂದರೆ ಅದು ಮೂಲ ಪೋಷಣೆಯಲ್ಲಿನ ದೋಷವೂ ಆಗಿರಬಹುದು. ಶಕ್ತಿ ಇದ್ದಾಗ ಸರಿಯಾದ ನಿರ್ಧಾರ, ಸ್ವ–ಭದ್ರತೆಯ ಕ್ರಮ ಕೈಗೊಂಡಿದ್ದರೆ ಈ ಸಂಕಷ್ಟ ಬರದು. ಹಾಗೆಯೇ ಮಗ–ಮಗಳ ನಡುವೆ ಭೇದ ಮಾಡದೇ ಇಬ್ಬರನ್ನೂ ಸಮಾನವಾಗಿ ಕಂಡು, ಸಮಾನ ಹಕ್ಕು, ಆದ್ಯತೆ ಕೊಟ್ಟು ಬೆಳೆಸಿದ ಮಕ್ಕಳಲ್ಲಿ ಈ ಜಿದ್ದಾಜಿದ್ದಿ ಏರ್ಪಡದು’ ಎಂದು ವಿಶ್ಲೇಷಿಸುತ್ತಾರೆ ಅಂಜಲಿ ರಾಮಣ್ಣ.

‘ಆಸ್ತಿ ಹಂಚಿಕೆ ಮಾಡುವಾಗ ಭೇದ ಮಾಡಬೇಡಿ. ಸಮಾನ ಕರ್ತವ್ಯದ ಪಾಠ ನಿಮ್ಮಿಂದಲೇ ಶುರುವಾಗುವುದು. ಆಸ್ತಿ ಪಾಲು ಮಾಡುವಾಗ ನಿಮ್ಮ ಸ್ವಂತಕ್ಕೆ ಅಂತ ಒಂದು ಪಾಲು ಇಟ್ಟುಕೊಳ್ಳಿ. ಮಕ್ಕಳ ಮೇಲೆ ಅಗತ್ಯಕ್ಕಿಂತ ಹೆಚ್ಚು ಅವಲಂಬಿತರಾಗಬೇಡಿ’ ಎನ್ನುವುದು ಅವರು ಹೇಳುವ ಕಿವಿಮಾತು.

ಸಾಂದರ್ಭಿಕ ಚಿತ್ರ

ಭಾವನಾತ್ಮಕ ಬೆಸುಗೆ
ಹಿರಿಯರನ್ನು ನೋಡಿಕೊಳ್ಳುವುದು ಎಂದರೆ ಹೊಟ್ಟೆ–ಬಟ್ಟೆ–ಆರೋಗ್ಯ ಇದಿಷ್ಟೇ ಅಲ್ಲ. ಎಷ್ಟೇ ಕೆಲಸವಿರಲಿ, ಜವಾಬ್ದಾರಿ ಇರಲಿ, ಯಾವುದೇ ಹುದ್ದೆಯಲ್ಲಿರಲಿ, ಕೆಲ ಹೊತ್ತು ಅವರೊಂದಿಗೆ ಕಾಲ ಕಳೆಯಬೇಕು. ಇದು ಊಟ–ನಿದ್ರೆ–ಮಾತ್ರೆಯಷ್ಟೇ ಅತ್ಯಗತ್ಯ ಎನ್ನುತ್ತಾರೆ ಮನೋವೈದ್ಯರು.ಗಂಡನಾಗಿ, ಅಪ್ಪನಾಗಿ, ಉದ್ಯೋಗಿಯಾಗಿ, ಅಧಿಕಾರಿಯಾಗಿ ಎಲ್ಲೊ ಕಳೆದುಹೋದ ಮಗನಲ್ಲಿ/ಮಗಳಲ್ಲಿ ಅವರು ತಮ್ಮ ಕಂದನನ್ನು ಕಾಣಲು ಸದಾ ಹವಣಿಸುತ್ತಿರುತ್ತಾರೆ. ಜೀವನದ ಸಂಧ್ಯಾಕಾಲದಲ್ಲಿ ಅವರಿಗೆ ಬೇಕಿರುವುದು ನಿಮ್ಮ ಆಸ್ತಿ–ಅಂತಸ್ತು, ಪ್ರತಿಷ್ಠೆ ಅಲ್ಲ. ಹೊಟ್ಟೆಗೆ ಹಿತವೆನಿಸುವ ಎರಡು ಹೊತ್ತಿನ ಊಟ, ಮನೆಯಲ್ಲಿ ಹಿರಿಯರೆನ್ನುವ ಒಳಗೊಳ್ಳುವಿಕೆ, ಒಡಗೂಡುವಿಕೆಯ ಘನತೆ, ಮಗನಾಗಿ/ಮಗಳಾಗಿ ನೀವು ಒಡನಾಡುವ ಆ ಎರಡು ಅಕ್ಕರೆಯ ಗಳಿಗೆ...
ಮಗನಿಗೆ ಹೆತ್ತವರ ಪೋಷಣೆಯ ಮನಸಿರುತ್ತದೆ, ಆದರೆ ಹೆಂಡತಿಯ ಮುಖ ನೋಡುತ್ತಾನೆ. ಮಗಳಿಗೂ ಆಸೆ ಇರುತ್ತದೆ, ಆದರೆ ಗಂಡನ ಮರ್ಜಿ ಕಾಯುತ್ತಾಳೆ. ಏಕೆಂದರೆ ಮಗ ಆರ್ಥಿಕವಾಗಿ ಸ್ವತಂತ್ರನಾದರೂ ಹಿರಿಯರ ನೋಡಿಕೊಳ್ಳುವುದನ್ನು ನಾವೇ ಅವನಿಗೆ ಕಲಿಸಿರುವುದಿಲ್ಲ. ಆರೈಕೆಯಲ್ಲಿ ಮಗಳು ನಿಪುಣೆ, ಆದರೆ ಆರ್ಥಿಕ ಸ್ವಾತಂತ್ರ್ಯ ಅಷ್ಟಾಗಿ ಇರುವುದಿಲ್ಲ. ಮಕ್ಕಳನ್ನು ಬೆಳೆಸುವಲ್ಲಿಯೇ ಈ ಎಚ್ಚರಿಕೆ ಇರಬೇಕು. ತನ್ನ ತಂದೆ-ತಾಯಿಯ ಕೆಲಸಗಳನ್ನು ಮಾಡುವಷ್ಟು ಮಗನ ಕೈ–ಮನ ಪಳಗಬೇಕು. ಹೆತ್ತವರನ್ನು ಸಾಕುವಷ್ಟು ಮಗಳ ದುಡಿಮೆ ಗಟ್ಟಿಯಾಗಿರಬೇಕು. ಹೇಗೂ ಮಗಳ ಮಮಕಾರವೇ ಒಂದು ತೂಕ ಹೆಚ್ಚಿರುವ ಕಾರಣದಿಂದಲೂ ಸರಿ, ಮಗಳು ನೋಡಿಕೊಳ್ಳಬೇಕು, ಮಗ ಆರ್ಥಿಕ ಸಹಾಯ ಮಾಡಬೇಕು. ಆಗ ಹಿರಿಯರಿಗೂ ಒಂದು ನೆಮ್ಮದಿ. ಯಾರೊ ಒಬ್ಬರ ಮೇಲೆ ಭಾರ ಹಾಕಿದೆ ಎನ್ನುವ ಸಂಕಟ ಉಳಿಯದು. ಜವಾಬ್ದಾರಿಗಳನ್ನು ಹಂಚಿಕೊಂಡಾಗ ಹೆತ್ತವರಿಗೂ ಗೌರವ, ಮಕ್ಕಳಿಗೂ ಘನತೆ.
–ಲತಾ ಶ್ರೀನಿವಾಸ್, ಹಿರಿಯ ಬರಹಗಾರ್ತಿ

ಹೆತ್ತವರಿಗಾಗಿ... ಇಷ್ಟಂತೂ ಮಾಡಿ

  • ಆಗಾಗ ಅವರ ಪಕ್ಕದಲ್ಲಿ ಕುಳಿತು ಒಂದೆರಡು ಮಾತಾಡಿ

  • ನಿಮ್ಮ ಬದುಕಿನ ಕೆಲ ಮಹತ್ವದ ಬೆಳವಣಿಗೆಗಳನ್ನು ಹಂಚಿಕೊಳ್ಳಿ

  • ಏನು ತಿನ್ನುತ್ತಾರೆ, ಏನು ಉಣ್ಣುತ್ತಾರೆ, ಅವರಿಗೇನಿಷ್ಟ... ತಿಳಿದುಕೊಳ್ಳಿ. ರುಚಿಯಾದ, ಹೊಸತರದ ತಿಂಡಿ–ಖಾದ್ಯಗಳನ್ನು ಅವರಿಗೂ ಪರಿಚಯಿಸಿ

  • ಅವರ ಮಾತ್ರೆಗಳ ಮೇಲೆ ಗಮನವಿಡಿ

  • ವಾರಕ್ಕೊಂದಿನವಾದರೂ ಅವರೊಂದಿಗೆ ಕುಳಿತು ಊಟ ಮಾಡಿ

  • ಮಕ್ಕಳನ್ನು ಅವರೊಂದಿಗೆ ಬೆರೆಯಲು ಬಿಡಿ. ಮಕ್ಕಳ ಸಾಧನೆಯನ್ನು ಅವರೊಂದಿಗೆ ಹಂಚಿಕೊಳ್ಳಿ

  • ಜಡಗಟ್ಟಿದ ಅವರ ಕೈ–ಕಾಲುಗಳನ್ನು ಒಮ್ಮೊಮ್ಮೆ ಸ್ಪರ್ಶಿಸಿ

  • ಮನೆಗೆ ಬರುವ ಅತಿಥಿಗಳಿಂದ ಅವರನ್ನು ಅಂತರದಲ್ಲಿಡಬೇಡಿ

  • ಹುಷಾರಿಲ್ಲದಾಗ ಜೊತೆಗೆ ಆಸ್ಪತ್ರೆಗೆ ಹೋಗಿ

ಅಮ್ಮ–ಅಪ್ಪನನ್ನು ನೋಡಿಕೊಳ್ಳುವ ಜವಾಬ್ದಾರಿ ಸಣ್ಣದೇನಲ್ಲ, ನಿಜ ಆದರೆ ಅಣ್ಣ–ತಮ್ಮ–ಅಕ್ಕ–ತಂಗಿ ಒಟ್ಟಾಗಿ ಹೆತ್ತವರ ಆರೈಕೆಯನ್ನು ತಮ್ಮ ಆದ್ಯತೆಯಾಗಿ ಮಾಡಿಕೊಂಡಾಗ ಅದು ಹೊರಲಾರದಷ್ಟು ಭಾರವೂ ಅಲ್ಲ. ಊಟ–ವಾಸ–ಆರೋಗ್ಯದಂತಹ ಅಗತ್ಯಗಳನ್ನು ಮಾತ್ರ ಒದಗಿಸಿಕೊಟ್ಟರೆ ಕರ್ತವ್ಯ ಮುಗಿಯಬಹುದು, ಋಣ ತೀರುವುದಿಲ್ಲ. ನೀವು ಕೂಸಾಗಿದ್ದಾಗ ಅವರು ಕೊಟ್ಟರಲ್ಲವೇ? ಅದೇ ಮಮಕಾರ, ಆರೈಕೆ, ಆದ್ಯತೆ, ಆದರೆ, ಸಮಯನ್ನು ಅವರಿಗೆ ಮರಳಿಸಿದಾಗ ಮಾತ್ರ ಹೆತ್ತವರ ಋಣ ಸಂದಾಯವಾಗಬಲ್ಲದು...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.