ADVERTISEMENT

Pv Web Exclusive: ಗೃಹಿಣಿ ಕೂಡ ಉದ್ಯೋಗಿ

ಸುಕೃತ ಎಸ್.
Published 1 ಅಕ್ಟೋಬರ್ 2020, 8:18 IST
Last Updated 1 ಅಕ್ಟೋಬರ್ 2020, 8:18 IST
ಗೃಹಿಣಿ
ಗೃಹಿಣಿ   

ಸ್ತ್ರೀ ಎಂದರೆ ಅಷ್ಟೇ ಸಾಕೆ.... ಹೆಣ್ಣಾಗಿ ಹುಟ್ಟಿದ ಕಾರಣಕ್ಕೇ ಜೀವಮಾನವೆಲ್ಲ ಕೆಲವು ತ್ಯಾಗಗಳನ್ನು ಆಕೆ ಮಾಡುತ್ತಾಳೆ. ಈ ತ್ಯಾಗದ ಕುರಿತು, ಆಕೆ ಕರುಣಾಮಯಿ ಎಂದೆಲ್ಲ ಹೇಳುವ, ವರ್ಣಿಸುವ ಸಾವಿರಾರು ಕವಿತೆಗಳು, ಸಿನಿಮಾ ಹಾಡುಗಳು ಇವೆ. ಸ್ತ್ರೀ ಎಂದರೆ ಅಷ್ಟೇ ಸಾಕೆ ಎಂದು ಕೇಳುವಾಗ ಹೌದು ಅಷ್ಟೇ ಸಾಕಲ್ಲವೇ? ತಾಯಿಯಾಗಿ, ಹೆಂಡತಿಯಾಗಿ, ಮಗಳಾಗಿ, ಅಕ್ಕನಾಗಿ.. ಹೀಗೆ ಹಲವು ಸ್ಥಾನಗಳಲ್ಲಿ ಆಕೆ ಆತನನ್ನು ಸಂಬಾಳಿಸಿಕೊಂಡು ಬಂದಿದ್ದಾಳೆ. ಆಕೆಯನ್ನು ಅದೇ ಹೆಸರಿನಿಂದ ಕರೆದರೆ ಸಾಕಾಗುತ್ತದಲ್ಲ. ಆ ಕವಿತೆ ತುಂಬಾ ಪಾಸಿಟಿವ್‌ ಆದಕವಿತೆ. ಅದನ್ನು ಒಪ್ಪಿಕೊಳ್ಳುತ್ತಲೇ, ಜತೆಗೆ ಆ ರೀತಿಯ ಧ್ವನಿ ಇರುವ ಎಲ್ಲ ಸಾಲುಗಳನ್ನು ಗಮನದಲ್ಲಿಟ್ಟುಕೊಂಡು, ಯಾಕಾಗಿ ಆಕೆಗೆ ಬೇರೆ ಹೆಸರು ಕೊಡಬೇಕು ಎನ್ನುವ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು.

ಕವಿತೆಗಳ ಮೂಲಕ, ಸಿನಿಮಾ ದೃಶ್ಯಗಳ ಮೂಲಕ, ಹೀರೊಗಳು ತಮ್ಮ ತಾಯಿಯನ್ನು, ಹೆಣ್ಣನ್ನು ವರ್ಣಿಸುವಾಗ ಆಡುವ ಮಾತುಗಳ ಮೂಲಕ, ಕೊಡುವ ರೂಪಕಗಳ ಮೂಲಕ ಹೆಣ್ಣು ವಾಸ್ತವದಲ್ಲಿ ಅನುಭವಿಸುತ್ತಿರುವ ಸಂಕಟಗಳು, ಅವಮಾನಗಳು, ಶೋಷಣೆಗಳು ಕಮ್ಮಿ ಆಗಿವೆಯೇ ಎನ್ನುವ ಪ್ರಶ್ನೆಯನ್ನೂ ನಾವು ಕೇಳಿಕೊಳ್ಳಬೇಕು. ಹೆಣ್ಣನ್ನು ದಿವ್ಯತೆಗೆ, ದೈವತ್ವಕ್ಕೆ ಏರಿಸುವ ಭರಾಟೆಯಲ್ಲಿ ವಾಸ್ತವವನ್ನು ಮರೆಸಲಾಗುತ್ತದೆಯೇ ಎನ್ನುವುದು ಚರ್ಚೆಯ ವಿಷಯವಾಗಬೇಕು.

ಎಷ್ಟೋ ಬಾರಿ, ಗಂಡ ತನ್ನ ಹೆಂಡತಿಯನ್ನು ಯಾರ ಮುಂದಾದರೂ ಪರಿಚಯ ಮಾಡಿಸುವಾಗ ‘ಕೆಲಸಕ್ಕೆ ಹೋಗದಿಲ್ಯ, ಮನೆಲಿರ್ತ. ಹೌಸ್‌ವೈಫ್ ಅಷ್ಟೇ‌ (ನಗು)’ ಈ ರೀತಿ ಪರಿಚಯ ಮಾಡುತ್ತಾರೆ. ನಮ್ಮ ಹೆಣ್ಣು ಮಕ್ಕಳೂ ಸಹ, ಗೃಹಿಣಿ ಎನ್ನುವುದು ಅಷ್ಟೇನೂ ಮೌಲ್ಯ ಇಲ್ಲದ್ದು ಎಂದೇ ಭಾವಿಸಿದ್ದಾರೆ. ಆದರೆ, ಇದು ನಿಜವಾ? ಖಂಡಿತ ಅಲ್ಲ ಎಂದು ಇತ್ತೀಚೆಗೆ ಬಾಂಬೆ ಹೈಕೋರ್ಟ್‌ ಒಂದು ಮಹತ್ವದ ತೀರ್ಪು ನೀಡಿದೆ.

ADVERTISEMENT

‘ಕುಟುಂಬದಲ್ಲಿ ಗೃಹಿಣಿಯ ಪಾತ್ರ ಅತ್ಯಂತ ಸವಾಲಿನದ್ದಾಗಿದ್ದು ಪ್ರಮುಖವಾದದ್ದಾಗಿದೆ. ಹೆಚ್ಚು ಶ್ಲಾಘನೆಗೆ ಭಾಜನವಾಗಬೇಕಾದ ಈ ಪಾತ್ರ ಕಡಿಮೆ ಶ್ಲಾಘನೆ ಪಡೆಯುತ್ತಿದೆ’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ನ್ಯಾಯಮೂರ್ತಿ ಅನಿಲ್‌ ಎಸ್‌ ಕಿಲೋರ್‌ ಅವರು ವಿಚಾರಣೆ ನಡೆಸಿ ಈ ರೀತಿ ಅಭಿಪ್ರಾಯಟ್ಟಿದ್ದಾರೆ.

ಏನಿದು ಪ್ರಕರಣ

ಅಪಘಾತದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪುತ್ತಾರೆ. ವಿಮಾ ಕಂಪೆನಿಯಿಂದ ಪರಿಹಾರ ನೀಡಬೇಕು ಎಂದು ಮೋಟಾರು ವಾಹನ ಕಾಯ್ದೆ 166ರ ಸೆಕ್ಷನ್‌ ಅಡಿ ಅರ್ಜಿ ಸಲ್ಲಿಸಲಾಗುತ್ತದೆ. ಮೃತ ಮಹಿಳೆ ಗೃಹಿಣಿ ಎನ್ನುವ ಕಾರಣಕ್ಕೆ ವಾಹನ ಅಪಘಾತ ಪರಿಹಾರ ನ್ಯಾಯಮಂಡಲಿ‍ಪ್ರಕರಣವನ್ನು ಮಾನ್ಯ ಮಾಡಿರಲಿಲ್ಲ. ನಂತರ ಮಹಿಳೆಯ ಪತಿ ಹಾಗೂ ಮಕ್ಕಳು ಬಾಂಬೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

‘... ಉದ್ಯೋಗದಲ್ಲಿರಲಿ ಅಥವಾ ಇಲ್ಲದಿರಲಿ ಅಹರ್ನಿಶಿ ದುಡಿಯುವ ಆಕೆ ಒಂದು ದಿನವೂ ರಜೆ ಪಡೆಯುವುದಿಲ್ಲ ಮತ್ತು ಅದನ್ನು ‘ಕೆಲಸ’ ಎಂಬುದಾಗಿ ಪರಿಗಣಿಸಿಲ್ಲ. ಮನೆಯ ಕಾರ್ಯಚಟುವಟಿಕೆಗೆ ಸಂಬಂಧಿಸಿದ ನೂರಾರು ಘಟಕಗಳನ್ನು ಒಳಗೊಂಡಂತೆ ಆಕೆ ಸಲ್ಲಿಸುವ ಸೇವೆಗಳನ್ನು ಲೆಕ್ಕಹಾಕುವುದು ಸ್ವತಃ ವಿತ್ತೀಯ ದೃಷ್ಟಿಯಿಂದಲೂ ಅಸಾಧ್ಯದ ಕೆಲಸ’ ಎಂದು ನ್ಯಾಯಾಲಯ ಹೇಳಿದೆ.

34ರಿಂದ 59 ವರ್ಷದೊಳಗಿನ ಗೃಹಿಣಿಯರು ಮತ್ತು ಜೀವನದಲ್ಲಿ ಸಕ್ರಿಯರಾಗಿರುವವರು ತಿಂಗಳಿಗೆ ಅಂದಾಜು ₹3000ದಂತೆ ವರ್ಷಕ್ಕೆ ₹36,000ದಷ್ಟು ದುಡಿಮೆ ಮಾಡುತ್ತಾರೆ ಎಂದು ಅಂದಾಜಿಸಿರುವ ಸುಪ್ರೀಂ ಕೋರ್ಟ್‌ ನೀಡಿದ್ದ ತೀರ್ಪೊಂದನ್ನು ನ್ಯಾಯಮೂರ್ತಿ ಕಿಲೋರ್‌ ಉಲ್ಲೇಖ ಮಾಡಿದ್ದಾರೆ.

‘ಮಹಿಳೆ ಗೃಹಿಣಿ ಎನ್ನುವ ಕಾರಣಕ್ಕೆ ಪರಿಹಾರ ನೀಡುವುದಿಲ್ಲ ಎಂದು ಹೇಳಲು ಬರುವುದಿಲ್ಲ ಎಂದಿರುವ ನ್ಯಾಯಾಲಯ, ಅಂತಿಮವಾಗಿ ವಾರ್ಷಿಕ ಶೇ 6 ಬಡ್ಡಿ ದರದಲ್ಲಿ ಆಕೆಯ ಕುಟುಂಬಕ್ಕೆ ₹8.22 ಲಕ್ಷ ಪರಿಹಾರ ನೀಡಬೇಕು’ ಎಂದು ಆದೇಶ ನೀಡಿತು. (ಮಾಹಿತಿ: ಬಾರ್‌ ಆಂಡ್‌ ಬೆಂಚ್)

ಇದೆಲ್ಲ ಓದಿದಾಗ, ಹಾಗಾದರೆ, ಗೃಹಿಣಿ ಮಾಡುವ ಕೆಲಸಕ್ಕೆ ಇಷ್ಟೇ ಮೌಲ್ಯವೇ. ಆಕೆಯ ಕೆಲಸವನ್ನು ದುಡ್ಡಿನಿಂದ ಅಳೆಯಬಹುದೇ ಎನ್ನುವ, ಅದೇ ದೈವತ್ವಕ್ಕೆ ಏರಿಸುವ ಪ್ರಶ್ನೆ ಮೂಡಬಹುದು. ಯಾಕೆ ಮೌಲ್ಯ ಕಟ್ಟಬಾರದು ಎನ್ನುವ ಮರು ಪ್ರಶ್ನೆಯನ್ನು ನಾವು ಹಾಕಿಕೊಳ್ಳಬೇಕು. ಅಥವಾ ಹೀಗೂ ಬರಬಹುದು, ಸಂಸಾರ ಎಂದ ಮೇಲೆ ಗಂಡ ಹೆಂಡತಿ ಇಬ್ಬರು ಕೆಲಸ (ಉದ್ಯೋಗ ಅಲ್ಲ) ಮಾಡುತ್ತಾರೆ. ಅದಕ್ಕೆಲ್ಲಾ ಸಂಬಳ ಕೊಡಲು ಸಾಧ್ಯವೇ? ಒಂದರ್ಥದಲ್ಲಿ ಹೌದು. ಸಂಬಂಧಗಳ ನಡುವೆ ದುಡ್ಡಿನ ಮೌಲ್ಯ ಲೆಕ್ಕಕ್ಕೆ ಬರುವುದಿಲ್ಲ. ಇದನ್ನು ಒಪ್ಪಿಕೊಳ್ಳುತ್ತಲೇ, ಹಾಗಾದರೆ, ಗೃಹಿಣಿ; ಮನೆ ಕೆಲಸ ಮಾಡುತ್ತಾಳೆ ಎನ್ನುವ ಕಾರಣಕ್ಕೆ ಆಕೆಗೆ ಮಾಡುವ ಅವಮಾನ, ಎನೂ ಕೆಲಸಕ್ಕೆ ಬಾರದವಳು, ಅಡುಗೆ ಮಾಡುವುದು, ಸ್ವಚ್ಛತೆ ಮಾಡುವುದು ಅದೇನು ದೊಡ್ಡ ಕೆಲಸ ಎಂದು ಮೂದಲಿಸುವುದು. ಇದೆಲ್ಲ ನಿಲ್ಲಬೇಡವೇ? ಗೃಹಿಣಿಗೂ ವ್ಯಕ್ತಿತ್ವ ಇದೆ ಅಲ್ಲವೇ ಎನ್ನುವುದನ್ನು ನಾವು ಮರೆಯಬಾರದು.

ತನಗೂ ವ್ಯಕ್ತಿತ್ವ ಇದೇ. ಅದನ್ನು ಎಲ್ಲರು ಗುರುತಿಸುತ್ತಾರೆ ಎನ್ನುವುದೂ ಆಕೆಯ ಮನೋಬಲ ವೃದ್ಧಿಗೆ ಕಾರಣವಾಗುತ್ತದೆ. ಮನೆಕೆಲಸ ಎನ್ನುವುದು ಮಹಾ ಕೆಲಸವೇ ಹೌದು ಎನ್ನುವುದನ್ನು ಗಂಡಸರು ಮತ್ತು ನಮ್ಮ ಹೆಣ್ಣು ಮಕ್ಕಳೂಅರ್ಥ ಮಾಡಿಕೊಳ್ಳಬೇಕು. ಈ ನಿಟ್ಟಿನಲ್ಲಿ ಬಾಂಬೆ ಹೈಕೋರ್ಟ್‌ ನೀಡಿರುವ ತೀರ್ಪು ಮಹತ್ವ ಪಡೆದುಕೊಂಡಿದೆ.ಜಿಡಿಪಿಯನ್ನು ಲೆಕ್ಕಹಾಕುವಾಗ ಗೃಹಿಣಿಯ ಕೆಲಸವನ್ನು ಲೆಕ್ಕಹಾಕಲಾಗುತ್ತದೆ. ಆದರೆ, ಈ ಲೆಕ್ಕಾಚಾರ ಇನ್ನಷ್ಟು ವೈಜ್ಞಾನಿಕವಾಗಿ ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.