ADVERTISEMENT

ಹುದ್ದೆ ತೊರೆದ 'ಟ್ವಿಟರ್‌ ಇಂಡಿಯಾ' ಕುಂದುಕೊರತೆ ಅಧಿಕಾರಿ

ಪಿಟಿಐ
Published 27 ಜೂನ್ 2021, 15:34 IST
Last Updated 27 ಜೂನ್ 2021, 15:34 IST
ಟ್ವಿಟರ್‌–ಪ್ರಾತಿನಿಧಿಕ ಚಿತ್ರ
ಟ್ವಿಟರ್‌–ಪ್ರಾತಿನಿಧಿಕ ಚಿತ್ರ   

ನವದೆಹಲಿ: ಟ್ವಿಟರ್‌ ಇಂಡಿಯಾದ 'ನಿವಾಸಿ ಕುಂದುಕೊರತೆ ಅಧಿಕಾರಿ' ತಮ್ಮ ಹುದ್ದೆಯಿಂದ ಹೊರ ಬಂದಿದ್ದಾರೆ. ಭಾರತದ ಟ್ವಿಟರ್‌ ಬಳಕೆದಾರರ ದೂರುಗಳಿಗೆ ಪರಿಹಾರ ಒದಗಿಸಲು ಅನುವಾಗುವಂತೆ ಸರ್ಕಾರವು ಮಾಹಿತಿ ತಂತ್ರಜ್ಞಾನ ಹೊಸ ನಿಯಮಗಳ ಅಡಿಯಲ್ಲಿ ಕುಂದುಕೊರತೆ ಅಧಿಕಾರಿ ನೇಮಿಸುವುದನ್ನು ಕಡ್ಡಾಯಗೊಳಿಸಿದೆ.

ಧರ್ಮೇಂದ್ರ ಚತುರ್‌ ಅವರನ್ನು ಟ್ವಿಟರ್‌ ಇಂಡಿಯಾ ಇತ್ತೀಚೆಗಷ್ಟೇ ಹಂಗಾಮಿ 'ನಿವಾಸಿ ಕುಂದುಕೊರತೆ ಅಧಿಕಾರಿಯನ್ನಾಗಿ' ನೇಮಕ ಮಾಡಿತ್ತು. ಅವರು ಸ್ಥಾನವನ್ನು ತೊರೆದಿರುವುದಾಗಿ ಮೂಲಗಳಿಂದ ತಿಳಿದು ಬಂದಿರುವುದಾಗಿ ಪಿಟಿಐ ವರದಿ ಮಾಡಿದೆ.

'ಮಧ್ಯವರ್ತಿ ಸಂಸ್ಥೆಗಳ ಮಾರ್ಗಸೂಚಿ ಮತ್ತು ಡಿಜಿಟಲ್ ಮಾಧ್ಯಮಗಳಿಗೆ ನೈತಿಕ ನಿಯಮಗಳು–2021ರ' ಅಡಿಯಲ್ಲಿ ಕುಂದುಕೊರತೆ ಅಧಿಕಾರಿಯ ವಿವರವನ್ನು ಕಂಪನಿಯು ಪ್ರದರ್ಶಿಸಬೇಕು. ಆದರೆ, ಸದ್ಯ ಮೈಕ್ರೊ–ಬ್ಲಾಗಿಂಗ್‌ ಕಂಪನಿ ಟ್ವಿಟರ್‌ನ ವೆಬ್‌ಸೈಟ್‌ನಲ್ಲಿ ಧರ್ಮೇಂದ್ರ ಅವರ ಹೆಸರು ಕಾಣಿಸುತ್ತಿಲ್ಲ.

ADVERTISEMENT

ಈ ಬೆಳವಣಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಟ್ವಿಟರ್‌ ನಿರಾಕರಿಸಿದೆ.

ಹೊಸ ಐಟಿ ನಿಯಮಗಳಿಗೆ ಸಂಬಂಧಿಸಿದಂತೆ ಟ್ವಿಟರ್‌, ಭಾರತ ಸರ್ಕಾರದೊಂದಿಗೆ ಹಗ್ಗಜಗ್ಗಾಟ ನಡೆಸಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ. ಮೇ 25ರಂದೇ ಹೊಸ ನಿಯಮಗಳು ಜಾರಿಗೆ ಬಂದಿದ್ದರೂ, ಅವುಗಳ ಪಾಲನೆಯಾಗದಿರುವ ಬಗ್ಗೆ ಸರ್ಕಾರವು ಪದೇ ಪದೇ ಎಚ್ಚರಿಕೆ ನೀಡಿದೆ.

50 ಲಕ್ಷದಷ್ಟು ಬಳಕೆದಾರರನ್ನು ಒಳಗೊಂಡಿರುವ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ ಹಾಗೂ ಆ ಅಧಿಕಾರಿಯ ಹೆಸರು ಮತ್ತು ಸಂಪರ್ಕ ವಿವರಗಳನ್ನು ಹಂಚಿಕೊಳ್ಳಬೇಕಾಗುತ್ತದೆ.

ಹೊಸ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಸಂಸ್ಥೆಯು ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ನಿವಾಸಿ ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು. ಇವರ ಮಾಹಿತಿಯನ್ನು ತಮ್ಮ ಆ್ಯಪ್‌, ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿ, ದೂರು ನೀಡುವ ವಿಧಾನದ ಬಗ್ಗೆಯೂ ತಿಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.