ADVERTISEMENT

ಟಿವಿಯನ್ನು ಸ್ಮಾರ್ಟ್‌ ಆಗಿಸಲು ‘ಮಿ ಟಿವಿ ಸ್ಟಿಕ್’

ವಿಶ್ವನಾಥ ಎಸ್.
Published 23 ಸೆಪ್ಟೆಂಬರ್ 2020, 2:54 IST
Last Updated 23 ಸೆಪ್ಟೆಂಬರ್ 2020, 2:54 IST
ಮಿ ಟಿವಿ ಸ್ಟಿಕ್
ಮಿ ಟಿವಿ ಸ್ಟಿಕ್   

ನಿಮ್ಮ ಮನೆಯಲ್ಲಿ ಇರುವ ಟಿವಿಗೆ ಇಂಟರ್‌ನೆಟ್‌ ಸಂಪರ್ಕಿಸಲು ಸಾಧ್ಯವಾಗಿಲ್ಲ ಎನ್ನುವ ಕಾರಣಕ್ಕಾಗಿ ಹೊಸ ಸ್ಮಾರ್ಟ್‌ ಟಿವಿ ಖರೀದಿಸಬೇಡಿ. ಅದಕ್ಕೆಂದೇ ಹಲವು ಕಂಪನಿಗಳು ‘ಟಿವಿ ಸ್ಟಿಕ್‌’ ಬಿಡುಗಡೆ ಮಾಡಿವೆ. ಈ ಸಾಲಿನಲ್ಲಿ ಶಿಯೋಮಿ ಕಂಪನಿಯ ‘ಮಿ ಟಿವಿ ಸ್ಟಿಕ್‌’ ₹ 2,799ಕ್ಕೆ ಸಿಗುತ್ತಿದೆ.

ಈಗಿನ ಬಹುತೇಕ ಎಲ್ಲಾ ಸ್ಮಾರ್ಟ್‌ ಟಿವಿಗಳು ಆಂಡ್ರಾಯ್ಡ್‌ ಕಾರ್ಯಾಚರಣಾ ವ್ಯವಸ್ಥೆ (ಒಎಸ್‌) ಹೊಂದಿರುತ್ತವೆ. ಆದರೆ, ಆಂಡ್ರಾಯ್ಡ್‌ ಒಎಸ್ ಇರದ ಅಥವಾ ಎಲ್‌ಇಡಿ ಪರದೆಯ ಟಿವಿಗಳನ್ನು ಅಂತರ್ಜಾಲಕ್ಕೆ ಸಂಪರ್ಕಿಸಲು ‘ಮಿ ಟಿವಿ ಸ್ಟಿಕ್‌’ ಉಪಯುಕ್ತವಾಗಿದೆ.ಪ್ಲೇ ಸ್ಟೋರ್‌ನಿಂದ ಆ್ಯಪ್‌ಗಳನ್ನು ಡೌನ್‌ಲೋಡ್‌ ಸಹ ಮಾಡಬಹುದು. ನೆಟ್‌ಫ್ಲಿಕ್‌, ಅಮೆಜಾನ್‌ ಪ್ರೈಮ್‌, ಜಿಯೊ ಸಿನಿಮಾದ ಮೂಲಕ ನಿಮ್ಮಿಷ್ಟದ ವೆಬ್‌ ಸರಣಿ, ಧಾರಾವಾಹಿ, ಸಿನಿಮಾ ಇತ್ಯಾದಿಗಳನ್ನು ನೋಡಬಹುದು.

ಇದರ ಗರಿಷ್ಠ ಸಾಮರ್ಥ್ಯ 1080ಪಿ ರೆಸಲ್ಯೂಷನ್‌ ಇದೆ. ಈಗಿನ ಬಹುತೇಕ ಎಲ್ಲಾ ಟಿವಿಗಳೂ 4ಕೆ ಬೆಂಬಲಿಸುತ್ತವೆ. ಹೀಗಿರುವಾಗ 1080ಪಿ ಸಾಮರ್ಥ್ಯವು ಕೊರತೆ ಎನ್ನಿಸುತ್ತದೆ. ಹೀಗಿದ್ದರೂ ಹೊಸ ಟಿವಿಗೆ ಮಾಡಬೇಕಿರುವ ಖರ್ಚನ್ನು ಪರಿಗಣಿಸಿದರೆ ಇದನ್ನು ಬಳಸುವುದೇ ವಾಸಿ. ಹಾಗಂತ 4ಕೆ ಟಿವಿಯಲ್ಲಿ ಇದನ್ನು ಬಳಸಲು ಸಾಧ್ಯವಿಲ್ಲ ಎಂದಲ್ಲ, ಆದರೆ ಗುಣಮಟ್ಟ 4ಕೆ ರೀತಿ ಇರುವುದಿಲ್ಲವಷ್ಟೆ.

ADVERTISEMENT

ಸಂಪರ್ಕಿಸುವುದು ಹೇಗೆ?: ಪೆನ್‌ ಡ್ರೈವ್‌ ರೀತಿ ಇರುವ ಸ್ಟಿಕ್‌ ಅನ್ನು ಟಿವಿ ಅಥವಾ ಎಲ್‌ಇಡಿ ಪರದೆಯ ಎಚ್‌ಡಿಎಂಐ ಪೋರ್ಟ್‌ಗೆ ಸಂಪರ್ಕಿಸಿ.ಈಗಂತೂ ಎಲ್ಲರ ಬಳಿಯೂ ಸ್ಮಾರ್ಟ್‌ಫೋನ್‌ ಇರುತ್ತದೆ. ಬ್ಲೂಟೂತ್‌ ಮೂಲಕ ಮೊಬೈಲ್‌ ಮತ್ತು ಸ್ಟಿಕ್‌ ಮಧ್ಯೆ ಸಂಪರ್ಕ ಸಾಧಿಸಿದ ಬಳಿಕ ಹಾಟ್‌ಸ್ಪಾಟ್‌ ನೆರವಿನಿಂದ ಇಂಟರ್‌ನೆಟ್‌ ಶೇರ್‌ ಮಾಡಿ.

ಕ್ರೋಮ್‌ಕಾಸ್ಟ್‌: ಕ್ರೋಮ್‌ಕಾಸ್ಟ್‌ ಇನ್‌ಬಿಲ್ಟ್‌ ಆಗಿದೆ. ಹಾಗಾಗಿ ಮೊಬೈಲ್‌ನಲ್ಲಿ ಇರುವ ಮೂವಿ, ಫೊಟೊ ಅಥವಾ ಮೊಬೈಲ್‌ನಲ್ಲಿ ಇರುವ ಯುಟ್ಯೂಬ್‌ನಲ್ಲಿ ಪ್ಲೇ ಮಾಡಿದ ವಿಡಿಯೊವನ್ನು ಟಿವಿಯ ದೊಡ್ಡ ಪರದೆಯಲ್ಲಿ ನೋಡಬಹುದು. ಈ ವೇಳೆ ನೀವು ಮೊಬೈಲ್‌ನಲ್ಲಿ ಬೇರೆ ಕೆಲಸಗಳನ್ನು ಮಾಡಿಕೊಳ್ಳಬಹುದು.

ಗೂಗಲ್‌ ಅಸಿಸ್ಟಂಟ್: ಸ್ಟಿಕ್‌ ಜತೆ ಇರುವ ರಿಮೋಟ್‌ನಲ್ಲಿ ಗೂಗಲ್‌ ಅಸಿಸ್ಟಂಟ್‌ ವಾಯ್ಸ್‌ ಕಮಾಂಡ್‌ ಸೌಲಭ್ಯವಿದೆ. ಟಿವಿಯಲ್ಲಿ ಏನನ್ನು ನೋಡಲು ಬಯಸುತ್ತೇವೆ ಎನ್ನುವುದನ್ನು ಹುಡುಕುವ ಬದಲಿಗೆ ಅದನ್ನು ಉಚ್ಛರಿಸಿದರೆ ಪ್ಲೇ ಆಗುತ್ತದೆ.

ಇನ್‌ಬಿಲ್ಟ್‌ ಬ್ಯಾಟರಿ ಇಲ್ಲದೇ ಇರುವುದರಿಂದ ಅದನ್ನು ಅಡಾಪ್ಟರ್‌ ಮೂಲಕ ಪವರ್‌ಗೆ ಕನೆಕ್ಟ್‌ ಮಾಡಬೇಕಾಗುತ್ತದೆ. ಆಂಡ್ರಾಯ್ಡ್‌ ಟಿವಿ 9 ಒಎಸ್‌ ಹೊಂದಿದ್ದು, 1ಜಿಬಿ ಡಿಡಿಆರ್‌4 ರ್‍ಯಾಮ್‌ ಮತ್ತು 8ಜಿಬಿ ಇಎಂಎಂಸಿ ಸ್ಟೋರೇಜ್‌ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.