ADVERTISEMENT

ಎಳೆಹರೆಯದ ಪ್ರೀತಿ– ಪ್ರಣಯ

ನಡಹಳ್ಳಿ ವಂಸತ್‌
Published 23 ಆಗಸ್ಟ್ 2019, 19:30 IST
Last Updated 23 ಆಗಸ್ಟ್ 2019, 19:30 IST
Love 
Love    

ನಲವತ್ತು ವರ್ಷದ ಗೃಹಿಣಿಯೊಬ್ಬಳು ನನ್ನೆದುರು ಕುಳಿತಿದ್ದಳು. ಅವಳ ಧ್ವನಿ ಮತ್ತು ಮುಖಭಾವ ಅವಳ ದುಗುಡವನ್ನು ಸಾರುತ್ತಿತ್ತು. ‘ನನಗೆ ಹದಿನಾಲ್ಕು ವರ್ಷದ ಮಗಳಿದ್ದಾಳೆ. ಕಳೆದ ಒಂದು ವರ್ಷದಿಂದ ಅವಳಿಗೆ ಹುಡುಗನೊಬ್ಬನ ಜೊತೆ ಸ್ನೇಹವಿದೆ ಎಂದು ನಮಗೆ ಮೂರನೆಯವರಿಂದ ತಿಳಿದುಬಂತು. ಅವಳನ್ನು ಕೇಳಿದರೆ ಯಾವುದೇ ಸ್ಪಷ್ಟ ಉತ್ತರ ಕೊಡುತ್ತಿಲ್ಲ. ಸ್ವಲ್ಪ ಒತ್ತಾಯಿಸಿದರೆ ಅಥವಾ ಮೊಬೈಲ್ ಕೊಡದಿದ್ದರೆ ದಿನಗಟ್ಟಲೆ ಕೋಣೆಯ ಬಾಗಿಲು ಹಾಕಿಕೊಂಡು ಉಪವಾಸವಿರುತ್ತಾಳೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿಯೂ ಹೆದರಿಸುತ್ತಾಳೆ. ಒಬ್ಬಳೇ ಮಗಳು ಸಾರ್, ಮುದ್ದಿನಿಂದ ಬೆಳೆಸಿದ್ದೇವೆ. ನಮ್ಮ ಯಜಮಾನರು ಅವರ ವ್ಯಾಪಾರ, ಕ್ಲಬ್‌ಗಳಲ್ಲಿಯೇ ಮುಳುಗಿರುತ್ತಾರೆ. ನನಗೆ ಸಾಕಾಗಿ ಹೋಗಿದೆ’ ಎನ್ನುವಾಗ ಕಣ್ಣೀರು ತನ್ನಿಂದ ತಾನೇ ಹರಿಯುತ್ತಿತ್ತು. ಮಾತುಗಳು ಅರ್ಥಹೀನವಾಗಬಹುದಾದ್ದರಿಂದ ಮೌನವಾಗಿ ಆಲಿಸುತ್ತಿದ್ದೆ.

ಇದೇ ರೀತಿಯ ನೋವು, ಅಸಹಾಯಕತೆ, ಹಿಂಜರಿಕೆಗಳನ್ನು ಹೊತ್ತು ಹಲವಾರು ಪೋಷಕರು ಸಹಾಯ ಕೇಳುತ್ತಾರೆ. ಅಪರೂಪಕ್ಕೆ ಮಕ್ಕಳೂ ಸೇರಿಕೊಳ್ಳುತ್ತಾರೆ. ಹದಿವಯಸ್ಸಿನ ಹೆಣ್ಣುಮಕ್ಕಳಿರುವ ಹೆಚ್ಚಿನ ತಾಯಂದಿರು ಇಂತಹ ಆತಂಕದಲ್ಲಿರುತ್ತಾರೆ. ಅವರ ಎಲ್ಲಾ ಶಿಸ್ತು, ನೀತಿ–ನಿಯಮಗಳು, ಪ್ರಾಮಾಣಿಕ ಪ್ರಯತ್ನಗಳನ್ನು ಮೀರಿ ಮಕ್ಕಳು ಹದಿವಯಸ್ಸಿನ ಆಕರ್ಷಣೆಗೆ ಒಳಗಾಗುತ್ತಾರೆ. ಸಮಾಜ ಮುಕ್ತವಾಗುತ್ತಿದೆ. ಹೆಣ್ಣುಮಕ್ಕಳನ್ನು ಬಂಧಿಸಿಡಲು ಸಾಧ್ಯವಿಲ್ಲ. ಸಂಪರ್ಕ ಸಾಧನಗಳು ಎಲ್ಲರ ಕೈಯಲ್ಲಿರುತ್ತವೆ. ಆಕರ್ಷಣೆಗಳಿಗೆ ಇಂಬು ನೀಡುವ ವಾತಾವರಣ ಸುತ್ತಲೂ ಇರುವಾಗ ಕಟ್ಟುನಿಟ್ಟಾದ ಶಿಸ್ತು ಸಂಬಂಧಗಳಲ್ಲಿನ ದೂರವನ್ನು ಹೆಚ್ಚಿಸಬಹುದೇ ಹೊರತು ಮತ್ತೇನನ್ನೂ ಸಾಧಿಸುವುದಿಲ್ಲ.

ಪ್ರೀತಿಯ ನಶೆ

ADVERTISEMENT

ಎಳೆಹರೆಯದ ಪ್ರೀತಿಯ ನಶೆಯೇ ಅಂತಹದ್ದು. ನರವಿಜ್ಞಾನಿಗಳು ಪ್ರಣಯದ ಪ್ರಭಾವಕ್ಕೊಳಗಾದವರ ಮೆದುಳನ್ನು ಸ್ಕ್ಯಾನ್ ಮಾಡಿದಾಗ ಅವರಿಗೆ ವಿಚಿತ್ರ ಅಂಶವೊಂದು ಗಮನಕ್ಕೆ ಬಂದಿತು. ಅಫೀಮನ್ನು ಸೇವಿಸಿದಾಗ ಕ್ರಿಯಾಶೀಲವಾಗುವ ಮೆದುಳಿನ ಭಾಗವೇ ಪ್ರಣಯದಲ್ಲಿರುವವರ ಮೆದುಳಿನಲ್ಲಿಯೂ ಚಟುವಟಿಕೆಯಿಂದಿತ್ತು. ಇದೇ ಕಾರಣಕ್ಕಾಗಿಯೇ ಪ್ರೀತಿ– ಪ್ರಣಯಗಳ ನಶೆಯಲ್ಲಿರುವವರು ಆತ್ಮಹತ್ಯೆ, ಕೊಲೆಗಳಂತಹ ತೀವ್ರವಾದ ದೈಹಿಕ ಹಿಂಸಾಚಾರಕ್ಕೆ ಹಿಂಜರಿಯುವುದಿಲ್ಲ. ಅಷ್ಟೇ ಅಲ್ಲದೆ ನಮ್ಮ ವಿವೇಚನೆ, ತಾರ್ಕಿಕ ಚಿಂತನೆಗಳನ್ನು ನಿರ್ವಹಿಸುವ ಮುಂಮೆದುಳು (ನಿಯೋಕಾರ್ಟೆಕ್ಸ್) ಹದಿವಯಸ್ಸಿನಲ್ಲಿ ಇನ್ನೂ ಪೂರ್ಣವಾಗಿ ಬೆಳೆದಿರುವುದಿಲ್ಲ. ಹೀಗಾಗಿ ಪೋಷಕರ ಬುದ್ಧಿಮಾತುಗಳು ಅವರ ಮೆದುಳಿಗೆ ಹೊರಗಿನಿಂದ ತಾಗಿ ಹಿಂದಿರುಗುತ್ತವೆ. ತಮ್ಮ ಭಾವನಾತ್ಮಕ ಸೆಳೆತಗಳನ್ನು ವಿವೇಕದ ಕೈಗೆ ಒಪ್ಪಿಸಲು ಪ್ರಕೃತಿ ಅವರನ್ನು ಸಿದ್ಧಮಾಡಿರುವುದಿಲ್ಲ. ಪ್ರಕೃತಿಯ ನಿಯಮವೇ ಅಂತಹದ್ದು. ಏಕೆಂದರೆ ಹೆಣ್ಣುಗಂಡುಗಳ ಆಕರ್ಷಣೆಗೆ ವಿವೇಕವನ್ನು ಬಳಸತೊಡಗಿದರೆ ಮಾನವ ಕುಲ ಮುಂದುವರೆಯುವುದು ಕಷ್ಟ! ಕುರುಡು ಆಕರ್ಷಣೆಯೇ ವಂಶಾಭಿವೃದ್ಧಿಗೆ ಮೂಲಸೆಲೆ. ಹಾಗಿದ್ದರೆ ಇಂತಹ ಆಕರ್ಷಣೆ ವಿನಾಶಕಾರಿಯಾಗದಂತೆ ತಡೆಯುವುದು ಹೇಗೆ?

ನಿಯಂತ್ರಣ ಸಾಧ್ಯವೇ?

ಪ್ರೀತಿ ಪ್ರಣಯಗಳ ವಿಷಯಗಳಲ್ಲಿನ ತಲೆಮಾರುಗಳ ನಡುವಿನ ಹಗ್ಗಜಗ್ಗಾಟ ಎಲ್ಲಾ ಜಾತಿ, ಧರ್ಮ, ವರ್ಗ, ದೇಶ, ಸಮಾಜಗಳಲ್ಲಿ ಲಗಾಯ್ತಿನಿಂದಲೂ ನಡೆಯುತ್ತಲೇ ಬಂದಿದೆ. ಇವತ್ತಿನ ಪೋಷಕರಿಗೆ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತಿರುವುದಕ್ಕೆ ಒಂದು ಪ್ರಮುಖ ಆರ್ಥಿಕ, ಸಾಮಾಜಿಕ ಕಾರಣವಿದೆ. 90ರ ದಶಕದಿಂದ ಮುಕ್ತವಾದ ದೇಶದ ಆರ್ಥಿಕತೆ, ಸ್ತ್ರೀಯರ ಬಗೆಗಿನ ಕಾನೂನುಗಳು ಅವರಿಗೆ ವಿದ್ಯಾಭ್ಯಾಸ, ಉದ್ಯೋಗಾವಕಾಶಗಳು ಮುಕ್ತವಾಗಿ ದೊರೆಯಲು ಸಹಾಯ ಮಾಡಿದವು. ಸಂಪರ್ಕ ಸಾಧನಗಳು ನಮ್ಮ ಯುವಕರಿಗೆ ಹೊಸ ಜಗತ್ತನ್ನು ಪರಿಚಯಿಸಿದವು. ಈ ಹೊಸಲೋಕದ ಗೊಂದಲ– ಗೋಜಲುಗಳನ್ನು ಅರಗಿಸಿಕೊಳ್ಳುತ್ತಲೇ ತಮ್ಮ ಅಸ್ಮಿತೆಯ ಹುಡುಕಾಟದಲ್ಲಿರುವ ಅವರು ಹೊಸ ಜಗತ್ತಿಗೆ ಬೇಗನೆ ತೆರೆದುಕೊಳ್ಳತೊಡಗಿದರು. ಆದರೆ ಇಂತಹ ರೋಚಕ ಪ್ರಪಂಚಕ್ಕೆ ಅಪರಿಚಿತರಾಗಿಯೇ ಉಳಿದ ಪೋಷಕರು ಮಕ್ಕಳೊಡನೆ ಸಂಪರ್ಕ ಸಾಧಿಸುವುದರಲ್ಲಿ ಸೋಲುತ್ತಿದ್ದಾರೆ. ತಾವು ಬಾಲ್ಯದಲ್ಲಿ ಕಲಿತಿದ್ದರ ಆಧಾರದ ಮೇಲೆ ಮಕ್ಕಳನ್ನು ನಿಭಾಯಿಸಲು ಪ್ರಯತ್ನಿಸುತ್ತಾ ಸೋಲುತ್ತಿದ್ದಾರೆ. ತೀರಾ ಹತಾಶರಾಗಿ ಕಟ್ಟುಪಾಡುಗಳನ್ನು ಗಟ್ಟಿಮಾಡಿದಷ್ಟೂ ವಿನಾಶಕಾರಿ ಕೃತ್ಯಗಳಿಗೆ ಮಕ್ಕಳು ಮೊರೆಹೋಗುವ ಸಾಧ್ಯತೆಗಳು ಹೆಚ್ಚಾಗುತ್ತಿವೆ. ಹದಿವಯಸ್ಸಿನ ಮಕ್ಕಳ ಆಕರ್ಷಣೆಗಳು, ಅಸ್ಮಿತೆಯ ಹುಡುಕಾಟ ಮತ್ತು ಪೋಷಕರ ಅಸಹಾಯಕತೆಯ ನಡುವೆ ತಪ್ಪು– ಸರಿಗಳ ನಿರ್ಧಾರವನ್ನು ಹೇಗೆ ಮಾಡುತ್ತೀರಿ?

ಪೋಷಕರೇನು ಮಾಡಬಹುದು?

ಹೊಸದೆಲ್ಲವೂ ವಿನಾಶಕಾರಿ, ಅನೈತಿಕ ಎನ್ನುವ ಮನೋಭಾವದಿಂದ ಹೊರಬಂದು ಮಕ್ಕಳ ಜೊತೆಗೂಡಿ ಇವತ್ತಿನ ಅಂತರ್ಜಾಲ, ಸಾಮಾಜಿಕ ಮಾಧ್ಯಮಗಳು ರಂಗುರಂಗಿನ ಸಿನಿಮಾ, ಮಾಡೆಲಿಂಗ್ ಜಗತ್ತು ಮುಂತಾದವುಗಳ ಬಗೆಗೆ ತಿಳಿಯುತ್ತಾ ಹೋಗಬೇಕು.

ಮಕ್ಕಳೊಡನೆ ಕಲಿಯುವಾಗ ಗಂಡು ಮತ್ತು ಹೆಣ್ಣು ಮಕ್ಕಳನ್ನು ಒಟ್ಟಿಗೇ ಸೇರಿಸಿಕೊಳ್ಳಬೇಕು. ಗಂಡುಮಕ್ಕಳು ಏನಾದರೂ ಮಾಡಿದರೆ ನಡೆಯುತ್ತದೆ ಎನ್ನುವ ಮನೋಭಾವ ಸಾಕಷ್ಟು ಪೋಷಕರಲ್ಲಿದೆ. ಸಾಮಾಜಿಕ ದೃಷ್ಟಿಕೋನವೇನೇ ಇದ್ದರೂ ಹದಿವಯಸ್ಸಿನ ಮಾನಸಿಕ ಗೊಂದಲ, ಹೋರಾಟಗಳು ಇಬ್ಬರಲ್ಲಿಯೂ ಒಂದೇ ರೀತಿಯಲ್ಲಿರುತ್ತದೆ. ಗಂಡಿಗೆ ದೊರೆಯುವ ಸಾಮಾಜಿಕ ಮಾನ್ಯತೆ ಅವನಲ್ಲಿ ಹುಸಿ ಧೈರ್ಯ ನೀಡಿ ಹೆಚ್ಚಿನ ಸಾಹಸಗಳಿಗೆ ಪ್ರೇರೇಪಿಸಬಹುದು. ಆದರೆ ಆಕರ್ಷಣೆಗಳನ್ನು ಸರಿಯಾಗಿ ನಿಭಾಯಿಸುವುದರಲ್ಲಿ ಸೋಲುವ ಗಂಡು ಕೂಡ ಜೀವನದಲ್ಲಿ ಹೆಣ್ಣಿನಷ್ಟೇ ಅಸುಖಿಯಾಗುತ್ತಾನೆ.

ಪ್ರೇಮ– ಪ್ರೀತಿ– ಪ್ರಣಯಗಳು ಮಕ್ಕಳಿಂದ ಮುಚ್ಚಿಡುವ ವಿಷಯವಾಗದೆ ಮಕ್ಕಳೊಡನೆ ಹಂಚಿಕೊಂಡು ಸವಿಯುವ ವಸ್ತುವಾಗಬೇಕು. ಪೋಷಕರು ತಮ್ಮ ಹದಿವಯಸ್ಸಿನ ಅನುಭವಗಳನ್ನು ಹೇಳಿಕೊಂಡು ಮಕ್ಕಳೊಡನೆ ಅತ್ಯುತ್ತಮ ಸಂಪರ್ಕ ಸಾಧಿಸಬಹುದು. ಸದಭಿರುಚಿಯ ಪ್ರಣಯದ ದೃಶ್ಯಗಳಿರುವ ಸಿನಿಮಾಗಳನ್ನು ಮನೆಯವರೆಲ್ಲಾ ಕುಳಿತು ನೋಡಿ ಚರ್ಚೆ ಮಾಡಬಹುದು.

ಮಕ್ಕಳು ದಾರಿ ತಪ್ಪಬಹುದು ಎನ್ನುವ ಅನುಮಾನದ ದೃಷ್ಟಿಯಿಂದ ಅವರನ್ನು ಹಿಂಸಿಸದೆ ಅವರ ಶಾಲಾ ಕಾಲೇಜಿಗಳಲ್ಲಿನ ಅನುಭವಗಳು ಅವರ ಸ್ನೇಹಿತರ ಬಗೆಗಿನ ಮಾಹಿತಿಗಳು ಮುಂತಾದವುಗಳ ಬಗ್ಗೆ ಮಾತನಾಡಬಹುದು.

ಇವೆಲ್ಲಾ ಪೋಷಕರಿಗೆ ಸಂಪೂರ್ಣ ಅಪರಿಚಿತ ವಿಷಯಗಳು. ಅವರಲ್ಲಿ ಆತಂಕ ತುಂಬಿಕೊಳ್ಳುವುದು ಸಹಜ ಕೂಡ. ಇವತ್ತಿನ ಹದಿವಯಸ್ಸಿನ ಮಕ್ಕಳ ಮನೋಭಾವ, ಧೋರಣೆ, ಜಗತ್ತು, ಜೀವನಶೈಲಿಗಳನ್ನು ಒಪ್ಪಿಕೊಳ್ಳುವುದು ಬಿಡುವುದು ನಂತರದ ವಿಚಾರ. ಆದರೆ ಅವುಗಳನ್ನು ಪರಿಚಯ ಮಾಡಿಕೊಳ್ಳಲು ಹಿಂಜರಿದಾಗ ನಾವು ಮಕ್ಕಳಿಂದ ಕೂಡ ಅಪರಿಚಿತರಾಗಿಯೇ ಉಳಿಯುತ್ತೇವೆ. ಇದು ಪೋಷಕರಿಗಷ್ಟೇ ಅಲ್ಲ ಮಕ್ಕಳಿಗೂ ಕೂಡ ನೋವಿನ ಸಂಗತಿ ಎನ್ನುವುದನ್ನು ಮರೆಯುವಂತಿಲ್ಲ.

(ಲೇಖಕರ ಶಿವಮೊಗ್ಗದಲ್ಲಿ ಮನೋಚಿಕಿತ್ಸಕರು)

ಅವಘಡಗಳ ಸೂಚನೆಗಳನ್ನು ಗಮನಿಸುತ್ತಿರಿ

ಆಗಾಗ ನಡೆಯುವ ಬಿಸಿಬಿಸಿ ಮಾತುಕತೆಗಳು, ಕೂಗಾಟ, ಹೆಚ್ಚುತ್ತಾ ಹೋಗುವ ಮಕ್ಕಳ ಸಿಟ್ಟು, ಹಟ, ಸಣ್ಣಪುಟ್ಟ ದೈಹಿಕ ಹಿಂಸೆ, ದ್ವೀಪಗಳಂತೆ ಬದುಕುವ ಕುಟುಂಬದ ಸದಸ್ಯರು- ಮುಂತಾದವುಗಳು ಮುಂದಾಗಬಹುದಾದ ತೀವ್ರ ಅವಘಡಗಳಿಗೆ ಸೂಚನೆಯಾಗಿರುತ್ತವೆ. ತಕ್ಷಣ ಎಲ್ಲವನ್ನೂ ಸರಿಪಡಿಸುವ ಪ್ರಯತ್ನಗಳು ಅಪಾಯದ ಸಾಧ್ಯತೆಯನ್ನು ಹೆಚ್ಚಿಸಬಹುದು. ಕುಟುಂಬದ ಹಿರಿಯರ ಅಥವಾ ಸ್ನೇಹಿತರ ಮಧ್ಯಸ್ಥಿಕೆಯಿಂದ ಸಮಸ್ಯೆಗಳು ತಾತ್ಕಾಲಿಕವಾಗಿ ಹಿಂದೆ ಸರಿದಂತೆ ಕಂಡರೂ ನಿಧಾನವಾಗಿ ಅದರ ತೀವ್ರತೆ ಅಧಿಕವಾಗಬಹುದು. ಪತಿ– ಪತ್ನಿಯರ ನಡುವಿನ ಭಿನ್ನಾಭಿಪ್ರಾಯಗಳಿಂದ ಮಕ್ಕಳಲ್ಲಿ ಮೂಡುವ ಅನಾಥಭಾವ ಮತ್ತು ಪರಕೀಯತೆ ಹದಿವಯಸ್ಸಿನಲ್ಲಿ ತಪ್ಪು ನಿರ್ಧಾರಗಳ ಕಡೆ ಅವರನ್ನು ನೂಕಬಹುದು.

ಇಂತಹ ಎಲ್ಲಾ ಸೂಚನೆಗಳಿದ್ದಾಗ ಮೊದಲು ನುರಿತ ಆಪ್ತಸಮಾಲೋಚಕರ ಅಥವಾ ಮನೋಚಿಕಿತ್ಸಕರ ಸಹಾಯ ಪಡೆಯಬೇಕು. ಎಲ್ಲವನ್ನೂ ಕುಟುಂಬದ ನಾಲ್ಕು ಗೋಡೆಗಳ ನಡುವೆ ನಿಭಾಯಿಸಲು ಪ್ರಯತ್ನಿಸಿದಷ್ಟೂ ಸ್ಫೋಟದ ಸಾಧ್ಯತೆಗಳು ಹೆಚ್ಚಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.