ADVERTISEMENT

ವೀಳ್ಯದೆಲೆ ವಿಸ್ತಾರದಲಿ ಹಬ್ಬಲು...

ಎಣಿಕೆ ಗಳಿಕೆ - 13

​ಪ್ರಜಾವಾಣಿ ವಾರ್ತೆ
Published 18 ಜುಲೈ 2016, 19:30 IST
Last Updated 18 ಜುಲೈ 2016, 19:30 IST
ವೀಳ್ಯದೆಲೆ
ವೀಳ್ಯದೆಲೆ   

ಸಾಮಾನ್ಯವಾಗಿ ಆಗಸ್ಟ್ ತಿಂಗಳಲ್ಲಿ ಮಣ್ಣಿನ ಏರಿ ಕಟ್ಟಿ ಒಂದೂವರೆ ಅಡಿ ಅಂತರದಲ್ಲಿ ವೀಳ್ಯದೆಲೆ ಬಳ್ಳಿಗಳನ್ನು ನಾಟಿ ಮಾಡಬೇಕು. ನಂತರ ಉತ್ತಮ ಮಣ್ಣು ಹಾಗೂ ಹಸಿರು ಸೊಪ್ಪನ್ನು ಬುಡಕ್ಕೆ ಹಾಕಿ ಬಳ್ಳಿ ಹಬ್ಬಲು ಆಧಾರ ಕೊಡಬೇಕು. ಬಳ್ಳಿಗಳು ಚಿಗುರಿ ಹಬ್ಬಲು ಪ್ರಾರಂಭವಾದ ಕೂಡಲೇ ಕೊಟ್ಟಿಗೆ ಗೊಬ್ಬರ ನೀಡಬೇಕು.


ವೀಳ್ಯದ ಸಸಿ ನೆಟ್ಟು ಒಂದು ಹಂತಕ್ಕೆ ಬಂದು ಎಲೆ ಬಿಡಲು ಸುಮಾರು 10 ರಿಂದ 15 ತಿಂಗಳ ಕಾಲ ಹಿಡಿಯುತ್ತದೆ. ಒಂದು ಸಲ ಎಲೆ ಬಿಡಲು ಪ್ರಾರಂಭಿಸಿದರೆ ಸುಮಾರು 40 ವರ್ಷಗಳ ತನಕ ಈ ಬೆಳೆ ಬೆಳೆಯಬಹುದಾಗಿದೆ.

ಮನೆ ಉಪಯೋಗಕ್ಕೆ ವೀಳ್ಯದ ಬಳ್ಳಿ ಬೆಳೆಸುವುದಾದರೆ  ಹೀಗೆ ಮಾಡಿ. ಯಾವುದಾದರೂ ಮರದ 3 ಅಡಿ ದೂರದಲ್ಲಿ ಗುಂಡಿ ತೋಡಿ. ಇದರಲ್ಲಿ 10 ಕೆ.ಜಿ. ಕೊಟ್ಟಿಗೆ ಗೊಬ್ಬರ ಮಿಶ್ರಣ ಮಾಡಿ. ಪಾಲಿಥೀನ್‌ ಚೀಲದಲ್ಲಿ ಬೆಳೆಸಿರುವ ಸಸಿ ನರ್ಸರಿಯಿಂದ ಕೊಂಡು ತಂದು (ಜುಲೈ ತಿಂಗಳಾದರೆ ಉತ್ತಮ) ನೆಟ್ಟು ಹದವಾಗಿ ನೀರು ಹಾಯಿಸಿ.

ಬಳ್ಳಿ ಬೆಳೆದಂತೆ ಒಂದು ಸಣ್ಣ ರೆಂಬೆ ನೆಟ್ಟು ಅದಕ್ಕೆ ಆಧಾರವಾಗಿರುವ ಮರಕ್ಕೆ ಏರಲು ಸಹಾಯ ಮಾಡಿ. ನಂತರ ಜಾರಿ ಬೀಳದಂತೆ ಬಳ್ಳಿಯನ್ನು ಮರಕ್ಕೆ ಸಡಿಲವಾಗಿ ಕಟ್ಟಿ ಬೆಳೆಸಿಕೊಳ್ಳಿ.

ADVERTISEMENT

ದೊಡ್ಡ ಪ್ರಮಾಣದಲ್ಲಿ ಬೆಳೆಯುವುದಾದರೆ ಹೀಗೆ ಮಾಡಿ: ಜಮೀನನ್ನು ಸಮತಟ್ಟಾಗಿ ಹದ ಮಾಡಿಕೊಳ್ಳಬೇಕು. ಕೊಟ್ಟಿಗೆ ಗೊಬ್ಬರ ಹಾಕಬೇಕು. ಬಳ್ಳಿಗೆ ಆಧಾರದ ಅವಶ್ಯಕತೆ ಇರುವ ಕಾರಣ, ಮೊದಲು ನುಗ್ಗೆ, ಚೂಗಚಿ, ಹಾಲಿವನ್‌ನಂತಹ ಕಡಿಮೆ ಬೇರುಗಳನ್ನು ಬಿಡುವ ಮರಗಳನ್ನು ಆಯ್ದು ಜಮೀನಿನಲ್ಲಿ ಮಡಿಗಳನ್ನು 20/4 ಅಡಿ ಅಳತೆಯಲ್ಲಿ ಮಾಡಿಕೊಂಡು 4/4  ಅಡಿ ಅಂತರದಲ್ಲಿ ಗಿಡಗಳನ್ನು ನಾಟಬೇಕು. ಈ ಗಿಡಗಳು ಒಂದು ಹಂತಕ್ಕೆ ದೊಡ್ಡದಾದ ನಂತರ ಎಲೆಬಳ್ಳಿ ನಾಟಬೇಕು.

ವೀಳ್ಯದೆಲೆಗೆ ಬೂದು ರೋಗ ಬರುವುದು ಸಾಮಾನ್ಯ. ಇದನ್ನು ತಡೆಯಲು 300 ಗ್ರಾಂ ವಾಯುವಿಳಂಗ ಬೀಜವನ್ನು ಉಗುರು ಬೆಚ್ಚನೆಯ ನೀರಲ್ಲಿ ತಾಮ್ರದ ಪಾತ್ರೆ (ಕಲಾಯಿ ಇಲ್ಲದ್ದು) ಯಲ್ಲಿ ಸಂಜೆ 7–8 ಗಂಟೆ ಸಮಯದಲ್ಲಿ ನೆನೆಸಿಡಿ. ಅದನ್ನು ರಾತ್ರಿಪೂರ್ತಿ ನೆನೆಯಲು ಬಿಡಿ.

ಬೆಳಿಗ್ಗೆ ನುಣ್ಣಗೆ ರುಬ್ಬಿಕೊಳ್ಳಿ. ಅದಕ್ಕೆ 8 ಲೀಟರ್ ಹಸುವಿನ ಹಾಲು ಕಾಯಿಸದೆ ಚೆನ್ನಾಗಿ ಬೆರೆಸಿ. ನಂತರ 200–250 ಲೀಟರ್ ನೀರಿನಲ್ಲಿ ಬೆರೆಸಿ ಪೂರ್ತಿ ಬಳ್ಳಿ – ಎಲೆ ನೆನೆಯುವಂತೆ ಸಿಂಪಡಿಸಿರಿ. ಇದು ಒಂದು ಎಕರೆ ತೋಟಕ್ಕೆ ಸಾಕು.

ಬಳ್ಳಿ ಹಬ್ಬಲು ಆಧಾರವಾಗಿ ಕೊಡುವ ಗೂಟಗಳು ಉತ್ತಮ ಜಾತಿಯ ಮರವಾಗಿದ್ದರೆ ಒಳ್ಳೆಯದು.  ಒಮ್ಮೆ ನಾಟಿ ಮಾಡಿದ ವೀಳ್ಯದ ಬಳ್ಳಿಗೆ ಸರಿಯಾದ ಆರೈಕೆ ಹಾಗೂ ಬಲವಾದ ಗೂಟದ ಆಧಾರ ಕೊಟ್ಟರೆ ಎಂಟರಿಂದ ಹತ್ತು ವರ್ಷ ಇಳುವರಿ ಪಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.