ADVERTISEMENT

ರೈತರ ಜೇಬು ತುಂಬಿಸುವ ಪನ್ನೀರ್‌

​ಪ್ರಜಾವಾಣಿ ವಾರ್ತೆ
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST
ಕೃಷಿಕ ಸೋಮಶೇಖರಯ್ಯ
ಕೃಷಿಕ ಸೋಮಶೇಖರಯ್ಯ   

ಸರ್ವ ಋತುಗಳಲ್ಲಿಯೂ ಬಹು ಬೇಡಿಕೆ ಇರುವ ಬೆಳೆ ಪನ್ನೀರ್‌. ಕೇರಳ, ತಮಿಳುನಾಡಿನಲ್ಲಿ ಇದನ್ನೇ ನಂಬಿ ವಾರ್ಷಿಕ ಲಕ್ಷಾಂತರ ರೂಪಾಯಿ ವಹಿವಾಟು ನಡೆಸುವ ಸಾಕಷ್ಟು ಬೆಳೆಗಾರರಿದ್ದಾರೆ. ಆದರೆ ನಮ್ಮಲ್ಲಿ ಬೆಂಗಳೂರು, ಮೈಸೂರಿನ ಅಕ್ಕಪಕ್ಕದ ಪ್ರದೇಶಗಳಲ್ಲಿ ಬಿಟ್ಟರೆ ಇದರ ಮಾಹಿತಿ ಕೊರತೆಯಿಂದಾಗಿ ಬೇರೆಡೆಗಳಲ್ಲಿ ಈ ಬೆಳೆಯತ್ತ ಅಷ್ಟು ಆಕರ್ಷಿತರಾಗಿಲ್ಲ.

ತಂಬಾಕು ಸೇರಿದಂತೆ ವಿವಿಧ ಬೆಳೆ ಬೆಳೆದು ಕೈಸುಟ್ಟುಕೊಂಡ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲ್ಲೂಕಿನ ಚನ್ನಪ್ಪನಕೊಪ್ಪಲಿನ ನಿವಾಸಿ ಸೋಮಶೇಖರಯ್ಯನವರು ಈಗ ಪನ್ನೀರ್‌ ಕೃಷಿಯಲ್ಲೇ ಯಶ ಕಾಣುತ್ತಿದ್ದಾರೆ. ಆರಂಭದಲ್ಲಿ ನಾಲ್ಕು ಕಡ್ಡಿ ಪನ್ನೀರನ್ನು ತಂದು ಪ್ರಾಯೋಗಿಕವಾಗಿ ನೆಟ್ಟರು. ಅದು ಚೆನ್ನಾಗಿ ಬೆಳೆಯಿತು. ಹವಾಗುಣದ ಹೊಂದಾಣಿಕೆಯನ್ನರಿತು ಬೆಂಗಳೂರು ಕೃಷಿವಿಜ್ಞಾನ ಕೇಂದ್ರದಿಂದ ಸಸಿಯನ್ನು ತಂದರು. ಮೊದಲ ಮೂರು ವರ್ಷ ಒಂದೂವರೆ ಗುಂಟೆಯಲ್ಲಿ 200 ಗಿಡಗಳನ್ನು ನೆಟ್ಟರು.

ಇದರಿಂದ ಬರುವ ಆದಾಯವನ್ನು ಕಂಡು ಮತ್ತೆ ಏಳು ಗುಂಟೆಯಲ್ಲಿ 600 ಗಿಡಗಳನ್ನು ನೆಟ್ಟು ಭರಪೂರ ಇಳುವರಿಯನ್ನು ಪಡೆಯುತ್ತಿದ್ದಾರೆ. ಪನ್ನೀರ್‌ ಗಿಡ ಹೆಚ್ಚು ಎತ್ತರಕ್ಕೆ ಬೆಳೆಯುವುದಿಲ್ಲ. ಪೊದೆಯಾಕಾರದಲ್ಲಿ ಬೆಳೆಯುತ್ತದೆ, ಎಲೆಗಳು ಸಣ್ಣದಾಗಿವೆ. ತುಳಸಿ ಗಿಡದಂತೆ ಇದನ್ನು ದಂಡು ಸಹಿತ ಉಪಯೋಗಿಸಲಾಗುತ್ತದೆ. ಎಲೆ ತುಂಬಾ ಪರಿಮಳಹೊಂದಿದ್ದು, ಶುಭ ಕಾರ್ಯಕ್ರಮಗಳಿಗೆ ಹೂವಿನ ಹಾರಗಳ ತಯಾರಿಯಲ್ಲಿ ಇದನ್ನು ಬಳಸುತ್ತಾರೆ.

ವಿದೇಶಗಳಲ್ಲಿ ಬಹುಬೇಡಿಕೆಯಿದ್ದು, ಸುಗಂಧ ದ್ರವ್ಯಗಳ ತಯಾರಿಯಲ್ಲಿ ಇದರ ಎಣ್ಣೆ ಬಳಕೆಯಾಗುತ್ತದೆ. ಬೇಕರಿ ತಿಂಡಿಗಳ ತಯಾರಿಯಲ್ಲಿಯೂ ಇದರ ಎಣ್ಣೆ ಬಳಸುತ್ತಾರೆ.ಬಾಯ್ಲರ್ ವಿಧಾನದ ಮೂಲಕ ಗಿಡದಿಂದ ಎಣ್ಣೆ ತಯಾರಿಸಲಾಗುತ್ತದೆ.

ಸಸಿ ತಯಾರಿ: ಬೆಳೆದ ಕಡ್ಡಿಗಳಿಂದಲೇ ನಾಟಿಗೆ ಬೇಕಾದ ಸಸಿಗಳನ್ನು ತಯಾರಿಸಿಕೊಳ್ಳಲಾಗುತ್ತದೆ. ಬಲಿತ ಕಡ್ಡಿಯನ್ನು ನಾಲ್ಕು ಇಂಚಿನಷ್ಟು ಉದ್ದಕ್ಕೆ ಕತ್ತರಿಸಿ ತಂದು ಪ್ಲಾಸ್ಟಿಕ್ ಚೀಲಕ್ಕೆ ಮಣ್ಣು ತುಂಬಿಸಿ ಅದರಲ್ಲಿ ಇಡಬೇಕು. ಪ್ಲಾಸ್ಟಿಕ್ಕನ್ನು ನೆರಳಿನಲ್ಲಿಡಬೇಕು. ಸದಾ ತೇವಾಂಶವಿರುವ ಹಾಗೆ ನೋಡಿಕೊಳ್ಳಬೇಕು. ಎರಡು ಮೂರು ತಿಂಗಳಲ್ಲಿ ಕಡ್ಡಿ ಚಿಗುರುತ್ತದೆ. ನಂತರ ನಾಟಿ ಮಾಡಬೇಕು.

ಫೆಬ್ರುವರಿಯಿಂದ ಜೂನ್ ಮೊದಲ ವಾರ ನಾಟಿಗೆ ಸೂಕ್ತ. ಹೆಚ್ಚು ಮಳೆ ಇರುವಾಗ ನಾಟಿ ಮಾಡಬಾರದು. ನಾಟಿಗಿಂತ ಮುಂಚೆ ಮಣ್ಣನ್ನು ಹದ ಮಾಡಿಕೊಳ್ಳಬೇಕು. ಒಂದರಿಂದ ಒಂದೂವರೆ ಇಂಚಿನಷ್ಟು ಗುಂಡಿ ತೆಗೆದು ಕಡ್ಡಿಯನ್ನು ನಾಟಿ ಮಾಡಬೇಕು. ನಾಟಿ ವಿಧಾನದಲ್ಲಿ ಎರಡು ವಿಧಾನಗಳಿವೆ. ಎಣ್ಣೆ ತಯಾರಿಗಾಗಿ ನಾಟಿ ಮಾಡುವುದಾದರೆ ಸಾಲಿನಿಂದ ಸಾಲಿಗೆ ಎರಡೂವರೆ ಅಡಿ, ಗಿಡದಿಂದ ಗಿಡಕ್ಕೆ ಎರಡೂವರೆ ಅಡಿಯಷ್ಟು ಅಂತರ ಬಿಟ್ಟು ನಾಟಿ ಮಾಡಬೇಕು.

ಎಲೆ ಮಾರಾಟ ಮಾಡುವುದಾದರೆ ಸಾಲಿನಿಂದ ಸಾಲಿಗೆ 4 ಅಡಿ, ಗಿಡದಿಂದ ಗಿಡಕ್ಕೆ 4 ಅಡಿ ಅಂತರ ನೀಡಬೇಕು. ಸೋಮಶೇಖರಯ್ಯನವರು ಎಲೆ ಮಾರಾಟ ಮಾಡುತ್ತಿದ್ದು ಸಾಲಿನಿಂದ ಸಾಲಿಗೆ 10 ಅಡಿಗಳಷ್ಟು ಅಂತರ ಬಿಟ್ಟಿದ್ದಾರೆ. ಎರಡು ಸಾಲುಗಳ ಮಧ್ಯೆ ಗುಲಾಬಿ ನೆಟ್ಟು ಲಾಭ ಪಡೆಯುತ್ತಿದ್ದಾರೆ. ಗುಲಾಬಿ ಗಿಡಗಳು 10-15 ವರ್ಷ ಬದುಕುತ್ತವೆ. ಅವುಗಳಿಗೆ ಪ್ರತ್ಯೇಕ ಗೊಬ್ಬರ, ನೀರಾವರಿ ನೀಡಬೇಕು.

ಪನ್ನೀರ್ ಸಾಲಿನ ಮಧ್ಯೆ ಗುಲಾಬಿ, ಗೊಂಡೆಯಂತಹ ಪುಷ್ಪಕೃಷಿಗಳನ್ನು ಬೆಳೆಯಬಹುದು. ಆದರೆ ಸೇವಂತಿಗೆ, ಮಲ್ಲಿಗೆ ಗಿಡಗಳು ಹರಡಿಕೊಳ್ಳುವುದರಿಂದ ಅವುಗಳನ್ನು ನಾಟಿ ಮಾಡುವಂತಿಲ್ಲ. ಜೇಡಿ ಮತ್ತು ಕಲ್ಲು ಭೂಮಿ ಹೊರತುಪಡಿಸಿ ಇತರೆಡೆ ನಾಟಿ ಮಾಡಬಹುದು. ಹೊಲಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ.

ಪನ್ನೀರ್ ಅಪ್ಪಟ ಸಾವಯವದಲ್ಲಿ ಬೆಳೆಯುವ ಕೃಷಿ. ನಾಟಿ ಮಾಡಿ ಒಂದು ವಾರದಲ್ಲಿ ಗಿಡ ಚಿಗುರುತ್ತದೆ. ಗಿಡ ಚಿಗುರುತ್ತಿದ್ದಂತೆ ಪ್ರತಿ ಬುಡಕ್ಕೆ ಒಂದು ಸೇರಿನಂತೆ ಕೊಟ್ಟಿಗೆ ಗೊಬ್ಬರ ನೀಡಬೇಕು. ಕುರಿ, ಕೋಳಿ ಗೊಬ್ಬರ ನೀಡಿದರೆ ಅಷ್ಟು ಚೆನ್ನಾಗಿ ಇಳುವರಿ ನೀಡುವುದಿಲ್ಲ. ರಾಸಾಯನಿಕ ಗೊಬ್ಬರ ನೀಡಿದರೆ ಎಲೆ ಉದುರಲು ಆರಂಭವಾಗುತ್ತದೆ.

ನೆಟ್ಟ 15 ದಿನ ಪ್ರತಿ ಬುಡಕ್ಕೆ ಎರಡು ಲೀಟರ್‌ನಷ್ಟು ಹನಿ ನೀರಾವರಿ ವಿಧಾನದ ಮೂಲಕ ನೀರುಣಿಸಬೇಕು. ಸೋಮಶೇಖರಯ್ಯ ನೀರಿಗಾಗಿ ಬೋರ್ ವ್ಯವಸ್ಥೆ ಮಾಡಿಕೊಂಡು ಹನಿ ನೀರಾವರಿ ಪದ್ಧತಿಯ ಮೂಲಕ ನೀರುಣಿಸುತ್ತಾರೆ. ಗಿಡ ದೊಡ್ಡದಾದ ನಂತರ ಎರಡು ದಿನಕ್ಕೊಮ್ಮೆ ನೀರು ನೀಡಿದರೆ ಸಾಕಾಗುತ್ತದೆ.

ಒಮ್ಮೆ ನೆಟ್ಟರೆ ನಾಲ್ಕೈದು ವರ್ಷ ಗಿಡ ಬದುಕುತ್ತದೆ. ಎಣ್ಣೆ ತಯಾರಿಸುವ ಉದ್ದೇಶದಿಂದ ನಾಟಿ ಮಾಡಿದರೆ ವರ್ಷಕ್ಕೆ ಮೂರು ಬಾರಿ ಎಲೆಗಳನ್ನು ಕಟಾವು ಮಾಡಬಹುದಾಗಿದೆ.

ಎಲೆಗಾಗಿ ನಾಟಿ ಮಾಡಿದರೆ ನೆಟ್ಟು ಎರಡು ತಿಂಗಳ ನಂತರ ಪ್ರತಿನಿತ್ಯ ಎಲೆಯನ್ನು ಕಟಾವು ಮಾಡಬಹುದು. ಎಣ್ಣೆಯನ್ನು ತಯಾರಿಸುವುದು ಒಂಚೂರು ಕಷ್ಟದ ಕೆಲಸ. ಆದರೆ ಎಲೆಗಿಂತ ಎಣ್ಣೆ ಮಾರಾಟ ಮಾಡಿದರೆ ಇಮ್ಮಡಿ ಲಾಭ. ಒಂದು ಟನ್ ಕೆ.ಜಿ ಎಲೆಯಿಂದ ಎಂಟು ಲೀಟರ್ ಎಣ್ಣೆ ತಯಾರಿಸಬಹುದಾಗಿದೆ. 600 ಗಿಡಗಳಿಂದ ವರ್ಷಕ್ಕೆ 15 ಟನ್ ಎಲೆಗಳನ್ನು ಪಡೆಯಬಹುದಾಗಿದೆ.

ಎಲೆಗೆ ಕೆ.ಜಿಗೆ ₹ 60ರಿಂದ 100 ದರವಿದೆ. ಹಬ್ಬಗಳಲ್ಲಿ ಹೆಚ್ಚಿನ ಬೇಡಿಕೆಯಿದ್ದು ಇವರು ಬೆಳೆದ ಎಲೆಗಳನ್ನು ಕೆ.ಆರ್ ನಗರ ಮೈಸೂರಿಗೆ ಕಳುಹಿಸಿಕೊಡುತ್ತಾರೆ. ನಾಟಿಯ ಆರಂಭದಲ್ಲಿ ಗಿಡ, ಕೂಲಿ, ನೀರಾವರಿ ಎಲ್ಲಾ ಸೇರಿ ಒಂದು ಲಕ್ಷ ಖರ್ಚು ತಗುಲಿದೆ. ಆ ಹಣ ಮೂರೇ ತಿಂಗಳಲ್ಲಿ ಬಂದು ಬಿಡುತ್ತದೆ. ಎರಡನೇ ವರ್ಷದಿಂದ ಖರ್ಚು ಕಡಿಮೆ.ಹೆಚ್ಚು ಕೂಲಿಯಾಳುಗಳ ಅಗತ್ಯವಿಲ್ಲ. ಎಲೆಗಳನ್ನು ಬೆಳಿಗ್ಗೆ 6ರಿಂದ8 ಗಂಟೆಯೊಳಗೆ ಕಟಾವು ಮಾಡಿದರೆ ಉತ್ತಮ.

ರೋಗಗಳು: ಎಲೆಚುಕ್ಕೆ ರೋಗ ಇವುಗಳಿಗೆ ಸಾಮಾನ್ಯ. ಮುಂಜಾಗ್ರತಾ ಕ್ರಮವಾಗಿ ಬೇವಿನ ರಸ ಸಿಂಪಡಿಸಬಹುದು. ಪನ್ನೀರ್ ಗಿಡಗಳ ಸಾಲಿನ ಮಧ್ಯೆ ಗುಲಾಬಿ ಗಿಡಗಳನ್ನು ನೆಟ್ಟರೆ ಪನ್ನೀರ್ ಗಿಡಗಳಿಗೆ ಬರುವ ಕೀಟಗಳು ಕಡಿಮೆಯಾಗುತ್ತವೆ. ಪನ್ನೀರ್ ತೋಟದ ಸುತ್ತ ನಾಲ್ಕೈದು ಗೊಂಡೆ ಹೂವಿನ ಗಿಡನೆಟ್ಟರೆ ಕೀಟ ನಿಯಂತ್ರಿಸಬಹುದು. ಸಂಪರ್ಕಕ್ಕೆ (ಸಂಜೆ 7–8): 8453564960. 

ಪನ್ನೀರ್‌ ಗಿಡದ ಎಣ್ಣೆಗೆ ಬಹು ಬೇಡಿಕೆಯಿದೆ. ಆದರೆ ಬೇಡಿಕೆಯ ಶೇ25ರಷ್ಟು ಉತ್ಪಾದನೆ ಕೂಡ ರಾಜ್ಯದಲ್ಲಿಲ್ಲ. ಐದು ಕೆ.ಜಿ ಗಿಡದಿಂದ 30 ಮಿ.ಲೀನಷ್ಟು ಎಣ್ಣೆ ಪಡೆಯಬಹುದು.ಸ್ವತಃ ಎಣ್ಣೆ ತಯಾರಿಸಿಕೊಳ್ಳುವುದಾದರೆ, 40 ಎಕರೆಯಲ್ಲಿ ಬೆಳೆದ ಗಿಡಗಳಿಂದ ಎಣ್ಣೆ ತಯಾರಿಸಲು 500ಕೆ.ಜಿ. ಗಾತ್ರದ ಬಾಯ್ಲರ್‌ವೊಂದು ಬೇಕು. ಇದಕ್ಕೆ ₹7 ಲಕ್ಷ. ಆದ್ದರಿಂದ 40 ರಿಂದ 50 ಮಂದಿ ಬೆಳೆಗಾರರು ಜೊತೆ ಸೇರಿ ಪಾಲುದಾರಿಕೆ ಪದ್ಧತಿ ಮೂಲಕ ಬಾಯ್ಲರ್ ಖರೀದಿಸಿದರೆ ಎಣ್ಣೆ ತೆಗೆಯಬಹುದು.

ಬೆಳೆ ಬೆಳೆಯುವ ಬಗ್ಗೆ ಬೆಂಗಳೂರಿನ ಯಲಹಂಕದಲ್ಲಿ ಕೇಂದ್ರ ಸರ್ಕಾರ ನಡೆಸುತ್ತಿರುವ ‘ಸೆಂಟ್ರಲ್ ಆರೋಮ್ಯಾಟಿಕ್ ಮತ್ತು ಮೆಡಿಸಿನ್ ಬೋರ್ಡ್’ ಮಾರ್ಗದರ್ಶನ ನೀಡುತ್ತದೆ. ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ ನಾಟಿ ಬಗ್ಗೆ ಮಾಹಿತಿ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT