ADVERTISEMENT

ಬಾಣಂತನ: ಅಮ್ಮನಿಗೆ ಸಾಟಿಯಿಲ್ಲ

ಪ್ರಜಾವಾಣಿ ವಿಶೇಷ
Published 3 ಅಕ್ಟೋಬರ್ 2025, 22:59 IST
Last Updated 3 ಅಕ್ಟೋಬರ್ 2025, 22:59 IST
   

ಬಾಣಂತನ ಯಾರ ಕೈಯಲ್ಲಿ ಮಾಡಿಸಿ
ಕೊಳ್ಳುವುದು ಸೂಕ್ತ? ತಾಯಿಯಿಂದಲೋ ಅತ್ತೆಯಿಂದಲೋ? ಯಾರಾದರೂ ಈ ಪ್ರಶ್ನೆ ಕೇಳಿದರೆ, ‘ಅಯ್ಯೋ ಅದರಲ್ಲಿ ಕೇಳುವುದೇನಿದೆ? ಅಮ್ಮನ ಕೈಲಿ ಬಾಣಂತನ ಮಾಡಿಸಿಕೊಳ್ಳುವುದು ಎಲ್ಲ ಹೆಣ್ಣುಮಕ್ಕಳ ಕನಸಲ್ಲವೇ? ಅಷ್ಟಕ್ಕೂ ಅದು ಅವರ ಜನ್ಮಸಿದ್ಧ ಹಕ್ಕು ಸಹ’ ಎಂಬ ಉತ್ತರ ಬಹುತೇಕ ಹೆಂಗಳೆಯರಿಂದ ಬರುತ್ತದೆ.

ಇತರರು ಎತ್ತಿಕೊಳ್ಳಲೂ ಭಯಪಡುವ ಪುಟ್ಟ ಕಂದಮ್ಮನಿಗೆ ಎಣ್ಣೆ ತಿಕ್ಕಿ, ಸ್ನಾನ ಮಾಡಿಸಿ ಕಣ್ರೆಪ್ಪೆಯಂತೆ ಕಾಪಾಡುವುದರಿಂದ ಹಿಡಿದು, ಹಸಿ ಬಾಣಂತಿಗೆ ಪಥ್ಯದೂಟ ಕೊಟ್ಟು, ಶೀತ ಹಿಡಿಯದಂತೆ ಬೆಚ್ಚಗೆ ಇರಿಸುವವರೆಗೂ ನಿದ್ದೆಗೆಟ್ಟು ಆರೈಕೆ ಮಾಡಲು ಅಮ್ಮನಿಗಿಂತ ಹೆಚ್ಚಿನ ಬಂಧು ಬೇರೆ ಯಾರಾದರೂ ಇರಲು ಸಾಧ್ಯವೇ ಎಂದು ಮರುಪ್ರಶ್ನಿಸು
ವವರೂ ಇದ್ದಾರೆ.

ಹೌದು, ಇಂತಹವರ ನಂಬಿಕೆ ಖಂಡಿತ ಸುಳ್ಳಲ್ಲ ಎಂದು ಹೇಳುತ್ತಿದೆ, ಈ ದಿಸೆಯಲ್ಲಿ ನಡೆದ ಅಧ್ಯಯನವೊಂದು. ಅಷ್ಟೇ ಅಲ್ಲ, ತಾಯಿಯಿಂದ ಆರೈಕೆ ಮಾಡಿಸಿಕೊಳ್ಳುವ ಬಾಣಂತಿಯರ ಆರೋಗ್ಯವು ಅತ್ತೆಯಿಂದ ಬಾಣಂತನ ಮಾಡಿಸಿಕೊಳ್ಳುವವರ ಆರೋಗ್ಯಕ್ಕಿಂತಲೂ ಉತ್ತಮವಾಗಿರುತ್ತದೆ ಎಂದು ಸಹ ಇದು ಹೇಳಿದೆ. ‘ಅಯ್ಯೋ ಇಂತಹ ಮಾತಿನ ಹಿಂದೆ, ಅತ್ತೆಯ ಜೊತೆ ಕಾದಾಡಿಕೊಂಡ ಸೊಸೆಯಂದಿರ ಕರಾಮತ್ತು ಇರಬಹುದು’ ಎಂದು ಯಾರೂ ಮೂಗು ಮುರಿಯುವಂತಿಲ್ಲ. ಏಕೆಂದರೆ, ಅತ್ತೆಗೆ ಹೋಲಿಸಿದರೆ, ತಾಯಿಯಿಂದ ಆರೈಕೆ ಮಾಡಿಸಿಕೊಂಡವರು ಹೆಚ್ಚು ಆರೋಗ್ಯ ಪೂರ್ಣವಾಗಿ ಇದ್ದುದು ಈ ಅಧ್ಯಯನದಿಂದ ದೃಢಪಟ್ಟಿದೆ.

ADVERTISEMENT

ದೇಶದ ವಿವಿಧೆಡೆಯ ತಾಯಿ-ಆರೈಕೆ ದಾರರನ್ನು ಒಳಗೊಂಡ 551 ಜೋಡಿಗಳನ್ನು ಅಧ್ಯಯನಕ್ಕೆ ಒಳಪಡಿಸಿದಾಗ ಈ ಅಂಶ ಸ್ಪಷ್ಟವಾಗಿದೆ. ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯ, ಯೋಸ್‌ಏಯ್ಡ್ ಇನೊವೇಷನ್ ಫೌಂಡೇಷನ್ ಹಾಗೂ ಬೆಂಗಳೂರಿನ ನೂರಾ ಹೆಲ್ತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಂಬ ಸ್ವಯಂಸೇವಾ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಈ ಅಧ್ಯಯನವು ಇನ್ನಿತರ ಕೆಲವು ಸಂಗತಿಗಳ ಬಗ್ಗೆಯೂ ಬೆಳಕು ಚೆಲ್ಲಿದೆ. ‘ಪಿಎಲ್ಒಎಸ್’ ನಿಯತಕಾಲಿಕದಲ್ಲಿ ಈ ಎಲ್ಲ ವಿಷಯಗಳನ್ನು ಒಳಗೊಂಡ ಅಧ್ಯಯನ ವರದಿ ಪ್ರಕಟವಾಗಿದೆ.

ಶಿಶುವಿನ ಆರೈಕೆ ಮತ್ತು ಅದಕ್ಕೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವ ಜವಾಬ್ದಾರಿಯು ಕುಟುಂಬಗಳಲ್ಲಿ ಯಾವ ರೀತಿ ಹಂಚಿಕೆಯಾಗುತ್ತದೆ ಎಂಬ ಬಗ್ಗೆ ಇಲ್ಲಿ ಹೊಸ ಹೊಳಹುಗಳು ಸಿಕ್ಕಿವೆ. ನವಜಾತ ಶಿಶು ಅಥವಾ ತನ್ನದೇ ಆರೈಕೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ , ಜನ್ಮ ನೀಡಿದ ತಾಯಂದಿರು ಭಾಗಿಯಾಗುವುದು ಬಹಳ ಸೀಮಿತ ಪ್ರಮಾಣದಲ್ಲಿದೆ. ಇದು ಮೂರನೇ ಒಂದರಷ್ಟಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿದೆ ಎಂಬುದನ್ನು ತಂಡದ ತಜ್ಞರು ದಾಖಲಿಸಿದ್ದಾರೆ.

ಇದನ್ನೆಲ್ಲಾ ತಿಳಿದ ಮೇಲೆ, ಸೊಸೆಯನ್ನು ಮಗಳಂತೆಯೇ ಕಾಣುವ ಅತ್ತೆಯಂದಿರು ಪೆಚ್ಚಾಗಬೇಕಿಲ್ಲ. ತಾಯ್ತನ ಎನ್ನುವುದು ಕರುಳಿನ ಸಂಬಂಧವನ್ನೂ ಮೀರಿದ್ದು. ಅಂತಹದ್ದೊಂದು ಭಾವನೆಗೆ ಹೆತ್ತಮ್ಮನೇ ಆಗಬೇಕೆಂದಿಲ್ಲ. ಮಗನ ಬದುಕಿನಲ್ಲಿ ಸೊಸೆಯ ಪ್ರಾಮುಖ್ಯವನ್ನು ಅರಿತ ಅತ್ತೆಯು ಮಗ– ಸೊಸೆಯ ನಡುವೆ ಎಂದಿಗೂ ಭೇದ ಎಣಿಸಲಾರಳು. ಹಾಗಾಗಿ, ಸೊಸೆಯಲ್ಲಿ ಮಗಳನ್ನು ಕಾಣುವ ಅತ್ತೆಯ ಕಕ್ಕುಲಾತಿಯು ಹೆತ್ತಮ್ಮನ ಕಳಂಕರಹಿತ ವಾತ್ಸಲ್ಯವನ್ನೇ ಉಣಬಡಿಸಬಲ್ಲದು ಎಂಬುದು ಅನುಭವದ ಮಾತು. ಈ ಮಾತಿನ ಹಿಂದೆ ಸಾರ್ವಕಾಲಿಕವಾದ ಸತ್ಯ ಅಡಗಿದೆ ಎನ್ನುತ್ತಾರೆ ಪ್ರಾಜ್ಞರು. 

ಆಧಾರ: ಪಿಟಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.