ADVERTISEMENT

ಪೂರ್ವಗ್ರಹಗಳು ದೂರವಾಗಲಿ: ನಟಿ ಗಾನವಿ ಲಕ್ಷ್ಮಣ್‌ ಮಾತು

ಪ್ರಜಾವಾಣಿ ವಿಶೇಷ
Published 6 ಮಾರ್ಚ್ 2021, 19:31 IST
Last Updated 6 ಮಾರ್ಚ್ 2021, 19:31 IST
ಗಾನವಿ ಲಕ್ಷ್ಮಣ್
ಗಾನವಿ ಲಕ್ಷ್ಮಣ್   

ಪೂರ್ವಗ್ರಹಗಳು ಕಳೆದುಹೋದರೆ ಗಂಡು ಹೆಣ್ಣಿಗೆ, ಹೆಣ್ಣು ಗಂಡಿಗೆ ಸರಿಸಮನಾಗಿ, ಪೂರಕವಾಗಿ ನಿಂತು ಆರೋಗ್ಯಕರ ಸಮಾಜ ಕಟ್ಟಲು ಸಾಧ್ಯವಾಗುತ್ತದೆ...

ಹೆಣ್ಣಿನ ವ್ಯಕ್ತಿತ್ವ ಎಂದರೆ ಏನು ಎಂಬ ಪ್ರಶ್ನೆಗೆ ಜೀವನವಿಡೀ ಹುಡುಕಾಡಿದರೂ ಉತ್ತರ ಸಿಗುವುದಿಲ್ಲ ಅನಿಸತ್ತೆ. ಮಹಿಳಾ ದಿನದ ಬಗ್ಗೆ ಬೇಕಾದಷ್ಟು ಮಾತಾಡ್ತೀವಿ. ಆದರೆ ಮಹಿಳೆಯರನ್ನು ಕುಗ್ಗಿಸುವ ಕೆಲಸವನ್ನೂ ಅಷ್ಟೇ ನಿರಂತರವಾಗಿ ಮಾಡ್ತಾ ಇರ್ತೀವಿ.

ಮಹಿಳೆ ಹೇಗೆ ಸ್ವಾವಲಂಬಿಯಾಗಬೇಕು ಎನ್ನುವುದರ ಬಗ್ಗೆ ಬೇಕಾದಷ್ಟು ಮಾತಾಡುತ್ತೇವೆ. ಆದರೆ ಒಟ್ಟಾರೆ ಸಮಾಜ, ಅದರಲ್ಲಿನ ವ್ಯಕ್ತಿಗಳು ಮಹಿಳೆಯನ್ನು ಹೇಗೆ ನೋಡಬೇಕು ಎಂಬುದರ ಬಗ್ಗೆ ನಾವು ಮಾತಾಡುವುದಿಲ್ಲ. ಅವರ ಮನಸಲ್ಲಿ ಮಹಿಳೆಯ ಬಗ್ಗೆ ನಿಜವಾದ ಗೌರವ ಬರದೆ ಮಹಿಳೆ ತೊಂದರೆ ಎದುರಿಸುವುದು ತಪ್ಪುವುದಿಲ್ಲ.

ADVERTISEMENT

ಮಹಿಳೆಗೆ ಹೆಚ್ಚಿನ ಸಮಯದಲ್ಲಿ ಅವಳ ಶಕ್ತಿಯೇ ಗೊತ್ತಿರುವುದಿಲ್ಲ. ಅವಳು ಯಾವತ್ತೂ ಕುಟುಂಬ, ಹೊರಗಿನ ಜನರ ಬದುಕಿನ ಬಗ್ಗೆ ತಲೆಕೆಡಿಸಿಕೊಳ್ಳುವುದೇ ಹೆಚ್ಚು. ನನಗಿಂತ ಚೆನ್ನಾಗಿ ಅವರು ಇರಲಿ ಎಂದು ಬಯಸುತ್ತಾಳೆ. ಆದರೆ ನಾವು ಚೆನ್ನಾಗಿದ್ದರೆ ಮಾತ್ರವೇ ಬೇರೆಯವರನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ ಎಂಬುದು ತುಂಬ ಸಲ ಅವಳಿಗೆ ಗೊತ್ತಿರುವುದಿಲ್ಲ. ಹಾಗಾಗಿ ಮೊದಲು ನಾವು ನಮ್ಮ ಬಗ್ಗೆ ಯೋಚಿಸಬೇಕು. ನಮ್ಮ ಶಕ್ತಿಯ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕು.

ನಮ್ಮ ಅಮ್ಮಂದಿರಿಗೆ ಹೋಲಿಸಿದರೆ ನಾವು ಇಂದು ಸಾಕಷ್ಟು ಸ್ವಾವಲಂಬಿಗಳಾಗಿದ್ದೇವೆ. ಇಂದು ನಾವು ಕಾರು ಓಡಿಸುತ್ತೇವೆ. ನಮಗೆ ಬೇಕಾದ ಕೆಲಸವನ್ನು ಸ್ವತಂತ್ರವಾಗಿ ನಾವೇ ಮಾಡಿಕೊಳ್ಳುತ್ತೇವೆ. ಇಲ್ಲೆಲ್ಲ ಕಡೆಗಳಲ್ಲಿಯೂ ನಾವು ಗಟ್ಟಿಯಾಗಿದ್ದೇವೆ, ಬೆಳೆದಿದ್ದೇವೆ. ಆದರೆ ನಮ್ಮನ್ನು ನೋಡುವ ಕಣ್ಣುಗಳು ಮೊದಲಿನ ಹಾಗೆಯೇ ಇವೆ. ಹಾಗಾಗಿ ಮಹಿಳೆ ಸ್ವತಂತ್ರಳಾಗಬೇಕು ಎಂಬುದು ಎಷ್ಟು ಮುಖ್ಯವೋ, ಅವಳನ್ನು ನೋಡುವ ಸಮಾಜವೂ ತನ್ನ ಪೂರ್ವಗ್ರಹದ ದೃಷ್ಟಿಯಿಂದ ಸ್ವತಂತ್ರವಾಗುವುದು ಅಷ್ಟೇ ಅಗತ್ಯ.

ಇದನ್ನು ಬಿಟ್ಟರೆ ಮಹಿಳೆಯರು, ಪುರುಷರು ಎಂಬುದೆಲ್ಲ ತುಂಬ ಮುಖ್ಯವೇ ಅಲ್ಲ. ಅವು ಎರಡು ಬಗೆಯ ಜೀವಗಳಷ್ಟೆ. ನಾವು ಮೇಲೆ ಬರಬೇಕು ಅವರು ಕೆಳಗೆ ಹೋಗಬೇಕು ಎಂದೆಲ್ಲ ಅಂದುಕೊಳ್ಳುವುದು ಸರಿಯಲ್ಲ. ಒಬ್ಬರಿಗೊಬ್ಬರು ಬೇಕೇ ಬೇಕು. ಬೆಂಗಳೂರಿಗೆ ನಾನು ಬಂದ ಹೊಸತರಲ್ಲಿ ನನಗೆ ಸಹಾಯ ಮಾಡಿದ ಸ್ನೇಹಿತರಲ್ಲಿ ಹೆಚ್ಚಿನವರು ಹುಡುಗರೇ ಆಗಿದ್ದರು. ನಾವು ಆ ಜೀವಗಳನ್ನೂ ಹೀಗಳೆಯಲು ಸಾಧ್ಯವಿಲ್ಲ. ಗಂಡು ಹೆಣ್ಣು ಇಬ್ಬರೂ ಅಷ್ಟೇ ಮುಖ್ಯ ಮತ್ತು ಪರಸ್ಪರ ಪೂರಕ. ಆದರೆ ಈ ಎರಡು ಘಟಕಗಳನ್ನು ಹೇಗೆ ನೋಡುತ್ತೇವೆ ಎನ್ನುವುದು ನಮ್ಮ ನಮ್ಮ ಮನಸ್ಸಿಗೆ ಸಂಬಂಧಿಸಿದ್ದು. ಮನಸ್ಸಿನ ಮೇಲೆ ಕೂತಿರುವ ಪೂರ್ವಗ್ರಹಗಳಿಗೆ ಸಂಬಂಧಿಸಿದ್ದು. ಈ ಪೂರ್ವಗ್ರಹಗಳಿಂದ ಬಿಡಿಸಿಕೊಳ್ಳಬೇಕು ಎಂದರೆ ಶಿಕ್ಷಣ ಎನ್ನುವುದು ತುಂಬ ಮುಖ್ಯ.

ಶಿಕ್ಷಣ ಎನ್ನುವುದನ್ನು ಬರೀ ಶಾಲೆ, ಪಠ್ಯಗಳಿಗೆ ಸೀಮಿತವಾಗಿ ಹೇಳುತ್ತಿಲ್ಲ. ಅದು ಅರಿವಿಗೆ ಸಂಬಂಧಿಸಿದ್ದು. ಸಂಸ್ಕಾರಕ್ಕೆ ಸಂಬಂಧಿಸಿದ್ದು. ನಾವು ಹೇಗೆ ಬೆಳೆದಿದ್ದೇವೆ ಎನ್ನುವುದಕ್ಕೆ ಸಂಬಂಧಿಸಿದ್ದು. ಮನೆಯಲ್ಲಿ ಹೇಗೆ ನಿಮ್ಮ ತಂಗಿ, ತಾಯಂದಿರ ಜೊತೆಗೆ ನಡೆದುಕೊಳ್ಳುತ್ತೀರ? ಅವರ ಸಮಸ್ಯೆಗಳ ಬಗ್ಗೆ ಅರಿವು ಇದೆಯಾ? ಅವರ ದೇಹದ ಬದಲಾವಣೆಗಳ ಬಗ್ಗೆ ನಿಮಗೆಷ್ಟು ಗೊತ್ತು? ಈ ಎಲ್ಲವೂ ಹೆಣ್ಣಿನ ಬಗೆಗಿನ ಪೂರ್ವಗ್ರಹವನ್ನು ತೊಡೆದುಕೊಳ್ಳಲು ತುಂಬ ಮುಖ್ಯವಾದ ಸಂಗತಿಗಳು. ಈ ಎಲ್ಲ ಅರಿವನ್ನು ಗಳಿಸಿಕೊಂಡ ಪುರುಷನಿಗೆ ಪೂರ್ವಗ್ರಹ ತಂತಾನೆಯೇ ಕಳಚಿಹೋಗುತ್ತದೆ. ಆಗ ಗಂಡು ಹೆಣ್ಣಿಗೆ, ಹೆಣ್ಣು ಗಂಡಿಗೆ ಸರಿಸಮನಾಗಿ, ಪೂರಕವಾಗಿ ನಿಂತು ಆರೋಗ್ಯಕರ ಸಮಾಜವನ್ನು ಕಟ್ಟಲು ಸಾಧ್ಯವಾಗುತ್ತದೆ.

ನಿರೂಪಣೆ: ಪದ್ಮನಾಭ ಭಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.