ADVERTISEMENT

ಭಾವಯಾನ: ಬಯಸಿದ ಬದುಕಿಗಾಗಿ ಗಟ್ಟಿಯಾಗಿ

ಸುಷ್ಮಾ ಸವಸುದ್ದಿ
Published 16 ಜನವರಿ 2026, 14:42 IST
Last Updated 16 ಜನವರಿ 2026, 14:42 IST
<div class="paragraphs"><p>ಮಹಿಳೆ</p></div>

ಮಹಿಳೆ

   

ಕೆಲ ವರ್ಷಗಳ ಹಿಂದೆ, ಸ್ನೇಹಿತೆ ಸಹನಾಳ ತಂದೆ ಬಸ್‌ನಲ್ಲಿ ಸಿಕ್ಕಿದ್ದರು. ನಾನು ಒಳ್ಳೆ ಉದ್ಯೋಗದಲ್ಲಿ ಇರುವುದನ್ನು ತಿಳಿದು ಸಂತಸಪಟ್ಟರು. ಮರುಕ್ಷಣವೇ ವಿಷಾದದಿಂದ ‘ನಾನು ತಪ್ಪು ಮಾಡಿದ್ನಮ್ಮ. ಸಹನಾಗೆ ಓದುವ ಆಸೆ ಇತ್ತು. ಜಾಣೆಯೂ ಆಗಿದ್ಲು. ಆದರೆ ಓದಿಸದೇ ಮದುವೆ ಮಾಡಿಬಿಟ್ಟೆ. ಮದುವೆ ನಂತರ ಓದಿಸುವುದಾಗಿ ಹೇಳಿದ್ದ ಗಂಡನ ಮನೆಯವರು ಮಾತಿನಂತೆ ನಡಕೊಳ್ಳಲಿಲ್ಲ’ ಎಂದು ಬೇಸರಪಟ್ಟರು. ನನಗೆ ಹೇಗೆ ಸಮಾಧಾನ ಮಾಡಬೇಕೆಂದೇ ಗೊತ್ತಾಗಲಿಲ್ಲ. ‘ಹೌದು ಅಂಕಲ್ ತಪ್ಪು ಮಾಡಿದ್ರಿ’ ಅಂತ ಮನಸ್ಸಿನಲ್ಲೇ ಅಂದುಕೊಂಡು, ಕೃತಕ ನಗೆ ಬೀರಿದ್ದೆ.

ಸಹನಾ ತನ್ನ ಹೆಸರಿಗೆ ತಕ್ಕಂತೆಯೇ ಸಹನಾಶೀಲಳಾಗಿ ಇದ್ದ ಹುಡುಗಿ. ನೋಡಲು ಚಂದ, ಓದಿನಲ್ಲಿ ಮುಂದೆ. ಡಿಗ್ರಿ ಮುಗಿಯುತ್ತಿದ್ದಂತೆ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾದಳು. ಅವಳಿಗೆ ಸ್ನಾತಕೋತ್ತರ ಪದವಿ ಪಡೆಯಬೇಕೆಂಬ ಕನಸಿತ್ತು. ಆದರೆ, ತಾನು ಸಾಯುವುದರಲ್ಲಿ ಮೊಮ್ಮಗಳ ಮದುವೆ ನೋಡಬೇಕೆನ್ನುವ ಅಜ್ಜಿಯ ಭಾವನಾತ್ಮಕ ಒತ್ತಾಯಕ್ಕೆ ಎದುರಾಡಲು ಅವಳಿಂದ ಸಾಧ್ಯವಾಗಲಿಲ್ಲ. ಕೊನೇಪಕ್ಷ ಮದುವೆ ಮಾಡುವಾಗಲಾದರೂ ಅವಳ ಅಭಿಪ್ರಾಯವನ್ನು ಮನೆಯವರು ಯಾರೂ ಕೇಳಲಿಲ್ಲ, ಅವಳೂ ಹೇಳಲಿಲ್ಲ.

ADVERTISEMENT

ಮದುವೆಯಾದ ಎರಡು ತಿಂಗಳ ನಂತರ ಕರೆ ಮಾಡಿದ್ದ ಸಹನಾ, ‘ಬದುಕು ಮುಗಿದು ಹೋಯಿತೇನೋ ಅನ್ನಿಸುತ್ತಿದೆ. ಮದುವೆ ನಂತರ ಓದಬಹುದು ಅಂದಿದ್ದರು. ಆದರೆ ಈಗ ‘ಓದಿ ಏನ್ ಮಾಡಬೇಕಿದೆ’ ಅಂತ ಕೇಳ್ತಾ ಇದ್ದಾರೆ. ತವರಿನವರ ಒತ್ತಾಯಕ್ಕೆ ಮದುವೆ ಮಾಡಿಕೊಂಡು ತಪ್ಪು ಮಾಡಿದೆ. ಒಮ್ಮೆ ಅಪ್ಪನೊಂದಿಗೆ ಕೂತು ಮಾತನಾಡಿದ್ದರೆ, ಓದುವೆ ಅಂತ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರೆ ಬದುಕು ಬದಲಾಗುತ್ತಿತ್ತೇನೊ’ ಎಂದೆಲ್ಲಾ ಸಂಕಟ ಪಟ್ಟಿದ್ದಳು.

ನಾವು ನಮ್ಮ ಪರವಾಗಿ ಗಟ್ಟಿಯಾಗಿ ನಿಲ್ಲದೆ, ನಮ್ಮ ಬದುಕಿನ ಯೋಜನೆಗಳನ್ನು ನಮ್ಮವರ ಭಾವನಾತ್ಮಕ ಸುಳಿಗೆ ಸಿಲುಕಿಸಿ, ನಾವು ಬಯಸದ ಬದುಕನ್ನು ಬದುಕುವುದರಲ್ಲಿ ಯಾವ ಅರ್ಥವಿದೆ? ‘ನಾನು ಇನ್ನೂ ಓದುವೆ’, ‘ನಾನು ನನ್ನ ಇಷ್ಟದ ಕೋರ್ಸನ್ನೇ ಮಾಡುವೆ’, ‘ನನಗೆ ಈಗಲೇ ಮದುವೆ ಬೇಡ’, ‘ನಾನು ಪ್ರೀತಿಸಿದ ಹುಡುಗನನ್ನೇ ಮದುವೆಯಾಗುವೆ’ ಎಂದೆಲ್ಲ ಪಾಲಕರಿಗೆ ಹೇಳುವುದು, ಮನವರಿಕೆ ಮಾಡಿಕೊಡುವುದು, ಅವರ ಸಲಹೆಯನ್ನೂ ಪರಿಗಣಿಸಿ, ನಮ್ಮ ನಿರ್ಧಾರಕ್ಕೆ, ನಮ್ಮ ಕನಸಿಗೆ, ನಮ್ಮ ಬದುಕಿಗೆ ನಾವು ಬದ್ಧರಾಗಿ ನಿಲ್ಲುವುದು ಖಂಡಿತ ನಾವು ಪಾಲಕರಿಗೆ ತೋರುವ ಅಗೌರವ ಅಲ್ಲ. ತಪ್ಪನ್ನು ತಪ್ಪು ಎಂದು ಹೇಳುವ, ಇಷ್ಟವಿಲ್ಲದ್ದನ್ನು ಇಷ್ಟವಿಲ್ಲ ಎನ್ನುವ, ತಮ್ಮ ಅಭಿಮತವನ್ನು ಸ್ಪಷ್ಟವಾಗಿ ನಮೂದಿಸುವ ಧೈರ್ಯ ಹೆಣ್ಣುಮಕ್ಕಳಲ್ಲಿ ಜಾಗೃತವಾಗಬೇಕಿದೆ.

***

ಸಹನಾ ಈಗ ಒಂದು ಮಗುವಿನ ತಾಯಿ. ಅವಳು ಓದುವ ತನ್ನ ಆಸೆಯನ್ನು ತಡವಾಗಿಯಾದರೂ ತನ್ನ ಅತ್ತೆ, ಮಾವನಿಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದಾಳೆ. ಕರೆ ಮಾಡಿದಾಗಲೆಲ್ಲ ಗೋಳುಗಳನ್ನೇ ಹೇಳಿಕೊಳ್ಳುತ್ತಿದ್ದ ಗೆಳತಿ, ಈಗ ತಾನು ಓದುತ್ತಿರುವ ಸಾಹಿತ್ಯ, ರಾಜಕೀಯ ಸಂಗತಿಗಳು, ಸಾಮಾಜಿಕ ಬದಲಾವಣೆ ಕುರಿತೆಲ್ಲ ಮಾತನಾಡುತ್ತಾಳೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.