ADVERTISEMENT

ಸಂಗತ | ರಜೆ ಸಿಕ್ಕಿದೆ, ಮೋಜಿಗಲ್ಲ!

ಚುನಾವಣಾ ದಿನದಂದು ಘೋಷಿಸಲಾಗುವ ರಜೆ ನಿಜ ಅರ್ಥದಲ್ಲಿ ರಜೆಯೇ ಅಲ್ಲ. ನಾಗರಿಕರು ಮಹತ್ತರ ಕರ್ತವ್ಯವನ್ನು ನಿಭಾಯಿಸಲು ನೀಡುವ ಅವಕಾಶ

ಡಾ.ಮುರಳೀಧರ ಕಿರಣಕೆರೆ
Published 25 ಏಪ್ರಿಲ್ 2024, 20:14 IST
Last Updated 25 ಏಪ್ರಿಲ್ 2024, 20:14 IST
Sangatha 
Sangatha    

ಮಹಾ ಚುನಾವಣೆಗೆ ಸಂಬಂಧಿಸಿದ ಈ ಅಂಕಿ ಅಂಶಗಳು ನಿಜಕ್ಕೂ ಬೆರಗುಗೊಳಿಸುತ್ತವೆ! ಒಟ್ಟು 97 ಕೋಟಿಗೂ ಹೆಚ್ಚು ಮತದಾರರು, ಮೊದಲ ಬಾರಿಗೆ ಮತ ಚಲಾಯಿಸಲಿರುವ 1.82 ಕೋಟಿ ಯುವ ಮತದಾರರು, 10.5 ಲಕ್ಷ ಮತಗಟ್ಟೆಗಳು, 55 ಲಕ್ಷ ವಿದ್ಯುನ್ಮಾನ ಮತಯಂತ್ರಗಳು, 543 ಕ್ಷೇತ್ರಗಳು, 44 ದಿನಗಳಲ್ಲಿ 7 ಹಂತಗಳ ಚುನಾವಣೆ, ಉಸ್ತುವಾರಿಗೆ ನಿಯೋಜನೆಗೊಂಡ ಒಂದೂವರೆ ಕೋಟಿಯಷ್ಟು ಅಧಿಕಾರಿಗಳು, ಸಿಬ್ಬಂದಿ... ವಿಶ್ವದಲ್ಲೇ ಬೃಹತ್ತಾದ ಈ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಭಾರತೀಯರಾದ ನಾವು ಭಾಗೀದಾರರು ಎಂಬುದು ಹೆಮ್ಮೆಯ ವಿಚಾರ. ಸಣ್ಣಪುಟ್ಟ ರಾಷ್ಟ್ರಗಳೇ ವ್ಯವಸ್ಥಿತವಾಗಿ ಚುನಾವಣೆ ನಡೆಸಲು ಪರದಾಡುತ್ತಿರುವಾಗ ಅತ್ಯಂತ ಯಶಸ್ವಿಯಾಗಿ ಚುನಾವಣೆ ನಡೆಸುವ ನಮ್ಮ ಆಡಳಿತದತ್ತ ಜಗತ್ತಿನ ಕಣ್ಣು ನೆಟ್ಟಿರುವುದು ಹೆಮ್ಮೆಯ ಸಂಗತಿಯೇ ಸರಿ.

ಮೊದಲ ಹಂತದ ಚುನಾವಣೆ ಮುಗಿದಾಗಿದೆ. ಶೇಕಡ 65ರ ಮತದಾನದ ಪ್ರಮಾಣ ನಿಜಕ್ಕೂ ನಿರಾಶಾದಾಯಕ. ವ್ಯಾಪಕ ಪ್ರಚಾರ, ಅರಿವು ಆಂದೋಲನ, ಸೌಕರ್ಯ, ಸವಲತ್ತುಗಳ ನಡುವೆಯೂ ಸಂಸತ್ತಿಗೆ ನಮ್ಮ ಪ್ರತಿನಿಧಿಗಳನ್ನು ಕಳುಹಿಸುವ ಈ ಪ್ರಕ್ರಿಯೆ ಬಗ್ಗೆ ದೊಡ್ಡ ಸಂಖ್ಯೆಯ ನಾಗರಿಕರ ನಿರಾಸಕ್ತಿಯನ್ನು ಗಮನಿಸಿದರೆ ಪ್ರಜಾಪ್ರಭುತ್ವದ ಸ್ವಾಸ್ಥ್ಯದ ಬಗ್ಗೆ ಕಳವಳ ಮೂಡುತ್ತದೆ. ಚುನಾವಣೆಯ ದಿನ ರಜೆಯೆಂದು ಮೋಜಿನ ಪ್ರವಾಸ, ಸರದಿ ಸಾಲಲ್ಲಿ ನಿಂತು ಮತ ಹಾಕಬೇಕಲ್ಲ ಎಂಬ ಸೋಮಾರಿತನ, ಮದುವೆ-ಮುಂಜಿಯಂತಹ ನೆಪ, ಬೇರೆಡೆ ಉದ್ಯೋಗದಲ್ಲಿದ್ದು ಬರೀ ಒಂದು ಮತಕ್ಕಾಗಿ ಊರಿಗೆ ಹೋಗಬೇಕಲ್ಲ ಎಂಬ ಉದಾಸೀನ, ತನ್ನ ಒಂದು ವೋಟಿನಿಂದ ಏನೂ ಆಗದೆಂಬ ನಕಾರಾತ್ಮಕ ನಿಲುವು, ವಯಸ್ಸು, ಅನಾರೋಗ್ಯ, ಅಖಾಡದಲ್ಲಿ ಯೋಗ್ಯರೇ ಇಲ್ಲದಿರುವಾಗ ಆಯ್ಕೆಯ ಪ್ರಶ್ನೆ ಎಲ್ಲಿ ಎಂಬ ಅಸಡ್ಡೆಯ ಭಾವ, ಭ್ರಷ್ಟ ವ್ಯವಸ್ಥೆಯಲ್ಲಿ ಯಾರನ್ನು ಆರಿಸಿದರೂ ಹಣೆಬರಹ ಬದಲಾಗದೆಂಬ ಸಿನಿಕತನ, ಸೌಕರ್ಯಗಳನ್ನು ಒದಗಿಸದ ಸತ್ತೆಯ ಮೇಲಿನ ಆಕ್ರೋಶದಿಂದ ಚುನಾವಣಾ ಬಹಿಷ್ಕಾರ... ಮತದಾನದಿಂದ ದೂರವುಳಿಯಲು ಕಾರಣಗಳು ಹಲವು.

ಮತ ಪ್ರಮಾಣವನ್ನು ಹೆಚ್ಚಿಸಲು ಚುನಾವಣಾ ಆಯೋಗ ಸುಧಾರಣೆಗಳನ್ನು ತರುತ್ತಲೇ ಇದೆ. ಎಂಬತ್ತೈದು ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ಅಧಿಕ ಅಂಗವೈಕಲ್ಯ ಹೊಂದಿರುವವರಿಗೆ ಮನೆಯಿಂದಲೇ ಮತದಾನ ಮಾಡುವ ಸೌಲಭ್ಯ, ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮತಕೇಂದ್ರಗಳನ್ನು ಸುಲಭವಾಗಿ ಹುಡುಕಲು ಮತದಾರರ ಮಾಹಿತಿ ಚೀಟಿಯಲ್ಲಿ ಕ್ಯೂಆರ್‌ ಕೋಡ್‌ ಮುದ್ರಣ, ಮತದಾರಸ್ನೇಹಿ ಮತಗಟ್ಟೆಯಂತಹ ಉಪಕ್ರಮಗಳಲ್ಲದೆ ಮತದಾರರಲ್ಲಿ ಜಾಗೃತಿ ಮತ್ತು ಮತದಾನದಲ್ಲಿ ಭಾಗವಹಿಸುವಿಕೆಯ ವ್ಯವಸ್ಥಿತ ಕಾರ್ಯಕ್ರಮ (ಸ್ವೀಪ್)‌, ಚಟುವಟಿಕೆಗಳ ಮೂಲಕ ಜನರನ್ನು ಸೆಳೆಯಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಫಲಿತಾಂಶ ಮಾತ್ರ ನಿರೀಕ್ಷಿತ ಮಟ್ಟ ಮುಟ್ಟುತ್ತಿಲ್ಲ.

ADVERTISEMENT

ಚುನಾವಣಾ ದಿನದಂದು ಘೋಷಿಸಲಾಗುವ ರಜೆ ನಿಜ ಅರ್ಥದಲ್ಲಿ ರಜೆಯೇ ಅಲ್ಲ. ಅದು ನಾಗರಿಕರಿಗೆ ಮತದಾನವೆಂಬ ತಮ್ಮ ಮಹತ್ತರ ಕರ್ತವ್ಯವನ್ನು ನಿಭಾಯಿಸಲು ನೀಡಿದ ಅವಕಾಶ. ಮತಪ್ರಮಾಣ ಕಡಿಮೆಯಾಗುತ್ತಿದೆಯೆಂದರೆ ಪ್ರಜಾಸತ್ತೆ ಸೊರಗುತ್ತಿದೆ ಎಂದರ್ಥ. ನಾವು ಚಲಾಯಿಸುವ ಮತವು ನಮ್ಮ ಪ್ರಬಲ ಧ್ವನಿಯಷ್ಟೇ ಅಲ್ಲ ಅಸ್ತ್ರ ಕೂಡ. ಹಾಗಾಗಿ, ಯಾವುದೇ ಆಸೆ, ಆಮಿಷ, ಪ್ರಲೋಭನೆಗೆ ಒಳಗಾಗದೆ ವಿವೇಚನೆಯಿಂದ ಮತ ಹಾಕಬೇಕು. ನಾಳೆ ಸರ್ಕಾರ ತಪ್ಪು ಮಾಡಿದರೆ ಪ್ರಶ್ನಿಸುವ, ಟೀಕಿಸುವ, ಪ್ರತಿಭಟಿಸುವ, ಸಲಹೆ ನೀಡುವ ಮನೋಬಲ, ನೈತಿಕ ಸ್ಥೈರ್ಯ ದೊರೆಯುವುದು ಪ್ರಾಮಾಣಿಕವಾಗಿ ಮತ ಹಾಕಿದಾಗ ಮಾತ್ರ. ಹಾಗಾಗಿ, ಮತದಾನ ಮಾಡದಿರುವುದು ಒಂದರ್ಥದಲ್ಲಿ ಅಪರಾಧಕ್ಕೆ ಸಮ!

ಮತದಾನ ಕಡಿಮೆಯಿರುವಲ್ಲಿ ಮತದಾರರನ್ನು ಭ್ರಷ್ಟರನ್ನಾಗಿಸುವುದು ಸುಲಭ. ಅದೇ ಅತ್ಯಧಿಕ ಮತದಾನ ಆಗುವುದಾದರೆ ಎಲ್ಲರಿಗೂ ಹಣ, ಮದ್ಯ, ವಸ್ತುಗಳ ರೂಪದಲ್ಲಿ ಆಮಿಷ ಒಡ್ಡುವುದು ಕಷ್ಟವಾಗುವುದರಿಂದ ಮತ ಖರೀದಿಸುವ ಕೆಟ್ಟ ಚಾಳಿಗೂ ಕಡಿವಾಣ ಬೀಳುವುದು ನಿಶ್ಚಿತ. ಹಾಗಾಗಿ, ನೈತಿಕ ಮತದಾನದ ಜೊತೆಯಲ್ಲಿ ಪ್ರಮಾಣವೂ ಗರಿಷ್ಠವಾಗಿರುವಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮದೇ.

ಹಾಗೆಂದು ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮತದಾನವನ್ನು ಕಾನೂನಿನ ಮೂಲಕ ಡ್ಡಾಯಗೊಳಿಸುವುದು ಕಷ್ಟಸಾಧ್ಯ. ಶಾಲಾ-ಕಾಲೇಜು ಹಂತದಿಂದಲೇ ಪರಿಣಾಮಕಾರಿಯಾಗಿ ಅರಿವು ಮೂಡಿಸುವುದೇ ಎದುರಿಗಿರುವ ದಾರಿ. ಇನ್ನು ಮತದಾರರ ಪಟ್ಟಿಯಿಂದ ಹೊರಗುಳಿದವರ ಸಂಖ್ಯೆಯೂ ತುಂಬಾ ದೊಡ್ಡದಿದೆ. ಅರ್ಹ ಯುವಜನರಲ್ಲಿ ಬಹಳಷ್ಟು ಮಂದಿ ತಮ್ಮ ಹೆಸರು ನೋಂದಾಯಿಸಿಕೊಂಡಿಲ್ಲ ಎನ್ನುವ ಮಾತಿದೆ. ರಾಜಕೀಯ ಪಕ್ಷಗಳು, ಸಂಘ-ಸಂಸ್ಥೆಗಳ ಸಹಕಾರದಿಂದ ನೋಂದಣಿ ಕ್ರಿಯೆ ನಿರಂತರವಾಗಿರುವಂತೆ ಚುನಾವಣಾ ಆಯೋಗವು ಪರಿಣಾಮಕಾರಿ ಕಾರ್ಯಯೋಜನೆಯನ್ನು ರೂಪಿಸಬೇಕಿದೆ.

ನಮ್ಮ ರಾಜ್ಯದಲ್ಲಿ ಇಂದು (ಏ. 26) ಮತ್ತು ಮೇ 7ರಂದು ಎರಡು ಹಂತಗಳಲ್ಲಿ ನಡೆಯುವ ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಮತದಾನದ ದಾಖಲೆ ಬರೆದು ರಾಷ್ಟ್ರಕ್ಕೆ ಮಾದರಿಯಾಗುವ ಸುವರ್ಣ ಅವಕಾಶವೊಂದು ನಮ್ಮ ಮುಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.