ADVERTISEMENT

ದೌರ್ಜನ್ಯಕ್ಕೆ ‘ಪರಿಹಾರ’ ಇದೆ

ಹೇಮಾ ವೆಂಕಟ್
Published 23 ನವೆಂಬರ್ 2018, 20:00 IST
Last Updated 23 ನವೆಂಬರ್ 2018, 20:00 IST
ರೂಪಾ ಅಯ್ಯರ್‌, ಸುಮನಾ ಕಿತ್ತೂರ್, ರಾಣಿ ಶೆಟ್ಟಿ, ಶ್ರುತಿ ಹರಿಹರನ್‌
ರೂಪಾ ಅಯ್ಯರ್‌, ಸುಮನಾ ಕಿತ್ತೂರ್, ರಾಣಿ ಶೆಟ್ಟಿ, ಶ್ರುತಿ ಹರಿಹರನ್‌    

ನವೆಂಬರ್‌ 25 ‘ವಿಶ್ವ ಮಹಿಳಾ ದೌರ್ಜನ್ಯ ವಿರೋಧಿ ದಿನ’ ಎಂದು ವಿಶ್ವಸಂಸ್ಥೆಯು 1993ರಲ್ಲೇ ಘೋಷಿಸಿದೆ. ಈಗ 25ರ ಹರೆಯ. ‘ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ನಿಲ್ಲದಿದ್ದರೆ ಸಮಾನತೆ, ಅಭಿವೃದ್ಧಿ, ಶಾಂತಿ ಸಾಧಿಸಲು ಸಾಧ್ಯವಿಲ್ಲ. ಮಹಿಳಾ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಸಾಧ್ಯವಿಲ್ಲ’ ಎಂದು ವಿಶ್ವಸಂಸ್ಥೆ ಅಭಿಪ್ರಾಯಪಟ್ಟಿದೆ.

ಬೆಂಗಳೂರು ನಗರದಲ್ಲಿ ಮಹಿಳಾ ದೌರ್ಜನ್ಯ ತಡೆಗೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮಹಿಳಾ ಠಾಣೆಗಳು, ಪೊಲೀಸರ ಗಸ್ತು ವ್ಯವಸ್ಥೆ, ಸಹಾಯವಾಣಿ ಮುಂತಾದ ಹಲವು ಯೋಜನೆಗಳ ಹೊರತಾಗಿಯೂ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗಿಲ್ಲ. ಟ್ಯಾಕ್ಸಿ, ಬಸ್‌, ಹೋಟೇಲು, ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುವ ಮಹಿಳೆಯರಿಗೆ, ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಯುತ್ತಿರುವುದು ಒಂದು ಕಡೆಯಾದರೆ, ಮನೆ, ಶಾಲೆ, ಕಚೇರಿಗಳೂ ಇದಕ್ಕೆ ಹೊರತಾಗಿಲ್ಲ. ಮನೆಯ ಹೊರಗೆ ನಡೆಯುವ ದೌರ್ಜನ್ಯಕ್ಕಿಂತ ಮನೆಯೊಳಗೆ ನಡೆಯುವ ದೌರ್ಜನ್ಯ ಪ್ರಕರಣಗಳೇ ಹೆಚ್ಚು ಎಂದು ಪೊಲೀಸ್‌ ವರದಿ ಹೇಳುತ್ತದೆ.

ವನಿತಾ ಸಹಾಯವಾಣಿ, ಮಕ್ಕಳ ಸಹಾಯವಾಣಿ, ಕೌಟುಂಬಿಕಾ ಸಲಹಾ ಕೇಂದ್ರ ಬೆಂಗಳೂರು ನಗರ ವ್ಯಾಪ್ತಿಯಿಂದ ಬರುವ ದೂರುಗಳನ್ನು ‘ಪರಿಹಾರ’ ಸ್ವಯಂಸೇವಾ ಸಂಸ್ಥೆ ನಿಭಾಯಿಸುತ್ತಿದೆ. ಅಲ್ಲಿ ಆಪ್ತ ಸಮಾಲೋಚನೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಯತ್ನಿಸಲಾಗುತ್ತದೆ. ಬೆಂಗಳೂರು ನಗರ ಪೊಲೀಸ್‌ ಅಡಿಯಲ್ಲಿ ಈ ಸ್ವಯಂಸೇವಾ ಸಂಸ್ಥೆ ಕಾರ್ಯನಿರ್ವಹಿಸುತ್ತದೆ. 1993ರಲ್ಲಿ ಆರಂಭವಾದ ಕೇಂದ್ರ ಕೇಂದ್ರ ಸಮಾಜ ಕಲ್ಯಾಣ ಮಂಡಳಿ ಮತ್ತು ಕರ್ನಾಟಕ ರಾಜ್ಯ ಸಮಾಜಕಲ್ಯಾಣ ಮಂಡಳಿಯ ಮೇಲ್ವಿಚಾರಣೆಯಲ್ಲಿತ್ತು. ಈಗ ನಗರ ಪೊಲೀಸ್‌ ಮೇಲ್ವಿಚಾರಣೆಯಲ್ಲಿದೆ. ನಗರ ಪೊಲೀಸ್‌ ಆಯುಕ್ತರೇ ಅಧ್ಯಕ್ಷರು.

ADVERTISEMENT

‘ಪರಿಹಾರ’, ಕಳೆದ 25 ವರ್ಷಗಳಿಂದ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಾಂತ್ವನದ ಜೊತೆಗೆ ನ್ಯಾಯ ಒದಗಿಸುತ್ತಿರುವ ಸಂಸ್ಥೆ. ’ಇದುವರೆಗೂ ನಮ್ಮ ಬಳಿ ಬಂದ ಶೇ 60 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೇವೆ. ಆರಂಭವಾದಾಗ ವರ್ಷಕ್ಕೆ 25 ದೂರು ಬಂದರೆ ಹೆಚ್ಚು. ಈಗ ಪ್ರತಿ ವರ್ಷ ಸರಾಸರಿ 1 ಲಕ್ಷ ದೂರುಗಳು ಬರುತ್ತಿವೆ’ ಎನ್ನುತ್ತಾರೆ ಸಂಸ್ಥೆಯ ಮುಖ್ಯಸ್ಥೆ ರಾಣಿ ಶೆಟ್ಟಿ.

ಕೌಟುಂಬಿಕ ದೌರ್ಜನ್ಯವೇ ಹೆಚ್ಚು
‘ಪರಿಹಾರ’ಗೆ ಬರುವ ದೂರುಗಳ ಪೈಕಿ ಮದುವೆಯ ನಂತರ ನಡೆಯುವ ದೌರ್ಜನ್ಯಗಳೇ ಹೆಚ್ಚು. ಅದರಲ್ಲೂ ಕುಡುಕ ಗಂಡನ ಕಿರುಕುಳ, ದೈಹಿಕ–ಮಾನಸಿಕ ಹಲ್ಲೆ, ವರದಕ್ಷಿಣೆ ಕಿರುಕುಳ, ಗಂಡ–ಅತ್ತೆ–ಮಾವನ ಕಿರುಕುಳ, ವಿಚ್ಛೇದನ, ಎರಡನೇ ಮದುವೆ, ಹೊರಗಿನ ಸಂಬಂಧ, ಪ್ರೇಮವಿವಾಹ, ದಂಪತಿ ನಡುವೆ ವೈಮನಸ್ಸು, ಯುವತಿಯರ ಪ್ರೇಮ ವೈಫಲ್ಯ... ಇಂತದ್ದೇ ಪ್ರಕರಣಗಳು ಹೆಚ್ಚು.ಮಧ್ಯಮ ಮತ್ತು ಕೆಳಮಧ್ಯಮ ವರ್ಗದ ಕುಟುಂಬಗಳಿಂದಲೇ ಹೆಚ್ಚು ದೂರುಗಳು ಬರುತ್ತಿವೆ ಎಂದು ರಾಣಿ ಹೇಳುತ್ತಾರೆ.

ವನಿತಾ ಸಹಾಯವಾಣಿ ಇರುವುದರಿಂದ ದೂರು ನೀಡಲು ಅನುಕೂಲವಾಗಿದೆ. ಇದರಿಂದಾಗಿ ಮಹಿಳೆಯರು ತಮ್ಮ ಮೇಲಾಗುವ ದೌರ್ಜನ್ಯವನ್ನು ಧೈರ್ಯದಿಂದ ಹೇಳಿಕೊಳ್ಳುತ್ತಿದ್ದಾರೆ. ಒಂದು ಸಂಸ್ಥೆಗೆ ಇಷ್ಟು ಪ್ರಮಾಣದಲ್ಲಿ ದೂರುಗಳು ಬರುತ್ತಿವೆ ಎಂದರೆ ದೌರ್ಜನ್ಯದ ಪ್ರಮಾಣ ಅರಿವಾಗುತ್ತದೆ. ಈಗೀಗ ಮಹಿಳೆಯರು ಹೆಚ್ಚು ಸುಶಿಕ್ಷಿತರು, ದುಡಿಯುವವರಾಗಿರುವ ಕಾರಣ ಧೈರ್ಯದಿಂದ ದೂರು ನೀಡುತ್ತಿದ್ದಾರೆ. ಇದಕ್ಕಾಗಿ ನಗರದಲ್ಲಿ 5 ಸಾಂತ್ವನ ಕೇಂದ್ರಗಳನ್ನು ತೆರೆಯಲಾಗಿದೆ.ಎಲ್ಲ ಕೇಂದ್ರಗಳೂ ದಿನದ ಇಪ್ಪತ್ತನಾಲ್ಕು ಗಂ‌ಟೆಯೂ ಕಾರ್ಯನಿರ್ವಹಿಸುತ್ತಿದೆ. 6 ಮಂದಿ ಆಪ್ತ ಸಮಾಲೋಚಕರಿದ್ದಾರೆ. ನಗರದಲ್ಲಿ ಐದು ಸಹಾಯವಾಣಿ ಕೇಂದ್ರಗಳಿವೆ.

ಮಕ್ಕಳ ಸಹಾಯವಾಣಿ, ವನಿತಾ ಸಹಾಯವಾಣಿ, ಕುಟುಂಬ ಆಪ್ತ ಸಮಾಲೋಚನಾ ಕೇಂದ್ರಗಳ ಜೊತೆ ಏಕಕಾಲದಲ್ಲಿ ಪರಿಹಾರ ಕಾರ್ಯ ನಿರ್ವಹಿಸುತ್ತಿವೆ. ಸಮಾಲೋಚನಾ ಕೇಂದ್ರಕ್ಕೆ ಕೇಂದ್ರ ಮಹಿಳಾ ಕಲ್ಯಾಣ ಮಂಡಳಿ ಅನುದಾನ ನೀಡುತ್ತಿದೆ. ಬೆಂಗಳೂರು ಪೊಲಿಟಿಕಲ್‌ ಆ್ಯಕ್ಷನ್‌ ಕಮಿಟಿ (B.PAC) ಇವರ ಜೊತೆ ಕೆಲಸ ಮಾಡುತ್ತಿರುವ ನಾಗರಿಕ ಗುಂಪು. ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್)ಯಡಿ ಆರ್ಥಿಕ ಸಹಾಯವನ್ನೂ ಮಾಡುತ್ತಿದೆ.

ಸಹಾಯವಾಣಿಗೆ ಬರುವ ದೂರುಗಳ ನಿರ್ವಹಣೆಯ ಜೊತೆಗೆ ಸಮುದಾಯಗಳಲ್ಲಿ ಜಾಗೃತಿ ಮೂಡಿಸುವುದು, ದೌರ್ಜನ್ಯ ನಡೆಯದಂತೆ ತಡೆಯುವುದು, ನಡೆದಾಗ ಏನು ಮಾಡಬೇಕು ಎಂದು ಮಹಿಳೆಯರು ಮತ್ತು ಮಕ್ಕಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಪರಿಹಾರಮಾಡುತ್ತಿದೆ.

***
ಪುರುಷಾಹಂಕಾರ ಮುರಿಯಬೇಕಾಗಿದೆ
ಹಿಂದೆ ಹಳ್ಳಿಗಳಲ್ಲಿ ಈ ಸಮಸ್ಯೆಗಳನ್ನೆಲ್ಲ ಕೌಟುಂಬಿಕ ಸಮಸ್ಯೆ ಎಂದು ನೋಡುತ್ತಲೇ ಇರಲಿಲ್ಲ. ಸಾಮಾಜಿಕ ಪಿಡುಗು ಎಂದೇ ಪರಿಗಣಿಸಲಾಗಿತ್ತು. ಈಗ ನಗರ ಪ್ರದೇಶದಲ್ಲೂ ಮಹಿಳಾ ದೌರ್ಜನ್ಯ ಹೆಚ್ಚಾಗಿದೆ. ನಾವೀಗ ಗಂಡಿನ ಸರಿಸಮಾನವಾಗಿ ನಿಂತಿದ್ದೇವೆ. ಮನೆಯಿಂದ ಹೊರ ಬಂದಿದ್ದೇವೆ. ಹಾಗಾಗಿ ದೌರ್ಜನ್ಯ ಕಡಿಮೆಯಾಗಬೇಕಿತ್ತು. ಆದರೆ, ನಾವು ಏಕಮುಖವಾಗಿ ಚಿಂತಿಸಿದ್ದೇವೆ ಎನಿಸುತ್ತದೆ. ಶಿಕ್ಷಣ, ಉದ್ಯೋಗ ಪಡೆಯುವ ಕಡೆಗಷ್ಟೇ ನಾವು ಗಮನಹರಿಸಿದ್ದೇವೆ. ಆದರೆ, ಅದರ ಜೊತೆಗೆ ಪುರುಷರ ಅಹಂಕಾರ ಮುರಿಯುವ ಕಡೆಗೆ ಗಮನಹರಿಸಿಲ್ಲ. ಮನೆಯಲ್ಲಿ ಗಂಡುಮಕ್ಕಳಿಗೆ ನೀಡುವ ಶಿಕ್ಷಣ ಬೇರೆ ತೆರನಾಗಿರಬೇಕಾದುದು ಅಗತ್ಯ.
–ಸುಮನಾ ಕಿತ್ತೂರ್‌, ಚಲನಚಿತ್ರ ನಿರ್ದೇಶಕಿ

***
ಗಂಡು ಒಣಜಂಭ ಬಿಡಬೇಕು
ಪ್ರತಿ ಮಹಿಳೆಯೂ ಒಂದಲ್ಲ ಒಂದು ಸಲ ಕೌಟುಂಬಿಕ ದೌರ್ಜನ್ಯ ಎದುರಿಸಿಯೇ ಇರುತ್ತೇವೆ. ನಾವು ಪ್ರೀತಿಯೇ ಹೆಚ್ಚು ಎಂದುಕೊಂಡು ಸಹಿಸಿರುತ್ತೇವೆ. ಆದರೆ ಪುರುಷರಿಗೆ ಈ ತಾಳ್ಮೆ ಇಲ್ಲ. ಶಿಕ್ಷಣದ ವಿಚಾರಕ್ಕೆ ಬಂದರೆ, ಹೆಣ್ಣು ಎಂಬಿಎ ಓದಿರುತ್ತಾಳೆ. ಆಕೆಯನ್ನು ಬಿಕಾಂ ಓದಿರುವ ಹುಡುಗನಿಗೆ ಮದುವೆ ಮಾಡುತ್ತಾರೆ. ಅಲ್ಲಿ ಆಕೆಯ ಮನೆಯವರು ಆತನ ಕುಟುಂಬವನ್ನು ಮಾತ್ರ ನೋಡುತ್ತಾರೆ. ಅಂದರೆ, ಈ ಹುಡುಗಿ ಆ ಕುಟುಂಬವನ್ನು ಮದುವೆಯಾಗುತ್ತಾಳೆ. ಹೆಚ್ಚು ಓದಿರುವ ಆಕೆಗೆ ಸಹಜವಾಗಿಯೇ ಹೆಚ್ಚು ಸಂ‍ಪಾದನೆ ಇರುತ್ತದೆ. ಅಲ್ಲಿಗೆ ಇಬ್ಬರ ನಡುವೆ ಇಗೋ ಸಮಸ್ಯೆ ಶುರುವಾಗುತ್ತದೆ. ಕೌಟುಂಬಿಕ ದೌರ್ಜನ್ಯ ಎದುರಿಸುತ್ತಿರುವವರಲ್ಲಿ ಹೆಚ್ಚಿನವರ ಅಮಾಯಕರು, ಪ್ರೀತಿಯ ಕಾರಣಕ್ಕೆ ದೈಹಿಕ ಹಲ್ಲೆಯನ್ನೂ ಸಹಿಸುತ್ತಿದ್ದಾರೆ. ಗಂಡು ತನ್ನ ಒಣಜಂಭ ಬಿಡಬೇಕು. ಆಗ ಅರ್ಧ ಸಮಸ್ಯೆ ಬಗೆಹರಿಯುತ್ತದೆ.
–ರೂಪಾ ಅಯ್ಯರ್‌, ನಟಿ, ನಿರ್ದೇಶಕಿ

***
ಎಲ್ಲರೂ ಮಾತಾಡಿ
ನನ್ನ ಪ್ರಕಾರ ಯಾವುದೇ ಹೆಣ್ಣನ್ನು ಆಕೆಯ ಒಪ್ಪಿಗೆ ಇಲ್ಲದೇ ಪರಪುರುಷ ಮುಟ್ಟಿದರೆ, ಅದರಿಂದ ಆಕೆಗೆ ಮುಜುಗರವಾದರೆ ಅದೂ ಲೈಂಗಿಕ ದೌರ್ಜನ್ಯ ಎನಿಸುತ್ತದೆ. ಸಮಾಜದಲ್ಲಿ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯದ ಅರ್ಥ ಸ್ಪಷ್ಟವಾಗಿದೆ. ಹಾಗಾಗಿ ಎಲ್ಲರೂ ಮಾತನಾಡುವ ಅಗತ್ಯವಿದೆ. ನನ್ನಮ್ಮ, ಅಜ್ಜಿ ಮಾತಾಡಿಲ್ಲ ಎಂದರೆ ಅವರಿಗೆ ದೌರ್ಜನ್ಯ ಆಗಿಲ್ಲ ಎಂದು ಅರ್ಥವಲ್ಲ. ಈಗ ನಾನು ಮಾತನಾಡಿದ್ದೇನೆ ಎಂದಾಗ ಸಾಂಪ್ರದಾಯಿಕ ಮನಸ್ಥಿತಿಯವರು, ‘ಅಂದೇ ಏಕೆ ಮಾತಾಡಿಲ್ಲ’ ಎಂದು‍ಪ್ರಶ್ನಿಸುತ್ತಾರೆ. ಹಾಗಾಗಿ ಮುಂದೆ ಅಂಥ ಸಂದರ್ಭ ಬಂದರೆ ಅಲ್ಲೇ ಉತ್ತರಿಸುತ್ತೇನೆ. ಅದೇ ಮುಂದೆ ಅನೇಕರಿಗೆ ಮಾದರಿಯಾದರೂ ಆದೀತು. ಈ ಬಗ್ಗೆ ಎಲ್ಲ ಹೆಣ್ಣುಮಕ್ಕಳೂ ಈ ದಿನ ಚಿಂತಿಸುವ ಅಗತ್ಯವಿದೆ.
–ಶ್ರುತಿ ಹರಿಹರನ್‌, ನಟಿ

ಇಲ್ಲಿಗೆ ಕರೆ ಮಾಡಿ
ವನಿತಾ ಸಹಾಯವಾಣಿ ಸಂಖ್ಯೆ 1091
ಮಕ್ಕಳ ಸಹಾಯವಾಣಿ ಸಂಖ್ಯೆ 10924

ಎಲ್ಲೆಲ್ಲಿ ಸಾಂತ್ವನ ಕೇಂದ್ರವಿದೆ?
ಬಸವನಗುಡಿ ಪೊಲೀಸ್‌ ಠಾಣೆಆವರಣ
ಮಲ್ಲೇಶ್ವರ ಪೊಲೀಸ್‌ ಠಾಣೆ
ಉಪ ಪೊಲೀಸ್‌ ಆಯುಕ್ತರ ಕಚೇರಿ, ಉಪ್ಪಾರಪೇಟೆ
ಪುಲಿಕೇಶಿನಗರ ಸಂಚಾರ ಪೊಲೀಸ್‌ ಠಾಣೆ
ಎಚ್.ಎ.ಎಲ್‌. ಪೊಲೀಸ್‌ ಠಾಣೆ ಆವರಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.