ADVERTISEMENT

ಸಿದ್ಧಸಣ್ಣ ಬೆಳೆದು ಇದ್ದ ಸಾಲ ಕಳಕೋ!

ಜಿ.ಕೃಷ್ಣ ಪ್ರಸಾದ್
Published 4 ಡಿಸೆಂಬರ್ 2017, 19:30 IST
Last Updated 4 ಡಿಸೆಂಬರ್ 2017, 19:30 IST
ಹೇಗಿದೆ ನಮ್ಮ ಸಿದ್ಧಸಣ್ಣ?... ತಾವು ಬೆಳೆದ ಸಿದ್ಧಸಣ್ಣ ಭತ್ತದ ಪೈರಿನೊಂದಿಗೆ ಬೋರೇಗೌಡ– ಹೇಮಾವತಿ ದಂಪತಿ –ಚಿತ್ರಗಳು: ಲೇಖಕರವು
ಹೇಗಿದೆ ನಮ್ಮ ಸಿದ್ಧಸಣ್ಣ?... ತಾವು ಬೆಳೆದ ಸಿದ್ಧಸಣ್ಣ ಭತ್ತದ ಪೈರಿನೊಂದಿಗೆ ಬೋರೇಗೌಡ– ಹೇಮಾವತಿ ದಂಪತಿ –ಚಿತ್ರಗಳು: ಲೇಖಕರವು   

ಆಂಧ್ರದ ಗುಂಟೂರಿನ ಬೀಜಮೇಳದ ಅತಿಥಿಯಾಗಿ ವೇದಿಕೆ ಮೇಲಿದ್ದೆ. ರಾಸಾಯನಿಕ ಕೃಷಿಯಿಂದ ಬೇಸತ್ತು ಪರ್ಯಾಯಗಳನ್ನು ಹುಡುಕುತ್ತಿದ್ದ ಕೃಷ್ಣಾ-ಗೋದಾವರಿ ಬಯಲಿನ ನೂರಾರು ರೈತರು ಅಲ್ಲಿ ನೆರೆದಿದ್ದರು.

ಪೊಲೀಸರ ಸುಪರ್ದಿಯಲ್ಲಿ ದೇಸಿ ಭತ್ತದ ಬೀಜಗಳನ್ನು ಹಂಚಲು, ಸಂಘಟಕರು ಇನ್ನಿಲ್ಲದ ಪಡಿಪಾಟಲು ಬೀಳುತ್ತಿದ್ದರು. ಶಿವಪ್ರಸಾದ್ ರಾಜು ಎಂಬ ಯುವ ರೈತ ದೊಡ್ಡ ದನಿಯಲ್ಲಿ, ‘ಕಳೆದ ವರ್ಷ ಸಿದ್ಧಸಣ್ಣ ಭತ್ತ ಬೆಳೆದಿದ್ದೆ. ಯಾವ ಖರ್ಚೂ ಇಲ್ಲ. ಇಪ್ಪತ್ತೈದು ಮೂಟೆ ಬಂತು. ಸಿದ್ಧಸಣ್ಣ ಅಕ್ಕಿ ಮುಂದೆ ಸೋನಾ ಮಸೂರಿ ಏನೇನೂ ಅಲ್ಲ’ ಎಂದು ದೇಸಿ ಭತ್ತ ಬೆಳೆದ ತನ್ನ ಅನುಭವವನ್ನು ಹಂಚಿಕೊಂಡ.

ಅರೆ... ತೆಲುಗು ಭಾಷಿಕರ ಬಾಯಿಯಲ್ಲಿ ಕನ್ನಡ! ಕಿವಿಯರಳಿತು. ಮಾತು ಮುಗಿಸಿ ಬಂದ ಶಿವಪ್ರಸಾದ್ ಅವರನ್ನು ಮಾತಿಗೆಳೆದಾಗ ಗೊತ್ತಾಗಿದ್ದು ದೇಸಿ ಭತ್ತ ಹುಡುಕಿ ಮಂಡ್ಯಕ್ಕೆ ಬಂದಿದ್ದ ಅವರು ಬೋರೇಗೌಡರಿಂದ ಸಿದ್ಧಸಣ್ಣ ತಳಿಯ ಭತ್ತ ಕೊಂಡೊಯ್ದಿದ್ದರು.

ADVERTISEMENT

ಭತ್ತದ ಬೋರೇಗೌಡ: ಮಂಡ್ಯ-ಮೇಲುಕೋಟೆ ರಸ್ತೆಯ ಶಿವಳ್ಳಿ ಗ್ರಾಮದ ಬೋರೇಗೌಡರು ‘ಭತ್ತದ ಬೋರೇಗೌಡ’ ಎಂದೇ ಪ್ರಸಿದ್ಧ. ಕಳೆದ ಒಂದು ದಶಕದಿಂದ ದೇಸಿ ಭತ್ತದ ಸಂರಕ್ಷಣೆಯಲ್ಲಿ ಸಕ್ರಿಯರಾಗಿದ್ದಾರೆ.

2007ರಲ್ಲಿ ಒಡಿಶಾದ ನಟವರ ಸಾರಂಗಿಯವರ ಭತ್ತ ವೈವಿಧ್ಯ ಕ್ಷೇತ್ರ ನೋಡಿ ಬಂದು, 70 ತಳಿಯ ದೇಸಿ ಭತ್ತ ಬೀಜಗಳಲ್ಲಿ ತಮ್ಮ ಗದ್ದೆಯಲ್ಲಿ ಬೆಳೆದು ಮಂಡ್ಯ ಸೀಮೆಯಲ್ಲಿ ದೇಸಿ ಭತ್ತ ಸಂರಕ್ಷಣೆಗೆ ಅಡಿಪಾಯ ಹಾಕಿದ ಹೆಮ್ಮೆ ಇವರದು. ಇವರಿಂದ ಸ್ಫೂರ್ತಿಗೊಂಡ ನೂರಾರು ಕೃಷಿಕರು, ಅಧಿಕ ಇಳುವರಿ ತಳಿ ಬಿಟ್ಟುಕೊಟ್ಟು ದೇಸಿ ತಳಿಗಳ ಜಾಡು ತುಳಿದಿದ್ದಾರೆ.

ಸಹಜ ಸಮೃದ್ಧದ ಒಡನಾಟದಲ್ಲಿ ಭತ್ತದ ತಳಿಯ ಸಂರಕ್ಷಣೆಯ ಜಾಣ್ಮೆ ಕಲಿತ ಬೋರೇಗೌಡರು, ಲಿಂಗಮಾದಯ್ಯ, ಶಂಕರ ಗುರು ಮೊದಲಾದ ರೈತ ವಿಜ್ಞಾನಿಗಳ ಜೊತೆ ಬೆರೆತು ರೈತರ ತಳಿ ಅಭಿವೃದ್ಧಿಪಡಿಸುವ ಪಟ್ಟುಗಳನ್ನು ಕರಗತ ಮಾಡಿಕೊಂಡರು.

2008ರ ಕೊಯ್ಲಿನ ಸಂದರ್ಭದಲ್ಲಿ ಹೊಲದಲ್ಲಿ ಸುತ್ತಾಡುವಾಗ ಗಂಧಸಾಲೆ ಭತ್ತದ ಗದ್ದೆಯಲ್ಲಿ ವಿಶೇಷ ಪೈರೊಂದು ಗೌಡರ ಕಣ್ಣಿಗೆ ಬಿತ್ತು. ‘ಆ ಕಾಲಕ್ಕೆ ಸೋನಾ ಮಸೂರಿಗೆ ಸಮನಾಗ ಬಲ್ಲ ನಾಟಿ ತಳಿ ಇರಲಿಲ್ಲ. ಜನರು ಸಣ್ಣ ಅಕ್ಕಿ ಕೊಡಿ ಅಂತ ಕೇಳುತ್ತಿದ್ದರು.

ನಾನು ನೋಡಿದ ಭತ್ತದ ತೆನೆ ನೀಟಾಗಿ ಸಪೂರ ಇತ್ತು. ಕಾಳು ಚೆಂದಾಗಿ ಕಟ್ಟಿತ್ತು. ಅದಕ್ಕೆ ದಾರ ಕಟ್ಟಿ ಎತ್ತಿಟ್ಟೆ’ –ಗೌಡರು ಸಿದ್ಧಸಣ್ಣ ಮೊದಲು ಕಂಡ ದಿನದ ಮೆಲುಕು ಹಾಕುತ್ತಾರೆ.

ಸಿಕ್ಕ ಒಂದೇ ತೆನೆಯನ್ನು ಜೋಪಾನ ಮಾಡಿ, ಪ್ರತ್ಯೇಕವಾಗಿ ಎತ್ತಿಟ್ಟರು. 160 ಕಾಳು ಸಿಕ್ಕವು. ಮುಂದಿನ ಬೇಸಿಗೆಗೆ ಈ ಹೊಸ ತಳಿ ಬೀಜವನ್ನು ಮತ್ತೆ ಬಿತ್ತಿದರು. ಈ ಬಾರಿ ಬೊಗಸೆಯಷ್ಟು ಬೀಜ ಸಿಕ್ಕವು. ಮುಂದಿನ ನಾಲ್ಕು ವರ್ಷ ತಾಯಿ ಪೈರಿನ ಕಾಳುಗಳನ್ನು ಪ್ರತ್ಯೇಕಿಸುವುದು, ಉತ್ತಮ ಎನಿಸಿದ ತೆನೆಗಳನ್ನು ಆಯ್ದುಕೊಳ್ಳುವುದು- ಇದನ್ನೇ ಮಾಡುತ್ತ ಹೋದರು. 2012ರ ಹೊತ್ತಿಗೆ ಹೊಸ ಭತ್ತದ ತಳಿ ಎರಡು ಎಕರೆ ಹೊಲದಲ್ಲಿ ನೆಲೆಯೂರಿತ್ತು. ಆರೋಗ್ಯಪೂರ್ಣವಾಗಿ ನಳನಳಿಸುತ್ತಿತ್ತು. ‘ಯಾವ ಭತ್ತ ಗೌಡ್ರೇ ಇದು? ಏವನ್ ಆಗೈತೆ!’ ಎಂದು ನೋಡಿದವರು ಶಹಬ್ಬಾಸ್‌ಗಿರಿ ಕೊಟ್ಟರು.

ಸಿದ್ಧಸಣ್ಣ ನಾಮಕರಣ!: ತಾವು ಅಭಿವೃದ್ಧಿಪಡಿಸಿದ ಹೊಸ ತಳಿಗೆ ನಾಮಕರಣ ಮಾಡುವ ಸಂದರ್ಭವನ್ನು ಬೋರೇಗೌಡರು ಹೀಗೆ...

ನಪಿಸಿಕೊಳ್ಳುತ್ತಾರೆ: ‘ನಮ್ಮೂರಿನ ಪಕ್ಕವೇ ವಿ.ವಿ ಫಾರಂ ಇದೆ. ವಿಜ್ಞಾನಿಗಳು ತಾವು ಸಂಶೋಧಿಸಿದ ತಳಿಗಳಿಗೆ ನಂಬರ್ ಕೊಡ್ತಾರೆ. ನಂಬರ್‌ಗೆ ಜೀವ ಐತಾ? ನಾನು ನಮ್ಮ ತಳಿಗೆ ನಮ್ಮದೇ ಹೆಸರು ಕೊಡಬೇಕು ಅಂತ ಮಾಡ್ದೆ. ನಾಟಿ ಬೇಸಾಯದಲ್ಲಿ ಭತ್ತ ಬೆಳೆದಿದ್ದ ನಮ್ಮ ಅಪ್ಪ ಸಿದ್ಧೇಗೌಡ, ನಮ್ಮ ಅಮ್ಮ ಸಣ್ಣಮ್ಮ ಅವರ ನೆನಪಿಗೆ ಇಬ್ಬರ ಹೆಸರಿನ ಪದ ಬಳಸಿ ‘ಸಿದ್ಧಸಣ್ಣ’ ಅಂತ ನಾಮಕರಣ ಮಾಡಿದೆ. ತಂದೆ- ತಾಯಿ ಆಶೀರ್ವಾದದಿಂದ ಸಿಕ್ಕ ತಳಿ ಇದು’.

ಊರಾಚೆ ಹೊರಟ ಸಿದ್ಧಸಣ್ಣ: 2012ರ ಸುಗ್ಗಿಯ ಭತ್ತವನ್ನೆಲ್ಲ ಬೀಜಕ್ಕೆಂದು ಮುಡಿಪಾಗಿಟ್ಟ ಬೋರೇಗೌಡರು, ಕೇಳಿದವರಿಗೆಲ್ಲ ಬೀಜ ಹಂಚಲು ಶುರು ಮಾಡಿದರು. ಸುಭಾಷ ಪಾಳೇಕರರ ಕೃಷಿ ವಿಧಾನ ಜನಪ್ರಿಯವಾಗುತ್ತಿದ್ದ ದಿನಗಳವು. ಶೂನ್ಯಕೃಷಿಗೆ ಕಾಲಿಟ್ಟವರೆಲ್ಲ ಭತ್ತದ ಬೀಜ ಹುಡುಕಿ, ಬೋರೇಗೌಡರಲ್ಲಿ ಬರಲು ಶುರು ಮಾಡಿದ್ದರು. ರೈತರ ತಳಿಗಳನ್ನು ಜನಪ್ರಿಯಗೊಳಿಸುತ್ತಿದ್ದ ‘ಭತ್ತ ಉಳಿಸಿ ಆಂದೋಲನ’ ಸಿದ್ಧಸಣ್ಣ ಭತ್ತವನ್ನು ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಗೆ ಪರಿಚಯಿಸಿತು.

ಟಿ.ನರಸೀಪುರದ ಶ್ರೀನಿವಾಸ್, ಮಂಡ್ಯದ ಹೇಮಂತ್, ಮದ್ದೂರಿನ ಕೃಷ್ಣ, ಹರಿಹರದ ಆಂಜನೇಯ, ಕೊಳ್ಳೇಗಾಲದ ರೇಚಣ್ಣ, ಶಿವಮೊಗ್ಗದ ಜ್ಯೋತಿಪ್ರಕಾಶ್, ಶಿಕಾರಿಪುರದ ನಂದೀಶ್ ‘ಸಿದ್ಧಸಣ್ಣ’ದ ಕಾಯಂ ಬೆಳೆಗಾರರಾದರು. ಪ್ರತಿವರ್ಷ ಗುಣಮಟ್ಟದ ಬೀಜಗಳನ್ನು ಉತ್ಪಾದಿಸುವ ಇವರು, ನೂರು ಕ್ವಿಂಟಲ್‌ಗೂ ಅಧಿಕ ಪ್ರಮಾಣದ ಸಿದ್ಧಸಣ್ಣ ಬೀಜವನ್ನು ರೈತರಿಗೆ ವಿತರಿಸುತ್ತಿದ್ದಾರೆ. ಬೇಸಿಗೆ ಮತ್ತು ಮಳೆಗಾಲ- ಎರಡಕ್ಕೂ ಸೂಕ್ತವಾದ, ತಿನ್ನಲು ರುಚಿಕರವಾದ, ರೋಗರುಜಿನಗಳಿಂದ ಮುಕ್ತವಾದ ‘ಸಿದ್ಧಸಣ್ಣ’ ಬಹುಬೇಗ ರೈತರ ನಡುವೆ ಹರಡಿಹೋಯಿತು. ರೈತರಿಂದ ರೈತರಿಗೆ ಹಂಚಿಕೆಯಾಯಿತು.

‘ಅಕ್ಕಿಮೇಳ’ಗಳಲ್ಲಿ ‘ಸಿದ್ಧಸಣ್ಣ’ದ ಗುಣಮಟ್ಟಕ್ಕೆ ಗ್ರಾಹಕರು ಮನಸೋತ ಪರಿಣಾಮ, ಸಾವಯವ ಮಳಿಗೆಯವರು ಇದೇ ಅಕ್ಕಿಗೆ ಬೇಡಿಕೆ ಇಡತೊಡಗಿದರು. ವರ್ಷದಿಂದ ವರ್ಷಕ್ಕೆ ‘ಸಿದ್ಧಸಣ್ಣ’ ಬೆಳೆಯುವವರ ಸಂಖ್ಯೆ ವೃದ್ಧಿಸುತ್ತಾ ಹೋಯಿತು. ಈ ವರ್ಷ ಮಳೆ ವೈಪರೀತ್ಯದ ನಡುವೆಯೂ 500ಕ್ಕೂ ಹೆಚ್ಚು ರೈತರು ‘ಸಿದ್ಧಸಣ್ಣ’ ಬೆಳೆದಿದ್ದಾರೆ. ಒಡಿಶಾ, ಆಂಧ್ರ, ತೆಲಂಗಾಣಕ್ಕೂ ಬೀಜ ಹೋಗಿವೆ.

ಸಿದ್ಧಸಣ್ಣದ ವೈಶಿಷ್ಟ್ಯ: ರೈತ–ಗ್ರಾಹಕರ ನಡುವೆ ತುಂಬಾ ಜನಪ್ರಿಯವಾಗಲು ಸಿದ್ಧಸಣ್ಣದ ರೋಗ ನಿರೋಧಕ ಗುಣ ಮತ್ತು ಅಕ್ಕಿಯ ಗುಣಮಟ್ಟವೇ ಕಾರಣ. ಸಾವಯವದಲ್ಲಿ ಎಕರೆಗೆ 20 ಕ್ವಿಂಟಲ್‌ ಇಳುವರಿ ಈ ಭತ್ತದ ತಳಿಯ ವೈಶಿಷ್ಟ್ಯ. ನರ್ಸರಿ ಸೇರಿ 135 ದಿನಗಳಲ್ಲಿ ಕೊಯ್ಲಿಗೆ ಬರುತ್ತದೆ. ಎರಡು ಗಾಡಿಗೂ ಹೆಚ್ಚು ಹುಲ್ಲು ಸಿಗುತ್ತದೆ. ಒಂದು ಕ್ವಿಂಟಲ್‌ ಭತ್ತ ಮಿಲ್‌ ಮಾಡಿಸಿದರೆ 65 ಕೆ.ಜಿ. ಅಕ್ಕಿ ಸಿಗುತ್ತದೆ. ಇಷ್ಟೊಂದು ಪ್ರಮಾಣದ ಅಕ್ಕಿ ಬೇರೆ ತಳಿಯಲ್ಲಿ ಸಿಗುವುದು ಅಪರೂಪ ಎನ್ನುತ್ತಾರೆ ಶಿವಮೊಗ್ಗದ ಜ್ಯೋತಿಪ್ರಕಾಶ್‌.

ಟಿ.ನರಸೀಪುರದ ಸಿದ್ಧನಹುಂಡಿಯ ಶ್ರೀನಿವಾಸಮೂರ್ತಿ ‘ಸಿದ್ಧಸಣ್ಣ’ ಭತ್ತದ ಕಾಯಂ ಬೆಳೆಗಾರ. ಇವರು ಈ ಭತ್ತದ ಕೃಷಿಯ ಲಾಭಗಳನ್ನು ಹೀಗೆ ಪಟ್ಟಿ ಮಾಡುತ್ತಾರೆ: ಈ ವರ್ಷ ಸೈನಿಕ ಹುಳುವಿನ ಕಾಟ ವಿಪರೀತ. ನನ್ನ ಪಕ್ಕದ ಅಧಿಕ ಇಳುವರಿ ತಳಿಗಳ ಗದ್ದೆಯಲ್ಲಿ ಈ ಹುಳು ಹಾವಳಿಯಿಂದ ಅರ್ಧದಷ್ಟು ಇಳುವರಿ ಕಡಿಮೆಯಾಗಿದೆ. ನಮ್ಮ ‘ಸಿದ್ಧಸಣ್ಣ’ ತಳಿ ಕೀಟ ಮತ್ತು ರೋಗ ನಿರೋಧಕ. ಸೈನಿಕ ಹುಳುವಿನ ಬಾಧೆ ನಮಗೆ ತಟ್ಟಿಲ್ಲ. ಸಾಧಾರಣ ಎತ್ತರ ಬೆಳೆಯುತ್ತದೆ. ಬೀಳುವುದಿಲ್ಲ. ಹುಲ್ಲು ಕೂಡ ನೆಲಕ್ಕೆ ಬೀಳುವುದಿಲ್ಲ.

‘ಬೆಳಗಿನ ತಿಂಡಿಗೆ ‘ಸಿದ್ಧಸಣ್ಣ’ ತುಂಬಾ ಚೆನ್ನಾಗಿ ಹೊಂದುತ್ತೆ. ಪಲಾವ್, ಚಿತ್ರಾನ್ನ, ಪುಳಿಯೋಗರೆ, ವಾಂಗಿಬಾತ್‌ಗೆ ತುಂಬಾ ಚೆನ್ನಾಗಿರುತ್ತದೆ. ಮನೆಗೆ ಬಂದ ಸ್ನೇಹಿತರು- ಸಂಬಂಧಿಕರು ಇದು ಯಾವ ಅಕ್ಕಿ? ಎಷ್ಟೊಂದು ಚೆನ್ನಾಗಿದೆ ಅಂತ ಕೇಳಿ ಅಕ್ಕಿಯನ್ನು ಸ್ಯಾಂಪಲ್ ತಗೊಂಡು ಹೋಗ್ತಾರೆ’ – ಬೋರೇಗೌಡರ ಮಡದಿ ಹೇಮಾವತಿ ಹೆಮ್ಮೆಯಿಂದ ಹೇಳುತ್ತಾರೆ.

ಸಾವಯವ ಮಳಿಗೆಗಳಲ್ಲಿ ‘ಸಿದ್ಧಸಣ್ಣ’ ಅಕ್ಕಿಗೆ ಇನ್ನಿಲ್ಲದ ಬೇಡಿಕೆ ಇದೆ. ‘ಸೋನಾ ಮಸೂರಿಗೆ ಒಗ್ಗಿ ಹೋದವರಿಗೆ ಇದು ಒಳ್ಳೆಯ ಪರ್ಯಾಯ. ಅಕ್ಕಿಯ ಗುಣಮಟ್ಟ, ಒದಗುವಿಕೆ ಉತ್ತಮವಾಗಿದೆ. ಒಮ್ಮೆ ಬಳಸಿದವರು ಅದರ ಕಾಯಂ ಬಳಕೆದಾರರಾಗುತ್ತಾರೆ. ಕಳೆದ ವರ್ಷ ನಾವು 60 ಕ್ವಿಂಟಲ್ ಅಕ್ಕಿ ಮಾರಿದ್ದೇವೆ’ ಎನ್ನುತ್ತಾರೆ ಸಹಜ ಆರ್ಗಾನಿಕ್ಸ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಸೋಮೇಶ್.

ಜತೆಗೂಡಿದ ರೈತ ವಿಜ್ಞಾನಿಗಳು: ರೈತ ವಿಜ್ಞಾನಿ ಅಭಿವೃದ್ಧಿಪಡಿಸಿದ ‘ಸಿದ್ಧಸಣ್ಣ’ ತಳಿಯನ್ನು ಜನಪ್ರಿಯಗೊಳಿಸಲು ವಿಶ್ವವಿದ್ಯಾಲಯದ ವಿಜ್ಞಾನಿಗಳು ಕೈಜೋಡಿಸಿರುವುದು ಹೆಮ್ಮೆಯ ಸಂಗತಿ. ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಡಾ. ದೇವಕುಮಾರ್ ಆರಂಭದ ದಿನಗಳಲ್ಲಿ ತಳಿಯ ಗುಣವಿಶೇಷತೆಗಳನ್ನು ದಾಖಲಿಸಲು ನೆರವಾಗಿದ್ದರು. ವಿ.ಸಿ. ಫಾರಂನ ಹಿರಿಯ ವಿಜ್ಞಾನಿ ಡಾ. ರಾಜಣ್ಣ ಅವರು ‘ಸಿದ್ಧಸಣ್ಣ’ ಭತ್ತದ ಗುಣಮಟ್ಟದ ಬೀಜೋತ್ಪಾದನೆಗೆ ಅಗತ್ಯವಿರುವ ತಾಂತ್ರಿಕ ನೆರವು ನೀಡುತ್ತಿದ್ದಾರೆ.

ಶಿವಮೊಗ್ಗದ ಸಾವಯವ ಕೃಷಿ ಸಂಶೋಧನಾ ಕೇಂದ್ರವು ‘ಸಿದ್ಧಸಣ್ಣ’ ಭತ್ತದ ಬೀಜೋತ್ಪಾದನೆ ಮಾಡುತ್ತಿದೆ. ಕೇಂದ್ರದ ಮುಖ್ಯಸ್ಥ ಡಾ. ಎಸ್. ಪ್ರದೀಪ್ ‘ಸಿದ್ಧಸಣ್ಣ ಅರೆಮಲೆನಾಡಿಗೆ ಒಗ್ಗಿಕೊಳ್ಳುವ ಗುಣ ಹೊಂದಿದೆ. ನಮ್ಮ ಕೇಂದ್ರಕ್ಕೆ ಬರುವ ರೈತರು ಇದರ ಬೀಜಗಳಿಗೆ ಬೇಡಿಕೆ ಸಲ್ಲಿಸುತ್ತಿದ್ದಾರೆ’ ಎನ್ನುತ್ತಾರೆ.

ಮೈಸೂರಿನ ನಾಗೇನಹಳ್ಳಿಯ ಸಾವಯವ ಸಂಶೋಧನಾ ಕೇಂದ್ರದಲ್ಲೂ ಡಾ. ಗೋವಿಂದರಾಜು ಅವರ ಆರೈಕೆಯಲ್ಲಿ ಸಿದ್ಧಸಣ್ಣ ಬೆಳೆಯುತ್ತಿದೆ. ವಿಜ್ಞಾನಿಗಳ ಶಹಬ್ಬಾಸ್‌ಗಿರಿ ಪಡೆದ ಈ ತಳಿ ಬಿಡುಗಡೆಗೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗಮನಹರಿಸಬೇಕಿದೆ.

ಈ ವರ್ಷ ಕೆರೆಕಟ್ಟೆಗಳೆಲ್ಲ ತುಂಬಿ ರೈತರು ಬೇಸಿಗೆ ಭತ್ತ ಬೆಳೆಯುವ ಉಮೇದಿನಲ್ಲಿದ್ದಾರೆ. ರಾಸಾಯನಿಕ ಕೇಳದ, ರೋಗ- ಕೀಟಗಳ ಬಾಧೆ ಇಲ್ಲದ, ಉತ್ತಮ ಗುಣಮಟ್ಟದ ‘ಸಿದ್ಧಸಣ್ಣ’ ಬೆಳೆಯಲು ಸಾಕಷ್ಟು ಅವಕಾಶಗಳಿವೆ. ‘ಸಿದ್ಧಸಾಲೆ ಬೆಳೆದು ಇದ್ದ ಸಾಲ ಕಳಕೋ’ ಎಂಬ ಗಾದೆ ಮಾತು ಮಲೆನಾಡಿನಲ್ಲಿ ಚಾಲ್ತಿಯಲ್ಲಿದೆ. ಸಿದ್ಧಸಾಲೆ ಕಳೆದುಹೋಗಿ ದಶಕಗಳೇ ಆಗಿವೆ. ‘ಸಿದ್ಧಸಣ್ಣ ಬೆಳೆದು ಇದ್ದ ಸಾಲ ಕಳಕೋ’ ಎಂದು ಹೇಳುವ ದಿನಗಳು ಈಗ ಬಂದಿವೆ.

ಆಸಕ್ತರು ಮಾಹಿತಿಗೆ- ಬೋರೇಗೌಡ: 8904453841 ಬೀಜಕ್ಕೆ ‘ಸಹಜ ಸೀಡ್ಸ್’: 9535149520 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.