ADVERTISEMENT

Valentine Day | ಇಂದಿಗೂ ನಮ್ಮ ಪ್ರೀತಿಗೆ ಅವಳೇ ಉತ್ಸವ ದೇವತೆ

ಪ್ರಜಾವಾಣಿ ವಿಶೇಷ
Published 13 ಫೆಬ್ರುವರಿ 2020, 13:37 IST
Last Updated 13 ಫೆಬ್ರುವರಿ 2020, 13:37 IST
ಪ್ರೇಮ ನಿವೇದನೆ
ಪ್ರೇಮ ನಿವೇದನೆ   

ಅದು ದೀಪಾವಳಿಯ ಸಂಜೆ ಅಣ್ಣನ ಮಗನ‌ ಜೊತೆ ಪಟಾಕಿ ಹಚ್ಚುವಾಗ ಢಂ ಎಂಬ ಶಬ್ದದ ಜೊತೆ ಅವಳು ಕಿರುಚಿದ ಶಬ್ದ ಕಿವಿಗಪ್ಪಳಿಸಿತು. ತಿರುಗಿ ನೋಡುವಷ್ಟರಲ್ಲಿ ಸೆರಗನ್ನು‌ ಕೈಲಿಡಿದ ಕೆಂಪು ಸೂರ್ಯನಂತೆ ಕೋಪಗೊಂಡ ಅವಳು‌ ನಿಂತಿದ್ದಳು. ಅಂದಹಾಗೆ ಅವಳು ನಿವೇದಿತಾ ನಮ್ಮ ಮನೆಯಿಂದ ಮೂರನೇ ಮನೆ,ಚಿಕ್ಕವರಿಂದ ಪರಸ್ಪರ ನೋಡುತ್ತಲೇ ಬೆಳೆದವರು.

ನಾವು ಒಮ್ಮೆ ಊರಹಬ್ಬದಲ್ಲಿ ಗೆಳೆಯನೊಬ್ಬನ ಜೊತೆ ಸೇರಿ ಅವಳನ್ನು ರೇಗಿಸಿದ್ದಕ್ಕಾಗಿ ನಾನೆಂದರೆ ಅಂದಿನಿಂದಲೂ ಕೋಪ ಅವಳಿಗೆ.
ಆ ಕೋಪ ಈಗ ದುಪ್ಪಟ್ಟಾಗಿ ಕಣ್ಣು ಕೆಂಪಾಗಿಸಿತ್ತು.ಕಾರಣ, ಪಟಾಕಿ ಕಿಡಿ ಅವಳ ಹೊಸ ಸೀರೆಗೆ ಸಿಡಿದುಸುಟ್ಟಿತ್ತು ...
ಮೌನದಲ್ಲೇ ಕೋಪತೋರಿಸಿ ನನ್ನನ್ನೇ ಕೆಕ್ಕರಿಸಿ ನೋಡುತ್ತಾ ಹೊರಟ ಅವಳು ಮೊದಲಬಾರಿ ನೇರ ಮನಸ್ಸಿಗಿಳಿದುಬಿಟ್ಟಳು. ಹಿಂದಿನಿಂದಲೂ ಅವಳೆಂದರೆ ಏನೋ ಅಕರ್ಷಣೆ. ಅವಳ ಕೋಪಕ್ಕೆ ಗುರಿಯಾದರು, ಅವಳನ್ನು ಕದ್ದು ನೋಡುವಾಗ ಎಲ್ಲಿಲ್ಲದ ಖುಷಿ.ಒಮ್ಮೆ ಅವಳ ಕಾಲೇಜು ಬಳಿ ಯಾರೋ ಒಬ್ಬನ ಜೊತೆ ಮಾತನಾಡುತ್ತ ನಿಂತಿದ್ದು ನೋಡಿ ನನ್ನ ಕೋಪ ನೆತ್ತಿಗೇರಿತ್ತು. ನಂತರ ಅವನನ್ನು ಬರುವೆ ಅಣ್ಣ ಎಂದು ಮುನ್ನಡೆದಾಗ ನಕ್ಕು ಸುಮ್ಮನಾಗಿದ್ದೆ.

ಆದರೆ ಈ ಕ್ಷಣಕ್ಕೆ ಅವಳ ಮೇಲಿರುವುದು ಪ್ರೀತಿಯೇ ಎಂದು ಖಾತ್ರಿಯಾಗಿತ್ತು. ಜೊತೆಗೆ ಸುಟ್ಟ ಸೀರೆಯ ಕಾರಣ ಸಿಕ್ಕಿತ್ತು. ತಡಮಾಡಲಿಲ್ಲ ಹಬ್ಬಕಳೆದು ಮೂರು ದಿನದ ನಂತರ ಚೆಂದದ ಮೈಸೂರ್ ಸಿಲ್ಕ್ ಸೀರೆಯೊಂದನ್ನು ಅವಳಿಗೆಂದೇ ಹುಡುಕಿ ತಂದು ಜೊತೆಗೆ ಒಂದು ಹಾಳೆಯಲ್ಲಿ ನನ್ನ ಭಾವನೆಗಳನ್ನು ತುಂಬಿಸಿಕೊಂಡು ನೇರವಾಗಿ ಅವಳ ಕಾಲೇಜಿನ ಬಳಿ ಬಂದು ನಿಂತೆ.ಬಹಳ ಕಾಯ್ದ ಮೇಲೆ ಅವಳು ಬಂದಳು ಆದರೆ ಅದನ್ನು ಕೊಡುವ ಧೈರ್ಯ ನನಗಿರಲಿಲ್ಲ ...

ADVERTISEMENT

ಆದರೆ ಅವಳಿಗೆ ಇಂದು ಹೇಳಲೇಬೇಕು ಎಂಬ ಹಠ ಮನಸ್ಸಲ್ಲಿ ಬಲವಾಯ್ತು. ಸಂಜೆ ಕಾಲೇಜು ಬಿಡುವ ಸಮಯಕ್ಕೆ ಅದೇ ಜಾಗಕ್ಕೆ ಮತ್ತೆ ಹೋಗಿ ಕಾಯುತ್ತಾ ನಿಂತೆ ನನ್ನ ಪುಣ್ಯಕ್ಕೆ ಅವಳೊಬ್ಬಳೇ ಹೊರ ಬಂದಳು. ಸೀರೆಯಿಡಿದು ನಿಂತಿದ್ದ ನನ್ನನ್ನು ಕಂಡು ನನ್ನ ಬಳಿ ಬರುತ್ತಿದ್ದಂತೆ ಅವಳ ನಡುಗೆಯ ವೇಗ ಕಡಿಮೆಯಾಯ್ತು. ನನ್ನ ಮನಸ್ಸು ಅವಳನ್ನು ಮಾತನಾಡಿಸಲು ಸಿದ್ದವಾಗಿದ್ದ ಕಾರಣ ನಾನೇ ನಿವಿ ಎಂದು ಕರೆದೆ. ಅವಳು ಏನು ಎಂದಳು.ಮೊದಲ ಸಲ ಅವಳ ಮುಖದಲ್ಲಿ ಕೊಪದ ಬದಲು ಆತಂಕವ ಕಂಡೆ...

ನಂತರ ಕೈಲಿದ್ದ ಸೀರೆಯನ್ನು ಕೊಡುತ್ತಾ ಅವತ್ತು ಪಟಾಕಿ ಕಿಡಿಯಿಂದ ನಿನ್ನ ಸೀರೆ ಸುಟ್ಟಿತಲ್ಲ ಅದಕ್ಕೆ ತಗೋ ಈ ಹೊಸ ಸೀರೆಯೆಂದೆ. ಆದರವಳು ಪರವಾಗಿಲ್ಲ ಎಂದು ಅದನ್ನು ತಿರಸ್ಕರಿಸಿ ಹೊರಡಲು ಸಿದ್ಧವಾದಾಗ ನನಗೆ ಗೊತ್ತಿಲ್ಲದೆ ಅವಳ ಕೈಹಿಡಿದುನಿಲ್ಲಿಸಿದೆ. ಒಂದೇ ಸಮನೆ ಅವಳ ಕೈಗೆ ಪತ್ರವನ್ನಿಟ್ಟು ನನಗೆ ನೀನೆಂದರಿಷ್ಟ. ನಾನಿನ್ನನ್ನು ಪ್ರೀತಿಸುತ್ತಿದ್ದೇನೆ. ಉಳಿದದ್ದೆಲ್ಲವೂ ಈ ಪತ್ರದಲ್ಲಿದೆ ನಿನಗೆ ನಾನು ಒಪ್ಪಿಗೆಯಿದ್ದರೆ ಈ ಸೀರೆ ಉಡು ಇಲ್ಲ ಸೀರೆಯನ್ನು ಎಲ್ಲಾದರೂ ಎಸೆದುಬಿಡು ಎಂದು ಅವಳ ಕೈಗೆ ಸೀರೆ ಕೊಟ್ಟು ಅಲ್ಲಿಂದ ಕಾಲ್ಕಿತ್ತೆ.ಬಿರುಗಾಳಿಯಿಂದ ತಪ್ಪಿಸಿಕೊಂಡ ಅನುಭವ ಅದು...

ತುಂಬಾ ದಿನಗಳು ಕಳೆದವು ಅವಳು ಆ ಸೀರೆ ಉಟ್ಟಿದನ್ನು ನೋಡಲೇ ಇಲ್ಲ. ಎಲ್ಲಾ ಮುಗಿಯಿತೆಂದು ಸುಮ್ಮನಾಗುಷ್ಟರಲ್ಲಿ ಅದೊಂದು ದಿನ ಸಂಕ್ರಾಂತಿ ಹಬ್ಬದಂದು ಊರ ಹಸುಗಳನ್ನೆಲ್ಲ ಒಟ್ಟಿಗೆ ಕಿಚ್ಚು ಹಾಯಿಸುವ ಸ್ಥಳಕ್ಕೆ ನೋಡಲೆಂದು ಹೋದಾಗ ಅಲ್ಲಿ ನನಗೆ ತಲೆತಿರುಗುವಂತಹ ಅಚ್ಚರಿಯೊಂದು ಕಾದಿತ್ತು. ಕಾರಣ, ಅವಳಲ್ಲಿಗೆ ಬಂದಿದ್ದಳು. ಅಷ್ಟೇ ಅಲ್ಲ ನಾ ಕೊಟ್ಟ ಸೀರೆಯುಟ್ಟು ಬಂದಿದ್ದಳು. ಆ ಸಂತೋಷನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ...

ನಂತರ ಅವಳು ನೇರವಾಗಿ ಬಂದು ಒಪ್ಪಿಗೆ ಸೂಚಿಸಿದಳಲ್ಲದೆ, ಈ ಮೊದಲೇ ಅವಳಿಗೂ ನನ್ನ ಮೇಲೆ ಒಲವಿದ್ದ ವಿಚಾರವನ್ನು ನಾಚಿಕೆಯಿಂದಲೇ ಹೇಳಿದಳು. ವರ್ಷಗಳು‌ ಕಳೆಯಿತು ಇಂದಿಗೂ ನಮ್ಮ ಪ್ರೀತಿಗೆ ಪ್ರತಿದಿನವು ಉತ್ಸವ ದೇವತೆಯವಳೇ "ನನ್ನ ನಿವೇದಿತಾ" ....

-ಪ್ರತಾಪ್ ಎಂ.ಆರ್‌

***

ಪ್ರೇಮ ಪ್ರಸ್ತಾವದ ಮಧುರ ನೆನಪುಗಳನ್ನು ಹಂಚಿಕೊಳ್ಳಲು ‘ಪ್ರಜಾವಾಣಿ’ ನೀಡಿದ ಕರೆಗೆ ಸಾಕಷ್ಟು ಜನರು ಓಗೊಟ್ಟರು. ಪ್ರಸ್ತಾವದ ಗಾಢ ನೆನಪುಗಳನ್ನು ಹೊಂದಿರುವ ಆಯ್ದ ಕೆಲ ಬರಹಗಳು ಇಲ್ಲಿವೆ. ನಿಮಗೆ ಯಾವ ಪ್ರಸ್ತಾವ ಇಷ್ಟವಾಯಿತು? ಕಾಮೆಂಟ್‌ ಮಾಡಿ ತಿಳಿಸಿ. ತೀರ್ಪುಗಾರರ ಆಯ್ಕೆಯ ಅತ್ಯುತ್ತಮ ಮೂರು ಬರಹಗಳಿಗೆ ‘ಅಮೆಜಾನ್‌ ಇಕೋ ಡಾಟ್‌‘ ಬಹುಮಾನವೂ ಇದೆ. ಫೆ.18ರಂದು ವಿಜೇತರ ವಿವರ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.