ADVERTISEMENT

ಓ ನಕ್ಷತ್ರವೇ ಓಡಿಹೋದೆ ಎಲ್ಲಿಗೆ?

ಗುರುರಾಜ್ ಎಸ್.ದಾವಣಗೆರೆ
Published 13 ಮಾರ್ಚ್ 2021, 19:30 IST
Last Updated 13 ಮಾರ್ಚ್ 2021, 19:30 IST
ಆಕಾಶಗಂಗೆಯಲ್ಲಿನ ಕಪ್ಪುಕುಳಿ. ಅದು ತಿಳಿನೀಲಿ ಬಣ್ಣ ಹೊರಸೂಸುವಾಗ ಕಂಡ ಚಿತ್ತಾರ
ಆಕಾಶಗಂಗೆಯಲ್ಲಿನ ಕಪ್ಪುಕುಳಿ. ಅದು ತಿಳಿನೀಲಿ ಬಣ್ಣ ಹೊರಸೂಸುವಾಗ ಕಂಡ ಚಿತ್ತಾರ   

ಕೋಪಗೊಂಡ ಮಕ್ಕಳು ಮನೆ ಬಿಟ್ಟು ಓಡಿ ಹೋಗುವುದು, ಭಾರೀ ಬಿಸಿನೆಸ್ ಕುಳಗಳು ಸಾಲ ನೀಡಿದ ಬ್ಯಾಂಕುಗಳಿಗೆ ಪಂಗನಾಮ ಹಾಕಿ ದೇಶಬಿಟ್ಟು ಓಡಿ ಹೋಗುವುದು ಹೊಸದೇನೂ ಅಲ್ಲ. ಪ್ರೀತಿ ಮಾಡಿ ಮನೆಯವರ ವಿರೋಧ ಕಟ್ಟಿಕೊಂಡು ಊರು ತೊರೆಯುವ ಪ್ರೇಮಿಗಳ ಸಂಖ್ಯೆ ಕೂಡ ಕಡಿಮೆಯೇನಿಲ್ಲ. ಆದರೆ ತಾರಾಮಂಡಲದ ನಕ್ಷತ್ರ ಓಡಿ ಹೋಗುವುದೆಂದರೆ? ಮನುಷ್ಯರು ಒಂದು ಜಾಗದಿಂದ ಇನ್ನೊಂದಕ್ಕೆ, ಒಂದು ಊರಿನಿಂದ ಇನ್ನೊಂದೂರಿಗೆ, ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಓಡಿ ಹೋಗಿ ನೆಲೆಸುತ್ತಾರೆ. ಆದರೆ ನಭೋಮಂಡಲದ ನಕ್ಷತ್ರ ಓಡುವುದಾದರೂ ಎಲ್ಲಿಗೆ?

ನಮ್ಮ ಗ್ಯಾಲಕ್ಸಿ ಆಕಾಶ ಗಂಗೆಗೆ (ಮಿಲ್ಕೀವೇ) ಸೇರಿದ ನಕ್ಷತ್ರವೊಂದು ಗಂಟೆಗೆ ಆರು ಕೋಟಿ ಮೈಲಿ ವೇಗದಲ್ಲಿ ನಮ್ಮ ವಿಶ್ವದಿಂದ ಹೊರಕ್ಕೆ ಚಿಮ್ಮಿ ಬೇರೊಂದು ವಿಶ್ವದ ಗಮ್ಯ, ಗಾಢ ಕತ್ತಲಿನ, ತಳವಿರದ ಆಳಕ್ಕೆ ಹೊರಟು ಹೋಗಿದೆ. ಹೀಗೆ ಆಕಾಶ ಗಂಗೆಯ ತೆಕ್ಕೆ ಬಿಡಿಸಿಕೊಂಡು ರಚ್ಚೆ ಹಿಡಿದ ಮಗುವಿನಂತೆ ಓಡಿ ಹೋದ ನಕ್ಷತ್ರದ ಹೆಸರು ಎಸ್5 ಎಚ್‌ವಿಎಸ್ 1. ಖಗೋಳ ಭಾಷೆಯಲ್ಲಿ ಎಚ್‌ವಿಎಸ್ ಎಂದರೆ ಹೈಪರ್ ವೆಲಾಸಿಟಿ ಸ್ಟಾರ್ ಎಂದಾಗುತ್ತದೆ. ಅಮೆರಿಕದ ಕಾರ್ನೆಗಿ ಮೆಲ್ಲನ್ ವಿಶ್ವವಿದ್ಯಾಲಯದ ತಜ್ಞ ಸೆರ್ಗೈ ಕೊಪೋಸೋವ್ ನೇತೃತ್ವದ ವಿಜ್ಞಾನಿಗಳ ತಂಡ ಈ ನಕ್ಷತ್ರವನ್ನು ಭೂಮಿಯಿಂದ 29 ಸಾವಿರ ಜ್ಯೋತಿರ್ವರ್ಷಗಳ ದೂರದಲ್ಲಿ ಪತ್ತೆ ಮಾಡಿದೆ. ಕೊಕ್ಕರೆ ಆಕಾರದ ನಕ್ಷತ್ರಪುಂಜ ಗ್ರುಸ್‌ನಿಂದ ಓಡಿ ಹೋಗಿರುವ ನಕ್ಷತ್ರದ ವೇಗ ಅತ್ಯಧಿಕವಾದ್ದರಿಂದ ಅದು ಹಿಂತಿರುಗಿ ನಮ್ಮ ಗ್ಯಾಲಕ್ಸಿಗೆ ಬರುವ ಸಂಭವವೇ ಇಲ್ಲ ಎಂದಿರುವ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಖಭೌತವಿಜ್ಞಾನಿ ಡಗ್ಲಾಸ್ ಬೌಬರ್ಟ್ ಇಂಥ ವೇಗದ ನಕ್ಷತ್ರವನ್ನು ನಾನೆಂದೂ ಕಂಡಿರಲಿಲ್ಲ ಎಂದಿದ್ದಾರೆ.

ಈಗ ಗ್ಯಾಲಕ್ಸಿಯಿಂದ ಓಡಿ ಹೋಗಿರುವ ನಕ್ಷತ್ರವನ್ನು 3.9 ಮೀಟರ್ ಉದ್ದದ ಆಂಗ್ಲೋ –ಆಸ್ಟ್ರೇಲಿಯನ್ ಟೆಲಿಸ್ಕೋಪ್ (AAT) ಬಳಸಿ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಗೇಯ ಕೃತಕ ಉಪಗ್ರಹದ ನೆರವಿನಿಂದ ಪತ್ತೆ ಮಾಡಲಾಗಿದೆ. ಅಮೆರಿಕ, ಯುರೋಪ್ ಮತ್ತು ಆಸ್ಟ್ರೇಲಿಯಾದ ತಜ್ಞರಿರುವ ತಂಡ ಜಂಟಿಯಾಗಿ ಕೈಗೊಂಡಿರುವ ಸದರನ್ ಸ್ಟೆಲ್ಲಾರ್ ಸ್ಟ್ರೀಮ್ ಸ್ಪೆಕ್ಟ್ರೋಸ್ಕೋಪಿಕ್ ಸರ್ವೆ ಪ್ರಕಾರ ನಮ್ಮ ಗ್ಯಾಲಕ್ಸಿಯಿಂದ ಓಡಿ ಹೋಗಿರುವ ನಕ್ಷತ್ರ ‘ಓಬಿ’ ಗುಂಪಿಗೆ ಸೇರಿದ್ದು ಸೂರ್ಯನಿಗಿಂತ ಎರಡು ಪಟ್ಟು ದೊಡ್ಡದಿದೆ ಮತ್ತು ಹತ್ತು ಪಟ್ಟು ಪ್ರಕಾಶಮಾನವಾಗಿದೆ. ಈ ನಕ್ಷತ್ರ ಸೂರ್ಯನಿಗಿಂತ ಅತ್ಯಂತ ಹೆಚ್ಚು ದ್ರವ್ಯರಾಶಿ ಇರುವ ನಲವತ್ತು ಲಕ್ಷ ಪಟ್ಟು ದೊಡ್ಡದಾದ ಸಗಿಟ್ಟೇರಿಯಸ್ A* ಕಪ್ಪುಕುಳಿಗೆ ಸೇರಿದ್ದು ಎಂಬುದನ್ನೂ ತಂಡ ದೃಢಪಡಿಸಿದೆ.

ADVERTISEMENT

ತಾರಾ ಮಂಡಲಗಳಿಂದ ನಕ್ಷತ್ರಗಳು ಚಿಮ್ಮಿಹೋಗುವುದು ಇದೇ ಮೊದಲೇನಲ್ಲ. ಬ್ರಹ್ಮಾಂಡ ಉಗಮವಾದಾಗಿನಿಂದ ನಕ್ಷತ್ರಗಳು ತಾವಿದ್ದ ಜಾಗದಿಂದ ಓಡಿಹೋದ ಹಲವಾರು ಉದಾಹರಣೆಗಳಿವೆ. ನಕ್ಷತ್ರಗಳು ಹೀಗೆ ಹೋಗಲು ಕಾರಣವೇನು? ಎಂಥ ನಕ್ಷತ್ರಗಳು ಓಡಿ ಹೋಗುತ್ತವೆ? ಈವರೆಗೆ ಎಷ್ಟು ನಕ್ಷತ್ರಗಳು ಓಡಿಹೋಗಿ ತೆರೆಮರೆಗೆ ಸರಿದಿವೆ? ಸೂರ್ಯ ಸಹ ನಕ್ಷತ್ರವೇ ಆಗಿರುವುದರಿಂದ ಮುಂದೊಂದು ದಿನ ಅದೂ ಓಡಿ ಹೋಗುತ್ತದೆಯೇ? ಖಗೋಳ ವಿಜ್ಞಾನಿಗಳು ಕೆಲ ಪ್ರಶ್ನೆಗಳಿಗೆ ಉತ್ತರ
ಕಂಡುಕೊಂಡಿದ್ದಾರೆ. ಅತ್ಯಂತ ಭಾರದ ಮತ್ತು ಎಳೆಪ್ರಾಯದ ನಕ್ಷತ್ರಗಳು ಅಂದರೆ ಸೂರ್ಯನಿಗಿಂತ ಹತ್ತಾರು ಪಟ್ಟು ಹೆಚ್ಚು ತೂಕದ ಮತ್ತು ಐದುಕೋಟಿ ವರ್ಷಗಳಿಗಿಂತ ಕಡಿಮೆ ವಯೋಮಾನದ ನಕ್ಷತ್ರಗಳು ಹೀಗೆ ಯರ್‍ರಾಬಿರ್‍ರಿಯಾಗಿ ಓಡಿ ಹೋಗುತ್ತವೆ ಎಂದು ಸಾಕ್ಷಿ ಒದಗಿಸಿದ್ದಾರೆ.

ಅವು ಸೂಸುವ ಬಣ್ಣಗಳ ಆಧಾರದ ಮೇಲೆ ನಕ್ಷತ್ರಗಳನ್ನು ಓ, ಬಿ, ಎ, ಎಫ್, ಜಿ, ಕೆ, ಎಂ, ಆರ್, ಎನ್ ಮತ್ತು ಎಸ್ ಎಂದು ವರ್ಗೀಕರಿಸಲಾಗುತ್ತದೆ. ಓ ನಕ್ಷತ್ರಗಳ ಮೇಲ್ಮೈ ಉಷ್ಣತೆ 30,500 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದ್ದರೆ ಬಿ ನಕ್ಷತ್ರಗಳ ಉಷ್ಣತೆ 20,000 ಡಿಗ್ರಿ ಸೆಂಟಿಗ್ರೇಡ್‌ನಷ್ಟಿರುತ್ತದೆ. ಎರಡೂ ತಿಳಿನೀಲಿ ಬಣ್ಣವನ್ನು ಸೂಸುತ್ತವೆ. ಬರಿಯ ಕಣ್ಣಿಗೆ ಒಂಟಿಯಂತೆ ಕಾಣುವ ನಕ್ಷತ್ರಗಳು ದೂರದರ್ಶಕದಲ್ಲಿ ನೋಡಿದಾಗ ಎರಡು ನಕ್ಷತ್ರಗಳಾಗಿ ಗೋಚರಿಸುತ್ತವೆ. ಹೀಗೆ ಎರಡಾಗಿ ಕಾಣುವ ನಕ್ಷತ್ರಗಳುವಾಸ್ತವದಲ್ಲಿ ಪರಸ್ಪರ ಹತ್ತಿರವಿದ್ದು ಅವುಗಳ ನಡುವಿನ ಗುರುತ್ವಾಕರ್ಷಣೆಯ ಫಲವಾಗಿ ಒಂದರ ಸುತ್ತ ಇನ್ನೊಂದು ಪ್ರದಕ್ಷಿಣೆ ಮಾಡುತ್ತಿರುತ್ತವೆ. ಇವನ್ನು ಬೈನರಿ ಸ್ಟಾರ್ಸ್ ಅಥವಾ ನಕ್ಷತ್ರ ಯುಗ್ಮಗಳೆನ್ನುತ್ತಾರೆ. ಗ್ಯಾಲಕ್ಸಿಯಲ್ಲಿ ಶೇ 80ರಷ್ಟು ನಕ್ಷತ್ರಗಳಲ್ಲಿ ಅರ್ಧದಷ್ಟು ಜೋಡಿ ನಕ್ಷತ್ರಗಳೇ. ನಮ್ಮ ಗ್ಯಾಲಕ್ಸಿಯಲ್ಲಿ ಮೂರಕ್ಕಿಂತ ಹೆಚ್ಚು ನಕ್ಷತ್ರಗಳು ಗುಂಪಾಗಿರುವುದೂ ಇದೆ.

ಎರಡು ವಿಧಗಳಲ್ಲಿ ನಕ್ಷತ್ರಗಳು ಓಡಿ ಹೋಗುತ್ತವೆ. ನಕ್ಷತ್ರ ಜೋಡಿಯ ಒಂದರಲ್ಲಿ ಸೂಪರ್‌ನೋವಾ (ನಕ್ಷತ್ರ ಸ್ಫೋಟ) ಸಂಭವಿಸಿದಾಗ ಹತ್ತಿರದಲ್ಲೇ ಇರುವ ಇನ್ನೊಂದು ನಕ್ಷತ್ರ ಬಲವಾಗಿ ಒದೆಸಿಕೊಂಡ ಫುಟ್‍ಬಾಲಿನಂತೆ ಅತಿ ಹೆಚ್ಚು ವೇಗದಲ್ಲಿ ಚಿಮ್ಮುತ್ತದೆ. ಸೂರ್ಯನಿಗಿಂತ ಹೆಚ್ಚು ತೂಕದ ನಕ್ಷತ್ರಗಳ ಸ್ಫೋಟವಾದಾಗ ನಕ್ಷತ್ರಗಳ ಹೊಟ್ಟೆಯೊಳಗಿನ ಪರಮಾಣು ಇಂಧನ ಧಗಧಗನೆ ಉರಿದು ಅಪಾರ ಪ್ರಮಾಣದ ಶಾಖ ಬಿಡುಗಡೆಯಾಗುತ್ತದೆ. ನಕ್ಷತ್ರ ಎಂದರೆ ಎರಡು ಅಗಾಧ ಬಲಗಳ ನಿರಂತರ ಸೆಣಸಾಟ ಮತ್ತು ಸಮತೋಲನ. ಸ್ಫೋಟಗೊಂಡಾಗ ಒಳಗಿನ ಒತ್ತಡ ನಕ್ಷತ್ರವನ್ನು ಪುಡಿಪುಡಿಯಾಗಿಸಿದರೆ, ನಕ್ಷತ್ರದ ಅಗಾಧ ಗುರುತ್ವಶಕ್ತಿ ಒಡೆದು ಚೂರು ಚೂರಾಗುವ ನಕ್ಷತ್ರದ ಭಾಗಗಳನ್ನು ಒಟ್ಟಾಗಿಡಲು, ಗಟ್ಟಿಗೊಳಿಸಲು ಪ್ರಯತ್ನಿಸುತ್ತದೆ.

ಹೊರ ಮತ್ತು ಒಳಗಿನ ಹೋರಾಟ ನಿರಂತರ ನಡೆದು ಒಂದು ಹಂತದಲ್ಲಿ ಇಂಧನ ಖಾಲಿಯಾದಾಗ ನಕ್ಷತ್ರ ಕೆಲವೇ ಸೆಕೆಂಡುಗಳಲ್ಲಿ ಧುತ್ತೆಂದು ಕುಸಿದು ಬೀಳುತ್ತದೆ. ಭೂಮಿಯ ಹತ್ತು ಲಕ್ಷ ಪಟ್ಟುತೂಕದ ನಕ್ಷತ್ರವೊಂದು ಕೇವಲ 15 ಸೆಕೆಂಡುಗಳಲ್ಲಿ ನೆಲಕಚ್ಚುತ್ತದೆ. ಈ ಹಠಾತ್ ಕುಸಿತ ಉಂಟುಮಾಡುವ ಆಘಾತತರಂಗಗಳಿಂದ (Shockwave) ನಕ್ಷತ್ರದ ಹೊರಕವಚ ಸ್ಫೋಟಗೊಳ್ಳುತ್ತದೆ. ಕೊನೆಗೆ ನಮ್ಮ ಸೂರ್ಯನಿಗಿಂತ ಹತ್ತು ಪಟ್ಟುದೊಡ್ಡ ದಟ್ಟ ತಿರುಳು (ಕಪ್ಪುರಂಧ್ರ) ಮತ್ತು ಅದರ ಸುತ್ತ ಸದಾ ವಿಸ್ತಾರಗೊಳ್ಳುವ ಬಿಸಿ ಅನಿಲದ ಬೃಹತ್ ಮೋಡಗಳು (ನ್ಯೆಬ್ಯೂಲ) ಸೃಷ್ಟಿಯಾಗುತ್ತವೆ. ಆಘಾತ ತರಂಗಗಳ ವೇಗ ಗಂಟೆಗೆ ಮೂರೂವರೆ ಕೋಟಿ ಕಿಲೊಮೀಟರ್‌ನಷ್ಟಿರುತ್ತದೆ.

ಸೂಪರ್ ನೋವಾ ಸಂಭವಿಸಿದಾಗ ಅಪಾರ ದ್ರವ್ಯ ಮತ್ತು ಬೆಳಕು ಬಾಹ್ಯಾಕಾಶಕ್ಕೆ ಚಿಮ್ಮುತ್ತದೆ. ಬೆಳಕು ಎಷ್ಟು ಪ್ರಖರವಾಗಿರುತ್ತದೆಂದರೆ ಒಮ್ಮೊಮ್ಮೆ ನಮ್ಮ ಆಕಾಶ ಗಂಗೆಯೇ ಕಾಣಿಸದಷ್ಟು ಸ್ಫೋಟದ ಹೊಗೆ ಆವರಿಸುತ್ತದೆ. ನೂರು ವರ್ಷಗಳಿಗೊಮ್ಮೆ ಸೂಪರ್‌ನೋವಾ ಸಂಭವಿಸುತ್ತದೆ ಎಂದು ವಿಜ್ಞಾನಿಗಳು ಲೆಕ್ಕ ಕೊಡುತ್ತಾರೆ. ಸೂಪರ್‌ನೋವಾ ಸಂಭವಿಸಿದಾಗ ನ್ಯೂಟ್ರಾನ್ ನಕ್ಷತ್ರ ಜನಿಸಿ ಕೊನೆಗೆ ತನ್ನದೇ ಗುರುತ್ವದಿಂದ ಕುಗ್ಗಿ ಚಿಕ್ಕ ಹಿಡಿಯಷ್ಟು ಪೊಟ್ಟಣದ ಗಾತ್ರ ಹೊಂದಿ ರಪ್ಪು ರಂಧ್ರವೆನ್ನಿಸಿಕೊಳ್ಳುತ್ತದೆ. ಇವುಗಳ ಸಾಂದ್ರತೆ ಎಷ್ಟಿರುತ್ತದೆ ಎಂದರೆ ಒಂದು ಟೀ ಸ್ಪೂನ್‍ನಷ್ಟು. ಕಪ್ಪುರಂಧ್ರದ ವಸ್ತುವನ್ನು ಭೂಮಿಯ ಮೇಲೆ ಅಳತೆ ಮಾಡಿದರೆ ಸುಮಾರು ನೂರಾರು ಕೋಟಿ ಟನ್‍ಗಳಿಗಿಂತ ಭಾರವಿರುತ್ತದೆ.

ಈಗ ಖಗೋಳತಜ್ಞರಿಗೆ ಕಂಡಿರುವ ನಕ್ಷತ್ರ ನಿನ್ನೆ ಮೊನ್ನೆ ಅಥವಾ ಕಳೆದ ತಿಂಗಳುಚಿಮ್ಮಿ ಹೋದದ್ದಲ್ಲ. ಅದು ಮಹಾಯಾನ ಕೈಗೊಂಡಿದ್ದು 50 ಲಕ್ಷ ವರ್ಷಗಳ ಹಿಂದೆ. ಆಗತಾನೇ ನಮ್ಮ ಪೂರ್ವಜರು ಬೆನ್ನುಮೂಳೆ ನೆಟ್ಟಗೆ ಮಾಡಿಕೊಂಡು ನಡೆಯುವುದನ್ನು ಪ್ರಾಕ್ಟೀಸ್ ಮಾಡುತ್ತಿದ್ದರು. ಹಲವು ಓಡಿಹೋದ ನಕ್ಷತ್ರಗಳನ್ನು ಹಿಪಾರ್‍ಕೊಸ್ ಉಪಗ್ರಹದ ನೆರವಿನಿಂದ ಪತ್ತೆಮಾಡಿರುವ ಖಗೋಳತಜ್ಞ ರೋನಿ ವೂಗರ್ ವೀಫ್ ಮತ್ತು ತಂಡ ಓರಾಯನ್ ನಕ್ಷತ್ರ ಪುಂಜದ ಎಇ ಆರಿಗೆ (AE Aurigae) ಮತ್ತು ಎಮ್ ಕೋಲಂಬೆ (M Colambae) ಎಂಬ ನಕ್ಷತ್ರಗಳು 25 ಲಕ್ಷ ವರ್ಷಗಳ ಹಿಂದೆ ತಮ್ಮ ಸ್ಥಾನದಿಂದ ಓಡಿಹೋದದ್ದನ್ನು ಖಚಿತವಾಗಿ ಗುರುತಿಸಿದ್ದರು. ಈಗಾಗಲೇ ಇಂಥ 18 ವಿದ್ಯಮಾನಗಳು ಪತ್ತೆಯಾಗಿದ್ದು ಇದರಲ್ಲಿ 12 ಸೂಪರ್ ನೋವಾಗಳಿಂದ ಮತ್ತು ಉಳಿದವು ದೊಡ್ಡ ಕಪ್ಪು ಕುಳಿಗಳ ಬಳಿ ಹೋಗಿ ಚಿಮ್ಮಲ್ಪಟ್ಟವುಗಳಾಗಿವೆ. ಈಗ ಓಡಿ ಹೋಗಿರುವ ನಕ್ಷತ್ರ ಎರಡನೆಯ ವಿಧಕ್ಕೆ ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.