ADVERTISEMENT

ಆಸ್ತಿ ಉಳಿಸಿಕೊಳ್ಳಲು ಕಾಯ್ದೆ ರದ್ದು ಮಾಡಿದ್ದ ರಾಜೀವ್: ಪ್ರಧಾನಿ ಮೋದಿ ಆರೋಪ

ಪಿತ್ರಾರ್ಜಿತ ಆಸ್ತಿ ತೆರಿಗೆ ರದ್ದತಿ ಸಂಬಂಧ ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಹೊಸ ಆರೋಪ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2024, 16:28 IST
Last Updated 25 ಏಪ್ರಿಲ್ 2024, 16:28 IST
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಪಾಲ್ಗೊಂಡು, ಬೆಂಬಲಿಗರತ್ತ ಕೈ ಬೀಸಿದರು.  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಂಡಿದ್ದರು– ಪಿಟಿಐ ಚಿತ್ರ 
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಪಾಲ್ಗೊಂಡು, ಬೆಂಬಲಿಗರತ್ತ ಕೈ ಬೀಸಿದರು.  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಂಡಿದ್ದರು– ಪಿಟಿಐ ಚಿತ್ರ    

ಮೊರೆನಾ: ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಅವರು 1984ರಲ್ಲಿ ತಮ್ಮ ತಾಯಿ ಇಂದಿರಾ ನಿಧನರಾದ ನಂತರ, ಆಸ್ತಿ ಸರ್ಕಾರದ ಪಾಲಾಗುವುದನ್ನು ತಪ್ಪಿಸಲು ಪಿತ್ರಾರ್ಜಿತ ಆಸ್ತಿ ತೆರಿಗೆ ರದ್ದು ಮಾಡಿದ್ದರು ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಆರೋಪಿಸಿದ್ದಾರೆ.   

ಮಧ್ಯಪ್ರದೇಶದ ಮೊರೆನಾದಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ತಮ್ಮ ಹಳೆಯ ಆರೋಪಗಳನ್ನು ಪುನರುಚ್ಚರಿಸಿ, ತೀವ್ರ ವಾಗ್ದಾಳಿ ನಡೆಸಿದರು.

‘ಇಂದಿರಾ ಗಾಂಧಿ ನಿಧನರಾದಾಗ, ಒಂದು ನಿಯಮ ಜಾರಿಯಲ್ಲಿತ್ತು. ಅದರ ಪ್ರಕಾರ ಅರ್ಧ ಆಸ್ತಿ ಸರ್ಕಾರದ ಪಾಲಾಗುತ್ತಿತ್ತು. ಇಂದಿರಾಜಿ ತಮ್ಮ ಮಗ ರಾಜೀವ್ ಗಾಂಧಿ ಹೆಸರಿಗೆ ಆಸ್ತಿ ಉಯಿಲು ಬರೆದಿದ್ದರು ಎನ್ನುವ ಮಾತುಗಳು ಕೇಳಿಬಂದಿದ್ದವು. ಆಸ್ತಿ ಸರ್ಕಾರಕ್ಕೆ ಹೋಗುವುದನ್ನು ತಪ್ಪಿಸಲು ಆಗ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಪಿತ್ರಾರ್ಜಿತ ಆಸ್ತಿ ತೆರಿಗೆ ರದ್ದು ಮಾಡಿದರು’ ಎಂದು ಹೇಳಿದರು.

ADVERTISEMENT

‘ಕಾಂಗ್ರೆಸ್ ಪಕ್ಷವು, ತಮಗೆ ವರ್ಗಾವಣೆಯಾಗಿ ಬಂದ ಸಂಪತ್ತನ್ನು ನಾಲ್ಕು ತಲೆಮಾರುಗಳ ಕಾಲ ಅನುಭವಿಸಿದ ನಂತರ, ಈಗ ಪಿತ್ರಾರ್ಜಿತ ಆಸ್ತಿ ತೆರಿಗೆಯನ್ನು ಜಾರಿ ಮಾಡಲು ಹೊರಟಿದೆ. ಆದರೆ, ಅದಕ್ಕೆ ಬಿಜೆಪಿ ಆಸ್ಪದ ಕೊಡುವುದಿಲ್ಲ’ ಎಂದರು.

ಧರ್ಮದ ಆಧಾರದಲ್ಲಿ ದೇಶ ವಿಭಜನೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಮೋದಿ, ‘ಭಾರತ ಮಾತೆಯ (ಮಾ ಭಾರತಿ) ಕೈಗಳಿಗೆ ತೊಡಿಸಲಾಗಿದ್ದ ಸಂಕೋಲೆಯನ್ನು ಕಳಚುವ ಬದಲು ಕಾಂಗ್ರೆಸ್ ಆಕೆಯ ಕೈಗಳನ್ನೇ ಕತ್ತರಿಸಿಬಿಟ್ಟಿತು, ದೇಶವನ್ನು ಇಬ್ಭಾಗಿಸಿತು’ ಎಂದು  ಆರೋಪಿಸಿದರು.

ತನ್ನನ್ನು ‘ಕಾಮ್‌ದಾರ್’ (ದುಡಿಯುವ ವರ್ಗ) ಎಂದು ಕರೆದುಕೊಂಡ ಪ್ರಧಾನಿ, ರಾಹುಲ್ ಗಾಂಧಿ ಅವರನ್ನು ‘ನಾಮ್‌ದಾರ್’ (ವಂಶಪಾರಂಪರ್ಯ) ಎಂದು ಕರೆದರು. ‘ನಾಮ್‌ದಾರ್‌’ಗಳ ನಿಂದನೆಗಳನ್ನು ನಾವು ಕೇಳಬೇಕು. ಆದರೂ ನಾನು ‘ಭಾರತ ಮಾತೆ’ ಮತ್ತು ಜನರ ಸೇವೆ ಮುಂದುವರೆಸುತ್ತೇನೆ’ ಎಂದು ಹೇಳಿದರು.

ನಿಮ್ಮನ್ನು ಲೂಟಿ ಮಾಡಲು ಯೋಜಿಸಿರುವ ಕಾಂಗ್ರೆಸ್ ಹಾಗೂ ನಿಮ್ಮ ನಡುವೆ 56 ಇಂಚಿನ ಎದೆಯೊಂದಿಗೆ ಮೋದಿಯು ಗೋಡೆಯಾಗಿ ನಿಂತಿದ್ದಾರೆ. 
ನರೇಂದ್ರ ಮೋದಿ ಪ್ರಧಾನಿ

‘ಇಸ್ಲಾಮೀಕರಣ ಕಾರ್ಯಸೂಚಿಯ ಭಾಗ’ : ಕರ್ನಾಟಕದಲ್ಲಿ ಒಬಿಸಿ ಮೀಸಲಾತಿ ಕಸಿದು ಮುಸ್ಲಿಮರಿಗೆ ನೀಡುವ ಪ್ರಯತ್ನವು ದೇಶವನ್ನು ಇಸ್ಲಾಮೀಕರಣ ಮಾಡುವ ವಿಭಜನೆ ಮಾಡುವ ಕಾರ್ಯಸೂಚಿಯ ಭಾಗವಾಗಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆರೋಪಿಸಿದ್ದಾರೆ. ‘ದೇಶದ ಸಂಪನ್ಮೂಲಗಳನ್ನು 65 ವರ್ಷಗಳ ಕಾಲ ಲೂಟಿ ಮಾಡಿದ ಪಕ್ಷವು ಎಸ್‌ಸಿ/ಎಸ್‌ಟಿ ಒಬಿಸಿ ಮತ್ತು ಬಡವರ ಹಕ್ಕುಗಳನ್ನು ದೋಚಲು ಹೊರಟಿದೆ’ ಎಂದು ಆರೋಪಿಸಿದರು. ‘ಇದೆಲ್ಲದರ ಸೂಚನೆಗಳು ಕಾಂಗ್ರೆಸ್ ಪ್ರಣಾಳಿಕೆಯಲ್ಲಿವೆ. ಸ್ಯಾಮ್ ಪಿತ್ರೋಡಾ ಹೇಳಿದ್ದನ್ನು ಮಾಜಿ ಸಚಿವ ಪಿ.ಚಿದಂಬರಂ ಅವರು 2011 2012 2013ರಲ್ಲಿ ಸತತವಾಗಿ ಪ್ರತಿಪಾದಿಸಿದ್ದರು’ ಎಂದು ಹೇಳಿದರು.

‘ದೋಚುವುದನ್ನು ತಡೆಯಲು 400 ಸ್ಥಾನ ಕೊಡಿ’

‘ವಿರೋಧ ಪಕ್ಷಗಳು ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡುವ ಮೂಲಕ ಲೋಕಸಭಾ ಚುನಾವಣೆ ಗೆಲ್ಲಲು ಹೊರಟಿದ್ದು ದಲಿತರು ಮತ್ತು ಹಿಂದುಳಿದವರಿಂದ ಮೀಸಲಾತಿ ಕಸಿಯದಂತೆ ತಡೆಯಲು 400 ಸ್ಥಾನಗಳಲ್ಲಿ ಗೆಲ್ಲಿಸಿ’ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಮತದಾರರಲ್ಲಿ ಮನವಿ ಮಾಡಿದರು. ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರ್‍ಯಾಲಿಗಳಲ್ಲಿ ಭಾಗವಹಿಸಿ ಮಾತನಾಡಿದ ಅವರು ತಮ್ಮನ್ನು ತಾವು ಚೌಕಿದಾರ್ ಎಂದು ಕರೆದುಕೊಂಡು ತಾವು ‘ತುಷ್ಟೀಕರಣ’ ಅಂತ್ಯಗೊಳಿಸಿ ‘ಸಂತುಷ್ಟೀಕರಣ’ಕ್ಕಾಗಿ ಕೆಲಸ ಮಾಡುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.