ADVERTISEMENT

ರೈತ ಮಾಹಿತಿಗೆ ವೆಬ್‌ ಪೋರ್ಟಲ್‌

ಅನಿತಾ ಈ.
Published 17 ನವೆಂಬರ್ 2014, 19:30 IST
Last Updated 17 ನವೆಂಬರ್ 2014, 19:30 IST

ರೈತ ಬೆಳೆಯುವ ಬೆಳೆಗಳಿಗೆ ದೇಶದ ಯಾವ ಭಾಗದಲ್ಲಿ ಎಷ್ಟು ಬೆಲೆ ಇದೆ, ಎಲ್ಲಿ ಹೆಚ್ಚಿನ ಬೇಡಿಕೆ ಇದೆ, ರಾಜ್ಯದಲ್ಲಿನ ಹವಾಮಾನ, ಮಾರುಕಟ್ಟೆ ದರ, ಬೆಳೆಗಳಿಗೆ ಬರಬಹುದಾದ ರೋಗಗಳು, ಅವುಗಳಿಗೆ ಪರಿಹಾರ, ಹೀಗೆ ಕೃಷಿ ಬಗೆಗಿನ ಸಂಪೂರ್ಣ ಮಾಹಿತಿಯನ್ನು ರೈತರು ಇರುವ ಸ್ಥಳದಲ್ಲೇ ಕ್ಷಣಾರ್ಧದಲ್ಲೇ ಪಡೆಯಬಹುದು.

ಇನ್ನು ರೈತರು ಕುಳಿತಲ್ಲಿಯೇ ತಮಗೆ ಬೇಕಾದ ಮಾಹಿತಿ ಪಡೆಯಲು ಸಾಧ್ಯ. ಸಾಫ್ಟ್‌ವೇರ್‌ ಉದ್ಯೋಗಿ ರಘುನಂದನ್‌ ರೈತರಿಗೆ ಕೃಷಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿ ಒದಗಿಸುವ ಉದ್ದೇಶದಿಂದ ‘ಭೂಮಿ ವೆಬ್‌ ಪೋರ್ಟಲ್‌’ ಪ್ರಾರಂಭಿಸಿದ್ದಾರೆ.

ಈ ವೆಬ್‌ ಪೋರ್ಟಲ್‌ನಲ್ಲಿ ರೈತರು ತಮ್ಮ ಹೆಸರುಗಳನ್ನು ನೋಂದಾಯಿಸಿ ಮೊಬೈಲ್‌ ನಂಬರ್‌ ನೀಡಬೇಕು. ರೈತರ ಮಾಹಿತಿ ವೆಬ್‌ ಪೋರ್ಟಲ್‌ನಲ್ಲಿ ದಾಖಲೆಯಾದ ನಂತರ ಅವರಿಗೆ ಮಾಹಿತಿ ರವಾನೆಯಾಗುತ್ತದೆ. ನಂತರ ರೈತರು ಮಾಹಿತಿಗಳನ್ನು ಪಡೆಯಬಹುದು. ಈ ಮಾಹಿತಿಯನ್ನು ಪಡೆಯಲು ರೈತರಿಗಾಗಿ ಟೋಲ್‌ ಫ್ರೀ ನಂಬರ್ ವ್ಯವಸ್ಥೆ ಕಲ್ಪಿಸಲಾಗಿದೆ. 
   
ಮೂಲತಃ ತುಮಕೂರಿನವರಾದ ರಘುನಂದನ್‌ ಬಿಎಸ್‌ಸ್ಸಿ ಕಂಪ್ಯೂಟರ್‌ ಸೈನ್ಸ್‌ ಮುಗಿಸಿದ ನಂತರ ಎನ್‌ಐಐಟಿಯಲ್ಲಿ ಡಿಪ್ಲೊಮಾ ಮಾಡಿದರು. ನಂತರ ರೈಸ್‌ ಮಿಲ್‌ವೊಂದಕ್ಕೆ ಸಾಫ್ಟ್‌ವೇರ್ ತಯಾರಿಸಲು ಪ್ರಾರಂಭಿಸಿದರು. ಈ ವೇಳೆ ಅಲ್ಲಿಗೆ ಬರುತ್ತಿದ್ದ ರೈತರ ಸಮಸ್ಯೆಗಳನ್ನು ಆಲಿಸುತ್ತಿದ್ದ ಇವರಿಗೆ ರೈತನಿಗೆ ಸಕ್ರಿಯವಾಗಿ ಮಾಹಿತಿ ನೀಡಲು ಒಂದು ವೆಬ್‌ ಪೋರ್ಟಲ್‌ ಮಾಡಬೇಕೆಂಬ ಆಲೋಚನೆ ಮೂಡಿತು. ಇಂಟರ್‌ನೆಟ್‌ ಸಂಪರ್ಕ ಇಲ್ಲದ ರೈತರಿಗೂ ಕೇವಲ ಒಂದು ಎಸ್‌ಎಂಎಸ್‌ ಮೂಲಕ ಮಾಹಿತಿ ರವಾನಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ‘ಭೂಮಿ’ ವೆಬ್‌ ಪೋರ್ಟಲ್‌ ತಯಾರಿಕೆಗೆ ಶ್ರಮಿಸಿದ್ದಾರೆ.

‘ಸದ್ಯಕ್ಕೆ ನೋಂದಣಿಯಾಗಿರುವ ರೈತರಿಗೆ ಉಚಿತವಾಗಿ ಮಾಹಿತಿ ನೀಡಲಾಗುತ್ತಿದೆ. ಮುಂದಿನ ಎರಡು ತಿಂಗಳಿನಲ್ಲಿ ಸೇವೆಗೆ ಶುಲ್ಕ ಪಡೆಯಲಾಗುವುದು. ಕೆಲವೊಂದು ಭಾಗಗಳಲ್ಲಿ ಈಗಾಗಲೇ ಕನ್ನಡದಲ್ಲಿ ಎಸ್‌ಎಂಎಸ್‌ ಕಳುಹಿಸಲಾಗುತ್ತಿದೆ. ಜಿಲ್ಲೆಗಳಲ್ಲಿನ ಮಾಹಿತಿ ಪಡೆಯುವವರಿಗೆ ತಿಂಗಳಿಗೆ ₨ 60, ರಾಜ್ಯದಲ್ಲಿನ ಮಾಹಿತಿ ಪಡೆಯುವವರಿಗೆ ₨ 90 ಹಾಗೂ ಇಡೀ ದೇಶದಲ್ಲಿ ಮಾಹಿತಿ ಪಡೆಯುವವರಿಗೆ ₨ 120 ಶುಲ್ಕ ನಿಗದಿ ಮಾಡುವ ಆಲೋಚನೆ ಇದೆ. ಈ ಶುಲ್ಕವನ್ನು ಮೂರು ವರ್ಷದವರೆಗೆ ಹೆಚ್ಚಿಸುವುದಿಲ್ಲ’ ಎನ್ನುತ್ತಾರೆ ರಘುನಂದನ್‌.

ಮೊದಲು ಮಂಡ್ಯ ಜಿಲ್ಲೆಯ ಪ್ರತಿ ತಾಲ್ಲೂಕಿನಲ್ಲೂ ಏಜೆಂಟ್‌ ನೇಮಿಸಲಾಗಿದೆ. ಏಜೆಂಟ್‌ಗಳನ್ನು ನೋಡಿಕೊಳ್ಳಲು ಪ್ರತಿ ಜಿಲ್ಲೆಯಲ್ಲೂ ಟೀಮ್‌ ಲೀಡರ್‌ಗಳನ್ನು ನೇಮಿಸಲಾಗಿದೆ. ಈ ಏಜೆಂಟ್‌ಗಳು ಆಯಾ ತಾಲ್ಲೂಕಿನ ರೈತರಿಗೆ ಈ ಬಗ್ಗೆ ಮಾಹಿತಿ ನೀಡಿ, ರೈತರ ಮಾಹಿತಿಯನ್ನು ಕಲೆ ಹಾಕುತ್ತಾರೆ. ಹೀಗೆ ಹೆಸರುಗಳನ್ನು ನೋಂದಣಿ ಮಾಡಿಕೊಂಡ ರೈತರಿಗೆ ಬಿತ್ತನೆ ಬೀಜ ದೊರೆಯುವ ಸ್ಥಳಗಳು, ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ಇಡೀ ದೇಶದಲ್ಲಿರುವ ಮಾರುಕಟ್ಟೆ ದರ, ಹವಾಮಾನ, ಮಳೆ, ಉಷ್ಣತೆ ಬಗ್ಗೆ ಮಾಹಿತಿ ನೀಡಲಾಗುವುದು.

ಜತೆಗೆ ಲಿಸ್ಟಿಂಗ್‌ ಸೇವೆ ನೀಡಲಾಗುವುದು. ಇದರಲ್ಲಿ ನಮ್ಮ ರಾಜ್ಯದಲ್ಲಿರುವ ರೈತರಿಗೆ ಬೇರೆ ರಾಜ್ಯದಲ್ಲಿರುವ ವ್ಯಾಪಾರಿಗಳು, ಸರಕು ಸಾಗಣೆ ಸಂಸ್ಥೆಗಳಿಗೆ ಸಂಪರ್ಕ ಕಲ್ಪಿಸಲಾಗುತ್ತದೆ. ಮಂಡ್ಯದಲ್ಲಿರುವ ರೈತ ಬೆಳೆದಿರುವ ಬೆಳೆಗೆ ಹೈದರಾಬಾದ್‌ನಲ್ಲಿ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ದರ ಸಿಗುವಂತಿದ್ದರೆ, ಈ ಬಗ್ಗೆ ರೈತ ಹಾಗೂ ವ್ಯಾಪಾರಿಗಳಿಗೆ ಮಾಹಿತಿ ರವಾನಿಸಲಾಗುವುದು.  ಇದರೊಂದಿಗೆ ಆ ಬೆಳೆಯನ್ನು ಸಾಗಿಸಲು ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.  

ಈ ವ್ಯವಸ್ಥೆ ನೀಡುವ ಸಲುವಾಗಿಯೇ ಆಯಾ ರಾಜ್ಯಗಳಲ್ಲಿರುವ ಸಾರಿಗೆ ಸಂಸ್ಥೆಗಳು, ಟೆಂಪೊ ಚಾಲಕರು, ವ್ಯಾಪಾರಿಗಳನ್ನೂ ನೋಂದಣಿ ಮಾಡಿಕೊಳ್ಳಲಾಗುತ್ತದೆ. ರೈತರ ಬಳಿ ಇರುವ ಬೆಳೆಗಳ ಬಗ್ಗೆ ವೆಬ್‌ ಪೋರ್ಟಲ್‌ನಲ್ಲಿ ಪ್ರಕಟಿಸಿ ವ್ಯಾಪಾರಿಗಳಿಗೂ ಮಾಹಿತಿ ನೀಡಲಾಗುತ್ತದೆ. ಇದರಿಂದಾಗಿ ರೈತರು ಕುಳಿತ ಸ್ಥಳದಲ್ಲೇ ಬೆಳೆಯನ್ನು ಮಾರಾಟ ಮಾಡಬಹುದು. 

ಇನ್ನು ಕೃಷಿಗೆ ಸಂಬಂಧಿಸಿದಂತೆ ಸರ್ಕಾರಿ ವೆಬ್‌ ಸೈಟ್‌ಗಳಲ್ಲಿರುವ ಮಾಹಿತಿಗಳನ್ನೂ ಕಲೆ ಹಾಕಲಾಗುವುದು. ರಾಜ್ಯದಲ್ಲಿರುವ 1052 ಅಗ್ರಿ ಕ್ಲಿನಿಕ್‌, ಸರ್ವೀಸ್‌ ಪ್ರೊವೈಡರ್ಸ್‌ ಅನ್ನು ನೋಂದಣಿ ಮಾಡಿಕೊಂಡು ಅವರಿಂದ ಸೇವೆ ಪಡೆಯಲು ಸಹಾಯ ಮಾಡಲಾಗುವುದು. ಹೊಸ ಬೆಳೆ ಬೆಳೆಯಲು, ರೋಗ ಬಂದರೆ, ಅದರ ಬಗ್ಗೆ ಮಾಹಿತಿ ನೀಡುವ ಅಗ್ರಿ ಕ್ಲಿನಿಕ್‌ಗಳ ಬಗ್ಗೆಯೂ ರೈತರ ಮೊಬೈಲ್‌ಗಳಿಗೆ ಎಸ್‌ಎಂಎಸ್‌ ಮೂಲಕ ನೀಡಲಾಗುತ್ತದೆ. 

ಒಂದು ವೇಳೆ ಬೆಳೆಗಳ ರೋಗಗಳಿಗೆ ಸಂಬಂಧಪಟ್ಟಂತೆ ಯಾವುದೇ ಅನುಮಾನವಿದ್ದಲ್ಲಿ ಅದರ ಪರಿಹಾರಕ್ಕೆ ವೆಬ್‌ ಪೋರ್ಟಲ್‌ನಲ್ಲಿ ಕೃಷಿ ಇಲಾಖೆ ನಿವೃತ್ತ ಅಧಿಕಾರಿಗಳು ಹಾಗು ವಿಜ್ಞಾನಿಗಳು ಇದ್ದಾರೆ. ರೈತರು ಬಳಸುವ ಯಾವುದೇ ಉಪಕರಣಗಳು ಹಾಳಾದಲ್ಲಿ ಅದನ್ನು ಸರಿಪಡಿಸುವ ಬಗ್ಗೆಯೂ ಸ್ಥಳೀಯವಾಗಿ ಇರುವ ಸಂಸ್ಥೆಗಳ ಬಗ್ಗೆ ಮಾಹಿತಿ ನೀಡಲಾಗುವುದು.

ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ಮಾಹಿತಿ ಕೇಂದ್ರದಲ್ಲಿ ಕಾಲ್‌ಸೆಂಟರ್ ಇದೆ. ರೈತರು ಮಾಡುವ ಕರೆಗಳಿಗೆ ಸಿಬ್ಬಂದಿಗಳು ಇಲ್ಲಿಂದಲೇ ಉತ್ತರಿಸುತ್ತಾರೆ. ಭೂಮಿ ವೆಬ್‌ ಪೋರ್ಟಲ್‌ನಲ್ಲಿ 80 ಮಂದಿ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ರೈತರಿಗೆ ತರಕಾರಿಗಳನ್ನು ಇಡಲು ಅನುಕೂಲವಾಗುವ ಕೋಲ್ಡ್‌ ಸ್ಟೋರೇಜ್‌ಗಳನ್ನು ಪ್ರತಿ 300 ಕಿ.ಮೀಗೆ ಒಂದರಂತೆ ಪ್ರಾರಂಭಿಸುವ ಉದ್ದೇಶ ಇದೆ’ ಎನ್ನುತ್ತಾರೆ ರಘುನಂದನ್‌. ಟೋಲ್‌ ಫ್ರೀ ನಂಬರ್‌: 18001026360. ವೆಬ್‌ಸೈಟ್‌: www.bhoomee.co.in. ಮಾಹಿತಿಗೆ: 9845051385. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT