ADVERTISEMENT

ಇಂದು ಅಮ್ಮಂದಿರ ದಿನ | ಅಮ್ಮನಿಗೆ ಥ್ಯಾಂಕ್ಸ್ ಹೇಳಲೊಂದು ನೆಪ

ಏಕೆ ಶುರುವಾಯ್ತು ಅಮ್ಮಂದಿರ ದಿನ?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 10 ಮೇ 2020, 3:32 IST
Last Updated 10 ಮೇ 2020, 3:32 IST
ಅನುಬಂಧ, ಪ್ರೀತಿ, ಕಾಳಜಿ... ಅಮ್ಮ ಅಂದ್ರೆ ಹೀಗೇನೇ...
ಅನುಬಂಧ, ಪ್ರೀತಿ, ಕಾಳಜಿ... ಅಮ್ಮ ಅಂದ್ರೆ ಹೀಗೇನೇ...   

ಕೊರೊನಾ ಲಾಕ್‌ಡೌನ್‌ ನಿಧಾನವಾಗಿ ಸಡಿಲವಾಗುತ್ತಿರುವ ಸಂದರ್ಭದಲ್ಲಿ ಬಂದಿರುವ ವಿಶ್ವ ತಾಯಂದಿರ ದಿನವನ್ನು ಸಾವಿರಾರು ಮಂದಿ ಸಾಮಾಜಿಕ ಮಾಧ್ಯಮಗಳಲ್ಲಿ ಸಂಭ್ರಮಿಸುತ್ತಿದ್ದಾರೆ. ಅಮ್ಮನಿಗೆ ಪ್ರೀತಿಯ ಥ್ಯಾಂಕ್ಸ್‌ ಹೇಳಿ ಕೃತಜ್ಞತೆ ಅರ್ಪಿಸುತ್ತಿದ್ದಾರೆ.

#MothersDay, #motherday2020 #motherhood #ನನ್ನ ಅಮ್ಮ ನನ್ನ ಹೀರೋ ಸೇರಿದಂತೆ ಹಲವು ಹ್ಯಾಷ್‌ಟ್ಯಾಗ್‌ಗಳು ಟ್ರೆಂಟ್ಆಗ್ತಿವೆ. ಸಾವಿರಾರು ಮಂದಿ ಅಮ್ಮನೊಂದಿಗಿನ ಸೆಲ್ಫಿಯನ್ನು ಪೋಸ್ಟ್ ಮಾಡುತ್ತಿದ್ದಾರೆ.

ಅಮ್ಮಂದಿರ ದಿನದ ಬಗ್ಗೆ ಒಂದಿಷ್ಟು ಮಾಹಿತಿ...

ADVERTISEMENT

1870ರಲ್ಲಿ ಜೂಲಿಯಾ ವಾರ್ಡ್ ಎಂಬ ಮಹಿಳೆ ಶಾಂತಿಗಾಗಿ ಈ ದಿನವನ್ನು ಆರಂಭಿಸಿದಳು. ನಾಗರಿಕ ಯುದ್ಧದ ಸಾವು ನೋವುಗಳನ್ನು ಕಂಡ ಜೂಲಿಯಾ, ಎಲ್ಲ ತಾಯಂದಿರಿಗೆ `ನಿಮ್ಮ ಮಕ್ಕಳು ಮತ್ತೊಂದು ತಾಯಿಯ ಮಕ್ಕಳನ್ನು ಕೊಲ್ಲುವ ಕ್ರೌರ್ಯದ ವಿರುದ್ಧ ದನಿಯೆತ್ತಿ' ಎಂದು ಕರೆ ನೀಡಿದಳು. ತಾಯ್ತನ ಮತ್ತು ಶಾಂತಿಯ ಸಂಕೇತವಾಗಿ ಜೂಲಿಯಾ `ಅಮ್ಮಂದಿರ ದಿನ'ವನ್ನು ಆರಂಭಿಸಿದಳು.

ಇಂದಿನ ಮಹಿಳೆಯರೇ ಏಳಿ
ಹೃದಯವಿರುವ ಮಹಿಳೆಯರೇ ಏಳಿ
ನಿಮ್ಮ ಕಣ್ಣೀರಿನಿಂದ ಗಟ್ಟಿಯಾಗಿ ಹೇಳಿ
ಬಿಡಲಾರೆವು ನಾವು ಯಾರನ್ನೂ
ನಮ್ಮ ಮಕ್ಕಳಿಗೆ ಕಲಿಸಿದ ಸಹನೆ- ಶಾಂತಿ- ಮಮತೆಗಳ
ಕಸಿದುಕೊಳ್ಳಲು, ಕಳೆದುಕೊಳ್ಳಲು
ಬಿಡಲಾರೆವು ನಾವು ಯಾರನ್ನೂ
ಬಿಡಲಾರೆವು ನಾವು
ಸಿದ್ಧಗೊಳ್ಳಲು ನಮ್ಮ ಮಕ್ಕಳು
ಬೇರೆ ತಾಯ ಮಕ್ಕಳನ್ನು ಕೊಲ್ಲಲು!

ಇದು ಜೂಲಿಯಾಳ ಕನಸಾಗಿತ್ತು. ಜೂಲಿಯಾ ಈ ಉದ್ದೇಶಕ್ಕೆ ಧನಸಹಾಯ ನೀಡುವುದನ್ನು ನಿಲ್ಲಿಸಿದಾಕ್ಷಣ `ತಾಯಂದಿರ ದಿನ'ದ ಆಚರಣೆಯೂ ನಿಂತಿತು. ಈ ಆಚರಣೆಗೆ ಪುನಶ್ಚೇತನ ನೀಡಿದ ತಾಯಿ- ಮಗಳ ಜೋಡಿ ಆ್ಯನ್ನಾ ಆ್ಯನ್ನ್ ಮೇರಿ ಹಾಗೂ ಆ್ಯನ್ನಾ ರೀವ್ಸ್ ಜಾರ್ವಿಸ್.

ಆ್ಯನ್ನ್ ಮೇರಿ 1832ರಲ್ಲಿ ವರ್ಜೀನಿಯಾದಲ್ಲಿ ಹುಟ್ಟಿದವಳು. ಸಮಾಜ ಸೇವಕಿಯಾಗಿದ್ದ ಆಕೆ ಸಮಾಜದ ಸ್ವಚ್ಛತೆ- ಆರೋಗ್ಯಕ್ಕಾಗಿ ಕೆಲಸ ಮಾಡುತ್ತಿದ್ದಳು. `ತಾಯಂದಿರ ದಿನ'ದ ಕ್ಲಬ್ ಸ್ಥಾಪಿಸಿ ಅದರಿಂದ ಹಣ ಕೂಡಿಸಿ, ಕ್ಷಯದಿಂದ ಬಳಲುತ್ತಿದ್ದ ಮಹಿಳೆಯರ ಔಷಧಿಗೆ ವ್ಯಯಿಸುತ್ತಿದ್ದಳು. ಅಮೆರಿಕದ ನಾಗರಿಕ ಯುದ್ಧದ ಸಮಯದಲ್ಲಿ ತನ್ನ ನಾಲ್ವರು ಮಕ್ಕಳನ್ನು ಕಳೆದುಕೊಂಡಳು. ಒಟ್ಟಿನಲ್ಲಿ ತನ್ನ 12 ಮಕ್ಕಳಲ್ಲಿ 8 ಮಕ್ಕಳನ್ನು ದೊಡ್ಡವರಾಗುವ ಮೊದಲೇ ಕಳೆದುಕೊಂಡಳು.

ಇಂತಹ ವೈಯಕ್ತಿಕ ದುರಂತಗಳ ನಡುವೆಯೂ ತನ್ನ ಸಾಮಾಜಿಕ ಸೇವೆಯನ್ನು ನಿಲ್ಲಿಸಲಿಲ್ಲ. ಅಂದರೆ `ತಾಯಂದಿರ ದಿನ' ತನ್ನ ತಾಯಿಗೆ ನೀಡುವ ಕೊಡುಗೆಗಿಂತ, ಬೇರೆ `ತಾಯಂದಿರಿಗಾಗಿ' ಮಾಡುವ ಸೇವೆಯಾಗಿತ್ತು!

ಆ್ಯನ್ನ್ ಮೇರಿ 1907ರ ಮೇ ತಿಂಗಳ ಎರಡನೇ ಭಾನುವಾರ ಮೃತಳಾದಳು. ಮಗಳು ರೀವ್ಸ್ ಚರ್ಚಿನಲ್ಲಿ ಅಂತ್ಯಸಂಸ್ಕಾರಕ್ಕೆ ಸೇರಿದ್ದ ಎಲ್ಲರಿಗೂ ತಾಯಿಯ ಪ್ರೀತಿಯ ಹೂವು ಬಿಳಿ ಗುಲಾಬಿಯನ್ನು ನೀಡಿದಳು. ರೀವ್ಸ್‌ಗೆ `ತಾಯಿಯ ದಿನ' ಕುಟುಂಬದ, ತನ್ನ ತಾಯಿ ತನಗಾಗಿ ಮಾಡಿದ ಎಲ್ಲದರ ನೆನಪಿನ ಸಂಭ್ರಮದ ಸ್ಮರಣೆಯಾಗಿತ್ತು.

1912ರಲ್ಲಿ `ತಾಯಿ ದಿನ'ದ ಆಚರಣೆಗಾಗಿಯೇ ಆಕೆ ಸಂಸ್ಥೆಯೊಂದನ್ನು ಹುಟ್ಟು ಹಾಕಿದಳು. ಕ್ರಮೇಣ ಬಂಡವಾಳಶಾಹಿಗಳಿಂದ ಆವರಿಸಿಕೊಂಡ ಎಲ್ಲ ಆಚರಣೆಗಳಂತೆ `ತಾಯಂದಿರ ದಿನ'ದ ಮೇಲೂ ಗ್ರೀಟಿಂಗ್ ಕಾರ್ಡು- ಹೂಗೊಂಚಲು- ಕೊಡುಗೆಗಳ ದಾಳಿ ಆರಂಭವಾಯಿತು. ಪ್ರೀತಿ, ಕೃತಜ್ಞತಾ ಭಾವನೆಗಿಂತ ಹಣವೇ ಬಂಡವಾಳವಾಯಿತು. ರೀವ್ಸ್ ಹೇಳಿದ್ದ ಕೃತಜ್ಞತೆಯ, ಪ್ರಾಮಾಣಿಕ ಭಾವನೆಗಳ ಕೈಬರಹದ ಪತ್ರಕ್ಕಿಂತ ಎರಡು ಸಾಲುಗಳ, ಯಾರು ಬೇಕಾದರೂ ಬರೆದಿರಬಹುದಾದ ಬಣ್ಣದ ಕಾರ್ಡುಗಳೇ ಹೆಚ್ಚಾದವು.

ರೀವ್ಸ್ ಇದರ ವಿರುದ್ಧ ದನಿಯೆತ್ತಿ `ತಾಯಂದಿರ ದಿನ'ದ ಸಲುವಾಗಿ ಬಿಳಿ ಬಣ್ಣದ ಹೂವಿನ ಕುಂಡಗಳನ್ನು ಕೊಡುಗೆಯಾಗಿ ಹಂಚತೊಡಗಿದಳು. ಅರ್ಥಪೂರ್ಣವಾಗಿ ಆಚರಿಸಲಾಗದ, ವ್ಯಾಪಾರಿ ಸಂಸ್ಕೃತಿಯ `ತಾಯಂದಿರ ದಿನ'ದ ವಿರುದ್ಧ ರೀವ್ಸ್ ಬಲವಾಗಿ ಕೆಲಸ ಮಾಡಲಾರಂಭಿಸಿದಳು. ಇದರ ವಿರುದ್ಧದ ಹೋರಾಟ ಆಕೆಯ ಮಾನಸಿಕ ಸ್ವಾಸ್ಥ್ಯವನ್ನೇ ಕೆಡಿಸಿತು.

1944ರಲ್ಲಿ ಮನೋವೈದ್ಯಕೀಯ ಆಸ್ಪತ್ರೆಗೆ ದಾಖಲಾದ ಆಕೆ, 4 ವರ್ಷಗಳ ನಂತರ ಕೊನೆಯುಸಿರೆಳೆದಳು. ಆಕೆಗಾಗ 84 ವರ್ಷ. ಹಣವಾಗಲೀ, ಮಕ್ಕಳಾಗಲೀ ಆಗ ಅವಳ ಬಳಿ ಇರಲಿಲ್ಲ. ಮಕ್ಕಳಿರದ `ತಾಯಿ' ಹೃದಯದ ರೀವ್ಸ್ `ತಾಯಂದಿರ ದಿನ'ವನ್ನು ಹುಟ್ಟು ಹಾಕಿದ್ದು, ಅದನ್ನು ಬೆಳೆಸಿದ್ದು, ಅದರ ಅರ್ಥಪೂರ್ಣ ಆಚರಣೆಗೆ ಶ್ರಮಿಸಿದ್ದು, ಅವು ನಮಗೆ ಕೊಡುವ ಸಂದೇಶಗಳು ಅನೇಕ.

ಗಮನ ಸೆಳೆದ ಪೋಸ್ಟ್‌ಗಳು

‘ನಿಮಗೆ ಅರ್ಹತೆ ಇದೆಯೋ ಇಲ್ಲವೋ,ತಾಯಿಯ ಪ್ರೀತಿ ಸಿಕ್ಕೇ ಸಿಗುತ್ತೆ’ ಎಂದು ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಿಡಿಯೊ ಟ್ವೀಟ್ ಮಾಡಿದ್ದಾರೆ.

‘ನನ್ನಂತೆ ಅನೇಕರು ತಾಯಿಯಿಂದ ದೂರವಿದ್ದಾರೆ. ಆದರೆ ಅಮ್ಮನ ಬಗೆಗಿನ ಕಾಳಜಿ ಮತ್ತು ಕೃತಜ್ಞತೆ ಅರ್ಪಿಸಲು ಹಲವು ಅವಕಾಶಗಳನ್ನೂ ಹುಡುಕಿಕೊಂಡಿದ್ದೇವೆ. ನನ್ನ ಅಮ್ಮನೊಂದಿಗೆ ನಾನು ಪ್ರತಿದಿನ ಮಾತಾಡ್ತೀನಿ. ಪ್ರೀತಿ, ಶಕ್ತಿ ಮತ್ತು ಮಾರ್ಗದರ್ಶನ ಕೊಟ್ಟ ಅವಳಿಗೆ ಮತ್ತು ಜಗತ್ತಿನ ಎಲ್ಲ ತಾಯಂದರಿಗೆ ಧನ್ಯವಾದಗಳು’ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಡೆರಸ್ ಪ್ರತಿಕ್ರಿಯಿಸಿದ್ದಾರೆ.

‘ತಾಯ್ತನ ಎನ್ನುವುದರ ಸಾರ್ಥಕ್ಯವು ಸಂತಾನೋತ್ಪತ್ತಿಗಷ್ಟೇ ಸೀಮಿತವಲ್ಲ. ಇನ್ನೊಂದು ಜೀವವನ್ನು ತನ್ನ ಭಾಗವಾಗಿ ನೋಡುವ ದೊಡ್ಡತನದ ಸ್ವಭಾ ಅದು’ ಎಂದು ಸದ್ಗುರು ಜಗ್ಗಿ ವಾಸುದೇವ್ ಹೇಳಿದ್ದಾರೆ.

ಒಡಿಶಾದ ಪುರಿ ಕಡಲ ತೀರದಲ್ಲಿ ಮರಳು ಶಿಲ್ಪ ಕಲಾವಿದ ಸುದರ್ಶನ್ ಪಟ್ನಾಯಕ್ ಅಮ್ಮಂದಿರ ದಿನಕ್ಕಾಗಿ ವಿಶೇಷ ಮರಳು ಶಿಲ್ಪ ರೂಪಿಸಿದ್ದಾರೆ.

‘ಅಮ್ಮಂದಿರ ದಿನಕ್ಕೆ ಮಕ್ಕಳು ಕೋರುವ ಶುಭಾಶಯದಿಂದ ಅವಳ ಬದುಕಿನಲ್ಲಿ ಏನೂ ವ್ಯತ್ಯಾಸವಾಗುವುದಿಲ್ಲ. ಯಾವುದನ್ನೂ ನಿರೀಕ್ಷಿಸದ ಕರ್ತವ್ಯತತ್ಪರಳು ಅವಳು’ ಎಂಬುದನ್ನು ಸುಪ್ರೀತ್ ಎನ್ನುವವರು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಮಾರ್ಮಿಕವಾಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.