ADVERTISEMENT

ಮಹಿಳಾ ದಿನಾಚರಣೆ: ಜೀವನ್ಮುಖಿ ಪಯಣ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2021, 19:30 IST
Last Updated 7 ಮಾರ್ಚ್ 2021, 19:30 IST
ಸಬಿತಾ ಮೋನಿಸ್
ಸಬಿತಾ ಮೋನಿಸ್   

ಆತ್ಮಬಲವೇ ಮನುಷ್ಯನ ದೊಡ್ಡ ಹೂಡಿಕೆ. ಅಂತಃಶಕ್ತಿ ಸಶಕ್ತವಾಗಿದ್ದರೆ, ಅಸಾಧ್ಯ ಅಂದುಕೊಂಡಿದ್ದೆಲ್ಲ ಮಂಜು ಕರಗಿ ನೀರಾದಷ್ಟೇ ಸುಲಭದಲ್ಲಿ ಸಾಧ್ಯವಾಗುತ್ತಾ ಹೋಗುತ್ತದೆ. ನನ್ನೊಳಗಿನ ಚೇತನ ಯಾವತ್ತಿಗೂ ‘ನೀನು ಸಬಲೆ’ ಎನ್ನುತ್ತಲೇ ನನ್ನನ್ನು ಮುನ್ನಡೆಸಿದೆ.

ನಾನೇನೋ ವಿಶೇಷ ಸಾಧನೆ ಮಾಡಿದೆನೆಂಬ ಹಮ್ಮು ನನ್ನನ್ನು ಕಾಡಲೇ ಇಲ್ಲ. ಎಲ್ಲರಂತೆ ಸಹಜವಾಗಿರುವ ವ್ಯಕ್ತಿ ನಾನು ಎಂತಲೇ ಅಂದುಕೊಳ್ಳುತ್ತೇನೆ. ಎಲ್ಲರೂ ಕೈಯಲ್ಲಿ ಮಾಡುವ ಕೆಲಸಗಳನ್ನು ನಾನು ಕಾಲಿನಲ್ಲಿ ಮಾಡುವುದನ್ನು ರೂಢಿಸಿಕೊಂಡಿದ್ದೇನೆ. ಅಕ್ಕ–ತಮ್ಮಂದಿರು ಶಾಲೆಗೆ ಹೋಗಿ ಬಂದು, ಮನೆಯಲ್ಲಿ ಹೋಂವರ್ಕ್ ಮಾಡುತ್ತಿದ್ದರು. ಅದನ್ನು ಕಂಡು, ಬರೆಯಬೇಕು, ಓದಬೇಕು ಎನ್ನುವ ತುಡಿತ ನನ್ನೊಳಗೆ ಇಮ್ಮಡಿಸಿತು. ಕಾಲಿನ ಹೆಬ್ಬೆರಳು–ಉಂಗುರ ಬೆರಳುಗಳ ನಡುವೆ ಪೆನ್ನು ಹಿಡಿದು, ಬರೆಯಲಾರಂಭಿಸಿದೆ. ಎಂದಿನಿಂದ ಬರೆಯಲು ಶುರು ಮಾಡಿದೆ ಎಂಬುದೇ ನೆನಪಾಗುತ್ತಿಲ್ಲ. ಅಮ್ಮ–ಅಪ್ಪ ಹೇಳುವ ಹಾಗೆ, 4–5 ವರ್ಷದವಳಿರುವಾಗಲೇ ಕಾಲಿನಿಂದ ಸ್ಫುಟವಾಗಿ ಬರೆಯುತ್ತಿದ್ದೆ. ಪ್ರಸ್ತುತ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಕಲ್ಯಾಣ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.

ಎಸ್‌ಎಸ್‌ಎಲ್‌ಸಿಯಲ್ಲಿ ಶೇ 71 ಅಂಕ ಪಡೆದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಪದವಿಗೆ ಹೆಸರು ನೋಂದಾಯಿಸಿದಾಗ, ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವ ಶೈಕ್ಷಣಿಕ ಶುಲ್ಕವನ್ನು ಮನ್ನಾ ಮಾಡಿದರು. ಇದೇ ಸಂಸ್ಥೆಯಲ್ಲಿ ಎಂ.ಎಸ್.ಡಬ್ಲ್ಯು ಓದಿ, ಕುವೆಂಪು ಮುಕ್ತ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಎಂ.ಎ ಪೂರೈಸಿದ್ದೇನೆ.

ADVERTISEMENT

ಊಟ ಮಾಡುವುದು, ಲೋಟವನ್ನೆತ್ತಿ ನೀರು ಕುಡಿಯುವುದು ಎಲ್ಲವನ್ನೂ ನಾನೇ ಕಲಿತೆ. ಅನಿವಾರ್ಯತೆ ಅಮ್ಮನ ಕೆಲಸ ಮಾಡಿತು. ಶಾಲೆಯಲ್ಲಿ ಶಿಕ್ಷಕರು, ಸ್ನೇಹಿತೆಯರು ನನ್ನನ್ನು ಭಿನ್ನವಾಗಿ ಗುರುತಿಸಲೇ ಇಲ್ಲ. ಇವೆಲ್ಲ ನನ್ನನ್ನು ಇನ್ನಷ್ಟು ಸದೃಢಳನ್ನಾಗಿ ಮಾಡಿದವು. ಒಬ್ಬಳೇ ಬಸ್ಸಿನಲ್ಲಿ ಕಾಲೇಜಿಗೆ ಹೋಗಿ ಬರುತ್ತಿದ್ದೆ. ಮೊದಲ ಬಾರಿ ನನ್ನನ್ನು ಕಂಡವರು ಪ್ರೋತ್ಸಾಹಿಸಿದರೆ ಖುಷಿ, ಕನಿಕರ ತೋರುವುದು ನನಗೆ ಇಷ್ಟವಾಗದ ಸಂಗತಿ. ಈಗಲೂ ಶಿಕ್ಷಣ ಸಂಸ್ಥೆಯ ಬಸ್‌ನಲ್ಲಿ ನಿತ್ಯ 25 ಕಿ.ಮೀ ಪ್ರಯಾಣಿಸುತ್ತೇನೆ. ಕೈಗಳು ಮಾಡುವ ಕೆಲಸಗಳನ್ನೆಲ್ಲ ಸುಲಲಿತವಾಗಿ ಮಾಡುವ ಕಾಲು, ಎಂದೂ ತನಗೆ ಹೊರೆಯಾಯಿತೆಂದು ಮುನಿಸಿಕೊಂಡೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.