ADVERTISEMENT

Valentine Day | 'ನೀ ಏನಾದ್ರೂ ಮಾಡ್ಕೋ ನನಗಂತೂ ನಿನ್ನ ಬಿಟ್ಟು ಇರಲಿಕ್ಕೆ ಆಗಲ್ಲ'

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2020, 13:35 IST
Last Updated 13 ಫೆಬ್ರುವರಿ 2020, 13:35 IST
   

ನಾವಿಬ್ರು ಚಿಕ್ಕಂದಿನಿಂದ್ಲೂ ಒಂದೇ ಕ್ಲಾಸ್‌ನಲ್ಲಿ ಓದಿದವರು, ಹಾಗಾಗಿ ನಮ್ಮಿಬ್ಬರ ಮದ್ಯೆ ಸ್ವಲ್ಪ ಹೊಂದಾಣಿಕೆಯಾಗಲಿ, ತಿಳುವಳಿಕೆಯಾಗಲಿ ಮೊದಲಿಂದಲೂ ಅದು ಸ್ವಲ್ಪ ಚೆನ್ನಾಗಿಯೇ ಇತ್ತು. ಆದರೆ, ನಾನು ಹೈಸ್ಕೂಲ್‌ಗೆ ಅಂತ ಬಾಯ್ಸ್ ಸ್ಕೂಲ್‌ಗೆ ಸೇರಬೇಕಾಯಿತು. ಅವಳು ಸಹ ಬೇರೆ ಸ್ಕೂಲ್, ಅಂದ್ರೆ ಅವಳದ್ದು ಕಂಬೈನ್ಡ್ ಸ್ಕೂಲ್, ಸೊ ನನಗೇನು ಅಭ್ಯಂತರ ಇರಲಿಲ್ಲ. ಆದ್ರೆ, ಅವಳ ಮನದಲ್ಲೊಂದು ಶಂಕೆ ಅನ್ನೋದು ಇಲ್ಲಿಂದ ನೋಡಿ ಶುರುವಾಯಿತು.

ಮಾತ್ ಮಾತಿಗೂ ಜಗಳ, ಮಾತ್ ಮಾತಿಗೂ ಅನುಮಾನ, ಮಾತ್ ಮಾತಿಗೂ ಕೋಪ. ಈ ಮೂರು ಶಬ್ದಗಳೇ ನನ್ನನ್ನ ಈ ಪ್ರೀತಿ–ಪ್ರೇಮ ಎಂಬ ಬಂಧನದಲ್ಲಿ ಭಾಗಿಯಾಗಲು ಬಿಡಲೇ ಇಲ್ಲ. ನಾನೆಷ್ಟೇ ನಿಷ್ಠುರ ಭಾವನೆಯಿಂದಿದ್ದರೂ ಅವಳ ಭಾವನೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಒಂದೊಮ್ಮೆ ಅನ್ನಿಸಿದ್ದಿಷ್ಟೇ ನಾನು ಎಲ್ಲರ ಹಾಗೆ ರಿಲೇಶನ್‌ಶಿಪ್‌ನಲ್ಲಿ ಇದ್ದರೆ ನನ್ನ ಮನಸಿಗೂ ನೆಮ್ಮದಿ ಇರಬಹುದೆಂದು. ಆದರೆ ಹಾಗೆ ಅಂದುಕೊಂಡಾಗಲೆಲ್ಲ ಅವಳ ಆ ಸಿಲ್ಲಿತನ ನನ್ನನ್ನು ಅವಳಿಂದ ದೂರ ತಳ್ಳುತ್ತಲೇ ಇತ್ತು.

ನಾನೆಷ್ಟೇ ಸಮಾಧಾನ ಭಾವದಿಂದ ಅವಳೆದುರಿಗೆ ಹೋದರು ಅವಳ ಸಣ್ಣ ಮಾತುಗಳು ಕೆಲವೊಮ್ಮೆ ನನಗೆ ಅರ್ಥವಾಗತ್ತಲೇ ಇರಲಿಲ್ಲ. ನನ್ನ ಜೀವನ ಅನುಭವದ ಪ್ರಕಾರ ಪ್ರೀತಿ ಎಂದರೆ ಬರಿ ಮೋಹಕ್ಕೆ ಮಾತ್ರ ಸೀಮಿತವಾಗಿರಬಾರದು. ‘ಪ್ರೀತಿ ಎಂದರೆ ಇಬ್ಬರ ನಡುವಿನ ಭಾವನೆಗಳನ್ನು ಒಂದು ಮಾಡಿ, ಜೀವನದ ಪ್ರತಿ ಕ್ಷಣಕ್ಕೂ ಒಬ್ಬರನ್ನೊಬ್ಬರನ್ನು ಅರ್ಥ ಮಾಡಿಕೊಳ್ಳುವುದು’.

ADVERTISEMENT

ಆದರೆ ಈಗಿನ ಕಾಲದಲ್ಲಿ ಇದು ಸ್ವಲ್ಪ ಕಷ್ಟವೇ ಸರಿ ಅಂತ ಅನ್ನಿಸಿದ್ದರು, ನನ್ನವಳಿಗಾಗಿ ನಾನು ಇಷ್ಟನ್ನು ಸಹಿಸಿಕೊಳ್ಳದಿದ್ದರೆ ಹೇಗೆ ಎಂದು ನನ್ನಷ್ಟಕ್ಕೆ ನಾನೇ ಗಟ್ಟಿ ಮನಸ್ಸಿನಿಂದ ಎಲ್ಲವನ್ನು ಸಹಿಸಿಕೊಳ್ಳುತ್ತಿದ್ದೆ. ಕೆಲವೊಮ್ಮೆ ಮನೆಯ ಪರಸ್ಥಿತಿ ನೋಡಿದಾಗಲೆಲ್ಲ ಅನ್ನಿಸಿದ್ದು ಇದೆಲ್ಲ ಸರಿ ಬರೋಲ್ಲ ಅಂತ. ಆದರೂ, ಕೆಲವೊಮ್ಮೆ ಅನ್ನಿಸುವುದು ನಮ್ಮ ಮನೆಯವರ ಜಗಳಗಳ ನಡುವೆ ಇವಳನ್ನ ಕಟ್ಟಿಕೊಂಡಾಗಲಾದರೂ ಸುಖವಾಗಿರಬಹುದೆಂದು. ಆದರೂ ಅವಳ ರುದ್ರ ತಾಂಡವಕ್ಕೆ ಕೆಲವೊಮ್ಮೆ ಅವಳ ಮನೆಯವರಷ್ಟೇ ಅಲ್ಲ ನನಗೂ ಸಹಿಸಲಾಗುತ್ತಿರಲಿಲ್ಲ. ಯಾವುದೋ ಕೆಟ್ಟ ಗಳಿಗೆ ಎಂದು ಹೇಗೋ ಅವಳನ್ನು ಸಮಾಧಾನ ಪಡಿಸುತ್ತಿದ್ದೆ.

ಆದರೆ, ಇದೆಲ್ಲ ಆ ವಯಸ್ಸಿನ ಬುದ್ಧಿಗೆ ಅರ್ಥವೇ ಆಗಲಾರದಂತಹುದ್ದಾಗಿದ್ದರು ನನ್ನಮ್ಮನ ತಾಳ್ಮೆಯನ್ನು ನೋಡಿಯಾದರೂ ನಾನು ಸ್ವಲ್ಪ ಮಟ್ಟಿಗೆ ಜೀವನದಲ್ಲಿ ಸಹನೆ ಅನ್ನೋದನ್ನ ಕಲಿತಿದ್ದೆ. ಆವತ್ತಿನ ಸೂರ್ಯೋದಯ ಸ್ವಲ್ಪ ಬೇಗವೇ ಆದರೂ ನನಗೆ ಅದು ಆಗಿರಲಿಲ್ಲ. ಮನೆಯವರೆಲ್ಲ ಬೇಗ ಬೇಗ ಎದ್ದು ದೇವಸ್ಥಾನಕ್ಕೆ ಹೋಗಿದ್ದರು. ಕಾರಣ ಅದು ಅಮವಾಸೆಯ ಸೋಮುವಾರ. ಯಾರು ಇರದ ಹೊತ್ತನ್ನು ಒಂದೊಳ್ಳೆ ಮುಹೂರ್ತವನ್ನಾಗಿಸೋ ನನ್ನ ಮನವು ಯಾಕೋ ಚಡಪಡಿಸುತ್ತಲೇ ಇತ್ತು, ಆದರೂ ಹೇಗೊ ನಮ್ಮ ಮನೆಯ ಮೇಲ್ಚಾವಣಿಯ ಹತ್ತಿರ ಹೋದೆ. ಅವಳು ಸಹ ಅವಲಕ್ಕಿ ಒಣಗಿಸಲೆಂದೇ ಮೇಲೆ ಬಂದಿದ್ದಳು. ಒಂದೊಮ್ಮೆ ನಾನು ಕತ್ತು ತಿರುಗಿಸಿ ಹಿಂದೆ ಮುಂದೆ ನೋಡಿದೆ. ಯಾರು ಇಲ್ಲದ ಹಾಗೆ ತೋಚಿತು. ಅಲ್ಲೇ ಪಕ್ಕದಲ್ಲಿದ್ದ ಹೂಕುಂಡದಲ್ಲಿನ ಒಂದೆರಡು ಮಲ್ಲಿಗೆ ಹೂಗಳನ್ನು ಕಿತ್ತು ಅವಳ ತಲೆಗೆ ಮೂಡಿಸಿದೆ. ಗಾಬರಿಯಾದ ಅವಳು ಒಂದೊಮ್ಮೆ ತಿರುಗಿನೋಡಿದಾಗ ಅವಳ ಮೃದವಾದ ಕೈಗಳಿಗೊಮ್ಮೆ ನನ್ನ ಕೈ ತಾಗಿಸಿ ‘ಐ ಲವ್ ಯು’ಕಣೆ ನೀ ಏನಾದ್ರೂ ಮಾಡ್ಕೋ ನನಗಂತೂ ನಿನ್ನ ಬಿಟ್ಟು ಇರಲಿಕ್ಕೆ ಆಗಲ್ಲ ಅಂತ ಹೇಳಿದವನೇ ಓಡೋಡಿ ನಮ್ಮ ಮನೆಯೊಳಗೇ ಹಾರಿ ಬಂದೆ.

–ಸಂಗಮೇಶ ಸಜ್ಜನ, ರಾಜಾಜಿನಗರ

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.