ADVERTISEMENT

ಹಾಯಿದೋಣಿ | ಗಾಲಿಕುರ್ಚಿಗೆ ರೆಕ್ಕೆ ಕಟ್ಟಿದೆ...

ಅಂಬಿಕಾ ರಾಜಾ
Published 31 ಮಾರ್ಚ್ 2020, 6:38 IST
Last Updated 31 ಮಾರ್ಚ್ 2020, 6:38 IST
ಅಂಬಿಕಾ ರಾಜಾ
ಅಂಬಿಕಾ ರಾಜಾ   
""

ಅಂದು 2014ರ ನವೆಂಬರ್‌ 20ನೇ ತಾರೀಖು. ಗೆಳತಿಯರ ಗುಂಪಿನೊಂದಿಗೆ ಹಾಸ್ಟೆಲ್ ಕೊಠಡಿಯತ್ತ ನಡೆಯುತ್ತಿದ್ದೆ. ಎಡವಿ ಹಾಸ್ಟೆಲ್‌ನ ಮೆಟ್ಟಿಲುಗಳ ಮೇಲೆ ಬಿದ್ದೆ.ನನ್ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಆದರೆ, ನನ್ನ ಸಮಸ್ಯೆ ಪರಿಹರಿಸಲು ಬೇಕಾದ ಸೌಲಭ್ಯಗಳು ಅಲ್ಲಿ ಇರಲಿಲ್ಲ. ಹಾಗಾಗಿ, ಬೇರೊಂದು, ದೊಡ್ಡ ಆಸ್ಪತ್ರೆಗೆ ಸ್ಥಳಾಂತರಿಸಿದರು.

ಐಸಿಯುಗೆ ತಕ್ಷಣವೇ ಒಯ್ದರು. ನನ್ನನ್ನು ವೆಲ್ಲೂರ್‌ನ ಸಿಎಂಸಿಗೆ ದಾಖಲಿಸಬೇಕು ಎಂದು ಅಲ್ಲಿನ ವೈದ್ಯರು ಹೇಳಿದರು. ಸಮಸ್ಯೆಯ ತೀವ್ರತೆ ನನಗೆ ಅರ್ಥ ಆಗಿರಲಿಲ್ಲ. ನಾನು ನಡೆದಾಡುವುದು ಸಾಧ್ಯವಾಗುತ್ತದೆ ಎಂದೇ ಭಾವಿಸಿದ್ದೆ.

2014ರ ಡಿಸೆಂಬರ್‌ 8ರಂದು ವೈದ್ಯರು ಕೊಠಡಿಗೆ ಬಂದರು. ನನ್ನ ದೇಹದ ಕೆಳಭಾಗಕ್ಕೆ ಲಕ್ವ ಹೊಡೆದಿದೆ. ಅದು ಶಾಶ್ವತ ಎಂದು ಅವರು ಘೋಷಿಸಿದರು. ಈ ಸುದ್ದಿ ನನಗೆ ದೊಡ್ಡ ಆಘಾತ ತಂದಿತು. ನನಗಾಗ 19 ವರ್ಷ. ಜೀವನ ಇನ್ನೂ ಆರಂಭವೇ ಆಗಿರಲಿಲ್ಲ. ಆ ರಾತ್ರಿಯಿಡೀ ಅಳುತ್ತಲೇ ಕಳೆದೆ.

ADVERTISEMENT

ನನ್ನ ಹೆತ್ತವರು ಪರಿಸ್ಥಿತಿಯನ್ನು ಒಪ್ಪಿಕೊಂಡರು ಮತ್ತು ಪರ್ಯಾಯ ಚಿಕಿತ್ಸೆಗೆ ಸಮಯ ವ್ಯರ್ಥ ಮಾಡಲಿಲ್ಲ. ನಾನು ಕೂಡ ಆ ಸ್ಥಿತಿಯನ್ನು ಒಪ್ಪಿಕೊಳ್ಳಲು ಮತ್ತು ದಿಟ್ಟವಾಗಿ ಎದುರಿಸಲು ನೆರವಾದರು. ಪುನಶ್ಚೇತನ ಪ್ರಕ್ರಿಯೆ ಅವಧಿಯಲ್ಲಿ ನನ್ನಂತಹ ಇತರ ರೋಗಿಗಳನ್ನು ಭೇಟಿಯಾದೆ. ಇದು ಈ ಬಿಕ್ಕಟ್ಟಿನಸ್ಥಿತಿ ಎದುರಿಸಲು ನನಗೆ ಸಹಕರಿಸಿತು. ಹೊಸ ಜೀವನವನ್ನು ಸ್ವತಂತ್ರವಾಗಿ ಹೇಗೆ ಬದುಕಬೇಕು ಎಂಬುದನ್ನು ಕಲಿಯಲು ಆರಂಭಿಸಿದೆ. ಮತ್ತೆ ಕಾಲೇಜಿಗೆ ಸೇರಿ ಪದವಿ ಪೂರ್ಣಗೊಳಿಸಿದೆ ಮತ್ತು ಸ್ನಾತಕೋತ್ತರ ಪದವಿಯನ್ನೂ ಮಾಡಿದೆ. 2017ರಲ್ಲಿ ನಾನು ಕೋಯಿಕ್ಕೋಡ್‌ಗೆ ಸ್ಥಳಾಂತರಗೊಂಡೆ. ಅಲ್ಲಿ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ಕೆಲಸಕ್ಕೆ ಸೇರಿದೆ. ಪತ್ರಕರ್ತೆ ಆಗಬೇಕು ಎಂಬದು ಬಹಳ ಹಿಂದಿನಿಂದಲೂ ನನ್ನೊಳಗೆ ಇದ್ದ ಬಯಕೆಯಾಗಿತ್ತು. ಇದು ಓಡಾಡಿ ಮಾಡುವ ಕೆಲಸ. ಸುದ್ದಿಯ ಹಿಂದೆ ಸದಾ ಓಡುತ್ತಿರಬೇಕು ಮತ್ತು ಜನರನ್ನು ಭೇಟಿಯಾಗುತ್ತಿರಬೇಕು. 2019ರಲ್ಲಿ, ಪ್ರತಿಷ್ಠಿತ ನೆಟ್‌ವರ್ಕ್‌ ಆಫ್‌ ವಿಮೆನ್‌ ಇನ್ ಮೀಡಿಯಾದ ಪತ್ರಿಕೋದ್ಯಮ ವಿಭಾಗದ ಪ್ರಶಸ್ತಿಯೂ ಬಂತು.

ಸುದ್ದಿಯ ಬೆನ್ನು ಹತ್ತುವ ಕೆಲಸದ ಪುಳಕವನ್ನು ನಾನು ಸದಾ ಪ್ರೀತಿಸಿದ್ದೆ. ಆದರೆ, ನನ್ನ ಮುಂದಿರುವ ಅವಕಾಶಗಳು ಸೀಮಿತ ಎಂಬುದರ ಅರಿವು ನನಗೆ ಇತ್ತು. ಹೆತ್ತವರ ಜತೆಗೆ ತೀವ್ರವಾದ ಚರ್ಚೆಯ ಬಳಿಕ ನಾನು ಶಿಕ್ಷಣ ಕ್ಷೇತ್ರದ ವೃತ್ತಿ ಆಯ್ದುಕೊಳ್ಳಲು ತೀರ್ಮಾನಿಸಿದೆ. 2019ರಲ್ಲಿ ಕೆಲಸ ಬಿಟ್ಟು, ಸ್ನಾತಕೋತ್ತರ ವ್ಯಾಸಂಗಕ್ಕಾಗಿ ಹೈದರಾಬಾದ್‌ಗೆ ವಾಸ್ತವ್ಯ ಬದಲಿಸಿದೆ.

ಅಂಗವಿಕಲರಿಗೆ ಇನ್ನಷ್ಟು ಉತ್ತಮ ಸೌಲಭ್ಯಗಳು ದೊರೆಯುವಂತೆ ಸರ್ಕಾರಗಳು ಮಾಡಬೇಕು ಎಂಬುದು ನನ್ನ ಒತ್ತಾಯ. ಹಾಗಾದರೆ, ಇಂತಹ ಜನರು ತಮ್ಮ ಕನಸುಗಳನ್ನು ನನಸಾಗಿಸಲು ಉತ್ತೇಜನ ಸಿಗುತ್ತದೆ. ಅದು, ನಿಜ ಅರ್ಥದಲ್ಲಿ ನಾವು ಸಮಾನರು ಎಂಬ ಭಾವ ಮೂಡಿಸುತ್ತದೆ.19ನೇ ವಯಸ್ಸಿನಲ್ಲಿ ನನ್ನ ಕನಸುಗಳ ರೆಕ್ಕೆ ಮುರಿಯಿತು. ಇಡೀ ಜೀವನ ಗಾಲಿಕುರ್ಚಿಗೆ ಸೀಮಿತವಾಯಿತು. ಬದುಕು ಅಲ್ಲಿಗೆ ಮುಗಿಯಿತು ಎಂದು ನಾನು ಭಾವಿಸಿದ್ದೆ. ಆದರೆ, ಗಾಲಿಕುರ್ಚಿಗೆ ರೆಕ್ಕೆ ಕಟ್ಟಿಕೊಳ್ಳಲು, ನನಗಾಗಿ ಹೊಸ ಕನಸುಗಳನ್ನು ಕಟ್ಟಿಕೊಳ್ಳಲು ನಿರ್ಧರಿಸಿದೆ.

‘ಬೀಯಿಂಗ್‌ ಯೂ’

‘ಬೀಯಿಂಗ್‌ ಯೂ’ಬೆಂಗಳೂರು ಮೂಲದ ಡಿಜಿಟಲ್‌ ಮೀಡಿಯಾ ನವೋದ್ಯಮ ಕಂಪನಿ. 2017ರಲ್ಲಿ ಅಸ್ತಿತ್ವಕ್ಕೆ ಬಂದ ಈ ಕಂಪನಿ ಜನಸಾಮಾನ್ಯರು, ಅದರಲ್ಲೂ ಮಹಿಳೆ ಯರ ಯಶೋಗಾಥೆಗಳನ್ನು ಕಟ್ಟಿಕೊಡುತ್ತದೆ. ಜೀವನದ ನೈಜಕಥೆಗಳ ಮೂಲಕ ಸಮಾಜದಲ್ಲಿ ಸಕಾರಾತ್ಮಕ ಭಾವ ಮೂಡಿಸಿ, ಪ್ರೇರಣೆ ತುಂಬುವ ಕೆಲಸದಲ್ಲಿ ತೊಡಗಿಸಿ ಕೊಂಡಿದೆ. ‘ಪ್ರಜಾವಾಣಿ’ಗಾಗಿ ‘ಬೀಯಿಂಗ್ ಯು’ ಈ ಹಾಯಿದೋಣಿಯ ಈ ಕಥೆಗಳನ್ನು ಕಟ್ಟಿಕೊಡುತ್ತಿದೆ...ಇಮೇಲ್‌:beingyou17@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.