ADVERTISEMENT

Agriculture Startups: ಕೃಷಿ ವಲಯದಲ್ಲಿ ತಂತ್ರಜ್ಞಾನದ ಸ್ಟಾರ್ಟಪ್‌

ಕೃಷ್ಣ ಭಟ್ಟ
Published 12 ಜುಲೈ 2022, 20:30 IST
Last Updated 12 ಜುಲೈ 2022, 20:30 IST
 ಕೃಷಿ ವಲಯದಲ್ಲಿ ತಂತ್ರಜ್ಞಾನದ ಸ್ಟಾರ್ಟಪ್‌
ಕೃಷಿ ವಲಯದಲ್ಲಿ ತಂತ್ರಜ್ಞಾನದ ಸ್ಟಾರ್ಟಪ್‌   

ಕೃಷಿವಲಯಕ್ಕೆ ಹೊಸ ಹೊಸ ತಂತ್ರಜ್ಞಾನಗಳು ಪರಿಚಯವಾಗಬೇಕು ಎಂದು ಸರ್ಕಾರ ಸೇರಿದಂತೆ ಎಲ್ಲರೂ ಬಯಸುತ್ತಿದ್ದ ಕಾಲವೊಂದಿತ್ತು. ಈಗ ಕೃಷಿಯ ಬಹುತೇಕ ಪ್ರತಿ ಹಂತದಲ್ಲೂ ತಂತ್ರಜ್ಞಾನಗಳ ಬಳಕೆಯಾಗುತ್ತಿವೆ. ಬಹುಶಃ ನೀರಿನ ಪಂಪ್‌ನಿಂದ ಶುರುವಾದ ಈ ತಾಂತ್ರಿಕ ಪರಿಕರಗಳ ಬಳಕೆ ಈಗ ಡ್ರೋನ್‌ ಬಳಕೆಯವರೆಗೆ ಬಂದು ನಿಂತಿದೆ. ಆದರೆ, ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವ ಪ್ರಕ್ರಿಯೆ ತೀರಾ ಇತ್ತೀಚಿನವರೆಗೂ ಸಾಂಪ್ರದಾಯಿಕ ವಿಧಾನವನ್ನೇ ಅನುಸರಿಸುತ್ತಿದ್ದವು.

ಈ ನಿಟ್ಟಿನಲ್ಲಿ ಇತ್ತೀಚೆಗೆ ಹೊಸ ಹೊಸ ಬೆಳವಣಿಗೆಗಳಾಗಿವೆ. ಇದಕ್ಕೆ ಮೂಲ ಕಾರಣವೇ ಕೃಷಿ ತಂತ್ರಜ್ಞಾನ ಆಧರಿತ ಸ್ಟಾರ್ಟಪ್‌ಗಳು! ಹಲವು ಸ್ಟಾರ್ಟಪ್‌ಗಳು ಈಗ ಆಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಕೃಷಿ ಉತ್ಪನ್ನಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುವ ಪ್ರಯತ್ನ ನಡೆಸುತ್ತಿವೆ. ಸದ್ಯ 700 ಅಗ್ರಿಟೆಕ್‌ ಸ್ಟಾರ್ಟಪ್‌ಗಳು ಭಾರತದಲ್ಲಿವೆ! ‘ಅರ್ನಸ್ಟ್‌ & ಯಂಗ್‌’ 2020 ಪ್ರಕಾರ 2025ರ ವೇಳೆಗೆ ಅಗ್ರಿಟೆಕ್‌ ಸ್ಟಾರ್ಟಪ್‌ 1.80 ಲಕ್ಷ ಕೋಟಿ ವಹಿವಾಟು ನಡೆಸಲಿದೆ! ಇಲ್ಲಿ ಇಂತಹ ಕೆಲವು ಸ್ಟಾರ್ಟಪ್‌ಗಳ ವಿವರಗಳನ್ನು ನೋಡೋಣ.

ನಿಂಜಾ ಕಾರ್ಟ್‌

ADVERTISEMENT

2015ರಲ್ಲಿ ತಿರುಕುಮಾರನ್‌ ನಾಗರಾಜನ್‌, ಕಾರ್ತೀಶ್ವರನ್‌ ಹಾಗೂ ಇತರರು ಸ್ಥಾಪಿಸಿದ ಆಹಾರ ಡೆಲಿವರಿ ಸೇವೆ ನಿಂಜಾಕಾರ್ಟ್‌ನಲ್ಲಿ ಹಲವು ದೊಡ್ಡ ದೊಡ್ಡ ವೆಂಚರ್ ಕ್ಯಾಪಿಟಲ್‌ ಸಂಸ್ಥೆಗಳು ಹೂಡಿಕೆ ಮಾಡಿವೆ. ಇದು ರೈತರಿಂದ ನೇರವಾಗಿ ತರಕಾರಿ ಮತ್ತು ಹಣ್ಣುಗಳನ್ನು ಖರೀದಿ ಮಾಡಿ, ಗ್ರಾಹಕರಿಗೆ ಮಾರಾಟ ಮಾಡುತ್ತದೆ. ಅಷ್ಟೇ ಅಲ್ಲ, ಇದು ನಗರದಲ್ಲಿರುವ ಸೂಪರ್‌ಮಾರ್ಕೆಟ್‌ಗಳು ಮತ್ತು ಕಿರಾಣಿ ಅಂಗಡಿಗಳಿಗೂ ತರಕಾರಿಗಳು, ಹಣ್ಣು ಮತ್ತು ದಿನಸಿ ಸಾಮಗ್ರಿಗಳನ್ನು ಮಾರಾಟ ಮಾಡುತ್ತದೆ. ರೈತರಿಂದ ಆಯಾ ಋತುವಿನಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆಸಿ, ಅವುಗಳನ್ನು ಚಿಲ್ಲರೆ ವಹಿವಾಟುದಾರರು ಮತ್ತು ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಇದು ಮಾಡುತ್ತದೆ.

ರೇಷಮಂಡಿ

ರೇಷ್ಮೆಕೃಷಿಯಲ್ಲಿ ಅತ್ಯಂತ ಹೆಚ್ಚಿನ ತಾಂತ್ರಿಕ ಪರಿಕರಗಳನ್ನು ಹಿಂದಿನಿಂದಲೂ ಬಳಸುತ್ತಿದ್ದು, ಈ ವಲಯದಲ್ಲಿ ಸಹಜವಾಗಿಯೇ ಹೊಸ ತಂತ್ರಜ್ಞಾನದ ಅಳವಡಿಕೆ ಸುಲಭ. ‘ರೇಷಮಂಡಿ’ ಸ್ಟಾರ್ಟಪ್‌ ಸ್ಥಾಪಿಸಿದ್ದು ಮಾಯಂಕ್‌ ತಿವಾರಿ ಮತ್ತು ಸೌರಭ್‌ ಕುಮಾರ್‌ ಅಗರ್ವಾಲ್‌. ರೇಷ್ಮೆ ರೈತರಿಗೆ ಬೆಳೆ ಸಲಹೆ, ನೇಕಾರರಿಗೆ ಕಚ್ಚಾ ಸಾಮಗ್ರಿಗಳನ್ನು ಒದಗಿಸುವುದು ಹಾಗೂ ವಿನ್ಯಾಸದ ಕುರಿತ ಸಲಹೆಗಳನ್ನು ನೀಡುವುದು ಮತ್ತು ರೈತರು ಹಾಗೂ ನೇಕಾರರನ್ನು ಮಿಲ್‌ಗಳು ಮತ್ತು ಚಿಲ್ಲರೆ ವಹಿವಾಟುದಾರರಿಗೆ ಸಂಪರ್ಕಿಸುವ ಕೆಲಸವನ್ನು ಇದು ಮಾಡುತ್ತದೆ. ರೇಷ್ಮೆಬೆಳೆಯಿಂದ ರೇಷ್ಮೆ ಉತ್ಪನ್ನ ತಯಾರಿಕೆಯವರೆಗಿನ ಸಂಪೂರ್ಣ ಸರಣಿಯಲ್ಲಿ ಈ ಸ್ಟಾರ್ಟಪ್‌ ತನ್ನನ್ನು ತೊಡಗಿಸಿಕೊಂಡಿದೆ.

ಬೀಜಕ್‌

ಇದು ಕೃಷಿ ಸಾಮಗ್ರಿಗಳ ಆನ್‌ಲೈನ್‌ ಮಾರುಕಟ್ಟೆ. ಇಲ್ಲಿ ಖರೀದಿದಾರರು, ಮಾರಾಟಗಾರರು, ಚಿಲ್ಲರೆ ವ್ಯಾಪಾರಿಗಳು, ಸಗಟು ವ್ಯಾಪಾರಿಗಳು, ಆಹಾರ ಸಂಸ್ಕರಣೆ ಮಾಡುವವರು, ರೈತರು ಎಲ್ಲರೂ ಇದ್ದಾರೆ. ಈ ಸ್ಟಾರ್ಟಪ್‌ ತಿಂಗಳಿಗೆ ಸುಮಾರು ₹ 300 ಕೋಟಿ ವಹಿವಾಟು ಮಾಡುತ್ತದೆ. ಈ ಪ್ಲಾಟ್‌ಫಾರಂನಲ್ಲಿ ಸುಮಾರು 90 ಸಾಮಗ್ರಿಗಳಿವೆ.

ಹಲವು ಪ್ರಖ್ಯಾತ ಹೂಡಿಕೆ ಸಂಸ್ಥೆಗಳು ಬೀಜಕ್‌ನಲ್ಲಿ ಹೂಡಿಕೆ ಮಾಡಿವೆ. ಬೀಜಕ್‌ನಲ್ಲಿ ವಹಿವಾಟು ವಿಶ್ವಾಸ ಮತ್ತು ನಂಬಿಕೆಯ ಆಧಾರದಲ್ಲಿ ನಡೆಯುತ್ತದೆ. ಪ್ರತಿ ಡೀಲರ್‌ಗೂ ಇದರಲ್ಲಿ ರೇಟಿಂಗ್ಸ್ ನೀಡಲಾಗುತ್ತದೆ. ಈ ರೇಟಿಂಗ್‌ ಆತನ ವಿಶ್ವಾಸಾರ್ಹತೆಯನ್ನು ಅಳೆಯುತ್ತದೆ. ಅಲ್ಲದೆ, ಮಧ್ಯವರ್ತಿಗಳ ಹಾವಳಿಯಿಂದ ತಪ್ಪಿಸಿಕೊಂಡು ನೇರವಾಗಿ ಸಾಮಗ್ರಿಗಳನ್ನು ಮಾರಾಟ ಮಾಡಲು ಇದು ರೈತರಿಗೆ ಅನುವು ಮಾಡಿಕೊಡುತ್ತದೆ.

ಅಗ್ರೋಸ್ಟಾರ್

ಇದೊಂದು ವಿಭಿನ್ನ ಸ್ಟಾರ್ಟಪ್‌. ಇದು ರೈತರಿಗೆ ಬೆಳೆ ಕುರಿತ ಸಮಗ್ರ ಮಾಹಿತಿ ಹಾಗೂ ಸಲಹೆಯನ್ನು ನೀಡುತ್ತದೆ. ಅಷ್ಟೇ ಅಲ್ಲ, ರೈತರಿಗೆ ಅಗತ್ಯವಿರುವ ಸಲಕರಣೆಗಳನ್ನೂ ಇದು ಒದಗಿಸುತ್ತದೆ. 2013ರಲ್ಲಿ ಸೋದರರಾದ ಶಾರ್ದೂಲ್‌ ಮತ್ತು ಸಿತಾಂಶು ಸೇಥ್‌ ಸ್ಥಾಪಿಸಿದ ಅಗ್ರೋಸ್ಟಾರ್‌ ಗುಜರಾತ್‌, ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ 5 ಲಕ್ಷಕ್ಕೂ ಹೆಚ್ಚು ರೈತರಿಗೆ ನೆರವಾಗುತ್ತಿದೆ. ಒಂದು ಮಿಸ್ಡ್‌ ಕಾಲ್‌ ಕೊಟ್ಟರೆ ಅಥವಾ ಅವರ ಆಂಡ್ರಾಯ್ಡ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡರೆ ಸಮಗ್ರ ಬೆಳೆ ಮಾಹಿತಿ ಪಡೆಯಬಹುದು. ಸದ್ಯ ಕೃಷಿ ಮಾಹಿತಿ ಕುರಿತಂತೆ ಅಗ್ರೋಸ್ಟಾರ್‌ ಆ್ಯಪ್‌ ಪ್ರಮುಖ ಸ್ಥಾನದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.