ADVERTISEMENT

ಸ್ಪಂದನ ‍ಪ್ರಶ್ನೋತ್ತರ: ಋತುಬಂಧದ ನಂತರ ಕರಗಬಹುದಾದ ಫೈಬ್ರಾಯ್ಡ್‌

ಪ್ರಜಾವಾಣಿ ವಿಶೇಷ
Published 26 ಆಗಸ್ಟ್ 2023, 1:05 IST
Last Updated 26 ಆಗಸ್ಟ್ 2023, 1:05 IST
   

ನನಗೆ 53 ವರ್ಷ ವಯಸ್ಸು. ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಒಬ್ಬಳಿಗೆ ಮದುವೆಯಾಗಿದೆ. ನನ್ನ ಸಮಸ್ಯೆ ಏನೆಂದರೆ ಈಗಲೂ 25 ದಿನಗಳಿ ಗೊಮ್ಮೆ ಮುಟ್ಟು ಆಗುತ್ತದೆ. ಮೂರು ದಿನಗಳವರೆಗೆ ರಕ್ತಸ್ರಾವವಾಗುತ್ತದೆ. ವೈದ್ಯರಿಗೆ ತೋರಿಸಿದಾಗ ‘ಅಲ್ಟ್ರಾಸೋನೋಗ್ರಫಿ ಆಫ್ ಅಬ್ಡಮನ್‌ ಆ್ಯಂಡ್‌ ಪೆಲ್ವಿಸ್’ ಸ್ಕ್ಯಾನಿಂಗ್‌ ಮಾಡಿಸಿ ಎಂದರು. ಅದರಂತೆ ಪರೀಕ್ಷೆ ಮಾಡಿಸಿದೆ. ರಿಪೋರ್ಟ್‌ನಲ್ಲಿ Mild bulky uterus with small fibroids as prescribed ಎಂದು ಇದೆ ಹೇಳಿದರು. ನನಗೆ ಮುಟ್ಟು ನಿಲ್ಲುವುದು ಯಾವಾಗ? ಇದಕ್ಕೆ ಪರಿಹಾರ ತಿಳಿಸಿ.

ಹೆಸರು, ಊರು ತಿಳಿಸಿಲ್ಲ.

ನಿಮಗೆ ಈಗಾಗಲೇ 53 ವರ್ಷವಾಗಿರುವುದರಿಂದ ಇನ್ನು ಒಂದು ವರ್ಷದೊಳಗೆ ಮುಟ್ಟುನಿಲ್ಲುವ ಸಾಧ್ಯತೆ ಇದೆ. ಮಹಿಳೆಯರಲ್ಲಿ ಸರಾಸರಿ ಮುಟ್ಟುನಿಲ್ಲುವ ವಯಸ್ಸು 47 ರಿಂದ 52 ವರ್ಷಗಳು. ನಿಮಗೆ ಮುಟ್ಟಿನಸ್ರಾವದಲ್ಲಿ ಏನೂ ತೊಂದರೆ ಇಲ್ಲವೆಂದು ತಿಳಿಸಿದ್ದೀರಿ. ಆದರೆ ಗರ್ಭಕೋಶದಲ್ಲಿ ಸಣ್ಣ ಸಣ್ಣ ನಾರುಗಡ್ಡೆಗಳು (ಫೈಬ್ರಾಯ್ಡ್) ಇವೆ. ಗರ್ಭಕೋಶ ಕೂಡಾ ಸ್ವಲ್ಪ ದೊಡ್ಡದಾಗಿದೆ. ನೀವು ಈ ಮೊದಲು  ಯಾವ ಕಾರಣಕ್ಕೂ ಸ್ಕ್ಯಾನಿಂಗ್‌ ಮಾಡಿಸಿಲ್ಲ ಅನಿಸುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ ಗರ್ಭಕೋಶಗಳಲ್ಲಿರುವ ನಾರುಗಡ್ಡೆಗಳು, ಮುಟ್ಟುನಿಲ್ಲುವ ಹಂತದಲ್ಲಿ ಸಣ್ಣದಾಗುತ್ತಾ ಬರುತ್ತವೆ ಮತ್ತು ಹಾಗೆಯೇ ಕರಗಿಯೇ ಹೋಗಬಹುದು.

ADVERTISEMENT

ಫೈಬ್ರಾಯ್ಡ್ ಅಥವಾ ನಾರುಗಡ್ಡೆಗಳು ಹೆಣ್ತನದ ಹಾರ್ಮೋನ್‌ ಈಸ್ಟ್ರೊಜನ್‌ ಅನ್ನು ಅವಲಂಬಿಸಿರುತ್ತದೆ. ಮುಟ್ಟುನಿಲ್ಲುವ ಸಂದರ್ಭದಲ್ಲಿ ಈ ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗುತ್ತಾ ಬಂದ ಹಾಗೇ ನಾರುಗಡ್ಡೆ ಕೂಡಾ ಸಣ್ಣದಾಗುತ್ತಾ ಹೋಗುತ್ತದೆ. ಕೆಲವೊಮ್ಮೆ ಅಧಿಕ ತೂಕವಿದ್ದಾಗ, ಮಧುಮೇಹ ಇದ್ದಾಗ ನಾರುಗಡ್ಡೆಗಳು ದೊಡ್ಡದಾಗುತ್ತಾ ಹೋಗಬಹುದು. ಮುಟ್ಟು ಯಾವಾಗ ನಿಲ್ಲುತ್ತದೆ ಎಂದು ನಿರ್ದಿಷ್ಟ ವಾಗಿ ಹೇಳಲು ಸಾಧ್ಯವಿಲ್ಲವಾದರೂ ನಿಮ್ಮ ಸ್ಕ್ಯಾನಿಂಗ್‌ ವರದಿಯಲ್ಲಿ ಗರ್ಭಕೋಶ ಸ್ವಲ್ಪ ದಪ್ಪವಾಗಿರುವ ಮಾಹಿತಿ ಇದೆ. ಇದರಿಂದ ನಿಮಗೆ ಮುಟ್ಟು ತಡವಾಗಿ ನಿಲ್ಲಬಹುದು. ನೀವು ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿದ್ದು, ವರ್ಷಕ್ಕೊಮ್ಮೆ ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತಿರಿ. ಮತ್ತು ಈಗ ನಾರುಗಡ್ಡೆಗೆ ವಿವಿಧ ರೀತಿಯ ವೈದ್ಯಕೀಯ ಚಿಕಿತ್ಸೆಗಳು ಇವೆ. ವೈದ್ಯರ ಸಲಹೆಯ ಮೇರೆಗೆ ಅವುಗಳನ್ನು ಬಳಸಬಹುದು. ಹಾಗಾಗಿ ತಜ್ಞವೈದ್ಯರ ಸಲಹೆ ಇಲ್ಲದೇ ಯಾವ ನಿರ್ಣಯವನ್ನೂ ತೆಗೆದುಕೊಳ್ಳಬೇಡಿ.

ನನಗೆ 2018 ಮಗು ಆಯಿತು. ಋತುಚಕ್ರದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ. ಆದರೆ ಅಂಡಾಣು ಬಿಡುಗಡೆ ಸಮಯದಲ್ಲಿ 3 - 4 ಗಾತ್ರದ ಅಂಡಾಣುಗಳು ಬಿಡುಗಡೆಯಾಗುತ್ತಿರುವುದರಿಂದ ಮತ್ತೆ ನನಗೆ ಮಕ್ಕಳಾಗಲಿಲ್ಲ ಬಹಳ ಬೇಸರವಾಗಿದೆ. ನಾವು ಮತ್ತೆ ಮಕ್ಕಳನ್ನು ಪಡೆಯುವುದು ಹೇಗೆ ಎಂಬುದನ್ನು ತಿಳಿಸಿ.

ಅನುಶ್ರೀ, ಧಾರವಾಡ 

ಅನುಶ್ರೀ ಅವರೇ, ನಿಮ್ಮ ಮಗುವಿಗೆ ಈಗಾಗಲೇ 5 ವರ್ಷ ಆಗಿದೆ. ಪ್ರತಿ ತಿಂಗಳು ಮಾಸಿಕ ಋತುಚಕ್ರದಲ್ಲಿ ಸುಮಾರಾಗಿ 12 ರಿಂದ 14 ದಿನ ಒಂದೇ ಒಂದು ಕೋಶಿಕೆ ದೊಡ್ಡದಾಗಿ (ಪ್ರಭಲಕೋಶಿಕೆ) ಒಂದೇ ಅಂಡಾಣು ಬಿಡುಗಡೆಯಾಗುತ್ತದೆ. ಹಾಗೆ ಬಿಡುಗಡೆಯಾದ ಅಂಡಾಣು 48 ಗಂಟೆಗಳ ಕಾಲ ಜೀವಂತವಾಗಿದ್ದು ಆ ಸಂದರ್ಭದಲ್ಲಿಯೇ ಗಂಡು ಹೆಣ್ಣಿನ ಲೈಂಗಿಕ ಸಂಪರ್ಕವಾದರೆ ಗರ್ಭನಾಳದಲ್ಲಿ ಭ್ರೂಣಹೊರೆದು ನಂತರ ಗರ್ಭಕೋಶದೊಳಗೆ ಪ್ರವೇಶಿಸಿ ಹಂತ ಹಂತವಾಗಿ ಮಗುವಾಗಿ ಬೆಳವಣಿಗೆ ಹೊಂದುತ್ತಾ ನವಮಾಸದಲ್ಲಿ ಶಿಶು ಜನನವಾಗುತ್ತದೆ. ನೀವು, ಅಂಡಾಣು ಮೂರು–ನಾಲ್ಕು ಬಿಡುಗಡೆಯಾಗುತ್ತದೆ ಎಂದು ತಿಳಿಸಿದ್ದೀರಿ. ಹಾಗಾಗಲು ಸಾಧ್ಯವಿಲ್ಲ. ಬಹುಶಃ ಮೂರು ನಾಲ್ಕು ಕೋಶಿಕೆಗಳು ಬೆಳವಣಿಗೆ ಶುರುವಾಗಿ ಸರಿಯಾಗಿ ಪಕ್ವವಾಗದೇ ಹಾಗೇಯೇ ಉಳಿದುಕೊಂಡು ಬಿಡುತ್ತವೆ ಎಂದು ವೈದ್ಯರು ತಿಳಿಸಿರಬೇಕು. ಹೀಗೆ ಹತ್ತು ಹಲವು ಕೋಶಿಕೆಗಳು ಸರಿಯಾಗಿ ಬೆಳವಣಿಗೆಯಾಗದೇ ಅಂಡಾಶಯದ ತೊಗಟೆಯಲ್ಲಿ ಜೋಡಿಸಲ್ಪಟ್ಟ ಹಾಗೇಯೇ ಕಾಣಿಸಿಕೊಳ್ಳುವುದಕ್ಕೆ ಪಿ.ಸಿ.ಓ (ಪಾಲಿಸಿಸ್ಟಿಕ್ ಓವರಿ) ಎನ್ನುತ್ತೇವೆ. ಹೀಗಾದಾಗ ಮಕ್ಕಳಾಗಲು ಸಾಧ್ಯವಿಲ್ಲ. ಹೀಗಾಗಲು ಹಲವು ಕಾರಣಗಳಿವೆ. ನಿಮಗೆ ಮಗು ಆದ ಮೇಲೆ ನಿಮ್ಮ ದೇಹದ ತೂಕ ಹೆಚ್ಚಾಗಿದ್ದರೆ ಈ ತರಹದ ತೊಂದರೆ ಉಂಟಾಗಬಹುದು. ಈ ಬಗ್ಗೆ ನೀವು ಪ್ರಶ್ನೆಯಲ್ಲಿ ತಿಳಿಸಿಲ್ಲ.

ಇರಲಿ ನಿಮ್ಮ ತೂಕ ಹೆಚ್ಚಾಗಿದ್ದಲ್ಲಿ ಆಹಾರ ನಿಯಂತ್ರಣದ ಜೊತೆಗೆ, ಹೆಚ್ಚು ಹೆಚ್ಚು ಸೊಪ್ಪು, ತರಕಾರಿಗಳನ್ನು ತಿನ್ನಿ. ನಿತ್ಯ ಕನಿಷ್ಠ 1 ಗಂಟೆ ನಿಯಮಿತವಾಗಿ ಯಾವುದೇ ವ್ಯಾಯಾಮ ಮಾಡಿ. ರಾತ್ರಿ ಕನಿಷ್ಠ ಆರೇಳು ತಾಸು ನಿದ್ರೆ ಮಾಡಿ. ಇವೆಲ್ಲದರಿಂದ ತೂಕ ನಿಯಂತ್ರಣಕ್ಕೆ ಬರುತ್ತದೆ. ನಿಮ್ಮ ತೂಕವನ್ನು ನೀವು ಶೇಕಡ 5 ರಿಂದ 10ರಷ್ಟು ಕಡಿಮೆ ಮಾಡಿಕೊಂಡಲ್ಲಿ ಅಂಡೋತ್ಪತ್ತಿ ಚೆನ್ನಾಗಿ ಆಗುತ್ತದೆ. ನಿಮಗೆ ಇನ್ನೊಂದು ಮಗು ಬೇಗನೆ ಆಗುತ್ತದೆ. ಆರೋಗ್ಯವಂತ ಮಗುವಿಗಾಗಿ ಫೋಲಿಕ್‌ ಆಸಿಡ್ 5 ಮಿ.ಗ್ರಾಂ. ಮಾತ್ರೆಗಳನ್ನ ನಿಯಮಿತವಾಗಿ ತೆಗೆದುಕೊಳ್ಳುತ್ತಿರಿ. ನಿಮ್ಮ ತಜ್ಞ ವೈದ್ಯರ ಸಲಹೆಯಮೇರೆಗೆ ಅಂಡೋತ್ಪತ್ತಿಯಾಗಲು ಚಿಕಿತ್ಸೆ ತೆಗೆದುಕೊಂಡರೆ ನಿಮಗೆ ಆದಷ್ಟು ಬೇಗ ಮಗು ಆಗುತ್ತದೆ. ಭರವಸೆಯಿಂದಿರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.