ADVERTISEMENT

Valentine Day | ಪ್ರೀತಿಯ ನಿವೇದನೆಗೆ ಹಾಡುಗಳ ಭಾಷೆ

ಪ್ರೇಮಗೀತೆ: ಕೈಹಿಡಿದು ನಡೆಸುವ ಗೆಳೆಯ

ಸಂದೀಪ ನಾಯಕ
Published 13 ಫೆಬ್ರುವರಿ 2020, 15:40 IST
Last Updated 13 ಫೆಬ್ರುವರಿ 2020, 15:40 IST
   

ಕನ್ನಡದಲ್ಲಿಹುಡುಗರಿಗೆ ಪ್ರೇಮದ ಭಾಷೆಕೊಟ್ಟ ಸಿನಿಮಾ ಹಾಡುಗಳು ಬಹಳಷ್ಟಿವೆ. ಹಂಸಲೇಖಾರ ‘ಪ್ರೇಮಲೋಕ’ ಸಿನಿಮಾದ ‘ಪ್ರೇಮಲೋಕದಿಂದ ಬಂದ ಪ್ರೇಮದ ಸಂದೇಶ’, ‘ಚೆಲುವೆ ಒಂದು ಕೇಳ್ತೀನಿ, ಇಲ್ಲಾ ಅನ್ದೆ ಕೊಡ್ತೀಯಾ?’ದಂತಹ ಹಾಡುಗಳು ಒಂದು ಜಮಾನದ ಹುಡುಗರ ಪ್ರೇಮ ನಿವೇದನೆಗೆ ಭಾಷೆ ಕೊಟ್ಟವು. ಅದಕ್ಕೂ ಮುನ್ನ ‘ಕಂಗಳು ವಂದನೆ ಹೇಳಿದೆ/ ಹೃದಯ ತುಂಬಿ ಹಾಡಿದೆ/ ಹಾಡದೆ ಉಳಿದಿಹ ಮಾತು ನೂರಿದೆ’ ತರಹದ ಹಾಡುಗಳು ಮೂಕಪ್ರೇಮದ ಅಭಿವ್ಯಕ್ತಿಯಾಗಿದ್ದವು. ಬದಲಾದ ಪ್ರೇಮದ ಭಾಷೆ ತಿಳಿಯಲು ದೂರ ಹೋಗಬೇಕಿಲ್ಲ. ಸಿನಿಮಾ ಹಾಡುಗಳೇ ಆ ಕೆಲಸವನ್ನು ಮಾಡುತ್ತಿರುತ್ತವೆ; ಯುವ ಪ್ರೇಮಿಗಳ ಪ್ರೀತಿಯ ದಿಕ್ಕನ್ನು ನಿರ್ದೇಶಿಸುತ್ತಲೂ ಇರುತ್ತವೆ.

‘ಎರಡೂ ಜಡೆಯನ್ನು ಎಳೆದು ಕೇಳುವೆನು ನೀ ಕೊಂಚ ನಿಲಬಾರದೆ’ ಎಂದು ಪ್ರೇಮಿಯನ್ನು ಪ್ರೇಮ ನಿವೇದನೆಗೆ ನಿಲ್ಲುವಂತೆ ವಿನಂತಿಸುವ ಯೋಗರಾಜ್‌ ಭಟ್‌, ‘ಹೃದಯವೆ ಬಯಸಿದೆ ನಿನ್ನನೆ/ ತೆರೆಯುತ ಕನಸಿನ ಕಣ್ಣನೆ’ ಎಂದು ಮನಸಿನ ಬಯಕೆ ಹೇಳುವ ಜಯಂತ ಕಾಯ್ಕಿಣಿ, ‘ಒಂದು ಮಳೆಬಿಲ್ಲು /ಒಂದು ಮಳೆಮೋಡ, ಹೇಗೋ ಜೊತೆಯಾಗಿ/ ತುಂಬಾ ಸೊಗಸಾಗಿ/ ಏನನೋ ಮಾತಾಡಿದೆ/ ಭಾವನೆ ಬಾಕಿ ಇದೆ’ ಎಂದು ಪ್ರೇಮದ ಮಧುರಾತಿಮಧುರ ಅನುಭೂತಿಯನ್ನು ಹೇಳುವ ವಿ. ನಾಗೇಂದ್ರ ಪ್ರಸಾದ್ ಈ ಕಾಲದ ಹುಡುಗರಿಗೆ ಪ್ರೇಮದ ವರ್ಣಮಾಲೆಯನ್ನು ಕಲಿಸುವ ಗುರುಗಳು.

ಈ ಗುರುಗಳು ಕಾಲಕ್ಕೆ ತಕ್ಕಂತೆ ಬದಲಾದರೂ ಭಾವನೆ ಬದಲಾಗುವುದಿಲ್ಲವಲ್ಲ? ಪ್ರೇಮಕಾವ್ಯ ಹಲವು ವೇಷಗಳಲ್ಲಿ, ರೂಪಗಳಲ್ಲಿ ಕಾಲುಕುಣಿಸುವಂತಹ ಸ್ವರಮೇಳದಲ್ಲಿ ಪ್ರತ್ಯಕ್ಷವಾಗುತ್ತಲೇ ಇರುತ್ತದೆ. ಹಾಡಿನ ಮಟ್ಟುಗಳಿಗೆ ಸಾಲುಗಳನ್ನು ಹೊಸೆಯುವ ಕವಿಗಳು ಹುಡುಗ ಹುಡುಗಿಯರ ಕನಸುಗಳಿಗೆ ದನಿಕೊಡುತ್ತಲೇ ಇರುತ್ತಾರೆ. ನಾಯಕ ನಾಯಕಿ ತೆರೆಯ ಮೇಲೆ ತುಟಿ ಆಡಿಸಿದ ಯುಗಳಗೀತೆ ಎಲ್ಲ ಹದಿಹರೆಯದವರ ಭಾವನೆಯ ಅಭಿವ್ಯಕ್ತಿಯೇ ಆಗಿರುತ್ತದೆ. ಕನ್ನಡ ಹುಡುಗಿಯ ಪ್ರೇಮ ನಿವೇದನೆಗೆ ಹಿಂದಿ ಭಾಷೆಯ ಹಾಡೂ ಆದೀತು. ಅದಕ್ಕೆ ಭಾಷೆಅರ್ಥವಾಗಬೇಕೆಂದೇನೂ ಇಲ್ಲವಲ್ಲ. ಅದಕ್ಕೆ ಮುಖ್ಯವಾಗಿ ಆಗಬೇಕಾದದ್ದು ಪ್ರೇಮ ನಿವೇದನೆ, ಹೇಳಬೇಕಾದದ್ದು ಹೃದಯದ ಭಾವನೆ. ಹೀಗೆ ಪ್ರೇಮ ತನ್ನ ತುರ್ತಿನಲ್ಲಿ ಭಾಷೆಯ ಹಂಗು ದಾಟಿರುತ್ತದೆ.

ADVERTISEMENT

ಈ ಕಾಲದ ಹುಡುಗಿಯೊಬ್ಬಳ ಪ್ರೇಮ ನಿವೇದನೆಗೆ ಅಕ್ಷರಗಳೇ ಬೇಕಿಲ್ಲ. ಉದ್ದುದ್ದ ಪ್ರೇಮಪತ್ರಗಳನ್ನು ಈಗ ಯಾರು ಬರೆಯುವ ತೊಂದರೆ ತೆಗೆದುಕೊಳ್ಳುತ್ತಾರೆ? ಆ ಕೆಲಸವನ್ನು ಸುಂದರ ಹಾಡೊಂದು ಮಾಡಬಹುದು. ವ್ಯಾಟ್ಟ್‌ಆ್ಯಪಿನಲ್ಲಿ ಆ ಹಾಡನ್ನು ಕಳಿಸಿದರೆ ಅವಳ ಸಂದೇಶ, ಆಶಯ, ನೋವು, ವಿರಹ, ಕೋರಿಕೆ, ತವಕ, ತಹತಹ, ಮೋಹ-ದಾಹ ಎಲ್ಲ ಮುಟ್ಟಿದಂತೆ. ಹುಡುಗನಿಂದ ಉತ್ತರ ಬರದಿದ್ದರೆ ಉತ್ತರ ಕೊಡುವಂತೆ ಕೇಳಿ ಒಂದು ಎಮೋಜಿ ಕಳುಹಿಸಬಹುದು.ಒಂದು ವೇಳೆ ಹುಡುಗ ಉತ್ತರವನ್ನೇ ಕೊಡಲಿಲ್ಲವೆಂದರೆ, ಇದ್ದೇ ಇವೆ ಇನ್ನೂ ತೀವ್ರವಾದ ಪ್ರೇಮಗೀತೆಯ ಬಾಣಗಳು; ಉತ್ತರ ಬರಲಿಲ್ಲ ಎಂದಾದರೆ ಕೊನೆಯಲ್ಲಿ ವಿರಹಗೀತೆಗಳೂ ಇವೆ. ಇದು ಹುಡುಗಿಯರಿಗೆ ಮಾತ್ರವಲ್ಲ ಹುಡುಗರ ವಿಷಯದಲ್ಲೂ ಆಗಬಹುದು.ಅಂದಹಾಗೆ ಪ್ರೇಮ ಪ್ರಸ್ತಾಪ ಡಿಜಿಟಲ್‌ ಯುಗದಲ್ಲಿ ಸುಲಭವಾಗಿದೆ. ನೆನಪಿರಲಿ, ಅಷ್ಟೇ ರಿಸ್ಕಿನದೂಆಗಿದೆ!

ಎಳೆಯ ಪ್ರೇಮಿಗಳ ವಿಷಯದಲ್ಲಿ ಕೊನೆಗೂ ಹಾಡುಗಳು ಅವರ ಕೈಹಿಡಿದು ನಡೆಸುವ ಗೆಳೆಯನಾಗಿಯೇ ಉಳಿದಿವೆ. ಸದ್ಯಕ್ಕಂತೂಪ್ರೇಮಿಗಳ ಜಗತ್ತಿನಲ್ಲಿ ಅವುಗಳ ಜಾಗವನ್ನು ಬದಲಿಸುವ ಶಕ್ತಿ ಯಾವುದಕ್ಕೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.