ADVERTISEMENT

ಬಣ್ಣಗಳ ಬೆಳಕಲ್ಲಿ ಹೆಣ್ಣು

ಸಮುದ್ಯತಾ ರಾಜೇಶ್
Published 15 ಫೆಬ್ರುವರಿ 2019, 16:42 IST
Last Updated 15 ಫೆಬ್ರುವರಿ 2019, 16:42 IST
   

ಹೆಣ್ಣಿಗೆ ಬಣ್ಣದ ಒಲವು ಇಂದು ನಿನ್ನೆಯದಲ್ಲ. ಶತಮಾನಗಳಿಂದಲೂ ಆಕೆಯ ವ್ಯಕ್ತಿತ್ವ, ಭಾವನೆಗಳೊಂದಿಗೆ ಬಣ್ಣಗಳು ಹಾಸುಹೊಕ್ಕಾಗಿ ಬೆರೆತಿವೆ. ಬಣ್ಣಗಳು ಹೆಣ್ಣಿನ ಸೂಕ್ಷ್ಮ ಸಂವೇದನಾಶೀಲ ಮನಸ್ಸನ್ನು ಪ್ರತಿಬಿಂಬಿಸುತ್ತವೆ. ಸಂತೋಷ, ದುಃಖ, ಆತಂಕ, ಉತ್ಸಾಹ, ಕೋಪ – ಹೀಗೆ ಹತ್ತು ಹಲವು ಭಾವನೆಗಳಿಗೆ ಬಣ್ಣಗಳು ಜೊತೆಗೂಡುತ್ತವೆ.

ಮೂರುವರ್ಷದ ಗಂಡುಮಗು ‘ಅಮ್ಮಾ ನನಗೆ ಪಿಂಕ್ ಕಲರ್ ಶೂ ಕೊಡಿಸ್ತೀಯಾ’ ಎಂದು ಕೇಳಿದ ಕೂಡಲೇ ಮೊದಲು ಬರುವ ಉದ್ಗಾರ, ‘ಅದ್ಯಾಕೆ ಪಿಂಕ್, ಅದು ಹೆಣ್ಣು ಮಕ್ಕಳು ಹಾಕೋದು, ಬ್ಲೂ ಅಥವಾ ಬ್ಲ್ಯಾಕ್ ಶೂ ತೊಗೋ’ ಎನ್ನುವುದು. ಬಣ್ಣಗಳ ಹೆಸರುಗಳನ್ನೂ ಇನ್ನು ಸರಿಯಾಗಿ ಕಲಿಯದ ಕಂದಮ್ಮಗಳಿಗೆ ನಾವು ಆಗಲೇ ಲಿಂಗ ತಾರತಮ್ಯದ ಮಾದರಿಗಳನ್ನು ತಲೆಯಲ್ಲಿ ತುಂಬಲಾರಂಭಿಸುತ್ತೇವೆ. ಅದೇ ಮಗು ಮುಂದೆ ತನ್ನ ಅಮ್ಮ, ಅಕ್ಕ–ತಂಗಿ, ಗೆಳತಿಯರನ್ನು ಬಾಲಭಾಷೆಯಲ್ಲಿ ‘ನೀನ್ಯಾಕೆ ಬ್ಲೂ ಡ್ರೆಸ್ ಹಾಕಿದೀಯ? ಅದು ಬಾಯ್ಸ್ ಕಲರ್’ ಎನ್ನುವಾಗ ನಾವು ಕಣ್ಣರಳಿಸುತ್ತೇವೆ. ಇದು ಬಣ್ಣಗಳೊಂದಿಗೆ ನಮ್ಮ ಬಂಧ ಸಾಮಾಜಿಕವಾಗಿ ಬೆಸೆಯುವ ಪ್ರಕ್ರಿಯೆ.

ಸಾಧಾರಣವಾಗಿ ಹೆಣ್ಣು ಎಂದೊಡನೆ ಗುಲಾಬಿಬಣ್ಣ ನೆನಪಾಗುತ್ತದೆ, ಹೆಣ್ಣನ್ನು ಪ್ರತಿನಿಧಿಸುವ ಹಲವಾರು ಅಂಶಗಳಲ್ಲಿ ಈ ಗುಲಾಬಿಬಣ್ಣವನ್ನು ಜೊತೆಗೂಡಿಸಲಾಗುತ್ತದೆ. ಉದಾಹರಣೆಗೆ ಮಹಿಳೆಯರಿಗೆ ಪಿಂಕ್ ಪೊಲೀಸ್ ವಾಹನ, ಪಿಂಕ್ ಬಸ್ ಹಾಗೂ ಆಸ್ಪತ್ರೆಗಳಲ್ಲಿ ನವಜಾತ ಹೆಣ್ಣುಮಕ್ಕಳಿಗೆ ಗುಲಾಬಿ ಹೊದಿಕೆಗಳು – ಹೀಗೆ ಹೆಣ್ಣನ್ನು ಗುಲಾಬಿ ಬಣ್ಣದೊಂದಿಗೆ ಸದಾಕಾಲ ಕೂಡಿಸಲಾಗುತ್ತದೆ. ಒಂದು ರೀತಿಯಲ್ಲಿ ಶತಮಾನಗಳಿಂದ ಬಂದ ಲಿಂಗತಾರತಮ್ಯದಿಂದ ಬಂದ ಈ ಅಲಿಖಿತ ಕಾನೂನು ಇಂದಿಗೂ ಮುಂದುವರೆದಿದೆ. ಗುಲಾಬಿಬಣ್ಣವನ್ನು ಗಂಡುಮಕ್ಕಳು ಉಪಯೋಗಿಸುವುದನ್ನು ಅವಮಾನವೆಂಬಂತೆ ಭಾವಿಸುವುದು ಕೂಡ ಇದರ ಭಾಗ.

ADVERTISEMENT

ಪುಟ್ಟ ಮಗಳ ಕೋಣೆಯನ್ನು ಅಮ್ಮ ಗುಲಾಬಿಬಣ್ಣದ ಹೊದಿಕೆ, ಪರದೆಗಳು, ಟೆಡ್ಡಿಬೇರ್, ಬಾರ್ಬಿಗಳನ್ನು ಬಳಸಿ ಸಿಂಗರಿಸುತ್ತಾಳೆ. ಮಗುವಿಗೂ ಗುಲಾಬಿಬಣ್ಣ ಅದರ ಕನಸಿನ ಸಿಂಡ್ರೆಲಾಲೋಕಕ್ಕೆ ಕರೆದೊಯ್ಯುತ್ತದೆ. ಈ ಬಣ್ಣದ ಕುರಿತು ಅದಕ್ಕೇನೂ ತಿಳಿದಿರುವುದಿಲ್ಲ. ಆದರೆ ಸಿಂಡ್ರೆಲಾ ತೊಟ್ಟಿರುವ ಗುಲಾಬಿ ಉಡುಗೆ ಸಾಕು ಬಹಳಷ್ಟು ಹುಡುಗಿಯರಿಗೆ ಆ ಬಣ್ಣವನ್ನು ಇಷ್ಟಪಡಲು.

ಆದರೆ, ಹೆಣ್ಣಿನ ಭಾವನಾಪ್ರಪಂಚದಲ್ಲಿ ಬೇರೆ ಬೇರೆ ಬಣ್ಣಗಳೂ ಬಹಳ ಮುಖ್ಯ ಸ್ಥಾನ ಪಡೆದಿವೆ. ಭೂಮಿಗೆ ಹತ್ತಿರವಾದ ಹಸಿರು, ಬಾನಿಗೆ ಹತ್ತಿರವಾದ ನೀಲಿ ಕೂಡ ಅವಳ ಫೇವರಿಟ್ ಪಟ್ಟಿಯಲ್ಲಿವೆ. ನೇರಳೆ, ತಿಳಿಹಳದಿ, ಕೆಂಪು – ಎಲ್ಲವೂ ಆಕೆಗಿಷ್ಟ. ನಾರಿಯ ಮನಸ್ಸನ್ನು ಕದಿಯುವ ಇನ್ನೊಂದು ಬಣ್ಣವೆಂದರೆ ನವಿಲಿನ ಬಣ್ಣ. ಆಕೆಗೆ ಬಣ್ಣಗಳು ಕೇವಲ ಕೆಂಪು, ಹಳದಿ ಎಂಬ ಹೆಸರಲ್ಲ. ಅದು ನವಿಲಿನ ಬಣ್ಣ, ಆಕಾಶ ನೀಲಿ, ಗಿಳಿಹಸಿರು, ಕಡುಗೆಂಪು, ಗುಲಾಬಿ – ಹೀಗೆ ಪ್ರತಿ ಬಣ್ಣವೂ ನಿರ್ದಿಷ್ಟವಾಗಿರುತ್ತದೆ.

ಹಲವಾರು ಬಾರಿ ಬಣ್ಣಗಳು ಮಾನಿನಿಯ ಮನಸ್ಸನ್ನು ಪ್ರತಿಬಿಂಬಿಸುತ್ತವೆ. ಶಾಂತವಾಗಿರುವಾಗ ನೀಲಿಬಣ್ಣ, ಕೋಪ ಹಾಗೂ ಪ್ರೀತಿಯನ್ನು ವ್ಯಕ್ತಪಡಿಸುವುದಕ್ಕೆ ಕೆಂಪುಬಣ್ಣ; ಕಿತ್ತಳೆಬಣ್ಣ ಉತ್ಸಾಹವನ್ನು ಪ್ರತಿಬಿಂಬಿಸಿದರೆ, ತಿಳಿಹಳದಿಯ ಬಣ್ಣ ಆಶಾವಾದವನ್ನು ವ್ಯಕ್ತಪಡಿಸುತ್ತದೆ. ಬೂದು ಬಣ್ಣ ಸಾಧಾರಣವಾಗಿ ಹೊಂದಾಣಿಕೆಯನ್ನು ಪ್ರತಿಫಲಿಸುತ್ತದೆ. ನವರಸಗಳೂ ಒಂದೊಂದು ಬಣ್ಣದೊಂದಿಗೆ ಮಿಳಿತವಾಗಿದೆ.

ಹಿಂದಿನ ಕನ್ನಡ ಕಾದಂಬರಿಗಳ ನಾಯಕಿಯರನ್ನು ನೆನಪಿಸಿಕೊಂಡಾಗ ಬಣ್ಣಗಳಿಗಿದ್ದ ಸ್ಥಾನ ನಮಗೆ ತಿಳಿಯುತ್ತದೆ. ತಿಳಿಗೆಂಪು ಸೀರೆಗೆ ಬಂಗಾರದ ಬಣ್ಣದ ಜರಿಯಂಚು ಉಟ್ಟ ಯುವತಿಯರು, ಕೆಂದಾವರೆ ಬಣ್ಣದ ಸೀರೆ, ನವಿಲಿನ ಬಣ್ಣದ ಸೆರಗು – ಮುಂತಾದ ವರ್ಣನೆಗಳು ನಮ್ಮ ಮನಸ್ಸಲ್ಲಿ ಸದಾಕಾಲ ನೆನಪಿನಲ್ಲಿರುತ್ತಿವೆ. ಬಣ್ಣಗಳೊಂದಿಗಿನ ಹೆಂಗಳೆಯರ ಬಂಧ ಅರಿವಾಗುತ್ತದೆ.

ಬಣ್ಣಗಳ ಒಡನಾಟ ಕೇವಲ ಮಾನವರಿಗೆ ಮಾತ್ರವಲ್ಲ, ದೇವತೆಗಳಿಗೂ ಇದು ಮಹತ್ವವಾದದ್ದೇ. ದುರ್ಗಾದೇವಿಗೆ ಕೆಂಪುಬಣ್ಣ ಇಷ್ಟ, ಸರಸ್ವತಿಗೆ ಶ್ವೇತವರ್ಣ, ಲಕ್ಷ್ಮಿಗೆ ಗುಲಾಬಿ ವರ್ಣ ಇಷ್ಟ ಎಂಬ ಪರಿಕಲ್ಪನೆಗಳು ನಮ್ಮಲ್ಲಿವೆ. ಇದರೊಂದಿಗೆ ಹಸಿರು ಸೀರೆಯುಟ್ಟ ಲಕ್ಷ್ಮಿ ಚಿತ್ರ ಇದ್ದರೆ ಒಳ್ಳೆಯದು, ಅದು ಸಮೃದ್ಧಿಯ ಸಂಕೇತವೆಂಬ ನಂಬಿಕೆಗಳೂ ಇವೆ. ಪ್ರತಿಯೊಬ್ಬ ದೇವತೆಗೂ ಪ್ರಿಯವಾದ ಬಣ್ಣ ಎಂದು ಇರುತ್ತದೆ.

ಹಿಂದಿನಿಂದ ಬಂದ ಅಲಿಖಿತ ಪದ್ಧತಿಗಳ ಅನುಸಾರ ಮಹಿಳೆಯರು ಕೆಂಪು, ಹಸಿರು, ಹಳದಿ – ಮುಂತಾದ ಧಾರ್ಮಿಕವಾಗಿ ಶ್ರೇಷ್ಠ ಸ್ಥಾನಮಾನ ಗಳಿಸಿದ ಬಣ್ಣಗಳನ್ನೇ ಹೆಚ್ಚಾಗಿ ಬಳಸುತ್ತಿದ್ದರು. ಮುತ್ತೈದೆತನದ ಸಂಕೇತ, ಗೃಹಿಣಿಯ ಲಕ್ಷಣ ಈ ಎಲ್ಲಾ ದೃಷ್ಟಿಕೋನಗಳಿಂದಲೂ ಬಣ್ಣಗಳನ್ನು ಬಳಸಲಾಗುತ್ತಿತ್ತು. ಆದರೆ ನಂತರದ ದಶಕಗಳಲ್ಲಿ ಇದರ ಮುಂದುವರೆದ ಭಾಗವಾಗಿ ಹೆಣ್ಣಿಗೆ ಗುಲಾಬಿಬಣ್ಣವನ್ನು ಟ್ಯಾಗ್ ಮಾಡಲಾಯಿತು. ಆದರೆ ಇಂದಿನ ಹೆಣ್ಣುಮಕ್ಕಳು ಬದಲಾಗಿದ್ದಾರೆ. ಹೇಗೆ ಸೀರೆಯ ಜಾಗಕ್ಕೆ ಚೂಡಿದಾರ್, ಜೀನ್ಸ್‌ಗಳು ಬಂದವೋ ಹಾಗೇ ಕೆಂಪು ಹಸಿರು ಮಾತ್ರವೇ ಇದ್ದ ಕಡೆ ಕಪ್ಪು, ಬಿಳಿ, ಗಾಢನೀಲಿ, ಬೂದು ಹಾಗೂ ಕಂದುಬಣ್ಣಗಳೂ ಆವರಿಸುತ್ತಿವೆ.

ಕಪ್ಪುಬಣ್ಣ ಅಪಶಕುನ ಎಂಬ ಭಾವನೆ ಹಿಂದಿನಿಂದಲೂ ಬಂದದ್ದು. ಬರಿಯ ಬಿಳಿ ಶೋಕಸೂಚಕ, ಕಪ್ಪುಬಣ್ಣದ ಬೊಟ್ಟು ಇಡಬಾರದು ಇವೆಲ್ಲ ಹಳೆಯ ಕಲ್ಪನೆಗಳು. ಆದರೆ ಇಂದಿನ ಮಹಿಳೆಯರು ಅವನ್ನೆಲ್ಲ ಮೆಟ್ಟಿ ನಿಂತಿದ್ದಾರೆ. ಕಪ್ಪುಬಣ್ಣ ವಿಶೇಷ ನಿಗೂಢತೆ ಮಿಳಿತ ಘನತೆಯನ್ನು ತರುತ್ತದೆ. ಕಡುನೀಲಿ ಬಣ್ಣ ಗೌರವಯುತವಾದದ್ದು, ಸರಳತನವನ್ನು ಬೂದು ಅಥವಾ ತೆಳುಕಂದು ಪ್ರತಿಪಾದಿಸುತ್ತದೆ ಎಂಬ ಅರ್ಥದಲ್ಲಿ ಈ ಬಣ್ಣಗಳೂ ಈಗ ಮಹಿಳೆಯರಿಗೆ ಮೆಚ್ಚಿಗೆಯಾಗಲಾರಂಭಿಸಿದೆ.

ಮೆಚ್ಚಿಗೆಯಾಗುವ ಬಣ್ಣಗಳ ಜೊತೆಗೇ, ತಾವು ದಪ್ಪಗೆ ಅಥವಾ ತೆಳ್ಳಗೆ ಕಾಣುವುದು ಕೂಡ ಬಣ್ಣಗಳ ಮೇಲೆ ಅವಲಂಬಿತವಾಗುತ್ತದೆ. ನೀಲಿಬಣ್ಣದ ಉಡುಗೆ ತೆಳ್ಳಗೆ ಕಾಣುವಂತೆ ಮಾಡಿದರೆ, ಬಿಳಿಬಣ್ಣದ ಉಡುಗೆಗಳು ತುಸು ದಪ್ಪಗೆ ಕಾಣುತ್ತವೆ. ಉಡುಗೆ–ತೊಡುಗೆಗಳ ಹಿಂದೆ ಇಂತಹ ತತ್ವಗಳು ಕೂಡ ಕೆಲಸ ಮಾಡುತ್ತವೆ.

ಆಸಕ್ತಿದಾಯಕ ಅಂಶವೆಂದರೆ, ಸಾಧಾರಣವಾಗಿ ಪುರುಷರು ಬಣ್ಣಗಳನ್ನು ಗುರುತಿಸುವುದು ಹಸಿರು, ನೀಲಿ, ಕೆಂಪು, ಹಳದಿ, ಕಪ್ಪು, ಬಿಳಿ – ಮುಂತಾದ ಬಣ್ಣಗಳನ್ನು ಸರಳವಾಗಿ ಹೇಳುತ್ತಾರೆ. ಮಹಿಳೆಯರು ಬಣ್ಣಗಳನ್ನು ಗುರುತಿಸುವುದೇ ಬೇರೆ ರೀತಿ. ಹಸಿರೆಂದರೆ ಗಿಳಿ–ಹಸಿರು, ರಾಮಾ–ಗ್ರೀನ್, ಬಾಟಲ್–ಗ್ರೀನ್, ಎಲೆ–ಹಸಿರು, ನೀಲಿಯೆಂದರೆ ಆಕಾಶ–ನೀಲಿ, ಕಡು–ನೀಲಿ, ಸಮುದ್ರ–ನೀಲಿ, ನವಿಲಿನ ನೀಲಿ, ಹಳದಿಯೆಂದರೆ ಗಾಢ–ಹಳದಿ, ತಿಳಿ–ಹಳದಿ, ನಿಂಬೆಯ ಹಳದಿ, ಕಂದು ಎಂದರೆ ಮಣ್ಣಿನ ಬಣ್ಣ, ಇಟ್ಟಿಗೆಯ ಕಂದು, ಮೆಂತ್ಯದ ಬಣ್ಣ – ಹೀಗೆ ಹತ್ತು ಹಲವಾರು ಬಣ್ಣಗಳನ್ನು ಮಹಿಳೆಯರು ಗುರುತಿಸಬಲ್ಲರು. ಇಲ್ಲಿ ಬಣ್ಣಗಳ ಗುರುತಿಸುವಿಕೆ ಕೇವಲ ಮಹಿಳೆಯ ಉಡುಗೆ–ತೊಡುಗೆಗೆ ಸಂಬಂಧಿಸಿದ್ದಲ್ಲ. ಆಕೆಯ ಗ್ರಹಣಶಕ್ತಿಯನ್ನು ಇಲ್ಲಿ ಗಮನಿಸಬೇಕು. ಸೂಕ್ಷ್ಮವಾಗಿ ಸಂವೇದನಾಶೀಲವಾಗಿ ಅಷ್ಟು ಬಣ್ಣಗಳನ್ನು ಗುರುತಿಸಿ, ವ್ಯತ್ಯಾಸಗಳನ್ನು ಗ್ರಹಿಸುವ ಚಾಕಚಕ್ಯತೆ ಮಹಿಳೆಯ ಬುದ್ಧಿಮತ್ತೆಗೆ ಸಾಕ್ಷಿ.

ಇಂದಿನ ಮಹಿಳೆಗೆ ಕಾಮನಬಿಲ್ಲಿನ ಬಣ್ಣಗಳು ಮಾತ್ರವಲ್ಲದೇ ಬದುಕಿನ ಹಲವಾರು ಬಣ್ಣಗಳು ಕೂಡ ಮುಖ್ಯವಾಗುತ್ತವೆ. ಇಂದಿನ ಯುಗದಲ್ಲಿ ಬಣ್ಣ ಎನ್ನುವುದು ಭಾವನೆಗಳಿಗೆ ಹಾಗೂ ಸಂಸ್ಕೃತಿಗೆ ಮಾತ್ರ ಮೀಸಲಾಗದೇ ನಮ್ಮ ಜೀವನಶೈಲಿಯನ್ನು ಹಾಗೂ ಬದುಕಿನ ಕುರಿತಾದ ದೃಷ್ಟಿಕೋನವನ್ನು ಕೂಡ ಪ್ರತಿಬಿಂಬಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.