ADVERTISEMENT

ಸಾಧಕಿ: ನಗುವಿನೊಂದಿಗೆ ನಾಗಮಣಿ ನವೋಲ್ಲಾಸ..

'ಥ್ಯಾಂಕ್ಸ್ ಹೇಳೋಣ ವಿಥ್‌ ನಾಗು' ಎನ್ನುವ ಪಾಡ್‌ಕಾಸ್ಟ್‌ ಕಾರ್ಯಕ್ರಮದ ಮೂಲಕ ಹೊಸ ಅಲೆ ಸೃಷ್ಟಿಸಿದ್ದಾರೆ

ಪವಿತ್ರಾ ಭಟ್
Published 15 ಮಾರ್ಚ್ 2024, 23:38 IST
Last Updated 15 ಮಾರ್ಚ್ 2024, 23:38 IST
ನಾಗಮಣಿ
ನಾಗಮಣಿ   

ಮುಂದೇನೊ; ಮತ್ತೇನೊ; ಇಂದಿಗಾ ಮಾತೇಕೆ? |
ಸಂದರ್ಭ ಬರಲಿ; ಬಂದಾಗಳಾ ಚಿಂತೆ ||
ಹೊಂದಿಸುವನಾರೊ; ನಿನ್ನಾಳಲ್ಲ; ಬೇರಿಹನು |
ಇಂದಿಗಿಂದಿನ ಬದುಕು – ಮಂಕುತಿಮ್ಮ ||
ಎಂದಿದ್ದಾರೆ ಡಾ.ಡಿ‌.ವಿ. ಗುಂಡಪ್ಪ.

ಬದುಕಿನ ಹಲವು ಮಜಲುಗಳನ್ನು ದಾಟಿ 58ರ ಹರೆಯದಲ್ಲಿರುವ ನಾಗಮಣಿಯವರೂ ಇದೇ ತೆರನಾದ ಮಾತು ಹೇಳುತ್ತಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ 'ಥ್ಯಾಂಕ್ಸ್ ಹೇಳೋಣ ವಿಥ್‌ ನಾಗು' ಎನ್ನುವ ಪಾಡ್‌ಕಾಸ್ಟ್‌ ಕಾರ್ಯಕ್ರಮದ ಮೂಲಕ ಹೊಸ ಅಲೆ ಸೃಷ್ಟಿಸಿದ್ದಾರೆ. ಕ್ಯಾನ್ಸರ್‌ ಬೆನ್ನತ್ತಿದರೂ ಅಮಿತ ಜೀವನೋತ್ಸಾಹದಿಂದ ಪಾಡ್‌ಕಾಸ್ಟ್ ಮೂಲಕ ಪುಟಿದೆದ್ದಿದ್ದಾರೆ. ಹಲವರ ಬದುಕಿಗೆ ಉತ್ಸಾಹ, ಉಲ್ಲಾಸ ತುಂಬುತ್ತಿದ್ದಾರೆ.

====

ADVERTISEMENT

ಮನು‌ಷ್ಯನಿಗೆ ಕಲಿಕೆ ನಿರಂತರ. ಹೀಗಾಗಿಯೇ 51ನೇ ವಯಸ್ಸಿನಲ್ಲಿಯೂ ಹೆದರದೇ ಸಂಗೀತ ತರಗತಿಗೆ ಸೇರಿಕೊಂಡೆ. ಬದುಕಿನ ಜಂಜಾಟಗಳ ನಡುವೆ ಸಮಾಧಾನ ನೀಡಿದ್ದು ಸಂಗೀತ ಮತ್ತು ಒಂದಷ್ಟು ಆಧ್ಯಾತ್ಮಿಕತೆ. ಜಗ್ಗಿ ವಾಸುದೇವ್‌ ಅವರ ಭೇಟಿ ನನ್ನ ಜೀವನ ಪ್ರೀತಿಯನ್ನು ಇಮ್ಮಡಿಗೊಳಿಸಿತ್ತು. ಇಂಥಹ ಸಂದರ್ಭದಲ್ಲಿ ನನ್ನ ಜೀವನದಲ್ಲಿ ಎದುರಾಗಿದ್ದು ಸ್ತನ ಕ್ಯಾನ್ಸರ್‌ ಎನ್ನುವ ದೊಡ್ಡ ಆಘಾತ.

ಕಳೆದ ಡಿಸೆಂಬರ್‌ 1 ರಂದು ವೈದ್ಯರ ಬಳಿ ತೆರಳಿ ತಪಾಸಣೆ ಮಾಡಿಸಿದಾಗ ಬಲಭಾಗದ ಸ್ತನದಲ್ಲಿ ಗಡ್ಡೆ ಬೆಳೆಯಲು ಆರಂಭವಾಗಿರುವುದು ತಿಳಿಯಿತು. ಕಾಯಿಲೆ ಇದ್ದೋ, ಇಲ್ಲದೆಯೋ ಒಂದು ದಿನ ಸಾಯುತ್ತೇವೆ ಎನ್ನುವುದು ನಿಜ. ನನಗೆ ಸಾವಿನ ಭಯವಿಲ್ಲ. ಆದರೆ, ಚಿಕಿತ್ಸೆಯ ವೇಳೆ ಮತ್ತು ನಂತರ ಉಂಟಾಗುವ ನೋವು ಹೆಚ್ಚು ಭಯ ಹುಟ್ಟಿಸಿತ್ತು. ಇದ್ದ ಎಲ್ಲಾ ಶಕ್ತಿಯನ್ನು ಎದುರಿಗೆ ತಂದುಕೊಂಡು ಚಿಕಿತ್ಸೆಗೆ ಒಪ್ಪಿಕೊಂಡೆ. ಶಸ್ತ್ರಚಿಕಿತ್ಸೆ ಮೂಲಕ ಒಂದು ಸ್ತನವನ್ನೂ ತೆಗೆಯಬೇಕಾಯಿತು. ಅರ್ಧನಾರೀಶ್ವರನಿಗಿರುವುದೂ ಒಂದೇ ಸ್ತನ. ಹೀಗಾಗಿ ನೋವಿನ ನಡುವೆಯೂ ಚಿಕ್ಕ ಸಮಾಧಾನ. ಇರುವಷ್ಟು ದಿನ ನಗುತ್ತಾ ಇರಬೇಕು ಎನ್ನುವ ಭಾವ ನನ್ನದು.

ನನ್ನ ಕುಟುಂಬ ನೀಡಿದ ಧೈರ್ಯದಿಂದ ನೋವು ಗೆದ್ದ ಸಂತೋಷ ನನ್ನಲ್ಲಿದೆ. ನನ್ನಂತೆಯೇ ಕ್ಯಾನ್ಸರ್‌ ಇರುವವರು ಆತ್ಮವಿಶ್ವಾಸದಿಂದ ಇರಬೇಕು, ಗೆಲ್ಲಬೇಕು ಎನ್ನುವ ಯೋಚನೆಗೆ ವೇದಿಕೆಯಾಗಿದ್ದು ನಮ್ಮ ಪಾಡ್‌ಕಾಸ್ಟ್‌ ಕಾರ್ಯಕ್ರಮ.

ಮಾತೊಂದೇ ಬಂಡವಾಳವಾಗಿರುವ ನನಗೆ ಸದಾ ಏನಾದರೊಂದು ಮಾಡುತ್ತಿರಬೇಕು ಎನ್ನುವ ಉತ್ಸಾಹ. ಆ ಮೂಲಕ ಆರಂಭವಾಗಿದ್ದು, ‘ಥ್ಯಾಂಕ್ಸ್‌ ಹೇಳೋಣ ವಿಥ್ ನಾಗು’ ಪಾಡ್‌ಕಾಸ್ಟ್‌ ಕಾರ್ಯಕ್ರಮ. ಅತಿಥಿಗಳೊಂದಿಗಿನ ಮಾತುಕತೆಯ ಜತೆಗೆ ಪಾಡ್‌ಕಾಸ್ಟ್‌ನಲ್ಲಿ ಕ್ಯಾನ್ಸರ್‌ ಬಗೆಗಿನ ಜಾಗೃತಿ ಮೂಡಿಸಬೇಕು ಎನ್ನಿಸಿತು. ಹೀಗಾಗಿಯೇ ಸ್ತನ ಕ್ಯಾನ್ಸರ್‌ ಇದ್ದರೆ ಏನೆಲ್ಲಾ ಆಗತ್ತೆ, ಯಾವೆಲ್ಲಾ ರೀತಿಯ ಚಿಕಿತ್ಸೆಗಳಿರುತ್ತವೆ, ನಾನು ನೋವನ್ನು ಗೆದ್ದ ಬಗೆ ಹೇಗೆ ಎಂದು ಸ್ವ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದೇನೆ. ನಮ್ಮ ಜೀವನೋತ್ಸಾಹ, ಬದುಕಿನೆಡೆಗಿನ ಪ್ರೀತಿ, ಆತ್ಮಸ್ಥೈರ್ಯ, ಆಧ್ಯಾತ್ಮಿಕತೆಯಲ್ಲಿನ ನಂಬಿಕೆ ಎಲ್ಲವನ್ನೂ ಎದುರಿಸುವ ಶಕ್ತಿ ನೀಡುತ್ತದೆ ಎನ್ನುವುದು ನನ್ನ ಭಾವ.

ನಮ್ಮ ಸಿಂಫೋನಿ ಆಂಪ್ಸ್ (SymphoNy Amps) ಯುಟ್ಯೂಬ್‌ ಚಾನೆಲ್‌, ಇನ್‌ಸ್ಟಾಗ್ರಾಮ್‌, ಫೇಸ್ಬುಕ್‌ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚು ವೀಕ್ಷಕರನ್ನು ತಲುಪುವ ಪ್ರಯತ್ನ ಮಾಡುತ್ತಿದ್ದೇವೆ. ನನ್ನಂತೆ ಅದೆಷ್ಟೊ ಜನ ಕ್ಯಾನ್ಸರ್‌ಗೆ ಒಳಗಾಗಿ ಗಾಬರಿಯಿಂದ ಜೀವನವೇ ಮುಗಿದುಹೋಯಿತು ಎನ್ನುವ ಭಾವದಲ್ಲಿರುತ್ತಾರೆ. ಅಂತಹವರಿಗೆ ಧೈರ್ಯ ತುಂಬುವ ಸಣ್ಣ ಪ್ರಯತ್ನ ನನ್ನದು. 

ಕಾಯಿಲೆ, ನೋವಿನ ನಡುವೆಯೂ ಸಂಗೀತದಿಂದ ದೂರವಾಗಿಲ್ಲ, ಕಾರ್ಯಕ್ರಮಕ್ಕೆ ಬಂದ ಅತಿಥಿಗಳನ್ನು ಹೊಸ ರೀತಿಯಲ್ಲಿ ಸ್ವಾಗತಿಸಬೇಕೆಂದು ಹುಡುಕುತ್ತಿದ್ದಾಗ ಹಾಡಿನಿಂದಲೇ ಯಾಕೆ ಬರಮಾಡಿಕೊಳ್ಳಬಾರದು ಎನಿಸಿತು. ಹೀಗಾಗಿ ಸಿನಿಮಾ, ಭಾವಗೀತೆ, ಜಾನಪದ ಗೀತೆ, ವಚನ... ಹೀಗೆ ಯಾವುದಾದರೂ ಸರಿ ನನ್ನ ಕಂಠದ ಮೂಲಕ ಅವರನ್ನು ಸ್ವಾಗತಿಸುತ್ತೇನೆ.  ಕಾರ್ಯಕ್ರಮಕ್ಕೆ ಬರುವ ಪ್ರತಿ ಅತಿಥಿ ನನಗೆ ವಿಶೇಷ. ಪ್ರತಿಯೊಬ್ಬರ ಬಳಿಯೂ ಹೊಸತನ. ಅವರ ಬದುಕಿನ ಏರುಪೇರಿನ ಹಾದಿಯ ಬಗ್ಗೆ ಕೇಳಿದಾಗ ನನ್ನ ಉತ್ಸಾಹದ ಚಿಲುಮೆ ಪುಟಿಯುತ್ತದೆ. 

ಪಾಡ್‌ಕಾಸ್ಟ್‌ ಕಾರ್ಯಕ್ರಮಕ್ಕೆ ‘ಥ್ಯಾಂಕ್ಸ್‌ ಹೇಳೋಣ ವಿಥ್ ನಾಗು’ ಹೆಸರು ಸೂಚಿಸಿದ್ದು ನನ್ನ ಮಗ. ‘ಅಮ್ಮಾ ನೀವು ಯಾವಾಗಲೂ, ಯಾರು ಸಿಕ್ಕಿದರೂ ಥ್ಯಾಂಕ್ಸ್, ಥ್ಯಾಂಕ್ಯೂ ಹೇಳುತ್ತಲೇ ಇರುತ್ತೀರಿ. ಹೀಗಾಗಿ ಅದನ್ನೇ ಪಾಡ್‌ಕಾಸ್ಟ್‌ ಹೆಸರಾಗಿಸೋಣ’ ಎಂದಿದ್ದ. 

ಈಗಿನ ಯುವಜನತೆಗೂ ನಾನು ಹೇಳುವುದಿಷ್ಟೆ ಇರುವುದು ಒಂದೇ ಜೀವನ, ಒತ್ತಡ, ಸವಾಲು ಸಹಜ, ಅದರೆಡೆಗೆ ಒತ್ತು ನೀಡದೆ ಇರುವಷ್ಟು ದಿನ ಖುಷಿಯಿಂದ ಸಾಗಿ. ಆಗ ಮಾತ್ರ ಬದುಕಿಗೊಂದು ಸಾರ್ಥಕತೆ ದೊರೆಯುತ್ತದೆ.

ನಾಗಮಣಿ
ನಾಗಮಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.