ADVERTISEMENT

ಬೇಸಿಗೆಯಲ್ಲಿ ಮಕ್ಕಳ ಉಡುಪು: ಅಂದಕ್ಕಿಂತ ಆರಾಮಕ್ಕಿರಲಿ ಆದ್ಯತೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2025, 23:39 IST
Last Updated 28 ಮಾರ್ಚ್ 2025, 23:39 IST
<div class="paragraphs"><p>ಬೇಸಿಗೆಯಲ್ಲಿ ಮಕ್ಕಳ ಉಡುಪು: ಅಂದಕ್ಕಿಂತ ಆರಾಮಕ್ಕಿರಲಿ ಆದ್ಯತೆ</p><p></p></div>

ಬೇಸಿಗೆಯಲ್ಲಿ ಮಕ್ಕಳ ಉಡುಪು: ಅಂದಕ್ಕಿಂತ ಆರಾಮಕ್ಕಿರಲಿ ಆದ್ಯತೆ

   

ಕೂಸು ಇದ್ದ ಮನೀಗ ಬೀಸಣಿಕೆ ಯಾತಕ

ADVERTISEMENT

ಕೂಸು ಕಂದಮ್ಮ ಒಳಹೊರಗ ಅಡಿದರ

ಬೀಸಣಿಕೆ ಗಾಳಿ ಸುಳಿದಾವ...

ಎನ್ನುವುದು ಜನಪದರ ನುಡಿ. ನೆತ್ತಿ ಸುಡುವ ಬಿರು ಬಿಸಿಲಿನಲ್ಲೂ ಮಕ್ಕಳು ತಂಪಾಗಿ ಆಟವಾಡಿಕೊಂಡಿರುವಲ್ಲಿ ಅವರು ಧರಿಸುವ ಉಡುಪಿನ ಪಾತ್ರ ಮುಖ್ಯ. ಬೇಸಿಗೆಯ ರಜೆಯೊಂದಿಗೇ ಬರುವ ಸಾಲು ಸಾಲು ಹಬ್ಬ, ಜಾತ್ರೆಗಳಲ್ಲಿ ತಮ್ಮ ಮಕ್ಕಳನ್ನು ಚೆನ್ನಾಗಿ ಕಾಣುವಂತೆ ಸಿಂಗರಿಸಬೇಕೆನ್ನುವುದು ತಾಯಂದಿರ ಆಸೆ. ಆದರೆ, ಈ ಆಸೆಗೆ ಸೂರ್ಯದೇವನದ್ದೇ ಅಡ್ಡಿ. ಅವನ ಅಡ್ಡಿಯನ್ನೂ ಮೀರುವಂತೆ ಮಕ್ಕಳನ್ನು ಸಿಂಗರಿಸುವಲ್ಲಿ ಅಮ್ಮಂದಿರೇನೂ ಹಿಂದೆ ಬಿದ್ದಿಲ್ಲ. ಆದರೆ, ಬೇಸಿಗೆಯಲ್ಲಿ ಮಕ್ಕಳಿಗೆ ಅಂದದ ಉಡುಪುಗಳಿಗಿಂತ ಆರಾಮದಾಯಕ ಉಡುಪುಗಳು ಮುಖ್ಯ ಅನ್ನುವುದು ಆದ್ಯತೆಯಾಗಿರಲಿ.

ಸದಾ ಕಾಲಕ್ಕೂ ಸಲ್ಲುವ ಕಾಟನ್

‌ಫ್ಯಾಷನ್ ಉದ್ಯಮ ಎಷ್ಟೇ ವೇಗದ ದಾಪುಗಾಲು ಹಾಕುತ್ತಿರಲಿ, ಅಂದಿಗೂ ಇಂದಿಗೂ ಎಂದೆಂದಿಗೂ ಕಾಟನ್ ಬಟ್ಟೆಗಳು ತಮ್ಮ ಪಾರುಪತ್ಯವನ್ನು ಬಿಟ್ಟುಕೊಟ್ಟಿಲ್ಲ. ಅದರಲ್ಲೂ ಬಿರು ಬೇಸಿಗೆಯಲ್ಲಿ ಹತ್ತಿಯ ಬಟ್ಟೆಗಳಿಗೆ ಎಲ್ಲಿಲ್ಲದ ಮಹತ್ವ. ಹಸುಗೂಸುಗಳಿಂದ ಹಿಡಿದು ವಯೋವೃದ್ಧರ ತನಕ ಹತ್ತಿಯ ಬಟ್ಟೆಗಳಿಗೆ ಸದಾ ಬೇಡಿಕೆ ಇದ್ದದ್ದೇ.

ಬಿಸಿಲಿನ ತಾಪ ತಡೆಯುವಲ್ಲಿ ಹತ್ತಿಯ ಬಟ್ಟೆಗಳ ಪಾತ್ರ ದೊಡ್ಡದು. ಹತ್ತಿಯ ಬಟ್ಟೆ ಧರಿಸುವುದರಿಂದ ಒಳಹೊರಗೆ ಗಾಳಿಯ ಸಂಚಾರ ಸುಗಮವಾಗುತ್ತದೆ. ಹಾಗಾಗಿ, ಮಕ್ಕಳಿಗೆ ಹತ್ತಿಯ ಬಟ್ಟೆಗಳಿಗೇ ಆದ್ಯತೆ ನೀಡುವುದು ಒಳ್ಳೆಯದು. ಅದರಲ್ಲೂ ತಿಳಿ ಬಣ್ಣಗಳ ಆಯ್ಕೆ ನಿಮ್ಮದಾಗಿದ್ದಲ್ಲಿ ಅವು ಕಣ್ಣಿಗೆ ನೋಡಲಷ್ಟೇ ಅಲ್ಲ, ದೇಹಕ್ಕೂ ತಂಪನೀಯುತ್ತವೆ. ತೆಳುಬಣ್ಣದ ಹತ್ತಿಯ ಉಡುಪುಗಳು ಶಾಖವನ್ನು ಹೀರಿಕೊಳ್ಳುವುದರಿಂದ ಮಕ್ಕಳಿಗೆ ಕಿರಿಕಿರಿಯಾಗುವುದಿಲ್ಲ.

ಹತ್ತಿಯ ಬಟ್ಟೆಗಳಲ್ಲಿ ನಿತ್ಯ ಧರಿಸುವ ಉಡುಪುಗಳ ಜತೆಗೆ ಫ್ಯಾಷನೇಬಲ್ ಆಗಿರುವ ಉಡುಪುಗಳೂ ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಕಾಟನ್ ಫ್ರಾಕ್, ಸ್ಲೀವ್‌ಲೆಸ್ ಟಾಪ್, ಲಾಂಗ್ ಗೌನ್, ಕಾಟನ್, ಲಿನನ್‌ ಶರ್ಟ್, ಕಾಟನ್ ಕುರ್ತಾಗಳ ಆಯ್ಕೆಯೂ ಇದೆ. ಇದರ ಜತೆಗೆ ಶಾರ್ಟ್ಸ್‌, ಸ್ಕರ್ಟ್‌ಗಳನ್ನೂ ಹಾಕಬಹುದು. ಬೇಸಿಗೆಯಲ್ಲಿ ಲೆಗ್ಗಿಂಗ್ಸ್, ಜೀನ್ಸ್ ಪ್ಯಾಂಟುಗಳಿಗಿಂತ ಕಾಲಿಗೆ ಗಾಳಿಯಾಡುವಂಥ ಉಡುಪುಗಳೇ ಆರಾಮದಾಯಕ.

ಹಗುರವಾಗಿರಲಿ ಉಡುಪು

ಮಕ್ಕಳು ಚಂದ ಕಾಣಲಿ ಎಂದು ಭಾರವಾದ ಉಡುಪುಗಳನ್ನು ಹಾಕಬೇಡಿ. ಭಾರವಾದ ಉಡುಪುಗಳು ಮಕ್ಕಳ ಚಟುವಟಿಕೆಗಳಿಗೆ ಅಡ್ಡಿಯಾಗುವುದಷ್ಟೇ ಅಲ್ಲ, ಬೇಸಿಗೆಯ ತಾಪವನ್ನೂ ಹೆಚ್ಚಿಸಿ ಅವರಿಗೆ ಕಿರಿಕಿರಿ ಮಾಡಬಲ್ಲವು. ಕೈಕಾಲಿಗೆ ಸಿಲುಕುವಂಥ ಉಡುಪುಗಳನ್ನು ಹಾಕದಿರಿ. ತುಂಬುತೋಳಿನ ಬಟ್ಟೆಗಳಿಗಿಂತ ಅರ್ಧ ತೋಳಿನ, ತೋಳಿಲ್ಲದ ಉಡುಪು, ಕಾಟನ್ ಬನಿಯನ್‌ಗಳನ್ನು ಹಾಕಬಹುದು.

ಸೂಕ್ತ ಅಳತೆ ಇರಲಿ

ಮಕ್ಕಳಿಗೆ ಹಾಕುವ ಉಡುಪುಗಳು ಅವರ ದೇಹದ ಅಳತೆಗೆ ತಕ್ಕಂತಿರುವುದು ಮುಖ್ಯ. ತೀರಾ ಸಡಿಲ ಇಲ್ಲವೇ ತೀರಾ ಮೈಗಂಟಿಕೊಂಡಂತಿರುವ ಬಿಗಿಯಾದ ಉಡುಪುಗಳನ್ನು ಆಯ್ಕೆ ಮಾಡಬೇಡಿ. ಗಾಳಿಯ ಸಂಚಾರಕ್ಕೆ ಅನುಕೂಲವಾಗುವಂತೆ, ಮಕ್ಕಳಿಗೆ ಆರಾಮವಾಗಿ ಕೈಕಾಲು ಆಡಿಸಲು ಅನುವಾಗುವಂಥ ಉಡುಪುಗಳನ್ನೇ ಹಾಕಿ. ಕಾಲರ್ ನೆಕ್ ಉಡುಪುಗಳನ್ನು ಹಾಕುವಾಗ ಅವು ತೀರಾ ಕುತ್ತಿಗೆಗೆ ಬಿಗಿಯುವಂತೆ ಇರದಿರಲಿ.

ಸರಳ ವಿನ್ಯಾಸವಿರಲಿ

ಮಕ್ಕಳಿಗೆ ಆದಷ್ಟು ಭಾರಿ ವಿನ್ಯಾಸದ ಕಣ್ಣಿಗೆ ರಾಚುವಂಥ ವಿನ್ಯಾಸಕ್ಕಿಂತ ಸರಳ ವಿನ್ಯಾಸದ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಹಬ್ಬ– ಜಾತ್ರೆಗಳ ಸಂದರ್ಭದಲ್ಲಿ ಮಣಿಗಳು, ಮುತ್ತು, ಗಾಜು ಇತ್ಯಾದಿಗಳ ಅಲಂಕಾರಿಕ ಉಡುಪುಗಳು ಮಕ್ಕಳ ಅಂದ ಹೆಚ್ಚಿಸುವುದಕ್ಕಿಂತ ಚುಚ್ಚುವ ಅನುಭವದ ಕಾರಣಕ್ಕಾಗಿಯೇ ಅವರಿಗೆ ಕಿರಿಕಿರಿ ಉಂಟು ಮಾಡುತ್ತವೆ.

ಅಲಂಕಾರಕ್ಕಿರಲಿ ಇರಲಿ ಮಿತಿ

ಹಬ್ಬ, ಶುಭ ಕಾರ್ಯ ಅಥವಾ ಇತರ ಸಮಾರಂಭಗಳಲ್ಲಿ ಹೆಣ್ಣುಮಕ್ಕಳಿಗೆ ಉದ್ದನೆಯ ಗೌನ್‌ಗಳ ಬದಲು ಫ್ರಾಕ್‌ನಂಥ ಸರಳವಾದ ಉಡುಪುಗಳನ್ನೇ ಹಾಕಿ. ಮಕ್ಕಳು ಚಂದ ಕಾಣಲಿ ಎಂದು ಅಮ್ಮಂದಿರು ಬಗೆಬಗೆಯ ಕಿವಿಯೋಲೆ, ಸರ, ಹೇರ್ ಕ್ಲಿಪ್, ಬಳೆ ಇತ್ಯಾದಿಗಳನ್ನು ಹಾಕುವುಂಟು. ಆದರೆ, ಬೇಸಿಗೆಯಲ್ಲಿ ಇಂಥ ಅಲಂಕಾರಗಳು ಮಕ್ಕಳಿಗೆ ಕಿರಿ ಅನ್ನಿಸಬಹುದು. ಬೆಲೆಬಾಳುವ ಆಭರಣವನ್ನು ಮಕ್ಕಳು ಕಿತ್ತೊಗೆಯುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ, ಅಂಥ ಅಲಂಕಾರ ಮಿತವಾಗಿದ್ದರೆ ಒಳಿತು.

ಬಿಸಿಲಿನಲ್ಲಿ ಪ್ರಯಾಣಿಸುವ ಇಲ್ಲವೇ ನಡೆಯುವಂಥ ಸಂದರ್ಭಗಳಲ್ಲಿ ಮಕ್ಕಳಿಗೆ ಆದಷ್ಟು ಸೂರ್ಯನ ಕಿರಣಗಳಿಂದ ರಕ್ಷಿಸಲು ಸನ್ ಗ್ಲಾಸ್, ಟೋಪಿ ಹಾಕುವುದರ ಜತೆಗೆ ಮಕ್ಕಳಿಗೆ ಆಗಾಗ ನೀರು ಇಲ್ಲವೇ ಹಣ್ಣಿನ ರಸ ಕುಡಿಸುವುದನ್ನು ಮರೆಯದಿರಿ. ಬೇಸಿಗೆಯಲ್ಲಿ ಮಕ್ಕಳು ಧರಿಸುವ ಉಡುಪುಗಳು ಅವರ ಅಂದ ಹೆಚ್ಚಿಸುವುದಕ್ಕಿಂತ ಆರಾಮದಾಯಕವಾಗಿದ್ದರೆ ಕ್ಷೇಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.