ADVERTISEMENT

10 ಗುಂಟೆಯಲ್ಲಿ ತಳಿ ಕಬ್ಬು!

ಗಣಂಗೂರು ನಂಜೇಗೌಡ
Published 6 ಜುಲೈ 2015, 19:30 IST
Last Updated 6 ಜುಲೈ 2015, 19:30 IST

‘ರೈತರೇ ಮೊದಲ ಕೃಷಿ ವಿಜ್ಞಾನಿಗಳು’ ಎಂಬ ಮಾತಿಗೆ ಇಂಬು ನೀಡುವಂತೆ ರೈತರೊಬ್ಬರು ತಮ್ಮ 10 ಗುಂಟೆ ಜಮೀನಿನಲ್ಲಿ ವಿವಿಧ 10 ತಳಿಯ ಕಬ್ಬು ಬೆಳೆಯುತ್ತಿದ್ದಾರೆ. ಯಾವ ತಳಿಯ ಕಬ್ಬು ಹೆಚ್ಚು ಇಳುವರಿ ನೀಡುತ್ತದೆ ಎಂಬುದನ್ನು ಪ್ರಯೋಗಾತ್ಮಕವಾಗಿ ಕಂಡುಕೊಳ್ಳಲು ಶ್ರೀರಂಗಪಟ್ಟಣ ತಾಲ್ಲೂಕಿನ ದರಸಗುಪ್ಪೆ ಗ್ರಾಮದ ಪ್ರಗತಿಪರ ರೈತ ಪಿ. ಧನಂಜಯ ಬಹು ತಳಿಯ ಕಬ್ಬು ಬೆಳೆಯುತ್ತಿದ್ದಾರೆ.

ಒಂದೊಂದು ಗುಂಟೆಯಲ್ಲಿ ಒಂದೊಂದು ತಳಿಯ ಕಬ್ಬು ಬೆಳೆಯಲಾಗುತ್ತಿದೆ. ಕಳೆದ ಅಕ್ಟೋಬರ್‌ ತಿಂಗಳಿನಲ್ಲಿ  ಈ ಎಲ್ಲ ತಳಿಯ ಕಬ್ಬು ನಾಟಿ ಮಾಡಿದ್ದು, ಎರಡನೇ ಮುರಿ ಕೆಲಸ ಪೂರ್ಣಗೊಂಡಿದೆ.

ಧನಂಜಯ ಅವರು ತಮ್ಮ ಜಮೀನಿನಲ್ಲಿ ಸಿಒ–7125, ಸಿಒ– 86032, ಸಿಒ–419, ಸಿಒ–8371, ಸಿಒ–99463, ಸಿಒ– 62175, ಸಿಒಎಂ–265, ಸಿಒಎಸ್ಎನ್‌– 3632, ವಿಸಿಎಫ್‌– 517 ತಳಿಯ ಜತೆಗೆ ಮಹಾರಾಷ್ಟ್ರ ಮೂಲದ ‘ಅಂಗಾಂಶ’ ಕಬ್ಬನ್ನೂ ಬೆಳೆಯುತ್ತಿದ್ದಾರೆ. ಎಲ್ಲ ತಳಿಯ ಕಬ್ಬುಗಳೂ ಉತ್ತಮವಾಗಿ ಬೆಳೆದು ನಿಂತಿವೆ. ಜಿಲ್ಲೆಯ ವಿವಿಧೆಡೆ ರೈತರಿಂದ ಬಿತ್ತನೆ ಸಂಗ್ರಹಿಸಿ ತಂದು ನಾಟಿ ಮಾಡಲಾಗಿದೆ. ಎರಡು ಕಣ್ಣಿನ ಕಬ್ಬಿನ ತುಂಡನ್ನು ನೆಡಲಾಗಿದ್ದು, ಎಲ್ಲ ತಳಿಯ ಕಬ್ಬಿಗೂ ಒಂದೇ ರೀತಿ ಹಾರೈಕೆ ಮಾಡುತ್ತಿದ್ದಾರೆ.

ಕೊಟ್ಟಿಗೆ ಗೊಬ್ಬರ ಇತರ ಪೋಷಕಾಂಶಗಳನ್ನು ಪ್ರತಿ ತಳಿಗೂ ಸಮ ಪ್ರಮಾಣದಲ್ಲಿ ನೀಡಲಾಗುತ್ತಿದೆ. ಸೂಕ್ತ ತಳಿಯ ಆಯ್ಕೆಗಾಗಿ ಕಬ್ಬು ಬೆಳೆಯ ಪ್ರಯೋಗಕ್ಕೆ ಇಳಿದಿರುವ ಪಿ. ಧನಂಜಯ ಅವರ ತೋಟದಲ್ಲಿರುವ ಕಬ್ಬು ಬೆಳೆ ವೀಕ್ಷಿಸಲು ಸುತ್ತಮುತ್ತಲ ಗ್ರಾಮಗಳ ರೈತರು ಹಾಗೂ ಕೃಷಿ ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ. ತಳಿಗಳು ಹಾಗೂ ಅವುಗಳಿಂದ ಸಿಗುವ ಇಳುವರಿ ಪ್ರಮಾಣದ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

‘ಕಳೆದ 45 ವರ್ಷಗಳಿಂದ ಈ ಭಾಗದಲ್ಲಿ ಬೆಳೆಯುತ್ತಿರುವ ಸಿಒ–62175 ತಳಿಯ ಕಬ್ಬಿನ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಇಲ್ಲಿನ ಹವಾಗುಣಕ್ಕೆ ಯಾವ ತಳಿ ಸೂಕ್ತ ಎಂಬುದನ್ನು ಕಂಡುಕೊಳ್ಳಲು ಈ ಪ್ರಯೋಗ ಮಾಡುತ್ತಿದ್ದೇನೆ. ಮಂಡ್ಯದ ವಿ.ಸಿ. ಫಾರಂನ ಕೃಷಿ ಸಂಶೋಧನಾ ಕೇಂದ್ರ ಈಚೆಗೆ ಸಂಶೋಧಿಸಿರುವ ವಿಸಿಎಫ್‌– 517 ಎಂಬ ತಳಿ ಸೇರಿ ಹಳೇ ಮೈಸೂರು ಪ್ರದೇಶದಲ್ಲಿ ಸಿಗುವ ಎಲ್ಲ ತಳಿಗಳನ್ನೂ ಬೆಳೆಯಲಾಗುತ್ತಿದೆ.  4 ತಿಂಗಳ ಬಳಿಕ ಕಬ್ಬು ಕಟಾವು ಮಾಡಿ ಪ್ರತ್ಯೇಕವಾಗಿ ತೂಕ ಮಾಡಲಾಗುವುದು. ಕಬ್ಬು ಮತ್ತು ಸಕ್ಕರೆ ಇಳುವರಿಯಲ್ಲಿನ ವ್ಯತ್ಯಾಸ ಕಂಡು ಹಿಡಿಯುತ್ತೇನೆ. ಇದರಿಂದ ಯಾವ ತಳಿಯ ಕಬ್ಬು ರೈತರಿಗೆ ಲಾಭದಾಯಕ ಎಂಬುದು ತಿಳಿಯಲಿದೆ’ ಎಂಬುದು ರೈತ ಧನಂಜಯ ಅವರ ಮಾತು. ಸಂಪರ್ಕಕ್ಕೆ: 99646 36595. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.