ADVERTISEMENT

ಮಾನವನ ಮಿದುಳು ಕಣಗಳಿಂದ ಕಂಪ್ಯೂಟರ್!

ನೇಸರ ಕಾಡನಕುಪ್ಪೆ
Published 7 ಮಾರ್ಚ್ 2023, 19:30 IST
Last Updated 7 ಮಾರ್ಚ್ 2023, 19:30 IST
Mind Geometry series. Abstract design made of Human profile, math and design elements on the subject of reason, science, technology and educationMind Energy stock photo
Mind Geometry series. Abstract design made of Human profile, math and design elements on the subject of reason, science, technology and educationMind Energy stock photo   

ಮಾನವನ ಮಿದುಳಿನ ಕಣಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ಸೃಷ್ಟಿಸಿ ಅವನ್ನು ಕಂಪ್ಯೂಟರ್‌ ಪ್ರಾಸೆಸರ್‌ನಂತೆ ಕಾರ್ಯನಿರ್ವಹಿಸುವಂತೆ ಮಾಡುವಲ್ಲಿ ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ.

ಒಂದು ಗಸಗಸೆ ಕಾಳಿನಷ್ಟು ಗಾತ್ರವಿರುವ ಮಿದುಳಿನ ಕಣವನ್ನು ಸೃಷ್ಟಿಸಿರುವ ವಿಜ್ಞಾನಿಗಳು, ಅದಕ್ಕೆ ವಿವಿಧ ಗಣಿತ ಸಂಜ್ಞೆಗಳನ್ನು ವಿಶ್ಲೇಷಿಸುವ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ. ಈ ಪ್ರಯೋಗದಲ್ಲಿ ಯಶಸ್ಸು ಸಿಕ್ಕಿದ್ದು, ಹಾಲಿ ಬಳಕೆಯಲ್ಲಿರುವ ಕಂಪ್ಯೂಟರ್‌ ಪ್ರಾಸೆಸರ್ ಹಾಗೂ ಮದರ್‌ಬೋರ್ಡ್‌ಗಳ ಗಣಿತ ವಿಶ್ಲೇಷಣೆ, ಕಾರ್ಯಕ್ಷಮತೆ, ದಕ್ಷತೆಯನ್ನು ಕೆಲವೇ ದಶಕಗಳಲ್ಲಿ ಈ ಹೊಸ ತಂತ್ರಜ್ಞಾನ ಮೀರಿಸಲಿದೆ ಎಂದು ವಿಜ್ಞಾನಿಗಳು ಪ್ರಕಟಿಸಿದ್ದಾರೆ.

ಅಂದ ಹಾಗೆ, ಮಾನವ ದೇಹದ ಅಂಗಗಳನ್ನು ಕೃತಕವಾಗಿ ಪ್ರಯೋಗಾಲಯದಲ್ಲಿ ಸೃಷ್ಟಿಸಿರುವುದು ಇದೇ ಮೊದಲೇನೂ ಅಲ್ಲ. ಈಗಾಗಲೇ ಕಿಡ್ನಿ, ಶ್ವಾಸಕೋಶ, ಹೃದಯದ ಕವಾಟಗಳು, ಲಿವರ್‌ ಇತ್ಯಾದಿ ಅಂಗಗಳನ್ನು ಸೃಷ್ಟಿಸಿ ಅವನ್ನು ಅಗತ್ಯವುಳ್ಳ ರೋಗಿಗಳಿಗೆ ಅಳವಡಿಸುವ ಪ್ರಯೋಗವೂ ಆಗಿದೆ. ಅಲ್ಲದೇ, ಪ್ರಯೋಗಾಲಯದಲ್ಲಿ ವಿವಿಧ ಔಷಧ ಪ್ರಯೋಗವನ್ನು ಇಲಿ ಮುಂತಾದ ಪ್ರಾಣಿಗಳ ಬಳಕೆಗೆ ನೈತಿಕ ನೀತಿ, ನಿಯಮಗಳ ಅಳವಡಿಕೆ ಹೆಚ್ಚಾಗುತ್ತಿರುವ ಕಾರಣ, ಕೃತಕ ಅಂಗಗಳನ್ನು ಸೃಷ್ಟಿಸಿ ಅವುಗಳ ಮೇಲೆ ಹೊಸ ಔಷಧ ಪ್ರಯೋಗ ಮಾಡುವ ವಿಧಾನವೂ ಈಗ ಚಾಲ್ತಿಗೆ ಬಂದಿದೆ. ಅದೇ ರೀತಿಯಲ್ಲಿ ಈಗ ಮಾನವ ಮಿದುಳಿನ ಕಣಗಳನ್ನು ಸೃಷ್ಟಿಸಲಾಗಿದ್ದು, ಆ ಕಣಗಳಿಗೆ ಕಂಪ್ಯೂಟರ್‌ ಮಾಡುವ ಕೆಲಸಗಳನ್ನು ಹೇಳಿಕೊಡಲಾಗುತ್ತಿದೆ.

ADVERTISEMENT

ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾಲಯದ ಪರಿಸರ ಆರೋಗ್ಯ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಥಾಮದ್ ಹಾರ್ಟುಂಗ್ ಈ ಆವಿಷ್ಕಾರದ ಹಿಂದಿನ ರೂವಾರಿ. ‘ಅಮೆರಿಕ ಕೆಂಟುಕಿಯಲ್ಲಿರುವ 600 ಮಿಲಿಯನ್ ಡಾಲರ್ ವೆಚ್ಚದಲ್ಲಿ ಸುಮಾರು 6,800 ಚದರ ಅಡಿ ಜಾಗದಲ್ಲಿ ನಿರ್ಮಿಸಿರುವ ವಿಶ್ವದ ಅತಿ ದೊಡ್ಡ ಸೂಪರ್ ಕಂಪ್ಯೂಟರ್‌ ಇದೀಗ ಹೊಸ ದಾಖಲೆಯನ್ನು ಬರೆದಿದೆ. ಇದೇ ಮೊದಲ ಬಾರಿಗೆ ಅದು, ಮಾನವನ ಪೂರ್ಣ ಮಿದುಳಿನ ವಿಶ್ಲೇಷಣಾ ಸಾಮರ್ಥ್ಯವನ್ನು ಮೀರಿಸಿದೆ. ಆದರೆ, ಮಾನವನ ಮಿದುಳು ಬಳಸಿಕೊಳ್ಳುವ 10 ಲಕ್ಷ ಪಟ್ಟು ಹೆಚ್ಚು ವಿದ್ಯುತ್‌ನ್ನು ಈ ಸೂಪರ್ ಕಂಪ್ಯೂಟರ್ ವಿಶ್ಲೇಷಣಾ ಕಾರ್ಯಕ್ಕೆ ಬಳಸಿಕೊಂಡಿದೆ’. ಈ ಉದಾಹರಣೆಯ ಮಹತ್ವ ಇಲ್ಲಿ ಅರ್ಥೈಸಿಕೊಳ್ಳಬೇಕಿದೆ. ‘ಕೃತಕವಾಗಿ ಸೃಷ್ಟಿಸುವ ಮಾನವ ಮಿದುಳು ಅತ್ಯಂತ ಕಡಿಮೆ ವಿದ್ಯುತ್‌ ಬಳಸಿಕೊಂಡು ವಿಶ್ಲೇಷಣೆ ಮಾಡಬಹುದು, ಜೊತೆಗೆ, ಅತಿ ದೊಡ್ಡ ಜಾಗದ ಅಗತ್ಯವನ್ನೇ ಶೂನ್ಯವಾಗಿಸುವ ಸಾಧ್ಯತೆ ಇದೆ ಎಂದ ಮೇಲೆ ಸೂಪರ್‌ ಕಂಪ್ಯೂಟರ್‌ಗಳ ಅಗತ್ಯವೇ ಇರುವುದಿಲ್ಲ ಅಲ್ಲವೇ?’ ಎಂದು ಡಾ.ಹಾರ್ಟುಂಗ್ ಪ್ರಶ್ನಿಸಿದ್ದಾರೆ.

‘ಆದರೆ, ಈ ಸಂಶೋಧನೆ ಕೇವಲ ಮೊದಲ ಪುಟ್ಟ ಹೆಜ್ಜೆಯಷ್ಟೇ. ಈಗಿನ್ನೂ ಸೃಷ್ಟಿಸಲಾಗಿರುವ ಮಿದುಳಿನ ಕಂಪ್ಯೂಟರ್ ಪ್ರಾಸೆಸರ್ ಗಾತ್ರ ಒಂದು ಗಸಗಸೆ ಗಾತ್ರದ್ದು ಮಾತ್ರ. ಮಾನವ ಮಿದುಳಿನ ಸರಾಸರಿ ತೂಕ 1336 ಗ್ರಾಂ. ಇಷ್ಟು ದೊಡ್ಡ ಗಾತ್ರದ ಮಿದುಳನ್ನು ಕೃತಕವಾಗಿ ಸೃಷ್ಟಿಸಲು ದಶಕಗಳೇ ಬೇಕಾಗಬಹುದು. ಮೊದಲ ದಶಕದಲ್ಲಿ ಇಲ್ಲಿನ ಮಿದುಳಿನ ಗಾತ್ರದ ಜೈವಿಕ ಕಂಪ್ಯೂಟರ್‌ ಸೃಷ್ಟಿಯಾಗಬಲ್ಲದು. ಐದು ದಶಕಗಳಲ್ಲಿ ಅತಿ ಶ್ರೇಷ್ಠ ವಿಶ್ಲೇಷಣಾ ಸಾಮರ್ಥ್ಯದ, ಬೃಹತ್‌ ದತ್ತಾಂಶ ಸಂಗ್ರಹಣ ಅವಕಾಶದ, ಶಕ್ತಿ ಬಳಕೆ ಕಾರ್ಯಕ್ಷಮತೆಯ ಮಾನವ ಮಿದುಳಿನ ಗಾತ್ರದ ಕಂಪ್ಯೂಟರ್‌ ಸೃಷ್ಟಿಯಾಗಲಿದೆ’ ಎಂದು ಹಾರ್ಟುಂಗ್ ವಿವರಿಸಿದ್ದಾರೆ.

ಮಹತ್ವವೇನು?

ಕಂಪ್ಯೂಟರ್‌ ಉತ್ಪಾದನೆಯ ಖರ್ಚು ದಿನೇ ದಿನೇ ಹೆಚ್ಚುತ್ತಿದೆ. ಕಂಪ್ಯೂಟರ್ ಪ್ರಾಸೆಸರ್‌ನಂತಹ ಸಾಧನಗಳಲ್ಲಿ ಚಿನ್ನದಂತಹ ಲೋಹಗಳ ಬಳಕೆ ಅನಿವಾರ್ಯ. ಹಾಗಾಗಿ, ದುಬಾರಿ ನಿರ್ಮಾಣ ವೆಚ್ಚ ಕಂಪ್ಯೂಟರ್‌ನ ಮಾರಾಟ ವೆಚ್ಚವನ್ನು ಹೆಚ್ಚಿಸುತ್ತಿದೆ. ಅಲ್ಲದೇ, ಕಂಪ್ಯೂಟರ್‌ ನಿರ್ಮಾಣದ ಕಚ್ಛಾವಸ್ತುಗಳ ಕೊರತೆಯೂ ಹೆಚ್ಚುತ್ತಿದೆ. ಜೊತೆಗೆ, ಎಂತಹ ಶ್ರೇಷ್ಠ ಕಂಪ್ಯೂಟರ್‌ನ ನಿರ್ಮಾಣವಾದರೂ ಅದರ ಜೀವಿತಾವಧಿ ಈಗ 10 ವರ್ಷವೂ ಇಲ್ಲ. ಹಾಗಾಗಿ, ಪುನರ್‌ ಬಂಡವಾಳ ಹೂಡಿಕೆಯ ಹೊರೆ ಹೆಚ್ಚುತ್ತಿದೆ. ಈ ಭೌತಿಕ ಮಿತಿಗಳನ್ನು ಕೃತಕ ಮಿದುಳಿನ ಕಣಗಳನ್ನು ಹೊಂದಿರುವ ಕಂಪ್ಯೂಟರ್‌ ಮೀರಲಿದೆ.

ಜೈವಿಕ ಕಣಗಳ ಬಳಕೆ ಇರುವ ಕಾರಣ, ಕೇವಲ ತಂತ್ರಜ್ಞಾನಕ್ಕಷ್ಟೇ ಇಲ್ಲಿ ಹಣ ಬಳಕೆಯಾಗುತ್ತದೆ, ಕಚ್ಚಾವಸ್ತುಗಳಿಗಲ್ಲ. ಜೊತೆಗೆ, ಮಿದುಳಿನ ಕಣಗಳ ಕಂಪ್ಯೂಟರ್‌ ಕೃತಕ ಬುದ್ಧಿಮತ್ತೆಗೆ ಹೆಚ್ಚು ನಿಕಟವಾಗಿ ಬೆಸೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಇದರಿಂದಾಗಿ ಒಮ್ಮೆ ಕಂಪ್ಯೂಟರ್‌ ಕೊಂಡರೆ, ಅದು ತನಗೆ ತಾನೇ ಕಲಿಯುತ್ತಾ ಬೌದ್ಧಿಕವಾಗಿ ವಿಕಸನ ಹೊಂದುತ್ತಿರುತ್ತದೆ. ಜೊತೆಗೆ, ಪ್ರಾಸೆಸರ್ ಜೈವಿಕವಾಗಿರುವ ಕಾರಣ, ಅದು ಭೌತಿಕವಾಗಿಯೂ ಬದಲಾವಣೆಗಳನ್ನು ಮಾಡಿಕೊಂಡು, ಹೊಸತನ ಕಾಪಾಡಿಕೊಳ್ಳುತ್ತದೆ.

ಇದರ ಜೊತೆಗೆ, ಕಂಪ್ಯೂಟರ್‌ಗಳ ಗಾತ್ರ ಅತ್ಯಂತ ಕಿರಿದಾಗಲಿದೆ. ಮನೆ, ಕಚೇರಿಗಳಲ್ಲಿ ಬಳಸುವ ಕಂಪ್ಯೂಟರ್‌ಗಳ ಗಾತ್ರ ಕೇವಲ ಒಂದು ಬಿಸ್ಕತ್ತಿನ ಗಾತ್ರವಿದ್ದರೆ, ಸೂಪರ್ ಕಂಪ್ಯೂಟರ್‌ಗಳ ಗಾತ್ರ ಮಾನವ ಮಿದುಳಿನ ಗಾತ್ರ ಹೊಂದಿರಲಿವೆ. ಇದು ಈಗ ಬಳಕೆಯಲ್ಲಿರುವ ಗಾತ್ರ ಹಾಗೂ ತೂಕಕ್ಕೆ ಹೋಲಿಸಿದರೆ ಅಜಗಜಾಂತರ. ಒಟ್ಟಾರೆಯಾಗಿ ಕಡಿಮೆ ವೆಚ್ಚ ಬಯಸುವ ಅಧಿಕ ಕಾರ್ಯಕ್ಷಮತೆಯ ಕಂಪ್ಯೂಟರ್ ಇದಾಗಲಿದೆ ಎನ್ನುವುದು ವಿಜ್ಞಾನಿಗಳ ವಿಶ್ಲೇಷಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.