ADVERTISEMENT

ಕ್ಯಾರೆಟ್‌ ಶುದ್ಧಿಗೆ ರಾಟೆ

ಹೊಸ ಹೆಜ್ಜೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2016, 19:30 IST
Last Updated 24 ಅಕ್ಟೋಬರ್ 2016, 19:30 IST
ಕ್ಯಾರೆಟ್‌ ಶುದ್ಧಿಗೆ ರಾಟೆ
ಕ್ಯಾರೆಟ್‌ ಶುದ್ಧಿಗೆ ರಾಟೆ   
-ಎನ್‌.ಎಂ.ನಟರಾಜ ನಾಗಸಂದ್ರ
*
ಭೂಮಿಯ  ಒಳಗೆ ಬೆಳೆಯುವ ಗಡ್ಡೆ ತರಕಾರಿಗಳನ್ನು ಕಿತ್ತ ನಂತರ ಅದನ್ನು ನೀರಿನಲ್ಲಿ ತೊಳೆದು ಸ್ವಚ್ಛಗೊಳಿಸುವುದು ತಲೆತಲಾಂತರಗಳಿಂದ ನಡೆದುಬಂದಿರುವ ಪದ್ಧತಿ. ಮಣ್ಣಿನ ಸಹಿತ ಇಂತಹ ಗಡ್ಡೆ–ಗೆಣಸು ಮಾರಾಟ ಮಾಡಿದರೆ ಅದು ಗ್ರಾಹಕರಿಗೆ ಹಿಡಿಸುವುದಿಲ್ಲ. ಆದ್ದರಿಂದ ಬೆಳೆ ಬೆಳೆಯುವುದಕ್ಕಿಂತ ದೊಡ್ಡ ತಲೆನೋವು ಅದನ್ನು ಶುಚಿಗೊಳಿಸುವುದು. 
 
ಈ ಶುಚಿ ಕಾರ್ಯವನ್ನು ಸುಲಭಗೊಳಿಸುವ ನಿಟ್ಟಿನಲ್ಲಿ ಹೊಸ ಆವಿಷ್ಕಾರ ಮಾಡಿದ್ದಾರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗಸಂದ್ರ ಗ್ರಾಮದ ನರೇಶ್‌ಬಾಬು. ಇದಕ್ಕಾಗಿ ಅವರು ಯಂತ್ರವೊಂದನ್ನು ಸಿದ್ಧಪಡಿಸಿದ್ದಾರೆ. ಕ್ಯಾರೆಟ್‌ ಬೆಳೆಗಾರರಾಗಿರುವ ನರೇಶ್‌ಬಾಬು ಅವರು, ಶುಚಿ ಕಾರ್ಯದ ನೋವನ್ನು ಖುದ್ದು ಅನುಭವಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಯಂತ್ರ ಕಂಡುಹಿಡಿದಿದ್ದು, ಈಗ ತಮಗೆ ಶುಚಿ ಕಾರ್ಯ  ಸುಲಭವಾಗಿದೆ ಎನ್ನುತ್ತಾರೆ. 
 
‘ಸಾಮಾನ್ಯವಾಗಿ ಕ್ಯಾರೆಟ್‌ ಬೆಳೆಯನ್ನು ಒಂದೇ ಭೂಮಿಯಲ್ಲಿ ಬೆಳೆಯುವುದಿಲ್ಲ. ಹೀಗಾಗಿ ಭೂಮಿಯಿಂದ ಕ್ಯಾರೆಟ್‌ ಕಿತ್ತ ನಂತರ ನೀರಿನ ತೊಟ್ಟಿ ಇರುವಲ್ಲಿಗೇ ಹೊತ್ತು ತರಬೇಕು. ಇದೆಲ್ಲ ಕೆಲಸಕ್ಕೆ ಕಾರ್ಮಿಕರು ಹೆಚ್ಚು ಬೇಕು. ಇದರಿಂದಾಗಿ ಎಷ್ಟೋ ಮಂದಿ ಕ್ಯಾರೆಟ್‌ ಬೆಳೆಯುವುದೇ ಬೇಡ ಅನ್ನುವಷ್ಟರ ಮಟ್ಟಿಗೆ ಬೇಸರ ವ್ಯಕ್ತಪಡಿಸುತ್ತಾರೆ. ಇದನ್ನು ನಾನು ಕೂಡ ಅನುಭವಿಸಿರುವ ಕಾರಣ, ಈ ರಾಟೆ ಯಂತ್ರ ಕಂಡುಹಿಡಿದಿದ್ದೇನೆ’ ಎನ್ನುತ್ತಾರೆ.
 
ಅವರು ರಾಟೆ ಸಿದ್ಧಪಡಿಸಿದ ಕುರಿತು ಹೇಳುವುದು ಹೀಗೆ: ಇದು ವೃತ್ತಾಕಾರದ ಕಬ್ಬಿಣದ ರಾಟೆ. ಕಬ್ಬಿಣದ ಪಟ್ಟಿಗಳಿಂದ (ತೆಳುವಾದ  ಕಬ್ಬಿಣದ ದಬ್ಬೆಗಳು) ಮಿನಿ ಟ್ರ್ಯಾಕ್ಟರ್‌ ಹಿಂಬದಿಯ ಟ್ರೈಲರ್‌ ಅಗಲದಷ್ಟು ರಾಟೆಯನ್ನು ಸಿದ್ಧಪಡಿಸಿಕೊಂಡೆವು. ಈ ರಾಟೆಯನ್ನು ಕೈಯಿಂದಲೇ ತಿರುಗಿಸಲು ಸಾಧ್ಯವಾಗುವಂತೆ ಹ್ಯಾಂಡಲ್‌ಗಳನ್ನು ಅಳವಡಿಸಲಾಯಿತು (ಟ್ರ್ಯಾಕ್ಟರ್‌ನಿಂದಲೂ ರಾಟೆ ತಿರುಗುವಂತೆ ಬೆಲ್ಟ್‌ಗಳನ್ನು ಅಳವಡಿಸಲು ಅವಕಾಶ ಇದೆ).
 
ಸುಮಾರು ಆರು ಅಡಿ ಉದ್ದ, ನಾಲ್ಕು ಅಡಿ ಅಗಲದ ಟ್ರೈಲರ್‌ಗೆ ಪ್ಲಾಸ್ಟಿಕ್‌ ಪೇಪರ್‌ ಹೊದಿಸಿ ತೊಟ್ಟಿಯಲ್ಲಿ ನೀರು ನಿಲ್ಲುವಂತೆ ನೀರು ತುಂಬಿಸಲಾಯಿತು. ಇದರಲ್ಲಿ ರಾಟೆ ಅಳವಡಿಸಿ, ರಾಟೆಯಲ್ಲಿನ ಕಿಟಕಿಯಂತಹ ಪುಟ್ಟ ಬಾಗಿಲಿನ ಮೂಲಕ ಭೂಮಿಯಿಂದ ಕಿತ್ತ ಸುಮಾರು 30 ಕೆ.ಜಿ ಕ್ಯಾರೆಟ್‌ ಅನ್ನು ರಾಟೆಗೆ ತುಂಬಿ ನಂತರ ಕ್ಯಾರೆಟ್‌ ಹೊರಗೆ ಬಾರದಂತೆ ಬಾಗಿಲು ಮುಚ್ಚಿ ಏಳೆಂಟು ಸುತ್ತು ತಿರುಗಿಸಲಾಗುತ್ತದೆ. ಕ್ಯಾರೆಟ್‌ ಗಡ್ಡೆ ಮೇಲಿನ ಮಣ್ಣು ತೊಳೆದುಕೊಂಡು ಕೆಂಪಗಾದ ನಂತರ ರಾಟೆಯ ಬಾಗಿಲು ತೆರೆದು ಹೊರಕ್ಕೆ ತೆಗೆದುಕೊಂಡು ನೇರವಾಗಿ ಮೂಟೆಗಳಿಗೆ ತುಂಬಲಾಗುತ್ತದೆ’...
 
ರಾಟೆಯನ್ನು ಸ್ಥಳೀಯ ತಂತ್ರಜ್ಞಾನ, ಅಂದರೆ ಈ ಹಿಂದೆ ಬಾವಿಗಳಿಂದ ನೀರು ಮೇಲೆತ್ತಲು ಬಳಸುತ್ತಿದ್ದ ಮರದ ಗಾಲಿಯ ತಾಂತ್ರಿಕತೆಯಲ್ಲೇ ಸಿದ್ಧಪಡಿಸಲಾಗಿದೆ. ಈ ರಾಟೆ ಸೌಲಭ್ಯದಿಂದಾಗಿ ಕ್ಯಾರೆಟ್‌ ಬೆಳೆದಿರುವ ತೋಟದ ಸಮೀಪಕ್ಕೆ ಟ್ರ್ಯಾಕ್ಟರ್‌ ಕೊಂಡೊಯ್ದು ಎಲ್ಲಿ ಬೇಕೋ ಅಲ್ಲಿ ನಿಲ್ಲಿಸಿಕೊಂಡು ಕಡಿಮೆ ನೀರಿನಲ್ಲಿ, ಕಡಿಮೆ ಸಮಯದಲ್ಲಿ ಹಾಗೂ ಕೇವಲ ಒಬ್ಬ ಕಾರ್ಮಿಕನಿಂದ, ಉತ್ತಮ ರೀತಿ ಕ್ಯಾರೆಟ್‌ ಶುದ್ಧೀಕರಣ ಕೆಲಸ ಸಾಧ್ಯವಿದೆ. 
ನರೇಶ್‌ಬಾಬು ಅವರ ಸಂಪರ್ಕ ಸಂಖ್ಯೆ: 9743683129
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.