
ಬೆಂಗಳೂರಿನಿಂದ ಮಂತ್ರಾಲಯಕ್ಕೆ ಇತ್ತೀಚೆಗೆ ಬಸ್ ಮೂಲಕ ಹೋಗಬೇಕಾಗಿ ಬಂತು. ಒಂದೆರಡು ಗಂಟೆಗಳಾದ ಬಳಿಕ ಯಾವುದೋ ಒಂದು ಹೋಟೆಲ್ ಬಳಿ ಬಸ್ ನಿಲ್ಲಿಸಿ, ‘ಹತ್ತು ನಿಮಿಷ ಟೈಮ್ ಇದೆ, ಹೋಗುವವರು ಹೋಗಿ ಬೇಗ ಬಂದುಬಿಡಿ’ ಎಂದು ಕಂಡಕ್ಟರ್ ಕೂಗುಹಾಕಿದ್ದೇ ತಡ, ಎಲ್ಲ ಹೆಂಗಸರು ಬಸ್ ಇಳಿದು ಶೌಚಾಲಯ ಹುಡುಕತೊಡಗಿದರು. ಅಲ್ಲಿ ಇದ್ದದ್ದು ಹೋಟೆಲಿಗೆ ಸೇರಿದ ಒಂದು ಪಾಳುಬಿದ್ದ ಮುರುಕಲು ಶೌಚಾಲಯ ಮಾತ್ರ. ಸುತ್ತಲೂ ಗಿಡಗಂಟಿ. ಒಳಗೆ ಇಣುಕಿದರೆ ಗಬ್ಬುನಾತ. ಅದನ್ನು ನೋಡಿ, ಒತ್ತರಿಸಿ ಬಂದಿದ್ದ ಮೂತ್ರ ಮರೆತೇಹೋಯಿತು. ಕೆಲವರಂತೂ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಅಲ್ಲೇ ದೇಹಬಾಧೆ ತೀರಿಸಿಕೊಂಡರು.
ಅದರ ಗುಂಗಿನಲ್ಲೇ ವಾಕರಿಸುತ್ತಾ ಬಂದು ಬಸ್ಸೇರಿದರೆ, ಅಲ್ಲಿದ್ದ ಗಂಡಸರ್‍ಯಾರೂ ಈ ಸಮಸ್ಯೆ ಅನುಭವಿಸಿದಂತೆ ಕಾಣಲಿಲ್ಲ. ಗಂಡಸರಿಗೆಂದು ಪ್ರತ್ಯೇಕ ಶೌಚಾಲಯ ಅಲ್ಲಿ ಇರಲಿಲ್ಲವಾದರೂ ಅವರು ಇಷ್ಟು ನಿರಾಳವಾಗಿ ಇರಲು ಹೇಗೆ ಸಾಧ್ಯವಾಯಿತು ಎಂಬುದಕ್ಕೆ ಕಾರಣ ಆಮೇಲೆ ತಿಳಿಯಿತು. ಅವರೆಲ್ಲ ಗಿಡಗಂಟಿಗಳ ಮರೆಯಲ್ಲೇ ಒತ್ತಡಮುಕ್ತರಾಗಿ ಬಂದಿದ್ದರು. ಕೆಲವರಂತೂ ಮರೆಯಲ್ಲೂ ಹೋಗಲಿಲ್ಲ ಅನ್ನುವುದು ಆ ಕೊಳಕು ಶೌಚಾಲಯ ನೋಡಿದ್ದಕ್ಕಿಂತ ಅಸಹ್ಯ ಎನ್ನಿಸಿತು. ಹಾಗಾಗಿ, ಇಲ್ಲೂ ನಿಜವಾದ ಸಂತ್ರಸ್ತರು ಹೆಂಗಸರೇ!
ಆರೋಗ್ಯದ ದೃಷ್ಟಿಯಿಂದ ಯಥೇಚ್ಛವಾಗಿ ನೀರು ಕುಡಿಯುವ ನನ್ನಂತಹವರಿಗೆ ರಸ್ತೆಯುದ್ದಕ್ಕೂ ಎಲ್ಲಿ ಟಾಯ್ಲೆಟ್ ಸಿಗಬಹುದು ಎಂದು ಹುಡುಕುವುದೇ ಕೆಲಸ. ಇನ್ನು ವಯಸ್ಸಾದವರಿದ್ದರೆ ಮುಗಿದೇ ಹೋಯಿತು. ಸ್ವಂತ ವಾಹನವಾದರೆ ಹೇಗೋ ನಿರ್ಜನ ಪ್ರದೇಶದ ಬಳಿ ವ್ಯವಸ್ಥೆ ಆಗುತ್ತದೆ. ಅದೂ ಅಪಾಯಕಾರಿಯೇ. ಕಂಡು ಕೇಳದ ಜಾಗದಲ್ಲಿ ಕಾಡುಪ್ರಾಣಿಯಾದಿಯಾಗಿ ಅಪಾಯವಿರಬಹುದು. ಹೀಗಾಗಿ, ಬಸ್ ಪ್ರಯಾಣದಲ್ಲಿ ಎಷ್ಟೋ ಬಾರಿ ಮಹಿಳೆಯರಿಗೆ ನರಕಯಾತನೆ ಖಚಿತ. ನನ್ನ ಬಹಳಷ್ಟು ವಿದ್ಯಾರ್ಥಿನಿಯರು ಆಗಾಗ್ಗೆ ರಜೆ ತೆಗೆದುಕೊಳ್ಳುವುದು ಯಾಕೆ ಎಂದು ಕೇಳಿದರೆ, ಕಿಡ್ನಿ ಸ್ಟೋನ್ ಎನ್ನುತ್ತಾರೆ. ಸರಿಯಾಗಿ ನೀರು ಕುಡಿಯುವುದಿಲ್ಲ, ನೀರು ಕುಡಿದರೆ ಮನೆಯಿಂದ ಹೊರಗೆ ಬಂದಾಗ ಮೂತ್ರ ವಿಸರ್ಜಿಸಲು ಗಬ್ಬುನಾರುವ ಶೌಚಾಲಯಗಳಿಗೆ ಹೋಗಬೇಕಾಗುತ್ತದೆ ಎನ್ನುವುದೇ ಇದರ ಹಿಂದಿನ ದೊಡ್ಡ ಕಾರಣವಾಗಿರುತ್ತದೆ.
ನನ್ನ ಕರ್ಮಭೂಮಿ ಬೆಂಗಳೂರಿನಿಂದ ಹುಟ್ಟೂರು ಶಿವಮೊಗ್ಗಕ್ಕೆ ಪ್ರಯಾಣಿಸುವ ಹೆದ್ದಾರಿಯಂತೂ ಹೇಳುವುದೇ ಬೇಡ. ದಾರಿಯುದ್ದಕ್ಕೂ ಎಲ್ಲಿ ಅತಿಹೆಚ್ಚು ಗಿಡಗಂಟಿಗಳಿವೆ, ಎಲ್ಲಿ ಟ್ರೆಂಚ್ ಹೊಡೆದು ಹಳ್ಳ ತೋಡಿದ್ದಾರೆ, ಎಲ್ಲಿ ಜನ ಇರುವುದಿಲ್ಲ ಎನ್ನುವುದನ್ನೆಲ್ಲ ಸರ್ವೆ ಮಾಡುವುದೇ ಹೆಂಗಸರ ಪ್ರಯಾಣದುದ್ದದ ಸಾಹಸ ಆಗಿರುತ್ತದೆ. ಅದರಲ್ಲೂ ಮುಟ್ಟಾದ ದಿನಗಳಲ್ಲಂತೂ ಪ್ಯಾಡ್ ಚೇಂಜ್ ಮಾಡುವುದು ಕನಸಿನ ಮಾತು. ಸ್ವಚ್ಛತೆ, ಸುರಕ್ಷತೆಯ ಬಗ್ಗೆ ಭಾಷಣ ಮಾಡುವ ನಮ್ಮ ರಾಜಕಾರಣಿಗಳು ಈ ಸಮಸ್ಯೆಯ ಬಗೆಗೆ ಅದೆಷ್ಟು ಕಾಳಜಿ ಹೊಂದಿದ್ದಾರೆ? ರಸ್ತೆಗಳ ಅಭಿವೃದ್ಧಿಗಾಗಿ ಅಷ್ಟೆಲ್ಲ ಟೋಲ್ ಸಂಗ್ರಹಿಸುವ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರವು ರಸ್ತೆಬದಿ ಅದೆಷ್ಟು ಶೌಚಾಲಯಗಳನ್ನು ನಿರ್ಮಿಸಿ ನಿರ್ವಹಿಸುತ್ತಿದೆ? ಈ ಯಾವ ಪ್ರಶ್ನೆಗಳಿಗೂ ಸ್ಪಷ್ಟ ಉತ್ತರ ಸಿಗುವುದಿಲ್ಲ.
ಎಷ್ಟೋ ಬಾರಿ ಮನೆಯ ಗಂಡಸರು ಕುಟುಂಬದವರೊಂದಿಗೆ ಖಾಸಗಿ ವಾಹನದಲ್ಲಿ ಪ್ರಯಾಣಿಸುವಾಗ, ಹೆಂಗಸರು ಪ್ರಯಾಣದ ಮಧ್ಯೆ ‘ಸ್ವಲ್ಪ ಗಾಡಿ ನಿಲ್ಸಿ, ಸುಸ್ಸುಗೆ ಹೋಗಬೇಕಿತ್ತು’ ಎಂದರೆ, ‘ಕಡಿಮೆ ನೀರು ಕುಡಿಯಕ್ಕೆ ಆಗಲ್ವಾ? ದಾರಿಯುದ್ದಕ್ಕೂ ನಿಲ್ಸುತ್ತಾ ಹೋದರೆ ಲೇಟ್ ಆಗಲ್ವಾ’ ಎಂದು ಗದರುವುದಿದೆ.
ವಿದೇಶ ಸುತ್ತಿ ಬರುವ ನಮ್ಮ ಜನ ಅಲ್ಲಿಯ ವಿಶಾಲವಾದ ರಸ್ತೆ, ಸ್ವಚ್ಛ ಶೌಚಾಲಯ ಎಲ್ಲವನ್ನೂ ಇನ್ನಿಲ್ಲದಂತೆ ವರ್ಣಿಸುತ್ತಾರೆ. ಅಲ್ಲಿನ ಹೊಸ ಆವಿಷ್ಕಾರಗಳನ್ನು ನೋಡಿ ಬರುವ ನಮ್ಮ ಆಡಳಿತಾರೂಢರು, ಅಲ್ಲಿರುವ ಶೌಚಾಲಯ ವ್ಯವಸ್ಥೆಯನ್ನು ಮಾತ್ರ ಇಲ್ಲೂ ಯಾಕೆ ಅಳವಡಿಸುವ ಪ್ರಯತ್ನ ಮಾಡುವುದಿಲ್ಲ?
ಹೆದ್ದಾರಿಗಳಲ್ಲಿ ಟೋಲ್ ನಂತರದ 500 ಮೀಟರ್ ದೂರಕ್ಕೆ ಸೂಕ್ತ ನಿರ್ವಹಣೆಯ ಒಂದೊಂದು ಶೌಚಾಲಯ, ಇತರ ಮುಖ್ಯ ರಸ್ತೆಗಳ ಅಲ್ಲಲ್ಲಿ ಪರಿಸರಸ್ನೇಹಿ ಶೌಚಾಲಯಗಳನ್ನು ಸ್ಥಾಪಿಸಿದರೆ, ಹೆಣ್ಣುಮಕ್ಕಳು ರಸ್ತೆ ಪ್ರಯಾಣವನ್ನು ಕಿರಿಕಿರಿ ಎಂದು ಭಾವಿಸದೆ ಮುಕ್ತವಾಗಿ ಆನಂದಿಸಲು ಸಾಧ್ಯವಾಗುತ್ತದೆ.
ಅಂದಹಾಗೆ, ನ.19 ವಿಶ್ವ ಶೌಚಾಲಯ ದಿನ. ಈ ನೆಪವಾದರೂ ಇಂಥದ್ದೊಂದು ಜಾಗೃತಿಗೆ ಕಾರಣವಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.