ADVERTISEMENT

ದುಂಡು ಮಲ್ಲಿಗೆ.. ಸೂಜಿ, ಜಾಜಿ ಮಲ್ಲಿಗೆ

ಬಿರುಬೇಸಿಗೆಯ ಇಳಿಸಂಜೆಯಲಿ ಬೀಸುವ ಗಾಳಿಗೆ ಮಲ್ಲಿಗೆಯ ಕಂಪೂ ಸೇರಿದರೆ... ಆಹಹಾ... ಬದುಕು ಅದೆಷ್ಟು ಆಹ್ಲಾದಕರವೆನಿಸುತ್ತದೆ. ಹೆಣ್ಮಕ್ಕಳೆಂದರೆ ಹೂವಿಗೆ ಮನಸೋಲದವರೆ?

ಪ್ರಜಾವಾಣಿ ವಿಶೇಷ
Published 26 ಏಪ್ರಿಲ್ 2024, 21:38 IST
Last Updated 26 ಏಪ್ರಿಲ್ 2024, 21:38 IST
<div class="paragraphs"><p>ಹೆಣ್ಮಕ್ಕಳೆಂದರೆ ಹೂವಿಗೆ ಮನಸೋಲದವರೆ?</p></div>

ಹೆಣ್ಮಕ್ಕಳೆಂದರೆ ಹೂವಿಗೆ ಮನಸೋಲದವರೆ?

   

ಬಿರುಬೇಸಿಗೆಯ ಇಳಿಸಂಜೆಯಲಿ ಬೀಸುವ ಗಾಳಿಗೆ ಮಲ್ಲಿಗೆಯ ಕಂಪೂ ಸೇರಿದರೆ... ಆಹಹಾ... ಬದುಕು ಅದೆಷ್ಟು ಆಹ್ಲಾದಕರವೆನಿಸುತ್ತದೆ.

ಯುಗಾದಿಯ ನಂತರ ಅಲ್ಲಲ್ಲಿ ಹಸಿರು ಗಿಡದೊಳಗೆ ಮೊಸರು ಚೆಲ್ಲಿದಂತೆ ಅರಳುವ ಅಚ್ಚಬಿಳುಪಿನ ಹೂ ಮಲ್ಲಿಗೆ. ಕವಿಗಳ, ರಸಿಕರ ಕಣ್ಮನ ಸೆಳೆದು, ಹೃನ್ಮನ ಬೆಳಗಿದ ಹೆಮ್ಮೆ ಈ ಹೂವಿಗಿದೆ. 

ADVERTISEMENT

ತೀರ ತಂಪಾಗಿ, ತೆಳುವಾಗಿ ಘಮ ಪಸರಿಸುವ ಈ ಗುಣ ಮಲ್ಲಿಗೆಗೆ ಅದೆಲ್ಲಿಂದ ಬಂದಿತೊ. ಆದರೆ ಇಳಿ ಸಂಜೆ ಅಥವಾ ಬೆಳಗಿನ ಜಾವ ಮೊಗ್ಗುಗಳನ್ನು ಬಳ್ಳಿಗಳಿಂದ, ಗಿಡಗಳಿಂದ ಬಿಡಿಸಿಕೊಂಡು ಬಂದರೆ ಅವನ್ನು ಕಟ್ಟುವುದೇ ಒಂದು ಕಲೆಯಾಗಿದೆ.

ಭಟ್ಕಳ, ಸಂಕರಪುರದ ಸೂಜಿ ಮಲ್ಲಿಗೆ, ಎಳೆಗೂಸಿನ ಮುಂದಲೆಯ ಮೇಲೆ ಬೀಳುವಷ್ಟೇ ತೆಳುವಾದ ನಾಜೂಕಿನ ಜಾಜಿ ಮಲ್ಲಿಗೆ, ಮೈದುಂಬಿಕೊಂಡು, ದುರದುಂಡಿಯಂಥ ದುಂಡುಮಲ್ಲಿಗೆ, ಸುವಾಸನೆಯಿಂದಲೇ ಹಾವನ್ನೂ ಸೆಳೆಯುತ್ತದೆ ಎಂಬ ಕುಖ್ಯಾತಿ ಇರುವ ಏಳು ಸುತ್ತಿನ ಮಲ್ಲಿಗೆ, ಭದ್ರಕೋಟೆಯಲ್ಲಿ ಮಕರಂದವನ್ನೂ, ಮಾಧುರ್ಯವನ್ನೂ ಭದ್ರಗೊಳಿಸುವ ಹದಿಮೂರು, ಹದಿನಾರು ಸುತ್ತಿನ ಮಲ್ಲಿಗೆಗಳೂ ಸಿಗುತ್ತವೆ.

ಇವನ್ನೆಲ್ಲ ಬಿಡಿಸಿ, ಬಾಳೆನಾರಿನಲ್ಲಿ, ಒದ್ದೆ ದಾರದಲ್ಲಿ ಕಟ್ಟುವುಉ, ಪೋಣಿಸುವುದು ಒಂದು ಕಲೆ. ಸೂಜಿ ಮತ್ತು ಜಾಜಿ ಮಲ್ಲಿಗೆಯನ್ನು ಒಂದೇ ಬದಿಗೆ ಕಟ್ಟಿ, ತುರುಬಿಗೆ ಸುತ್ತಿಕೊಳ್ಳುವ ಚಂದ್ರಮಾಲೆ ಸದಾಕಾಲದ ಮಹಿಳೆಯರ ಕನಸಾಗಿದೆ. 

ಬೇಸಿಗೆ ರಜೆಯಲ್ಲಿ ಉಂಡು, ಪಡಸಾಲೆಯಲ್ಲಿ ಮೊಗ್ಗಿರಿಸಿಕೊಂಡು, ಹಳೆಯ ಪೋಸ್ಟ್‌ಕಾರ್ಡುಗಳನ್ನು ಕತ್ತರಿಸಿ, ಉದ್ದ ಜಡೆ ಹೆಣೆಯುವಂತೆ ಹೂಗಳನ್ನು ಪೋಣಿಸಿ, ಮೊಗ್ಗಿನ ಜಡೆ ಹೆಣೆದು, ಹೆಣ್ಣುಮಕ್ಕಳಿಗೆ ಮುಡಿಸುವ ಸಂಭ್ರಮ ಎಂದಿಗೂ ತೀರದು. ಹಾಗೆ ಹೂ ಮುಡಿಸಿದ ನಂತರ ಕನ್ನಡಿಹ ಮುಂದೆ ನಿಲ್ಲಿಸಿ ಫೋಟೊ ತೆಗೆಯುವುದು ತೆಗೆಸುವುದೇ ಒಂದು ಹಬ್ಬವಾಗಿತ್ತು. ಈಗಲೂ ಮೋಟು ಕೂದಲಿದ್ದರೂ ಸರಿ, ಒಂದು ಫೋಟೊಕ್ಕಾದರೂ ಮೊಗ್ಗಿನ ಜಡೆ ಹೆಣೆಸುವುದು ಕಣ್ಮರೆಯಾಗಿಲ್ಲ.

ಹೆಣ್ಮಕ್ಕಳೆಂದರೆ ಹೂವಿಗೆ ಮನಸೋಲದವರೆ? ಈ ಹೂವಿನ ಘಮಕ್ಕೂ ಪ್ರೀತಿಗೂ ಅತಿ ಮಧುರ ಸಂಬಂಧ. ಮನದನ್ನೆಗೆ ಪೊಟ್ಟಣವೊಂದರಲ್ಲಿ ಮಲ್ಲಿಗೆ ದಂಡೆ ಕಟ್ಟಿಸಿಕೊಂಡು ಹೊರಟರೆ ಎಲ್ಲ ಜಗಳಗಳೂ ಅಲ್ಲಲ್ಲೆ ಮಾಧುರ್ಯದಲ್ಲಿ ಬದಲಾಗುತ್ತವೆ. 

ಮೈಸೂರಿನ ದುಂಡುಮಲ್ಲಿಗೆ, ಭಟ್ಕಳದ ಸೂಜಿಮಲ್ಲಿಗೆ, ಮಂಗಳೂರಿನ ಜಾಜಿ ಮಲ್ಲಿಗೆ, ಹೂವಿನಹಡಗಲಿಯ ಮಲ್ಲಿಗೆ ಹೀಗೆ ಊರುಗಳ ಹೆಸರಿನೊಂದಿಗೆ ತಳಕು ಹಾಕಿಕೊಂಡಿರುವ ಒಂದೊಂದು ಬಗೆಯ ಮಲ್ಲಿಗೆಯೊಂದಿಗೂ ಹೆಣ್ಣುಮಕ್ಕಳ ಸಾಕಷ್ಟು ನೆನಪುಗಳು ತಳಕು ಹಾಕಿಕೊಂಡಿರುತ್ತವೆ. ಸೂಜಿ ಮಲ್ಲಿಗೆ ಮತ್ತು ದುಂಡುಮಲ್ಲಿಗೆಯಿಂದಲೂ ಮೊಗ್ಗಿನ ಜಡೆ ಹೆಣೆಯುವುದು. ಜೊತೆಗೆ ಕನಕಾಂಬರ, ಔದುಂಬರವನ್ನೂ ಸೇರಿಸಿದರಂತೂ ಇದರ ಸೊಬಗು ಸ್ವರ್ಗಕ್ಕೆ ಸಮ.

 ಬೇಸಿಗೆಯನ್ನು ಸಹನೀಯಗೊಳಿಸುವ ಈ ಹೂಗಳು ಮದುವೆಯ ಸಮಾರಂಭದಲ್ಲಿ ಹೊಸಕಳೆಯನ್ನ ತಂದು ಕೊಡುತ್ತವೆ. ಬಾಂಧವ್ಯದ ಬೆಸುಗೆ ಭದ್ರಗೊಳಿಸುತ್ತಲೇ ಮಾಧುರ್ಯವನ್ನೂ ತಂದು ಕೊಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.