ADVERTISEMENT

ಸ್ಪಂದನ | HPV ವ್ಯಾಕ್ಸಿನ್ ಎಂದರೇನು? ಯಾವಾಗ ತೆಗೆದುಕೊಳ್ಳಬೇಕು?

ಡಾ.ವೀಣಾ ಎಸ್‌ ಭಟ್ಟ‌
Published 14 ಮಾರ್ಚ್ 2025, 22:21 IST
Last Updated 14 ಮಾರ್ಚ್ 2025, 22:21 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಮಹಿಳೆಯರನ್ನು ಭಾದಿಸುವ ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣವಾಗಿರುವ ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಎಂದರೆ ಏನು, ಯಾವಾಗಲೆಲ್ಲ ಲಸಿಕೆ ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.

9ನೇ ತರಗತಿ ಕಲಿಯುತ್ತಿದ್ದೇನೆ. ಗರ್ಭಕಂಠದ ಕ್ಯಾನ್ಸರ್‌ಗೆ ಲಸಿಕೆ ಹಾಕಿಸಿಕೊಳ್ಳಲು ಶಾಲೆಯಲ್ಲಿ ಒತ್ತಡ ಹಾಕುತ್ತಿದ್ದಾರೆ. ಇಷ್ಟು ಚಿಕ್ಕವಯಸ್ಸಿನಲ್ಲಿ ಲಸಿಕೆ ಹಾಕಿಸಬಹುದೇ?. ನಮ್ಮಮ್ಮನಿಗೆ 38 ವರ್ಷ ಅವರೂ ಹಾಕಿಸಬಹುದೇ? ಈ ಬಗ್ಗೆ ವಿವರವಾಗಿ ತಿಳಿಸಿ.   ಅರುಣಾ, ಊರು ತಿಳಿಸಿಲ್ಲ. 

ADVERTISEMENT

ಸರ್ವಿಕಲ್‌ ಕ್ಯಾನ್ಸರ್‌ ಅಥವಾ ಗರ್ಭಕಂಠದ ಕ್ಯಾನ್ಸರ್‌ ಭಾರತದಲ್ಲಿ ಮಹಿಳೆಯರನ್ನು ಭಾದಿಸುತ್ತಿರುವ ಎರಡನೆಯ ಅತಿ ಹೆಚ್ಚು  ಕ್ಯಾನ್ಸರ್ ಆಗಿದೆ.  ಅತಿ ಹೆಚ್ಚು ಗರ್ಭಕಂಠದ ಕ್ಯಾನ್ಸರ್‌ಗೆ ಕಾರಣ (ಶೇ 70ಕ್ಕೂ ಹೆಚ್ಚು) ಹ್ಯೂಮನ್ ಪ್ಯಾಪಿಲೋಮ ವೈರಸ್ (ಎಚ್.ಪಿ.ವಿ) ಇವುಗಳಲ್ಲಿ ಹಲವು ವಿಧಗಳಿವೆ. ಇವು ಎಲ್ಲಾ ಮಹಿಳೆಯರಲ್ಲೂ ಇರುವಂತಹದ್ದೇ. ಪ್ರಮುಖವಾಗಿ ಚರ್ಮದಿಂದ ಚರ್ಮಕ್ಕೆ ಹರಡುವುದರಿಂದ ಲೈಂಗಿಕಕ್ರಿಯೆ ಸೋಂಕು ಹರಡುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಮತ್ತು ಈ ಸೋಂಕು ಲೈಂಗಿಕವಾಗಿ ಸಕ್ರಿಯವಾಗಿರುವವರಿಗೆಲ್ಲಾ ಒಂದಲ್ಲ ಒಂದು ಸಂದರ್ಭಗಳಲ್ಲಿ ಕಾಡಬಹುದು. ಆದರೆ ಸ್ವಾಭಾವಿಕ ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಾಗ ಈ ಎಚ್.ಪಿ.ವಿ ಸೋಂಕು ಯಾವುದೇ ತೊಂದರೆಯನ್ನುಂಟು ಮಾಡುವುದಿಲ್ಲ. ಆದರೆ ಹಲವು ಕಾರಣಗಳಿಂದ ರೋಗನಿರೋಧಕ ಶಕ್ತಿ ಕಡಿಮೆಯಾದ ಮಹಿಳೆಯರಲ್ಲಿ ಎಚ್.ಪಿ.ವಿ ವೈರಸ್ ತನ್ನ ಚಟುವಟಿಕೆ ಹೆಚ್ಚಿಸಿ, ಸೂಕ್ತ ಸಮಯದಲ್ಲಿ ಪತ್ತೆಯಾಗದೇ, ಚಿಕಿತ್ಸೆಕೊಡದೇ ಹೋದಾಗ ಕ್ಯಾನ್ಸರ್ ಲಕ್ಷಣಗಳು ಕಂಡುಬರುವುದು.

ಸರ್ವಿಕಲ್ ಕ್ಯಾನ್ಸರ್‌ಕಾರಕ ಅಪಾಯಕಾರಿ ಅಂಶಗಳೆಂದರೆ, ಬಹುಮಂದಿಯೊಡನೆ ಸ್ವಚ್ಛಂದದ ಲೈಂಗಿಕ ಸಂಪರ್ಕವಿದ್ದಾಗ, ಚಿಕ್ಕವಯಸ್ಸಿನಲ್ಲಿಯೇ ಲೈಂಗಿಕ ಚಟುವಟಿಕೆ ಆರಂಭಿಸಿದ್ದಾಗ, ಬಹಳ ಮಕ್ಕಳನ್ನು ಪದೇ ಪದೇ ಅಂತರವಿಲ್ಲದೇ ಹಡೆದಾಗ, ಧೂಮಪಾನ, ಮಧ್ಯಪಾನ, ತಂಬಾಕು ಸೇವಿಸುವ ಮಹಿಳೆಯರಲ್ಲಿ, ಲೈಂಗಿಕ ರೋಗ ಇರುವವರಲ್ಲಿ, ದೀರ್ಘಾವಧಿ ಸಂತಾನ ನಿರೋಧ ಗುಳಿಗೆಗಳನ್ನು ಬಾಯಿಯಿಂದ ನುಂಗುವುದರಿಂದ, ಕುಂದಿದ ರೋಗನಿರೋದಕಶಕ್ತಿ, ಶುಚಿತ್ವದ ಕೊರತೆ, ಅಪೌಷ್ಟಿಕತೆ. 
 ಈ ಕ್ಯಾನ್ಸರ್‌ನೊಂದಿಗೆ ಯೋನಿ ಮತ್ತು ಪುರುಷ ಸ್ತ್ರೀ ಜನಾನಾಂಗದ ನರೋಲಿಗಳ ಸಮಸ್ಯೆಗಳು, ಮತ್ತು ಗುದದ್ವಾರದ ಸಮಸ್ಯೆಗಳು, ಓರೋಫ್ಯಾರಂಜಿಯಲ್ ಕ್ಯಾನ್ಸರ್‌ಗಳು ಉಂಟಾಗಬಹುದು.  ಲೈಂಗಿಕವಾಗಿ ಸಕ್ರಿಯವಾಗುವ ಮೊದಲೇ 9ರಿಂದ 14ವರ್ಷದೊಳಗೆ ಹೆಣ್ಣುಮಕ್ಕಳಿಗೆ ಲಸಿಕೆ ನೀಡಲು ವಿಶ್ವ ಆರೋಗ್ಯಸಂಸ್ಥೆ  ಸೂಚಿಸಿದೆ. ಇವರು 0 ಮತ್ತು 6 ತಿಂಗಳಲ್ಲಿ 2 ಡೋಸ್ ವೇಳಾಪಟ್ಟಿಯ ಪ್ರಕಾರ ಕೊಡಬೇಕು. 15 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಹಿಳೆಯರ ಮತ್ತು ಪುರುಷರಿಗೆ 3 ಡೋಸ್ ವೇಳಾಪಟ್ಟಿ ಅಂದರೆ ಎಚ್.ಪಿ.ವಿ ಲಸಿಕೆ 0, 2 ಮತ್ತು 6ತಿಂಗಳಲ್ಲಿ ನೀಡಬೇಕು. ಶೇಕಡ 80ರಷ್ಟು ಹೆಣ್ಣುಮಕ್ಕಳಿಗೆ ಲಸಿಕೆ ನೀಡುವುದರಿಂದ ಗಂಡುಮಕ್ಕಳಿಗೆ ಎಚ್.ಪಿ.ವಿ ಸೋಂಕು ಹರಡುವಿಕೆ ತಡೆಯಬಹುದಾಗಿದೆ.

ದ್ವಿತೀಯ ಹಂತದಲ್ಲಿ 15ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳು, ಗಂಡುಮಕ್ಕಳು, ಪುರುಷರು ಮತ್ತು ಸಲಿಂಗಕಾಮಿ ಪುರುಷರಿಗೆ ಆದ್ಯತೆ ನೀಡಲಾಗುತ್ತದೆ. ಇದನ್ನು ಸೂಕ್ತ ತಾಪಮಾನದಲ್ಲಿ ಸಂಗ್ರಹಿಸಿ ಕೊಟ್ಟಾಗ ಅಡ್ಡಪರಿಣಾಮಗಳು ಕಡಿಮೆ. ಕೆಲವರಲ್ಲಿ ಸಣ್ಣ ಪ್ರಮಾಣದ ತಲೆನೋವು, ತಲೆಸುತ್ತು, ಹೊಟ್ಟೆನೋವು ವಾಕರಿಕೆ ಬರುವ ಅನುಭವಗಳಾಗಬಹುದು. ಜಾಗತಿಕ ವ್ಯಾಕ್ಸಿನ್ ಸುರಕ್ಷತಾ ಸಮಿತಿಯು ಯಾವುದೇ ರೀತಿಯ ಅಪಾಯಕಾರಿ ತೊಂದರೆಗಳನ್ನು ಗುರುತಿಸಿಲ್ಲ. ಗರ್ಭಾವಸ್ಥೆಯಲ್ಲಿ ಈ ವ್ಯಾಕ್ಸಿನ್ ಬೇಡ. ಎದೆಹಾಲುಣಿಸುವಾಗ ಕೊಡಬಹುದು. ಆದರೆ ನೆನಪಿಡಬೇಕಾದ ಅಂಶಗಳೆಂದರೆ ಕೇವಲ ಎಚ್.ಪಿ.ವಿ ಲಸಿಕೆ ಪಡೆದ ಮಾತ್ರಕ್ಕೆ-ನಿರ್ಲಕ್ಷ್ಯ ಸಲ್ಲದು. ಸ್ವಚ್ಛಂದ ಲೈಂಗಿಕತೆಯೂ ಸೇರಿ ಇನ್ನಿತರೆ ಮೇಲೆ ತಿಳಿಸಿದ ಅಪಾಯಕಾರಿ ಅಂಶಗಳನ್ನು ದೂರವಿಟ್ಟು ಕಾಲ ಕಾಲಕ್ಕೆ ವಿಶ್ವಾಸರ್ಹ ಸ್ಕ್ರೀನಿಂಗ್‌ ಪರೀಕ್ಷೆಯಾದ ಪ್ಯಾಪ್‌ಸ್ಮಿಯರ್ ಪರೀಕ್ಷೆ ನಿಮ್ಮ ತಾಯಿ ಹಾಗೂ ಅವರ ವಯಸ್ಸಿನವರೆಲ್ಲ ತಜ್ಞರ ಮೇಲ್ವಿಚಾರಣೆಯಲ್ಲಿ ಆಗಾಗ್ಗೆ ತಪಾಸಣೆ ಅತ್ಯಗತ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.