ADVERTISEMENT

ಪಾಳು ನೆಲ ಫಲ ಕಂಡಾಗ...

ಜಿ.ಎಚ್.ಶಿವು ಹೊಸಮನೆ
Published 27 ಮಾರ್ಚ್ 2017, 19:30 IST
Last Updated 27 ಮಾರ್ಚ್ 2017, 19:30 IST
ನೀರು ಉಳಿತಾಯಕ್ಕೆ ಕೃಷಿ ಹೊಂಡ
ನೀರು ಉಳಿತಾಯಕ್ಕೆ ಕೃಷಿ ಹೊಂಡ   

ಬದುಕನ್ನು ಸಿಹಿಯಾಗಿಸುವ ಕಬ್ಬು, ಬಂಗಾರದ ಬೆಳೆಯಾಗಿ ಅಡಿಕೆ, ತಿಂಗಳ ಖರ್ಚನ್ನು ಸರಿದೂಗಿಸುವ ನುಗ್ಗೆ, ಬೀನ್ಸ್ ಮತ್ತು ಗೋವಿನಜೋಳ, ಭವಿಷ್ಯಕ್ಕೆ ಸಾಗುವಾನಿ, ಅಕೇಶಿಯಾ. ಇನ್ನೇನು ಬೇಕು ಬದುಕಿನ ಬಂಡಿ ಸಾಗಿಸಲು?

ನಿರಂತರ ಮಳೆ ಕೊರತೆ ನಡುವೆಯೂ ಹಸಿರು ಕ್ರಾಂತಿ ಮೊಳಗಿಸುವುದು ಅಷ್ಟು ಸುಲಭದ ವಿಷಯವಲ್ಲ. ಆಸಕ್ತಿ, ಕಲಿಕೆ, ದೃಢಸಂಕಲ್ಪ, ದೂರಾಲೋಚನೆ, ಪರಿಶ್ರಮ ಎಲ್ಲಾ ಅಂಶಗಳು ಇಂದು ಶಿಕಾರಿಪುರ ತಾಲ್ಲೂಕಿನ ಕಡೇನಂದಿಹಳ್ಳಿಯ ಹೂವಪ್ಪ ಅವರನ್ನು ಸಾಧನೆಯ ಹಾದಿಯಲ್ಲಿ ನಿಲ್ಲುವಂತೆ ಮಾಡಿದೆ.

ಎಳವೆಯಲ್ಲಿಯೇ ಪೋಷಕರನ್ನು ಕಳೆದುಕೊಂಡ ಹೂವಪ್ಪ, ದೊಡ್ಡಮ್ಮನ ಮನೆಯಲ್ಲಿಯೇ ಬೆಳೆದವರು. ಕಾಲೇಜು ಕಲಿಯದೇ ಖಾಸಗಿ ಕಂಪೆನಿಯೊಂದರಲ್ಲಿ ಕಾರ್ಮಿಕನಾಗಿ ಸೇರಿ ತಾಂತ್ರಿಕ ಪರಿಣತಿ ಪಡೆದರು.

ಕರ್ನಾಟಕ ಮಾತ್ರವಲ್ಲದೆ ಮುಂಬೈ, ಗುಜರಾತ್, ಮಧ್ಯಪ್ರದೇಶದಲ್ಲಿ ಸೇವೆ ಸಲ್ಲಿಸಿದರು. ಆದರೆ ಅನಾರೋಗ್ಯದ ಕಾರಣ ಹುಟ್ಟಿದ ಊರಿಗೆ ಅನಿವಾರ್ಯವಾಗಿ ವಾಪಸಾಗಲೇಬೇಕಾಯಿತು. ಅದಾಗಲೇ ಅವರು ನೆಚ್ಚಿಕೊಂಡಿದ್ದು ಭೂತಾಯಿಯನ್ನು.

ಪಿತ್ರಾರ್ಜಿತ ಆಸ್ತಿಯಾಗಿ 3.9ಎಕರೆ ಜಮೀನು ಹೂವಪ್ಪರ ಪಾಲಿನಲ್ಲಿತ್ತು. ಈ ಭೂಮಿ ನೀರು, ಗೊಬ್ಬರ ಕಾಣದೆ ಬಂಜರಾಗಿತ್ತು. ಆದ್ದರಿಂದ ಕೊಳವೆ ಬಾವಿ ಕೊರೆಸಿದರು. ಅದೃಷ್ಟಕ್ಕೆ ಮೂರು ಇಂಚು ನೀರಿನ ಇಳುವರಿ ಸಿಕ್ಕಿತು. ಭೂಮಿಯನ್ನು ಉಳುಮೆಗೆ ಸಿದ್ಧಗೊಳಿಸಿದರು. ಸೆಗಣಿ, ಹಸಿರೆಲೆ ಗೊಬ್ಬರದ ಶಕ್ತಿ ತುಂಬಿದರು.

ADVERTISEMENT

ಆರಂಭದಲ್ಲಿ ಟೊಮೆಟೊ, ಶೇಂಗಾ, ಮೆಣಸಿನ ಗಿಡ, ಮಾವು ಬೆಳೆದರು. ಆದರೆ ಹೂವಪ್ಪರಿಗೆ ಇದು ತೃಪ್ತಿ ತರಲಿಲ್ಲ. ಬೇರೆ ಏನಾದರೂ ಮಾಡಿ ನಾಲ್ಕು ಜನರಿಗೆ ಮಾದರಿಯಾಗಬೇಕು ಎನ್ನುವ ತುಡಿತ ಇತ್ತು. ಆ ಬಗ್ಗೆಯೇ ಆಳವಾಗಿ ಚಿಂತನೆ ನಡೆಸಿದರು.

ಶಿಕಾರಿಪುರ ತಾಲ್ಲೂಕಿನಲ್ಲಿ ಸಾಂಪ್ರದಾಯಿಕ ಪದ್ಧತಿಯಂತೆ ಕಬ್ಬನ್ನು ನೇರವಾಗಿ ಬಿತ್ತುವುದು ರೂಢಿ. ಆದರೆ ಇದರಿಂದ ಇಳುವರಿ ಕಡಿಮೆ ಎಂಬ ಕಾರಣದಿಂದ ಹೂವಪ್ಪನವರು ಸಸಿಗಳನ್ನು ಬೇರೆಡೆಯಿಂದ ತಂದು ಕಬ್ಬು ಬೆಳೆದರು. ಇದರಿಂದ ಇಳುವರಿ ಚೆನ್ನಾಗಿಯೇ ಬಂದಿತಾದರೂ ಖರ್ಚು ಹೆಚ್ಚಾಯಿತು. ಇದನ್ನರಿತು ಖುದ್ದಾಗಿ ಸಸಿಗಳನ್ನು ಬೆಳೆಸಲು ಆರಂಭಿಸಿದರು.

7–8 ತಿಂಗಳು ಪ್ರಾಯದ ಆರೋಗ್ಯಕರ ಕಣ್ಣು ಇರುವ ಕಬ್ಬಿನ ತುಂಡುಗಳನ್ನು ಕತ್ತರಿಸಿ ತಂದು ನಾರು ಗೊಬ್ಬರದೊಂದಿಗೆ ಟ್ರೇನಲ್ಲಿ ಹಾಕಿ ಬೆಳೆಸಿದರು. ಒಂದು ವಾರದ ನಂತರ ಉತ್ತಮ ಗುಣಮಟ್ಟದ ಸಸಿಗಳನ್ನು ಒಂದು ಅಡಿ ಅಂತರದಲ್ಲಿ ನಾಟಿ ಮಾಡಿ ಯಶಸ್ವಿ ಬೆಳೆ ತೆಗೆದರು. ಪರಿಣಾಮ ಈಗ ಆರು ಎಕರೆಯಲ್ಲಿ ಎಕರೆಗೆ 50 ಟನ್‌ನಂತೆ ಇಳುವರಿ ಪಡೆಯುತ್ತಿದ್ದಾರೆ.

ಜತೆಗೆ ತೋಟಗಾರಿಕೆ ಇಲಾಖೆ ಸಹಾಯಧನ ಪಡೆದು ಪಾಲಿಥಿನ್ ಹಸಿರು ನೆರಳಿನ ಪರದೆಯಲ್ಲಿ ಕಬ್ಬಿನ ಸಸಿ ಬೆಳೆಸಿದ್ದಾರೆ. ಇವರ ಕಬ್ಬಿಗೆ ಸುತ್ತಮುತ್ತಲ ರೈತರಿಂದ ಭಾರಿ ಬೇಡಿಕೆ ಶುರುವಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಇದುವರೆಗೆ 15 ಲಕ್ಷ ಸಸಿಗಳನ್ನು ಸಸಿಯೊಂದಕ್ಕೆ ₹2ರಂತೆ ಮಾರಾಟ ಮಾಡಿದ್ದಾರೆ.

ಖರ್ಚು ಕಡಿಮೆ-ಲಾಭ ಹೆಚ್ಚು
ಬಾಗಲಕೋಟೆ ತೋಟಗಾರಿಕೆ ಇಲಾಖೆ ಅಭಿವೃದ್ಧಿಪಡಿಸಿದ ನುಗ್ಗೆ ತಳಿಯನ್ನು ಹೂವಪ್ಪ ತಮ್ಮ ಮುಕ್ಕಾಲು ಎಕರೆ ಜಮೀನಿನಲ್ಲಿ ಬೆಳೆಸಿದ್ದಾರೆ. ಅದು ಕೇವಲ ಆರು ತಿಂಗಳಲ್ಲೇ ಸೊಗಸಾದ ಫಲ ನೀಡಿದೆ. ಒಂದು ನುಗ್ಗೆ ಗಿಡ ಆರು ತಿಂಗಳಿಗೆ 300ರವರೆಗೂ ಕಾಯಿಗಳನ್ನು ಕೊಡುತ್ತದೆ. ಒಂದು ಕೆ.ಜಿ ನುಗ್ಗೆಗೆ ಮಾರುಕಟ್ಟೆಯಲ್ಲಿ ಕನಿಷ್ಠ ₹20 ದರವಿರುತ್ತದೆ ಎನ್ನುವ ಹೂವಪ್ಪ, ಮುಕ್ಕಾಲು ಎಕರೆಯಲ್ಲಿ ನುಗ್ಗೆ ಬೆಳೆಯಲು ಖರ್ಚು ಮಾಡಿರುವುದು ₹20 ಸಾವಿರ ಮಾತ್ರ.

ಇದೀಗ ಬೇರೆ ರೈತರಿಂದಲೂ ಬೇಡಿಕೆ ಬಂದಿರುವುದರಿಂದ ನುಗ್ಗೆ ಸಸಿಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ತಾವೇ ತಯಾರಿಸಿರುವ ಎರೆಹುಳು ಗೊಬ್ಬರ ಹಾಗೂ ಕೊಟ್ಟಿಗೆ ಗೊಬ್ಬರ, ಮಣ್ಣು, ಮರಳಿನೊಂದಿಗೆ 4/6 ಗಾತ್ರದ ಪ್ಲಾಸ್ಟಿಕ್ ಪ್ಯಾಕೆಟ್‌ನಲ್ಲಿ ನುಗ್ಗೆ ಬೀಜೋತ್ಪಾದನೆ ಮಾಡುತ್ತಿದ್ದಾರೆ.

ಸಸಿಯೊಂದಕ್ಕೆ ₹12ರಂತೆ ಮಾರಾಟ ಮಾಡುತ್ತಿದ್ದಾರೆ. ನುಗ್ಗೆ ಬೆಳೆದ ರೈತರು ಮೂರು ತಿಂಗಳಿಗೊಮ್ಮೆ ನುಗ್ಗೆ ಕುಡಿ ಚಿವುಟಬೇಕು. ಇದರಿಂದ ನುಗ್ಗೆ ಉದ್ದವಾಗಿ ಬೆಳೆಯುವ ಬದಲು ಹರಡಿಕೊಳ್ಳುತ್ತದೆ. ಫಸಲು ಸಹ ಹೆಚ್ಚಾಗುತ್ತದೆ ಎನ್ನುತ್ತಾರೆ ಹೂವಪ್ಪ.

ಕೇವಲ 12 ಗುಂಟೆ ಜಾಗದಲ್ಲಿ ಹಸಿರು ನೆರಳು ಪರದೆ ಮನೆ ನಿರ್ಮಿಸಿಕೊಂಡು ಯಥೇಚ್ಛವಾಗಿ ಬೀನ್ಸ್ ಬೆಳೆ ತೆಗೆದಿದ್ದಾರೆ. ತೇವಾಂಶ ಹೆಚ್ಚಾಗದಂತೆ 3/2 ಅಳತೆಯಲ್ಲಿ ಬೆಡ್ ನಿರ್ಮಿಸಿಕೊಂಡು ಬೀನ್ಸ್ ಬೆಳೆದಿರುವ ಇವರು ಕೇವಲ ಮೂರು ತಿಂಗಳಿನಲ್ಲೇ ಮೊದಲ ಬೆಳೆಯಲ್ಲಿ ನಾಲ್ಕು ಕ್ವಿಂಟಲ್ ಬೀನ್ಸ್ ಇಳುವರಿ ಪಡೆದಿದ್ದಾರೆ. ಇದುವರೆಗೆ  ಸುಮಾರು 30 ಕ್ಷಿಂಟಲ್‌ನಷ್ಟು ಬೀನ್ಸ್ ಸಿಕ್ಕಿದೆ.

ಇದೊಂದರಿಂದಲೇ ತಿಂಗಳ ಖರ್ಚನ್ನು ಸರಿದೂಗಿಸುತ್ತಾರೆ. ಒಂದೂವರೆ ಎಕರೆಯಲ್ಲಿ ಅಡಿಕೆ, ಆರು ಎಕರೆಯಲ್ಲಿ ಗೋವಿನ ಜೋಳ ಹಾಗೂ ಜಮೀನಿನ ಸುತ್ತ 150ಕ್ಕೂ ಹೆಚ್ಚು ಸಾಗುವಾನಿ ಮತ್ತು ಅಕೇಶಿಯಾ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇದು ದೀರ್ಘಕಾಲಿಕ ಬೆಳೆಯಾಗಿದ್ದು, ಭವಿಷ್ಯಕ್ಕೆ ಬುನಾದಿ ಎಂಬ ನಂಬಿಕೆ ಇವರದ್ದು.

ನೀರು ಉಳಿಸುವ ತಂತ್ರ
ಹೂವಪ್ಪನವರು ಮೊದಲು ತೆಗೆಸಿದ್ದ ಕೊಳವೆ ಬಾವಿ ಕೆಲವೇ ದಿನಗಳಲ್ಲಿ ಬತ್ತಿ ಹೋಯಿತು. ಮತ್ತೊಂದರಿಂದ ಆರು ಇಂಚು ಇಳುವರಿಯ ನೀರು ದೊರಕಿತು. ನೀರಿನ ಮೌಲ್ಯದ ಅರಿವಾದದ್ದು ಆಗಲೇ. ನೀರು ಇಂಗಿದರೆ ಮಾತ್ರ ಅಂತರ್ಜಲ ವೃದ್ಧಿಯಾಗುತ್ತದೆ. ಕೊಳವೆಬಾವಿಯಲ್ಲೂ ಸದಾ ನೀರು ಚಿಮ್ಮುತ್ತದೆ ಎಂಬ ಸತ್ಯಾನ್ವೇಷಣೆಯಿಂದ ಜಮೀನಿನ ಇಳಿಜಾರಿನ ಪ್ರದೇಶದಲ್ಲಿ ಕೃಷಿ ಹೊಂಡ ನಿರ್ಮಿಸಿದರು. ಇದರಿಂದ ಭೂಮಿಯಲ್ಲಿ ಅಂತರ್ಜಲ ಹೆಚ್ಚಾಯಿತು.

ಕಬ್ಬು, ನುಗ್ಗೆ ಬೆಳೆಗೆ ಹನಿ ನೀರಾವರಿ ಪದ್ಧತಿ ಅನುಸರಿಸಿದರು. ಅಡಿಕೆ ತೋಟದಲ್ಲಿ ಕಬ್ಬಿನ ಸೋಗೆ, ಸಾಗುವಾನಿ, ಅಕೇಶಿಯಾ ಎಲೆ, ಮತ್ತಿತರ ಗಿಡಗೆಂಟೆಗಳಿಂದ ಬಿದ್ದ ಎಲೆಗಳನ್ನು ಉಪಯೋಗಿಸಿ ಹೊದಿಕೆ ಪದ್ಧತಿ ಮಾಡಿದರು. ಇದರಿಂದ ಅಡಿಕೆ ತೋಟ ಕಡಿಮೆ ನೀರಿನಲ್ಲೇ ಸದಾ ತೇವಾಂಶದಿಂದ ಇರುವಂತಾಯಿತು ಹಾಗೂ ಉತ್ತಮ ಗೊಬ್ಬರವೂ ಲಭಿಸಿದಂತಾಗುವುದರಿಂದ ಭೂಮಿಯೂ ಫಲವತ್ತಾಗುತ್ತಿದೆ.

ಹೂವಪ್ಪ ಅವರ ಸಂಪರ್ಕಕ್ಕೆ: 98809 98389

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.