ADVERTISEMENT

ಟ್ವಿಟರ್‌ನ ಭಾರತದ ಮುಖ್ಯಸ್ಥ ಮಹೇಶ್ವರಿಗೆ ಮಧ್ಯಂತರ ರಕ್ಷಣೆ ಒದಗಿಸಿದ ಹೈಕೋರ್ಟ್

ರಾಯಿಟರ್ಸ್
Published 24 ಜೂನ್ 2021, 14:57 IST
Last Updated 24 ಜೂನ್ 2021, 14:57 IST
ಮನೀಶ್ ಮಹೇಶ್ವರಿ
ಮನೀಶ್ ಮಹೇಶ್ವರಿ   

ಬೆಂಗಳೂರು: ಧಾರ್ಮಿಕ ಭಿನ್ನಾಭಿಪ್ರಾಯ ಉಂಟುಮಾಡುವ ವಿಡಿಯೊ ಹರಡುವುದನ್ನು ತಡೆಯಲು ವಿಫಲವಾದ ಆರೋಪದ ಮೇಲೆ ಉತ್ತರ ಪ್ರದೇಶದ ಪೊಲೀಸರು ಸಮನ್ಸ್ ಜಾರಿ ಮಾಡಿರುವ ಪ್ರಕರಣದಲ್ಲಿ ಟ್ವಿಟರ್‌ನ ಭಾರತದ ಮುಖ್ಯಸ್ಥರ ವಿರುದ್ಧ ಯಾವುದೇ ‘ಬಲವಂತದ ಕ್ರಮ’ವನ್ನು ಜರುಗಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಹೇಳಿದೆ ಎಂದು ಮೂಲಗಳನ್ನು ಉದ್ದೇಶಿಸಿ ರಾಯಿಟರ್ಸ್ ವರದಿ ಮಾಡಿದೆ.

ಕಳೆದ ವಾರ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ‘ಶತ್ರುತ್ವ ಮತ್ತು ದ್ವೇಷ’ ವನ್ನು ಪ್ರಚೋದಿಸುವಂತಹ ಆರೋಪಗಳಿಗೆ ಉತ್ತರಿಸಲು ವಿಚಾರಣೆಗೆ ಹಾಜರಾಗಲು ಟ್ವಿಟರ್ ಇಂಡಿಯಾ ಮುಖ್ಯಸ್ಥ ಮನೀಶ್ ಮಹೇಶ್ವರಿಗೆ ಉತ್ತರ ಪ್ರದೇಶದ ಪೊಲೀಸರು ಲಿಖಿತ ಸಮನ್ಸ್ ಕಳುಹಿಸಿದ್ದರು.

ಬೆಂಗಳೂರು ನಗರದಲ್ಲಿ ನೆಲೆಸಿರುವ ಮಹೇಶ್ವರಿ, ಪೊಲೀಸರ ಸಮನ್ಸ್ ರದ್ದುಗೊಳಿಸಲು ಕೋರಿ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಗುರುವಾರ, ‘ನ್ಯಾಯಾಧೀಶರು ಅವರ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳಬಾರದು ಮತ್ತು ವಿಡಿಯೊ ಕಾನ್ಫರೆನ್ಸಿಂಗ್ ಮೂಲಕ ಅವರನ್ನು ವಿಚಾರಣೆ ನಡೆಸಬಹುದು’ ಎಂದು ಆದೇಶ ನೀಡಿರುವುದಾಗಿ ಮೂಲಗಳು ರಾಯಿಟರ್ಸ್‌ಗೆ ತಿಳಿಸಿವೆ.

ಮತ್ತೊಂದು ಮೂಲವು, ಈ ಆದೇಶವು ಮಹೇಶ್ವರಿ ಅವರಿಗೆ ಬಂಧನದಿಂದ ರಕ್ಷಣೆ ನೀಡುತ್ತದೆ ಎಂದು ತಿಳಿಸಿದೆ.

ಈ ಬಗ್ಗೆ ಯಾವುದೇ ಪ್ರತಿಕ್ರಿಯೆಗೆ ಟ್ವಿಟರ್ ನಿರಾಕರಿಸಿದೆ.

ಮುಸ್ಲಿಂ ಎಂದು ಹೇಳಲಾದ ವೃದ್ಧರೊಬ್ಬರ ಮೇಲೆ ಕೆಲವು ಪುರುಷರು ಹಲ್ಲೆ ನಡೆಸಿ ಗಡ್ಡ ಕತ್ತರಿಸುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪೊಲೀಸ್ ವರದಿಯಲ್ಲಿ ಟ್ವಿಟರ್, ಅದರ ಸ್ಥಳೀಯ ಘಟಕ ಮತ್ತು ಇತರ ಏಳು ಮಂದಿಯನ್ನು ಹೆಸರಿಸಲಾಗಿತ್ತು.

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಟ್ವಿಟರ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಹೊಸದಾಗಿ ಜಾರಿ ಮಾಡಿರುವ ಐಟಿ ನಿಯಮಗಳನ್ನು ಪಾಲಿಸದಿರುವ ಬಗ್ಗೆ ಭಾರತ ಸರ್ಕಾರವು ಟ್ವಿಟರ್‌ನೊಂದಿಗೆ ಸಂಘರ್ಷ ಕ್ಕೆ ಇಳಿದಿರುವ ಸಂದರ್ಭದಲ್ಲೇ ಈ ವಿವಾದ ತಲೆದೋರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.