ADVERTISEMENT

ವಿಜ್ಞಾನ | ಆಗಸದಲ್ಲಿ ಕೋಟಿ ಕೋಟಿ ತಾಮ್ರದ ಸೂಜಿಗಳು

ಶರತ್ ಭಟ್ಟ ಸೇರಾಜೆ
Published 21 ಮಾರ್ಚ್ 2023, 19:30 IST
Last Updated 21 ಮಾರ್ಚ್ 2023, 19:30 IST
ಜ
   

ಕಥೆ–ಕಾದಂಬರಿಗಳಲ್ಲಿ ಲೇಖಕರು ತಮ್ಮ ಕಥೆಯನ್ನು ರಂಗೇರಿಸಲಿಕ್ಕಾಗಿ ಭಾವನೆಯ ಶಕ್ತಿಯನ್ನು ಹರಿಯಬಿಟ್ಟು, ಚಿತ್ರ–ವಿಚಿತ್ರವಾದ ಕಲ್ಪನೆಗಳನ್ನು ಮಾಡಿಕೊಳ್ಳುವುದು ಸಾಮಾನ್ಯವೇ. ಆದರೆ ಅಂಥ ಕಲ್ಪನೆಗಳಿಂದಲೂ ವಿಚಿತ್ರವಾದ ಸಂಗತಿಗಳು ವಾಸ್ತವದಲ್ಲಿಯೇ ಎಷ್ಟೋ ಸಲ ಘಟಿಸಿಬಿಡುವುದಿದೆ. ವಿಜ್ಞಾನದ ಕ್ಷೇತ್ರದಲ್ಲೂ ಹೀಗಾಗುತ್ತದೆ.

‘48 ಕೋಟಿ ತಾಮ್ರದ ಸೂಜಿಗಳನ್ನು ವಿಜ್ಞಾನಿಗಳು ಆಕಾಶದಲ್ಲಿ ಚೆಲ್ಲಿದರು’ ಎಂದು ಯಾರಾದರೂ ಕಥೆಯಲ್ಲಿ ಬರೆದಿದ್ದರೆ, ‘ಕಥೆಯಾದರೂ ಅದು ನಂಬುವ ಹಾಗಿರಬೇಕು ಸ್ವಾಮೀ’ ಎಂಬ ಟೀಕೆ ಕೇಳಿ ಬರುತ್ತಿತ್ತೋ ಏನೋ! ಆದರೆ ಇಂಥದ್ದೊಂದು ಸಂಗತಿ ನಿಜವಾಗಿಯೂ ಘಟಿಸಿದ್ದು ಇತಿಹಾಸವಾದ್ದರಿಂದ ಹಾಗೆ ಹೇಳಲಾಗದು!

ಅದಾದದ್ದು ಹೀಗೆ: ಅದು ಅರುವತ್ತರ ದಶಕ. ಶೀತಲಯುದ್ಧದ ಬಿಸಿಯಿದ್ದ ಕಾಲ. ಸ್ವಲ್ಪ ಹೆಚ್ಚುಕಡಿಮೆಯಾದರೆ ಅವರು ಇವರ ಮೇಲೋ, ಇವರು ಅವರ ಮೇಲೋ ಅಣುಬಾಂಬನ್ನು ಉದುರಿಸಿಯೇ ಬಿಡುತ್ತಾರೆ ಎಂಬಂತೆ ಅಮೆರಿಕ ಮತ್ತು ರಷ್ಯಾಗಳು ವರ್ತಿಸುತ್ತಿದ್ದ ಕಾಲವದು. ಈ ದೇಶಗಳ ಬಾಂಬರ್ ವಿಮಾನಗಳು ಜಗತ್ತಿನ ಬೇರೆ ಬೇರೆ ಮೂಲೆಗಳಲ್ಲಿ, ಆಯಕಟ್ಟಿನ ಜಾಗಗಳಲ್ಲಿ ತಯಾರಾಗಿ ನಿಂತಿರುತ್ತಿದ್ದವು. ದೂರ ದೂರದ ಜಾಗಗಳಲ್ಲಿ ಇರುವಾಗ, ಅವುಗಳ ನಡುವೆ ಸಂಪರ್ಕ ಬೇಕಲ್ಲ?

ADVERTISEMENT

ದೂರದ ಸಂಪರ್ಕಕ್ಕೆ ಇದ್ದದ್ದು ಸಮುದ್ರಗಳ ಅಡಿಯಲ್ಲಿ ಹಾಸಲ್ಪಟ್ಟಿದ್ದ ತಂತಿಗಳು (undersea cables). ಈ ತಂತಿಗಳನ್ನೂ ರಷ್ಯಾದವರು ಕತ್ತರಿಸಿ ಹಾಕಿದರೆ ಮತ್ತೆ ಉಳಿಯುವುದು ರೇಡಿಯೋ ಅಲೆಗಳ ಪ್ರಸರಣವನ್ನು ಅವಲಂಬಿಸಿದ ಸಂಪರ್ಕ ಮಾತ್ರ. (ಆ ಕಾಲದಲ್ಲಿ ಈಗಿನಂತೆ ಸಂಪರ್ಕ ಉಪಗ್ರಹಗಳ ಉಡ್ಡಯನ ಇನ್ನೂ ನಡೆದಿರಲಿಲ್ಲ ಎಂಬುದು ನಮ್ಮ ನೆನಪಿನಲ್ಲಿರಬೇಕು.)

ಈ ರೇಡಿಯೋ ಅಲೆಗಳು ಭೂಮಿಯಿಂದ 50ರಿಂದ 1000 ಕಿಲೋಮೀಟರುಗಳವರೆಗಿರುವ ಅಯಾನುಗಳ ಪದರ(ionosphere)ನ್ನು ಅವಲಂಬಿಸಿರುತ್ತವೆ. ಭೂಮಿಯಿಂದ ಹೊರಟ ರೇಡಿಯೋ ಅಲೆಗಳು ಈ ಅಯಾನುಗಳ ಪದರಕ್ಕೆ ಗುದ್ದಿ ಹಿಂದಿರುಗುತ್ತವೆ. ಈ ಅಲೆಗಳನ್ನು ಶಕ್ತಿಶಾಲಿಯಾಗಿಸುವುದಕ್ಕೆ ಬೇಕಾದ ವಿದ್ಯುದ್ವಾಹಿ ಕಣಗಳು ಅಲ್ಲಿರುತ್ತವೆ. ಹೀಗಾಗಿ ಅವುಗಳ ಸಿಗ್ನಲ್ ಕಡಮೆಯಾಯಿತು ಎಂಬಂತಾಗದೆ ಅವು ಬಲವರ್ಧಕ ಸಲಕರಣೆಯನ್ನು ಹಾದುಹೋದವೇನೋ ಎಂಬಂತಾಗುತ್ತದೆ. ಅವು ಆಂಟೆನಾಗಳಂತೆ ಕೆಲಸ ಮಾಡುತ್ತವೆ ಎನ್ನಬಹುದು. ಆದರೆ ಈ ಅಯಾನುಗಳ ಪದರ ಯಾವಾಗಲೂ ಒಂದೇ ರೀಟಾ ಇರುವುದಿಲ್ಲ ಎಂಬುದೇ ಸಮಸ್ಯೆ. ಋತು, ಹವಾಮಾನ, ಸೂರ್ಯನ ಸ್ಥಿತಿ ಇಂಥವುಗಳನ್ನು ಆಧರಿಸಿ ಅದರ ಗುಣಸ್ವಭಾವಗಳೂ ಆಗಾಗ ಬದಲಾಗುತ್ತಿರುತ್ತವೆ. ಹಾಗಾಗಿ ಇದನ್ನು ನಂಬಿ ಕೂತರೆ ಯಾವಾಗಲೂ ಸರಿಯಾಗಿ ರೇಡಿಯೋ ಅಲೆಗಳನ್ನು ಕಳಿಸಲಾದೀತು ಎನ್ನಲಾಗುವುದಿಲ್ಲ. ಮತ್ತೇನು ಮಾಡುವುದು ಹಾಗಾದರೆ?

ಇಂಥದ್ದೊಂದು ವ್ಯವಸ್ಥೆಯನ್ನು ಕೃತಕವಾಗಿ ಸೃಷ್ಟಿ ಮಾಡುವುದು! ಈ ಯೋಚನೆ ಬಂದದ್ದು ಎಂಐಟಿಯ ಲಿಂಕನ್ ಲ್ಯಾಬ್ಸ್ನ ವಾಲ್ಟರ್ ಮೋರೋ ಎಂಬ ವಿಜ್ಞಾನಿಗೆ. ಭೂಮಿಯ ಸುತ್ತಲೂ ರೇಡಿಯೋ ಪ್ರತಿಫಲಕವೊಂದು (radio reflector) ಇದ್ದರೆ ಕೆಲಸ ಸಾಧಿಸಬಹುದು ಎಂಬುದು ಅವನ ಆಲೋಚನೆ. ಶನಿಗ್ರಹದ ಸುತ್ತಲೂ ಒಂದು ಉಂಗುರವಿದೆಯಲ್ಲ, ಅಂಥದ್ದೊಂದು ಉಂಗುರವನ್ನು ಭೂಮಿತಾಯಿಗೂ ತೊಡಿಸಿದರೆ ಆ ಉಂಗುರವೇ ಪ್ರತಿಫಲಕವಾಗಿ ಕೆಲಸಮಾಡುತ್ತದೆ ಎಂಬುದು ಉಪಾಯದ ಒಟ್ಟು ಸಾರ. ಇಂಥದ್ದೊಂದು ಬೃಹದ್ಗಾತ್ರದ ಉಂಗುರವನ್ನು ತಾಮ್ರದ ಸೂಜಿಗಳು ಅಥವಾ ತಂತಿಗಳನ್ನು ಬಳಸಿ ತಯಾರಿಸುವ ಯೋಜನೆಯಾಯಿತು. ಅಷ್ಟು ದೊಡ್ಡ ಉಂಗುರವೆಂದ ಮೇಲೆ ತಾಮ್ರದ ತಂತಿಗಳೇನು ಕಡಿಮೆ ಪ್ರಮಾಣದಲ್ಲಿದ್ದರೆ ಆಗುತ್ತದೆಯೇ? ಕೋಟಿ ಸಂಖ್ಯೆಯಲ್ಲಿ ತಾಮ್ರದ ತಂತಿಗಳು ಬೇಕಾದದ್ದು ಈ ಕಾರಣಕ್ಕಾಗಿಯೇ. ಸುಲಭದ ಭಾಷೆಯಲ್ಲಿ ಹೇಳುವುದಾದರೆ ಈ ಒಂದೊಂದು ತಾಮ್ರದ ತಂತಿಯೂ ಪುಟ್ಟ ಆಂಟೆನಾವೊಂದರಂತೆ ಮಾಡುತ್ತದೆ ಎನ್ನಬಹುದು.

ಕಡೆಗೆ, 1961ರಲ್ಲಿ ಇಂಥ ತಾಮ್ರದ ತಂತಿಗಳನ್ನು ನ್ಯಾಫ್ತಲಿನ್ ಗುಳಿಗೆಗಳಲ್ಲಿ ಸುತ್ತಿ ಬಾಹ್ಯಾಕಾಶಕ್ಕೆ ಕಳಿಸಿಯೇ ಬಿಟ್ಟರು. ಈ ನ್ಯಾಫ್ತಲಿನ್ ಗುಳಿಗೆಗಳು ಬೇಗ ಆವಿಯಾಗಿ ಕಡೆಗೆ ತಾಮ್ರದ ತಂತಿಗಳು ಮಾತ್ರ ಉಳಿಯುತ್ತವೆ ಎಂಬುದು ಯೋಜನೆ. ಆದರೆ ತಂತಿಗಳು ಗ್ರಹಿಸಿದಷ್ಟು ದೂರ ಚದುರದೆ ತುಂಬ ಹತ್ತಿರ ಹತ್ತಿರ ಉಳಿದುಬಿಟ್ಟದ್ದರಿಂದ ಯೋಜನೆ ವಿಫಲವಾಯಿತು. 1963ರಲ್ಲಿ ಈ ತಪ್ಪನ್ನು ತಿದ್ದಿ ಮತ್ತೆ 350 ಮಿಲಿಯನ್ ಸೂಜಿಗಳನ್ನು ಆಕಾಶಕ್ಕೆ ಕಳಿಸಲಾಯಿತು. ಈ ಪ್ರಯತ್ನ ಯಶಸ್ವಿಯಾಯಿತು. ‘Project Needles’ ಎಂಬುದು ಈ ಯೋಜನೆಗೆ ಮೊದಲು ಇದ್ದ ಹೆಸರು; ಅನಂತರ ಅದನ್ನು ‘ಪ್ರಾಜೆಕ್ಟ್ ವೆಸ್ಟ್ ಫೋರ್ಡ್’ ಎಂದು ಕರೆಯಲಾಯಿತು. ಇವುಗಳನ್ನು ತುಂಬಾ ಎತ್ತರದಲ್ಲಿ ಬಿಟ್ಟರೆ ತೊಂದರೆಯಾದೀತೆಂದು, ಅವುಗಳನ್ನು ಕಡಿಮೆ ಎತ್ತರದಲ್ಲಿ ಬಿಡಲಾಗಿತ್ತು, ಹೀಗೆ ಮಾಡಿದರೆ ಅವು ಕೆಲವು ವರ್ಷಗಳಾದ ಮೇಲೆ ಮರಳಿ ಭೂಮಿಗೇ ಉದುರುತ್ತವೆ ಎಂಬುದು ಇದರ ಹಿಂದಿದ್ದ ಲೆಕ್ಕಾಚಾರ. ಆದರೆ ಹಾಗೆ ಅವು ಪೂರ್ತಿಯಾಗಿ ಭೂಮಿಗೆ ಬಂದು ಬಿದ್ದಿವೆಯೆಂದು ಹೇಳುವುದು ಕಷ್ಟ.

ವಿಷಯ ಇಲ್ಲಿಗೇ ನಿಲ್ಲಲಿಲ್ಲ. ರಷ್ಯಾವಂತೂ ಹೇಗಿದ್ದರೂ ವಿರೋಧಪಕ್ಷವೇ ಆಗಿತ್ತು, ಅದು ಈ ಕ್ರಮವನ್ನು ಖಂಡಿಸಿಯೇ ಖಂಡಿಸಿತು. ಅಲ್ಲಿನ ‘ಪ್ರಾವ್ಡಾ’ ಪತ್ರಿಕೆ ‘U.S.A. Dirties Space’ ಎಂಬರ್ಥದ ಶೀರ್ಷಿಕೆಯನ್ನು ಕೊಟ್ಟು ಬರೆಯಿತಂತೆ. ಉಳಿದ ದೇಶಗಳರವರೂ, ‘ಈ ಅಮೆರಿಕದವರೇನು ಬಾನಂಗಳವನ್ನು ತಮಗೆ ಬೇಕಾದ್ದನ್ನು ಚೆಲ್ಲಲು ಬಳಸಬಹುದಾದ ಕಸದ ತೊಟ್ಟಿ ಅಂದುಕೊಂಡಿದ್ದಾರೆಯೇ?’ ಎಂಬ ಧಾಟಿಯ ಮಾತುಗಳನ್ನಾಡಿದರು. ಕಡೆಗೆ, ಯುಎನ್ನಿನಲ್ಲಿ ಅಮೆರಿಕದ ರಾಯಭಾರಿಗಳು ಈ ವಿಷಯದಲ್ಲಿ ಸಮಜಾಯಿಷಿ ಕೊಡಬೇಕಾಗಿ ಬಂತು. ಆಮೇಲಿನ ದಿನಗಳಲ್ಲಿ ಸಂಪರ್ಕ ಉಪಗ್ರಹಗಳು ಬಂದದ್ದರಿಂದ ಇಂಥ ಸಾಹಸಗಳ ಅಗತ್ಯ ಬೀಳಲಿಲ್ಲ.

ಹೀಗೆ ಆಗಸದಲ್ಲಿ ಕೋಟಿಗಟ್ಟಲೆ ತಾಮ್ರದ ಸೂಜಿಗಳನ್ನು ಚೆಲ್ಲುವ ವಿಚಿತ್ರ ವಿದ್ಯಮಾನವೊಂದು ಘಟಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.