ADVERTISEMENT

ಹಸುವಿಗೂ ಮೆತ್ತನೆಯ ಸುಪ್ಪತ್ತಿಗೆ

ಡಾ.ನಾಗರಾಜ ಕೆ.ಎಂ
Published 28 ಮೇ 2012, 19:30 IST
Last Updated 28 ಮೇ 2012, 19:30 IST

ಅಧಿಕ ಪ್ರಮಾಣದಲ್ಲಿ ಹಾಲು ಕೊಡುವ ರಾಸುಗಳಿಗೆ ಕೊಟ್ಟಿಗೆಯ ನೆಲ ಸುಖಕರವಾಗಿರಬೇಕು. ಇಲ್ಲದಿದ್ದರೆ ಗೊರಸಿನ ಗಾಯ, ಕೀಲುಬಾವು, ಮಂಡಿನೋವು, ಕೆಚ್ಚಲುಬಾವು ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇದರಿಂದ ಹಾಲು ಉತ್ಪಾದನೆ ಕಡಿಮೆಯಾಗಿ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

ಸಾಮಾನ್ಯವಾಗಿ ಕೊಟ್ಟಿಗೆಯನ್ನು ಮಣ್ಣಿನ ನೆಲ, ಗೊಚ್ಚು, ಸಿಮೆಂಟ ಕಾಂಕ್ರೀಟ್, ಚಪ್ಪಡಿ ಕಲ್ಲುಗಳಿಂದ ನಿರ್ಮಿಸುವುದು ವಾಡಿಕೆ. ಮಲೆನಾಡಿನ ಕೆಲವು ಭಾಗಗಳಲ್ಲಿ ಮಣ್ಣಿನ ನೆಲದ ಮೇಲೆ ಸೊಪ್ಪು, ಕರಡ ಹಾಸುವ ರೂಢಿಯೂ ಇದೆ. ಈ ಎಲ್ಲ ಪದ್ಧತಿಗಳಲ್ಲಿಯೂ ಒಂದಿಲ್ಲೊಂದು ಅನಾನುಕೂಲ ಇದ್ದೇ ಇದೆ.

ಗುಂಡಿಗಳಾಗುವುದು, ಸದಾ ತೇವಾಂಶ ಇರುವುದರಿಂದ ಗೊರಸಿನ ತೊಂದರೆ, ನುಣುಪಾದ ಕೊಟ್ಟಿಗೆಯಲ್ಲಿ ಕಾಲು ಜಾರಿ ಸಂದು ತಪ್ಪುವುದು, ಗಾಯಗಳಾಗುವುದು, ಗಲೀಜಿನಿಂದ ಕೂಡಿದ ನೆಲವಾಗಿದ್ದರೆ ಆಗಾಗ ಕೆಚ್ಚಲು ಬಾವು ಸಾಮಾನ್ಯ.

ಒಟ್ಟಾರೆ ನೂರಕ್ಕೆ ಹದಿನೈದು ರಾಸುಗಳಲ್ಲಿ ಆರೋಗ್ಯ ಸಮಸ್ಯೆ ತಲೆದೋರಿ ಉತ್ಪಾದನೆ ಕಡಿಮೆಯಾಗುತ್ತದೆ. ಇದಕ್ಕೆ ಕೊಟ್ಟಿಗೆ ನೆಲ ತಯಾರಿಕೆಯ ದೋಷಗಳೇ ಕಾರಣ. ಹಾಗಾಗಿ ಮಿಶ್ರತಳಿ ಹಸು ಹಾಗೂ ಎಮ್ಮೆಗಳಿಗೆ ಉತ್ತಮ ನೆಲಹಾಸು ಅವಶ್ಯಕ.

ಸಿಮೆಂಟ್ ಅಥವಾ ಚಪ್ಪಡಿ ಕಲ್ಲುಗಳ ನೆಲಹಾಸಿನಲ್ಲಿ ರಾಸುಗಳಿಗೆ ಹಿಡಿತ (ಗ್ರಿಪ್) ಇಲ್ಲದಿರುವುದರಿಂದ ಮೇಲೇಳಲು ಕಷ್ಟಪಡುತ್ತವೆ. ಕಾಲು ಜಾರಿ ಸಂದು ತಪ್ಪುವುದೂ ಉಂಟು. ಗಟ್ಟಿ ನೆಲಹಾಸಿನ ನಿರಂತರ ಘರ್ಷಣೆಯಿಂದ ಮಂಡಿಚಿಪ್ಪಿನ ಕೂದಲು ಉದುರಿ ಗಾಯವಾಗುತ್ತದೆ.
 
ಮೊಲೆ ಗಾಯವಂತೂ ಸಾಮಾನ್ಯ. ಕೆಚ್ಚಲು ಸಗಣಿ-ಗಂಜಲ ಸಂಪರ್ಕಕ್ಕೆ ಬರುವುದರಿಂದ ಕೆಚ್ಚಲು ಬಾವು ಕಾಣಿಸಿಕೊಳ್ಳಬಹುದು. ದೊಡ್ಡ ಗಾತ್ರದ ಮಿಶ್ರತಳಿ ಹಸುಗಳು ಉತ್ತಮ ನೆಲಹಾಸು ಹಾಗೂ ವಿಶಾಲವಾದ ಸ್ಥಳಾವಕಾಶ ಬಯಸುತ್ತವೆ.

ಇದನ್ನೆಲ್ಲ ಗಮನಿಸಿಯೇ ಆವಿಷ್ಕಾರಗೊಂಡಿದೆ ಹಸು ಹಾಸಿಗೆ (ಕೌ ಮ್ಯೋಟ್). ವಿಶ್ವದಾದ್ಯಂತ ನಡೆದ ನಿರಂತರ ಸಂಶೋಧನೆಗಳ ಫಲವೇ ಈ ಕೌ ಮ್ಯೋಟ್. ರಾಸುಗಳಿಗೆ ಹಿತಕರ ಹಾಸಿಗೆಗಳ ತಂತ್ರಜ್ಞಾನ ದಶಕಗಳ ಹಿಂದೆಯೇ ಡೆನ್ಮಾರ್ಕ, ಅಮೇರಿಕ ಹಾಗೂ ಆಸ್ಟ್ರೇಲಿಯಾ ದೇಶಗಳಲ್ಲಿ ಆರಂಭವಾಗಿತ್ತು. ಇತ್ತೀಚೆಗೆ ಇದು ಭಾರತಕ್ಕೂ ಬಂದಿದ್ದು, ನಮ್ಮ ರಾಜ್ಯದ ಸುಧಾರಿತ ತಳಿಯ ರಾಸುಗಳ ಸಾಕಣೆದಾರರಲ್ಲಿ ಸಾಕಷ್ಟು ಜನಪ್ರಿಯವೂ ಆಗುತ್ತಿದೆ.

ಏನಿದು
ಮ್ಯಾಟ್‌ನಲ್ಲಿ ಉತ್ತಮ ದರ್ಜೆಯ ರಬ್ಬರ್ ಬಳಸಲಾಗುತ್ತದೆ. ಇಥಲೀನ್ ಅಸಿಟೇಟ (Ethylene Acetate), ಪಾಲಿಸ್ಟರ್ ಫ್ಯಾಬ್ರಿಕ್ (Polyester fabric), ಪಾಲಿಪ್ರೊಪೈಲೀನ್ (Pso¦twst¦ohqh), ಲ್ಯಾಟೆಕ್ಸ್ (Latex) ಹಾಗೂ ಇತರ ರಾಸಾಯನಿಕದಿಂದ ತಯಾರಿಸಿದ ಕೌ ಮ್ಯೋಟ್‌ನಲ್ಲಿ ಮೂರು ಪದರುಗಳಿವೆ.

ಮೊದಲ ಪದರ ದೀರ್ಘ ಬಾಳಿಕೆಗೆ ಸೂಕ್ತವಾಗುವಂತೆ ಗಟ್ಟಿಯಾಗಿ ಇದ್ದರೆ ಮಧ್ಯದ ಪದರ ಗಾಳಿ ಹಾಗೂ ಮೇಣದಂತಹ ಪದಾರ್ಥವಿರುವುದರಿಂದ ಮೃದುವಾಗಿಯೂ ಇರುತ್ತದೆ. ಕೆಳಪದರ ಸವಕಳಿ ತಡೆಯುವ ಗುಣ ಹೊಂದಿದೆ. ಹಳೆಯ ನಿರುಪಯುಕ್ತ ಕಾರ್ ಟೈರ್‌ಗಳನ್ನು ಪುನರ್ ಬಳಕೆ ಮಾಡಿ ಸಹ ಕೌ ಮ್ಯೋಟ್ ತಯಾರಿಸಬಹುದು ಎನ್ನುತ್ತಾರೆ ತಯಾರಕರು.

ಒಂದು ಹಸು ಅಥವಾ ಎಮ್ಮೆಗೆ ಬೇಕಾಗುವ 6 ರಿಂದ 6.5 ಅಡಿ ಉದ್ದ, 4 ಅಡಿ  ಅಗಲ ಹಾಗೂ 20-30 ಸೆಂಟಿ ಮೀಟರ್ ದಪ್ಪನೆಯ ಕೌ ಮ್ಯೋಟ್ ಮಾರುಕಟ್ಟೆಯಲ್ಲಿ ಸಿಗುತ್ತವೆ. ಹೆಚ್ಚು ಹಸುಗಳಿದ್ದರೆ ಕೊಟ್ಟಿಗೆ ಉದ್ದಗಲಕ್ಕೂ ಬಳಸಬಹುದಾದ ದೊಡ್ಡ ಅಳತೆಯ ಮ್ಯೋಟ್ ಸಹ ಲಭ್ಯ. ಅಧಿಕ ತೂಕದ ಹಾಗೂ ತುಂಬು ಗರ್ಭದ ರಾಸುಗಳಿಗೆಂದೇ ತಯಾರಿಸಿದ ಹೆಚ್ಚು ದಪ್ಪದ (ಐದು ಇಂಚು) ಸುಪ್ಪತ್ತಿಗೆ ಹಾಸಿಗೆಯೂ (ಇಟಡಿ ಞಠ್ಟಿಛಿ) ಉಂಟು.

ರಾಸುಗಳು ನಿಲ್ಲುವ ಜಾಗದಲ್ಲಿ ಕೌ ಮ್ಯೋಟ್ ಹಾಕಿ ಸರಿಯಾಗಿ ಜೋಡಿಸಲು ನಾಲ್ಕೂ ಅಂಚಿನಲ್ಲಿ ರಂಧ್ರಗಳಿವೆ. ನೆಲ ಸಮತಟ್ಟಾಗಿದ್ದರೆ ಮ್ಯೋಟ್ ಸರಿಯಾಗಿ ಕೂರುತ್ತದೆ. ಆಗಾಗ ಹೊರತೆಗೆದು ಸ್ವಚ್ಛಗೊಳಿಸುವ ಜಂಜಾಟವಿಲ್ಲ. ಉಬ್ಬುತಗ್ಗುಗಳಿದ್ದರೆ ಮ್ಯೋಟ್ ಕೆಳಗೆ ಸಗಣಿ-ಮೂತ್ರ ಸಂಗ್ರಹಣೆಯಾಗಿ ವಾಸನೆ (ಅಮೋನಿಯಾ) ಬರುತ್ತದೆ. ಆಗಾಗ ಹೊರತೆಗೆದು ಸ್ವಚ್ಛ ಮಾಡಲೇ ಬೇಕು.

ಕೌ ಮ್ಯೋಟ್‌ಗಳು 8-10 ವರ್ಷ ಬಾಳಿಕೆ ಬರುತ್ತವೆ. 35-45 ಕಿಲೊ ಭಾರವಿದ್ದು ಒಬ್ಬರೇ ಸುಲಭವಾಗಿ ಹಾಸಬಹುದು, ಹೊರತೆಗೆಯಬಹುದು. ಗಂಜಲ ಸರಾಗವಾಗಿ ಹರಿದು ಹೋಗುತ್ತದೆ. ಸಗಣಿಯನ್ನು ನೇರವಾಗಿ ಬಯೋಗ್ಯಾಸ ತೊಟ್ಟಿಗೆ ಸಾಗಿಸಬಹುದು. ಒಂದು ಹಾಸಿಗೆಯ ಬೆಲೆ  2500 ದಿಂದ 3500 ರೂಪಾಯಿ.   
                                     
ರೈತರ ಅನುಭವ
`ಮೊದಲು ಹಸುಗಳಿಗೆ ಕೊಟ್ಟಿಗೆ ತೊಂದರೆ ತುಂಬಾನೇ ಇತ್ತು, ಕೆಚ್ಚಲು ಬಾವು, ಮಂಡಿಬಾವಿನಿಂದ ಮಲಗ್ತಾನೇ ಇರಲಿಲ್ಲ. ಹಾಲೂ ಸರಿಯಾಗಿ ಕೊಡ್ತಿರಲಿಲ್ಲ. ಮ್ಯೋಟ್ ಹಾಕಿದ ಮ್ಯೋಲೆ ಏನೂ ತೊಂದ್ರೆ ಇಲ್ಲ~. ಇದು ಕೌ ಮ್ಯೋಟ್ ಬಳಸುತ್ತಿರುವ ಶಿವಮೊಗ್ಗ ತಾಲ್ಲೂಕು ಸೂಗೂರು ಗ್ರಾಮದ ಶಿವರಾಜಪ್ಪ ಹಾಗೂ ಬುಳ್ಳಾಪುರದ ಲೋಕೇಶಪ್ಪ ಅವರ ಅನುಭವದ ಮಾತು.

ಮಂಡ್ಯದ ರಘು ಅವರು ಐದು ವರ್ಷಗಳಿಂದ ಇಪ್ಪತ್ತು ಹಸುಗಳ ಡೇರಿ ನಡೆಸುತ್ತಿದ್ದಾರೆ. ಎರಡು ವರ್ಷಗಳಿಂದ ಕೊಟ್ಟಿಗೆಯಲ್ಲಿ ಒಂದಿಲ್ಲೊಂದು ಸಮಸ್ಯೆ. ಕಾಲು, ಗೊರಸುಗಳ ಗಾಯ, ಮೊಣಕಾಲು ಊತ, ಸಂದು (ಚೆಪ್ಪೆ) ಜಾರುವುದು, ಮೈಹಾಯುವುದು (ನೆನೆಬರುವುದು) ಇತ್ಯಾದಿ. ಇದರಿಂದ ಬೇಸತ್ತು ಡೇರಿ ಮುಚ್ಚಲು ತೀರ್ಮಾನಿಸಿದ್ದರು.

ಅದೇ ವೇಳೆ ಕೃಷಿಮೇಳದಲ್ಲಿ ಸಿಕ್ಕ ಮಾಹಿತಿಯಿಂದ ಕೊಟ್ಟಿಗೆಗೆ ಹಾಸಿಗೆ ಹಾಸಿದರು. ಮೂರೇ ತಿಂಗಳಲ್ಲಿ ಬಹುಪಾಲು ಸಮಸ್ಯೆಗಳು ಮಾಯ. ಹೊಸ ಉತ್ಸಾಹದಿಂದ ಮತ್ತೆ ಡೇರಿ ಉದ್ಯಮದ ಗಾತ್ರ ಹೆಚ್ಚಿಸಿದ್ದಾರೆ.       
                                                  
ಹಸು-ಹಾಸಿಗೆ (ಕೌ ಮ್ಯೋಟ್) ಬಗ್ಗೆ ಮಾಹಿತಿ ಬೇಕಾದರೆ 97409 19640, 99806 91219, 94491 88277 ಸಂಪರ್ಕಿಸಬಹುದು.

(ಲೇಖಕರು ಪಶು ವೈದ್ಯರು. ಮೊಬೈಲ್ 94481 65747)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.