ADVERTISEMENT

ಅವರವರ ಭಾವಕ್ಕೆ..

ಪವಿತ್ರಾ ರಾಘವೇಂದ್ರ ಶೆಟ್ಟಿ
Published 2 ಜೂನ್ 2019, 6:31 IST
Last Updated 2 ಜೂನ್ 2019, 6:31 IST
ಚಿತ್ರ: ರಾಮಕೃಷ್ಣ ಸಿದ್ರಪಾಲ
ಚಿತ್ರ: ರಾಮಕೃಷ್ಣ ಸಿದ್ರಪಾಲ   

ಭಾರತದ ಸ್ಪ್ರಿಂಟರ್‌ ದ್ಯುತಿ ಚಾಂದ್ ಇತ್ತೀಚೆಗೆ ನೀಡಿದ ಬಹಿರಂಗ ಹೇಳಿಕೆ ಬಹಳಷ್ಟು ಸುದ್ದಿ ಮಾಡಿತು. ತಾನೊಬ್ಬಳು ಸಲಿಂಗಿ; ಕಳೆದ ಐದು ವರ್ಷಗಳಿಂದ ತನ್ನೂರಿನ ಯುವತಿಯೊಬ್ಬಳ ಜೊತೆ ಸಂಬಂಧ ಹೊಂದಿದ್ದು, ಮುಂದಿನ ಬದುಕನ್ನು ಆಕೆಯ ಜೊತೆಯೇ ಕಳೆಯುವುದಾಗಿ ಹೇಳಿದ ದ್ಯುತಿ, ತನ್ನ ಜೀವನವನ್ನು ಯಾರೊಂದಿಗೆ ಹಂಚಿಕೊಳ್ಳಬೇಕು ಎಂದು ನಿರ್ಧರಿಸುವ ಹಕ್ಕು ತನ್ನದೇ ಎಂದು ದಿಟ್ಟವಾಗಿ ಹೇಳಿಕೊಂಡಿದ್ದರು.

***

ಕಳೆದ ವರ್ಷ ಬಿಡುಗಡೆಯಾದ ಬಾಲಿವುಡ್‌ ಚಿತ್ರ ‘ವೀರೆ ದಿ ವೆಡ್ಡಿಂಗ್‌’ ನ ದೃಶ್ಯವೊಂದರಲ್ಲಿ ನಟಿ ಸ್ವರಾ ಭಾಸ್ಕರ್‌ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ ದೃಶ್ಯವೊಂದು ಸಾಕಷ್ಟು ಸಂಚಲನ ಉಂಟುಮಾಡಿತ್ತು. ನಟಿ ಸ್ವರಾ ಸಾಕಷ್ಟು ಟ್ರೋಲ್ ಆಗಿದ್ದರು. ‘ಯಾರವಳು? ಏನು ಮಾಡುತ್ತಿದ್ದಾಳೆ ಎಂದು ನಾನು ಗೊಂದಲಕ್ಕೀಡಾಗಿದ್ದೇನೆ’ ಎಂದು ಅಭಿಮಾನಿಯೊಬ್ಬ ವ್ಯಂಗದ ಮಾತನ್ನು ಈ ನಟಿಯ ತಂದೆಗೆ ನಾಟಿದ್ದ. ಆದರೆ ಗಟ್ಟಿಗಿತ್ತಿಯಾದ ಈ ನಟಿ ‘ನಾನೊಬ್ಬಳು ಕಲಾವಿದೆ. ಹಸ್ತಮೈಥುನ ಸಾಧನ ಬಳಸಿಕೊಳ್ಳುತ್ತಿರುವ ರೀತಿ ನಟನೆ ಮಾಡಿದ್ದೇನೆ. ಮುಂದಿನ ಬಾರಿ ಏನೇ ಕೇಳುವುದಿದ್ದರೂ ನೇರವಾಗಿ ನನ್ನನ್ನೇ ಕೇಳಿ. ತಂದೆಯನ್ನು ಕೇಳಬೇಕೆಂದಿಲ್ಲ’ ಎಂದು ಪ್ರತ್ಯುತ್ತರ ನೀಡಿದ್ದರು. ಕಳೆದ ಲೋಕಸಭೆ ಚುನಾವಣಾ ಪ್ರಚಾರದಲ್ಲೂ ಅದನ್ನೇ ಟ್ರೋಲ್‌ ಮಾಡಲಾಗಿತ್ತು. ಆದರೂ ಎದೆಗುಂದದ ಸ್ವರಾ ಟ್ವಿಟರ್‌ನಲ್ಲಿ ದಿಟ್ಟವಾಗಿ ಉತ್ತರ ನೀಡಿದ್ದರು.

ADVERTISEMENT

***

ನೆಟ್‌ಫ್ಲಿಕ್ಸ್‌ನಲ್ಲಿ ‘ಲಸ್ಟ್ ಸ್ಟೋರೀಸ್‌’ ಚಿತ್ರ ಬಿಡುಗಡೆಯಾಗಿ ವಾರ ಕಳೆದರೂ ಅದರಲ್ಲಿನ ದೃಶ್ಯ ವೀಕ್ಷಕರ ಕಣ್ಣಿನಿಂದ ಮರೆಯಾಗಲಿಲ್ಲ. ಅದರಲ್ಲಿ ನಟಿ ಕಿಯಾರಾ ಅಡ್ವಾಣಿ, ಹೆಣ್ಣು ತನ್ನ ಹಸಿವು, ನಿದ್ರೆ ಪೂರೈಸಿಕೊಳ್ಳುವಂತೆ ಲೈಂಗಿಕ ಬಯಕೆಯನ್ನೂ ತೀರಿಸಿಕೊಳ್ಳುತ್ತಾಳೆ ಎಂಬುದನ್ನು ನೈಜವಾಗಿ ನಟಿಸಿದ್ದರು. ‘ನನ್ನ ಅಜ್ಜಿಯೊಂದಿಗೆ ಕುಳಿತು ನಾನೇ ನಟಿಸಿದ ಹಸ್ತಮೈಥುನದ ದೃಶ್ಯ ನೋಡಿದೆ. ನನ್ನ ಕುಟುಂಬದವರು ಜತೆಯಾಗಿಯೇ ನೋಡಿದರು. ಪ್ರತಿಯೊಬ್ಬರೂ ನನ್ನ ನಟನೆಯನ್ನು ಕಂಡು ಕೊಂಡಾಡಿದರು’ ಎಂದು ಕಿಯಾರಾ ಹೇಳಿಕೊಂಡಿದ್ದರು.

ಈ ಮೇಲಿನ ಎಲ್ಲಾ ಸನ್ನಿವೇಶಗಳನ್ನು ಸ್ಥೂಲವಾಗಿ ಅವಲೋಕಿಸಿ. ಬೆಡ್ ರೂಂ ಲೈಟ್ ಆಫ್ ಆದ ಬಳಿಕದ ಸಂಗತಿಗಳನ್ನು ಹೀಗೆ ಬಹಿರಂಗವಾಗಿ ಹೇಳಿಕೊಂಡ ಉದಾಹರಣೆಗಳು ಈ ಹಿಂದೆ ನಿಮಗೆಲ್ಲೂ ಸಿಗದು. ಅದೂ ಹೆಣ್ಣೊಬ್ಬಳು ತನ್ನ ಲೈಂಗಿಕ ಬಯಕೆಗಳ, ಚಟುವಟಿಕೆಗಳ ಬಗ್ಗೆ ಸಾರ್ವಜನಿಕವಾಗಿ ಹೇಳಿಕೊಂಡಿದ್ದು ಈ ಹಿಂದೆ ಬಹಳ ಕಡಿಮೆ. ಆದರೆ ಈಗ ಕಾಲ ಬದಲಾಗಿದೆ. ‘ನಾತಿಚರಾಮಿ’ ಚಿತ್ರದಲ್ಲಿ ನಾಯಕಿ ಸೆಕ್ಸ್‌ ಟಾಯ್‌ ಅನ್ನು ಆನ್‌ಲೈನ್‌ನಲ್ಲಿ ಖರೀದಿಸುವ ದೃಶ್ಯ ಅತಿ ಸಹಜ ಎಂಬಂತೆ ಚಿತ್ರದಲ್ಲಿ ಬೆರೆತುಹೋಗಿದೆ. ಅದೇ ರೀತಿ ಮುಜುಗರ ಎಂಬಂತಿದ್ದ ವಿಷಯಗಳನ್ನು ಹೆಣ್ಣುಮಕ್ಕಳು ನಾಲ್ಕು ಗೋಡೆಗಳಾಚೆ ಬಂದು ಮುಕ್ತವಾಗಿ ಮಾತನಾಡಲಾರಂಭಿಸಿದ್ದಾರೆ.

ಹಿಂದೆ ಹೆಣ್ಣು ತನಗನಿಸಿದ್ದನ್ನು ಹೇಳಲು ಒಂದು ವೇದಿಕೆ ಇರಲಿಲ್ಲ. ಜತೆಗೆ ಲೈಂಗಿಕ ವಿಷಯಕ್ಕೆ ಸಂಬಂಧಪಟ್ಟಂತೆ ಅವಳೇನಾದರೂ ಮಾತನಾಡಿದರೆ ಅದು ಘೋರ ಅಪರಾಧದಂತೆ ಬಿಂಬಿಸಲಾಗುತ್ತಿತ್ತು. ಅಂಥವರಿಗೆ ಗಂಡಸರ ಜತೆ ಮನೆಯ ಹಿರಿಯ ಮಹಿಳೆಯರಿಂದಲೇ ವಿರೋಧ ವ್ಯಕ್ತವಾಗುತ್ತಿತ್ತು. ಜತೆಗೆ ಬಜಾರಿ, ಗಂಡುಭೀರಿ ಎಂಬಿತ್ಯಾದಿ ಹೆಸರು ಕೂಡ ಸೇರಿಕೊಳ್ಳುತ್ತಿತ್ತು. ‘ಲಂಗುಲಗಾಮಿಲ್ಲದ ಯುವತಿಯರು ಸಮಾಜಕ್ಕೊಂದು ಕಂಟಕ’ ಎಂಬಂತೇ ಬಿಂಬಿಸಿದ ಉದಾಹರಣೆಗಳು 17ನೇ ಶತಮಾನದಲ್ಲೇ ಸಿಗುತ್ತವೆ’ ಎಂಬ ಅಂಶ ಕ್ಯಾರೋಲ್‌ ಡೈಹೌಸ್‌ ಬರೆದ ‘ಹಾರ್ಟ್‌ ಥ್ರೋಬ್‌: ಎ ಹಿಸ್ಟರಿ ಆಫ್‌ ವಿಮೆನ್‌ ಅಂಡ್‌ ಡಿಸೈರ್‌’ ಪುಸ್ತಕದಲ್ಲಿ ದಾಖಲಾಗಿದೆ.

ತನ್ನ ಲೈಂಗಿಕತೆ, ವೈಯಕ್ತಿಕ ವಿಷಯಗಳ ಕುರಿತು ಭಾವನೆಗಳನ್ನು ವ್ಯಕ್ತಪಡಿಸುವ ಯುವತಿಯರನ್ನು ವ್ಯಭಿಚಾರಿಣಿಯೆಂದೂ, ದಾಂಪತ್ಯ ಜೀವನದಲ್ಲಿ ಎಷ್ಟು ನೋವಿದ್ದರೂ ಅಡಗಿಸಿಕೊಂಡು ಜೀವನ ಸಾಗಿಸುವವರನ್ನು ಗೌರವಾನ್ವಿತೆ ಎಂಬಂತೆಯೂ ಕಾಣುವ ರೀತಿ ಇತ್ತೀಚಿನವರೆಗೂ ಇತ್ತು.

ಮುಕ್ತ ಅಭಿಪ್ರಾಯ

ಮೊದಲೆಲ್ಲಾ ಯಾವುದೇ ಪತ್ರಿಕೆ, ನಿಯತಕಾಲಿಕೆಗಳ ಪುಟ ತಿರುವಿದಾಗ ಅಲ್ಲಿ ಗಂಡೊಬ್ಬ ತನ್ನ ಲೈಂಗಿಕ ಸಮಸ್ಯೆಗಳನ್ನು ಯಾವುದೇ ಮುಜುಗರವಿಲ್ಲದೇ ಹರವಿ ಅದಕ್ಕೆ ಸಂಬಂಧಪಟ್ಟ ಪರಿಹಾರ ಕಂಡುಕೊಳ್ಳುತ್ತಿದ್ದ. ಆದರೆ ಈಗ ಕಾಲ ಬದಲಾಗಿದೆ. ಹೆಣ್ಣು ತನ್ನ ಲೈಂಗಿಕ ಭಾವನೆಗಳು, ಸಮಸ್ಯೆಗಳನ್ನು ಯಾವುದೇ ಮುಲಾಜಿಲ್ಲದೇ ಹೇಳಿಕೊಳ್ಳುತ್ತಿದ್ದಾಳೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಅಭಿಪ್ರಾಯವನ್ನು ಸರಳವಾಗಿ ಹರಿಯಬಿಡುತ್ತಾಳೆ. ಗೆಳೆಯರ ವಲಯದಿಂದ ಸಲಹೆಗಳನ್ನೂ ಪಡೆದುಕೊಳ್ಳುತ್ತಾಳೆ.

ತನ್ನ ಖಾಸಗಿ ಸಮಸ್ಯೆ, ತನ್ನ ಅಭಿಪ್ರಾಯ, ಸಂಗಾತಿಯ ಆಯ್ಕೆ ಇವು ಯಾವುದೇ ವಿಚಾರ ಬಂದರೂ ಹೆಣ್ಣು ಅಂಜದೇ ಹೇಳುತ್ತಾಳೆ. ಎಲ್ಲಾ ಹೆಣ್ಣುಮಕ್ಕಳಿಗೂ ಇಂಥದ್ದೊಂದು ಮುಕ್ತ ಅವಕಾಶ ಸಮಾಜದಲ್ಲಿ ನಿರ್ಮಾಣವಾದರೆ ಹೆಣ್ಣು ಮತ್ತಷ್ಟೂ ಸಬಲಳಾಗಿ ಬೆಳೆಯಬಲ್ಲಳೇನೋ.

ಮನೆಯವರ ಬೆಂಬಲ

ಮಗಳು ಸಲಿಂಗಿ ಎಂದು ಗೊತ್ತಾದಾಗಲೂ ಅಥವಾ ಅವಳು ತನ್ನ ಲೈಂಗಿಕ ಬಯಕೆಯನ್ನು ಈಡೇರಿಸಿಕೊಳ್ಳಲು ಹಸ್ತಮೈಥುನ ಅಥವಾ ಯಾವುದಾದರು ಸೆಕ್ಸ್ ಟಾಯ್ಸ್ ಬಳಸುತ್ತಿದ್ದಾಳೆ ಎಂದಾಕ್ಷಣ ಮನೆಯ ಮರ್ಯಾದೆ ಹೋಯ್ತು ಅಥವಾ ಅವಳೆನೋ ಮಾಡಬಾರದ್ದನ್ನು ಮಾಡುತ್ತಿದ್ದಾಳೆ ಎಂಬಂತೆ ವರ್ತಿಸಬೇಡಿ. ಸಂಗಾತಿಯಿಂದ ಹಿಡಿದು ಅವರ ಬದುಕಿನ ಕೆಲವೊಂದು ಬಯಕೆಗಳ ಈಡೇರಿಕೆಗೆ ಅವರದ್ದೇ ಆದ ಆಯ್ಕೆ ಇರುತ್ತದೆ. ಅದನ್ನು ಪೋಷಕರು ಗೌರವಿಸಬೇಕಾಗುತ್ತದೆ.

ಇತರರ ಎದುರು ಅವರನ್ನು ಹೀಯಾಳಿಸಬೇಡಿ. ಊಟ, ವಸತಿ ಎಂಬ ಮೂಲಭೂತ ಅಗತ್ಯಗಳಂತೆ ಲೈಂಗಿಕತೆ ಕೂಡಾ ಒಂದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ. ಎಲ್ಲವನ್ನೂ ಹಂಚಿಕೊಳ್ಳುವ, ಮನಸ್ಸಿನಲ್ಲಿಟ್ಟುಕೊಂಡು ಕೊರಗದ ಹೆಣ್ಣುಮಕ್ಕಳನ್ನು ಬೆಂಬಲಿಸಿ. ಆಧುನಿಕ ಕಾಲಘಟ್ಟದಲ್ಲಿ ಆಕೆಗೆ ಮುಕ್ತವಾಗಿ ಉಸಿರಾಡಲು ಜಾಗ ಕೊಡಿ.

**

ಸ್ವತಂತ್ರಳು ಸಬಲಳು

ಲೈಂಗಿಕತೆ ಕುರಿತು ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳುವುದನ್ನು ತಪ್ಪು ಎಂದು ಹೇಳುವುದಕ್ಕೆ ಆಗುವುದಿಲ್ಲ. ಇದೊಂದು ಬದಲಾವಣೆ ಎನ್ನಬಹುದು. ಹಿಂದೆಲ್ಲಾ ಹೆಣ್ಣು ಒಂದು ಚೌಕಟ್ಟಿನಲ್ಲಿ ಬದುಕುತ್ತಿದ್ದಳು. ಆದರೆ ಈಗ ಆ ಚೌಕಟ್ಟಿಗೆ ಅಂಟಿಕೊಂಡು ಬದುಕುವ ಅನಿವಾರ್ಯತೆ ಅವಳಿಗಿಲ್ಲ. ಆರ್ಥಿಕವಾಗಿ, ಸಾಮಾಜಿಕವಾಗಿಯೂ ಅವಳು ಸ್ವತಂತ್ರಳು, ಸಬಲಳು ಆಗಿದ್ದಾಳೆ. ಹೆಣ್ಣು ತನ್ನ ಕುರಿತು ಮಾತನಾಡಿಕೊಳ್ಳುವುದು ಅವಮಾನಕರ ಎಂಬ ಸ್ಥಿತಿ ಈಗ ಇಲ್ಲ . ಹೆಣ್ಣು ಅಸ್ಮಿತೆಯನ್ನು ಅವಳೇ ಹುಡುಕಿಕೊಳ್ಳುತ್ತಿದ್ದಾಳೆ. ಈ ಹಂತದಲ್ಲಿ ಕೆಲವೊಂದು ಅನಾಹುತಗಳು ಆಗುತ್ತವೆ. ಇಷ್ಟು ವರ್ಷ ಹಿಡಿದಿಟ್ಟ ಭಾವನಗೆಳನ್ನು ಬಹಿರಂಗಪಡಿಸುವ ಹಂತದಲ್ಲಿ ಸಿಟ್ಟು, ಹತಾಶೆಗಳು ಒಂದೇ ಸಲ ಹೊರಬರುತ್ತವೆ. ಇದು ಕೆಲವೊಮ್ಮೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಒಂದು ಕಾಲದಲ್ಲಿ ಹೆಣ್ಣನ್ನು ಹೆರುವ ಯಂತ್ರದಂತೆ ಭಾವಿಸುತ್ತಿದ್ದರು. ಈಗ ಆಕೆ ಒಂದು ಗಂಡು, ವಿವಾಹ, ವಂಶಾಭಿವೃದ್ಧಿಯ ಹೊರತಾಗಿ ಕೂಡ ಲೈಂಗಿಕತೆಯನ್ನು ಪಡೆದುಕೊಳ್ಳಬಹುದು. ಪಡೆದುಕೊಳ್ಳುವ ಮಾರ್ಗ ಯಾವುದೇ ಬೇಕಾದರೂ ಆಗಿರಬಹುದು.

ಇನ್ನು ಮಕ್ಕಳಲ್ಲಿನ ಈ ಬದಲಾವಣೆ ಕಂಡುಬಂದಾಗ ಪೋಷಕರು ತೀವ್ರವಾದ ಪ್ರತಿಕ್ರಿಯೆ ತೋರಿಸಬಾರದು. ಮೊದಲು ಮಕ್ಕಳ ಜತೆ ಸಂಪರ್ಕ ಸಾಧಿಸಬೇಕು. ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳಬೇಕು. ಜಾಸ್ತಿ ವಿರೋಧ ವ್ಯಕ್ತಪಡಿಸಿದಾಗ ಕೆಲವೊಮ್ಮೆ ಅನಾಹುತವಾಗುವ ಸಂಭವವಿರುತ್ತದೆ. ಪೋಷಕರಿಗೂ ಮಕ್ಕಳಲ್ಲಿನ ಈ ವರ್ತನೆ ಹೊಸತೇ ಆಗಿರುವುದರಿಂದ ಅವರಿಗೂ ಸಹ ಸಹಾಯದ ಅಗತ್ಯವಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.