ADVERTISEMENT

Explainer | ಅಮೆರಿಕ ರಾಜಕಾರಣದಲ್ಲಿ ‘ಪಿಂಕ್’ ಸಂಚಲನ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಅಕ್ಟೋಬರ್ 2020, 5:59 IST
Last Updated 26 ಅಕ್ಟೋಬರ್ 2020, 5:59 IST
#ambitionsuitsyou ಹ್ಯಾಷ್‌ಟ್ಯಾಗ್‌ನೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು
#ambitionsuitsyou ಹ್ಯಾಷ್‌ಟ್ಯಾಗ್‌ನೊಂದಿಗೆ ಇನ್‌ಸ್ಟಾಗ್ರಾಂನಲ್ಲಿ ಕಾಣಿಸಿಕೊಂಡಿರುವ ಚಿತ್ರಗಳು   

ಅಮೆರಿದಲ್ಲಿ ಅಧ್ಯಕ್ಷೀಯ ಚುನಾವಣೆಯ ಮತದಾನಕ್ಕೆ ದಿನಗಣನೆ ಆರಂಭವಾಗಿದೆ. ನವೆಂಬರ್‌ 3ರಂದು ನಡೆಯಲಿರುವ ಚುನಾವಣೆಯಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರವಹಿಸಬೇಕೆಂಬ ಅಭಿಯಾನವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೇಗ ಪಡೆದುಕೊಂಡಿದೆ. ಈ ಅಭಿಯಾನದಲ್ಲಿ ಮಹಿಳಾ ಶಕ್ತಿಯ ಸಂಕೇತವಾಗಿ ನಸು ಗುಲಾಬಿ (ಪಿಂಕ್) ಬಣ್ಣ ಬಳಕೆಯಾಗುತ್ತಿದೆ. ಏನಿದು ಅಭಿಯಾನ? ಮಹಿಳೆಗೂ ನಸು ಗುಲಾಬಿ ಬಣ್ಣಕ್ಕೂ ಏನು ಸಂಬಂಧ? ಇಲ್ಲಿದೆ ಮಾಹಿತಿ.

---

ಅಮೆರಿಕದ ಜನಪ್ರಿಯ ನಟಿ ಕೆರಿ ವಾಷಿಂಗ್‌ಟನ್ ತಿಳಿ ಗುಲಾಬಿ (ಪಿಂಕ್) ಬಣ್ಣದ ಪ್ಯಾಂಟ್‌ಸೂಟ್‌ ಧರಿಸಿದ್ದ ಸೆಲ್ಫಿಯೊಂದನ್ನುಕಳೆದ ವಾರ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿಕೊಂಡಿದ್ದರು. ಅದಕ್ಕೆ ‘Gladiator in a (pink) suit’ (ಪಿಂಕ್ ಸೂಟ್‌ನಲ್ಲಿ ಹೋರಾಟಗಾರ್ತಿ) ಎಂಬ ಒಕ್ಕಣೆಯಿತ್ತು.

ADVERTISEMENT

ಇದರಲ್ಲೇನು ವಿಶೇಷ ಅನ್ನಿಸ್ತಾ? ನಸು ಗುಲಾಬಿ ಬಣ್ಣದ ಉಡುಗೆಯಲ್ಲಿ ಈ ಸೆಲಬ್ರಿಟಿ ಅಚಾನಕ್ ಕಾಣಿಸಿಕೊಂಡದ್ದಲ್ಲ. ನವೆಂಬರ್‌ 3ರಂದು ನಡೆಯಲಿರುವ ಅಮೆರಿಕ ಚುನಾವಣೆಯಲ್ಲಿ ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು,ಮಹಿಳಾ ಪರ ಜನಾಭಿಪ್ರಾಯ ರೂಪಿಸಬೇಕೆಂಬ ಉದ್ದೇಶದಿಂದ ಆರಂಭವಾಗಿರುವ ದೊಡ್ಡ ಆಂದೋಲನದ ಭಾಗವಾಗಿ ಆಕೆ ಪಿಂಕ್ ಸೂಟ್‌ ಧರಿಸಿದ್ದರು. ‘ಪವರ್‌ ಪಿಂಕ್’ ಎನ್ನುವುದು 2020ರ ಚುನಾವಣೆಯಲ್ಲಿ ಮಹಿಳೆಯರ ಘೋ‍ಷಣೆಯಾಗಲಿದೆ ಎಂದು ಇದೀಗ ಹಲವರು ಹೆಮ್ಮೆಯಿಂದ ಪೋಸ್ಟ್‌ ಮಾಡುತ್ತಿದ್ದಾರೆ.

ನಸು ಗುಲಾಬಿ‌ ಸೂಟ್ ಧರಿಸಿದ ಚಿತ್ರಗಳನ್ನು ಸೆಲೆಬ್ರಿಟಿಗಳೇಕೆ ಪೋಸ್ಟ್ ಮಾಡುತ್ತಿದ್ದಾರೆ?

#AmbitionSuitsYou ಹ್ಯಾಷ್‌ಟ್ಯಾಗ್‌ನೊಂದಿಗೆ ಅಮೆರಿಕದ ಮಹಿಳೆಯರು ರಾಜಕೀಯದಲ್ಲಿ ಸಕ್ರಿಯರಾಗಬೇಕು ಎಂದು ಪ್ರೇರೇಪಿಸುವ ಚಳವಳಿ ಸಾಮಾಜಿಕ ಮಾಧ್ಯಮಗಳಲ್ಲಿ ಆರಂಭವಾಗಿದೆ. ಪಿಂಕ್‌ ಸೂಟ್‌ ಇದರ ಪ್ರತೀಕವಾಗಿ ಕಾಣಿಸಿಕೊಂಡಿದೆ. ಮಹಿಳಾ ಪ್ರತಿನಿಧಿಗಳು ಅಧಿಕಾರಕ್ಕೆ ಬರಬೇಕು ಎಂದು ಮುಕ್ತವಾಗಿ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಸಾರಿ ಹೇಳುತ್ತಿದ್ದಾರೆ.

‘ಮಹಿಳೆಯರು ಅಮೆರಿಕದ ಅತ್ಯಂತ ಪ್ರಬಲ ಶಕ್ತಿ. ಈ ದೇಶದ ಬಹುಸಂಖ್ಯಾತರು, ಬಹುಸಂಖ್ಯೆಯ ಮತದಾರರು ನಾವು, ಈ ಚುನಾವಣೆಯ ಫಲಿತಾಂಶವನ್ನು ನಾವು ನಿರ್ಧರಿಸುತ್ತೇವೆ’ ಎಂಬರ್ಥದ ಒಕ್ಕಣೆಯು #AmbitionSuitsYou ಹ್ಯಾಷ್‌ಟ್ಯಾಗ್‌ನೊಂದಿಗೆ ಕಾಣಿಸಿಕೊಳ್ಳುತ್ತಿರುವ ಬಹುತೇಕ ಪೋಸ್ಟ್‌ಗಳಲ್ಲಿದೆ.

ಈವರೆಗೆ ಕೆರಿ ವಾಷಿಂಗ್‌ಟನ್, ಜೊಯ್ ಸಲ್ಡಾನಾ, ಮಂಡೆ ಮೂರ್ ಮತ್ತು ಅಮಿ ಸುಹುಮರ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ‘ಎಲೆಕ್ಷನ್‌ ಕಲೆಕ್ಷನ್’ ಸರಣಿಯ ವಸ್ತ್ರಗಳನ್ನು ಧರಿಸಿ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಕೆಲಸ ಮಾಡುವಾಗ ಧರಿಸಲು ಅನುಕೂಲವಾಗುವಂತೆ ರೂಪಿಸಿರುವ ಈ ನಸು ಗುಲಾಬಿ ವರ್ಕ್‌ವೇರ್‌ ಸರಣಿಯು ಅಮೆರಿಕದ ಫ್ಯಾಷನ್ ಟ್ರೆಂಡ್ ಆಗುತ್ತಿದೆ.

ಈ ಉಡುಗೆಗಳ ಮಾರಾಟದಿಂದ ಸಿಗುವ ಲಾಭದ ಒಂದು ಪಾಲು ‘ಸೂಪರ್‌ ಮೆಜಾರಿಟಿ’ ಸಂಸ್ಥೆಗೆ ಹೋಗುತ್ತದೆ. ಅಮೆರಿಕ ಚುನಾವಣಾ ಪ್ರಕ್ರಿಯೆಯಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಿಸಲೆಂದು ಸೂಪರ್ ಮೆಜಾರಿಟಿ ಸಂಸ್ಥೆಯನ್ನು ಪ್ಲಾನ್ಡ್‌ ಪೇರೆಂಟ್‌ಹುಡ್, ಬ್ಲಾಕ್‌ ಲೈವ್ಸ್‌ ಮ್ಯಾಟರ್ ಮತ್ತು ನ್ಯಾಷನಲ್ ಡೊಮೆಸ್ಟಿಕ್ ವರ್ಕರ್ಸ್‌ ಅಲಯನ್ಸ್‌ ಸಂಘಟನೆಗಳು ಜತೆಗೂಡಿ ಹುಟ್ಟುಹಾಕಿವೆ.

ನಸು ಗುಲಾಬಿಯುರಾಜಕೀಯ ಬಣ್ಣವಾಗಿದ್ದು ಇದೇ ಮೊದಲ ಬಾರಿಯೇ?

1990ರಿಂದ ಈಚೆಗೆನಸು ಗುಲಾಬಿಬಣ್ಣವನ್ನು ಮಹಿಳಾಪರ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಹಿತಾಸಕ್ತಿಗಾಗಿ ರೂಪುಗೊಂಡ ಚಳವಳಿಗಳಲ್ಲಿ ಬಳಸುವುದು ರೂಢಿಗೆ ಬಂತು. ಆದರೆ 18ನೇ ಶತಮಾನದ ಕಲಾವಿದರುನಸು ಗುಲಾಬಿಯನ್ನು'ಸಕ್ರಿಯ' ಎನ್ನುವ ಅರ್ಥದಲ್ಲಿ ಹೆಚ್ಚು ಬಳಸುತ್ತಿದ್ದರು. ಶ್ರೀಮಂತ ಕುಟುಂಬಗಳ ಯುವಕರು ಈ ಬಣ್ಣವನ್ನು ಹೆಚ್ಚು ಇಷ್ಟಪಡುತ್ತಿದ್ದರು. ಮಕ್ಕಳ ಉಡುಪುಗಳನ್ನು ರೂಪಿಸುವಾಗ ಬಾಲಕಿಯರ ಉಡುಗೆಗಳಿಗೆನಸು ಗುಲಾಬಿಮತ್ತು ಬಾಲಕರ ಉಡುಗೆಗಳಿಗೆ ನೀಲಿ ಬಳಸುವುದು ಚಾಲ್ತಿಗೆ ಬಂತು.

ಮಕ್ಕಳ ಉಡುಗೆಗಳಿಗೆನಸು ಗುಲಾಬಿ ಬಳಕೆ ಆರಂಭವಾದಾಗ ಅದಕ್ಕೆ ‘ಗರ್ಲಿ’ (ಹುಡುಗಿತನ) ಎಂಬರ್ಥವಿತ್ತು. ಈ ಪದವನ್ನು 'ಸ್ತ್ರೀ ಸಹಜ ಮಾಧುರ್ಯ,ಬಲಹೀನತೆ' ಎನ್ನುವ ಅರ್ಥಗಳನ್ನು ಬಿಂಬಿಸುವಂತೆ ಬಳಸಲಾಗುತ್ತಿತ್ತು. ಆದರೆ ಕಾಲಕ್ರಮೇಣನಸು ಗುಲಾಬಿಯುಮಹಿಳೆಯರ ಶಕ್ತಿಯ, ಲಿಂಗ ಅಸಮಾನತೆಯ ವಿರುದ್ಧದ ಸಂಕೇತವಾಗಿ ಬಳಕೆಗೆ ಬಂತು. 1992ರಲ್ಲಿ ಸ್ತನ ಕ್ಯಾನ್ಸರ್ ವಿರುದ್ಧ ಜಾಗೃತಿ ಮೂಡಿಸಲೆಂದು ನಡೆದ ಅಭಿಯಾನದಲ್ಲಿನಸು ಗುಲಾಬಿ ಬಣ್ಣದರಿಬ್ಬನ್‌ಗಳನ್ನು ಬಳಸಲಾಯಿತು.

2017ರಲ್ಲಿ ಅಮೆರಿಕದಲ್ಲಿ ನಡೆದ ಮಹಿಳಾ ಚಳವಳಿಯಲ್ಲಿನಸು ಗುಲಾಬಿ ಬಣ್ಣದಕಸೂತಿ ಟೋಪಿಗಳು (ಪುಸ್ಸಿಹ್ಯಾಟ್) ವ್ಯಾಪಕವಾಗಿ ಬಳಕೆಯಾದವು. ನಂತರದ ದಿನಗಳಲ್ಲಿಈ ಟೋಪಿಗಳು ಜಗತ್ತಿನ ಇತರ ದೇಶಗಳಲ್ಲೂ ಜನಪ್ರಿಯವಾಯಿತು.

ಅಮೆರಿಕನಸು ಗುಲಾಬಿಬಣ್ಣ ಈ ಹಿಂದೆಯೂ ಪ್ರಬಲವಾಗಿ ಕಾಣಿಸಿಕೊಂಡಿತ್ತೆ?

ಕಳೆದ ಬಾರಿ ಅಮೆರಿಕ ಅಧ್ಯಕ್ಷ ಗಾದಿಗೆ ಸ್ಪರ್ಧಿಸಿದ್ದ ಹಿಲರಿ ಕ್ಲಿಂಟನ್ ಸದಾ ಪ್ಯಾಂಟ್‌-ಸೂಟ್‌ಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದರು. ನಸು ಗುಲಾಬಿ (ಪಿಂಕ್) ಬಣ್ಣದ ಹಲವು ಶೇಡ್‌ಗಳಿರುವ ಬಟ್ಟೆಗಳನ್ನು ಧರಿಸುತ್ತಿದ್ದರು. ನಸು ಗುಲಾಬಿಪ್ಯಾಂಟ್‌ಸೂಟ್‌ ಧರಿಸಿದ್ದ ಮಹಿಳೆಯರ ಚಿತ್ರಗಳನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದರು. ‘ಇವು ಶಕ್ತಿಕೊಡುವ ಪ್ಯಾಂಟ್‌-ಸೂಟ್‌ಗಳು. ಸಶಕ್ತ ಮಹಿಳೆಯರು ಇಂಥ ಉಡುಗೆ ಧರಿಸುವುದನ್ನು ನೋಡಲು ನನಗೆ ಇಷ್ಟ’ ಎಂಬ ಒಕ್ಕಣೆ ಬರೆದುಕೊಂಡಿದ್ದರು.

2019ರ ಏಪ್ರಿಲ್‌ನಲ್ಲಿ ಅಮೆರಿಕದ 'ಕಾಂಗ್ರೆಸ್' ಮಹಿಳಾ ದೌರ್ಜನ್ಯ ನಿಯಂತ್ರಣ ಮಸೂದೆ ಅಂಗೀಕರಿಸಿತ್ತು. ಆಗ ನ್ಯೂಯಾರ್ಕ್‌ನ ಪ್ರತಿನಿಧಿ ಅಲೆಗ್ಸಾಂಡ್ರಿಯಾ ಓಯಾಸಿಯೊ ಕೊರ್ಟೆಜ್ ಪಿಂಕ್‌ ಪ್ಯಾಂಟ್‌-ಸೂಟ್ ಧರಿಸಿದ್ದ ಫೋಟೊ ಟ್ವೀಟ್ ಮಾಡಿ, ‘ಅಮೆರಿಕದ ಅಧಿಕಾರ ಕೇಂದ್ರಸ್ಥಾನದಲ್ಲಿಯೂ ನಾವು ಪಿಂಕ್ ಧರಿಸುತ್ತೇವೆ’ ಎಂದು ಬರೆದುಕೊಂಡಿದ್ದರು.

ಭಾರತದಲ್ಲಿಯೂನಸು ಗುಲಾಬಿಬಣ್ಣ ಮಹಿಳಾ ಪರ ರಾಜಕೀಯಕ್ಕೆ ಬಳಕೆಯಾಗುತ್ತಿದೆಯೇ?

ಭಾರತದಲ್ಲಿಯೂ ಪಿಂಕ್ ಬಣ್ಣವು ಮಹಿಳಾ ಪರ ಚಳವಳಿಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ದನಿಯೆತ್ತಿರುವ ಸಂಘಟನೆಯು ತನ್ನನ್ನು ತಾನು ‘ಗುಲಾಬಿ ಗ್ಯಾಂಗ್’ ಎಂದೇ ಕರೆದುಕೊಂಡಿದೆ. ಶ್ರೀರಾಮಸೇನೆಯ ನೇತಾರ ಪ್ರಮೋದ್‌ ಮುತಾಲಿಕ್ ನೀಡಿದ ಹೇಳಿಕೆಯೊಂದನ್ನು ಖಂಡಿಸಿದ್ದ ಮಹಿಳೆಯರು, ಮುತಾಲಿಕ್‌ಗೆ ಪಿಂಕ್ ಚಡ್ಡಿ ಕಳಿಸುವ ಅಭಿಯಾನವನ್ನೇ ಆರಂಭಿಸಿದ್ದರು.

#ambitionsuitsyou ಅಭಿಯಾನದಲ್ಲಿ ಗಮನ ಸೆಳೆದ ಕೆಲ ಪೋಸ್ಟ್‌ಗಳು ಇಲ್ಲಿವೆ.

(ಮಾಹಿತಿ: ವಿವಿಧ ವೆಬ್‌ಸೈಟ್‌ಗಳು, ಬರಹ: ಡಿ.ಎಂ.ಘನಶ್ಯಾಮ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.