ADVERTISEMENT

ಅಭಯ ಹೇಳಿದ ಭವಿಷ್ಯ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 19:30 IST
Last Updated 9 ಸೆಪ್ಟೆಂಬರ್ 2017, 19:30 IST

ಒಂದು ಮಳೆಗಾಲ. ಮೈ ಕೈ ಮುದುಡಿದಂತೆ ಮನವೂ ಮುದುಡಿಕೊಂಡಿತ್ತು. ಮ್ಲಾನಗೊಂಡಿದ್ದ ಕಣ್ಣುಗಳಿಂದ ಕಣ್ಣೀರು ಉಕ್ಕಿ, ಉಕ್ಕಿ ಬರುತ್ತಿತ್ತು.

ಆಸ್ಪತ್ರೆಯ ಬಾಗಿಲಲ್ಲಿ ಕ್ಷಣಗಳನ್ನೆಣಿಸುತ್ತ ಕಾಯುತ್ತಿದ್ದೆ. ಗೆಳತಿ ರಾಜಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಳು. ಮನೆಯಲ್ಲಿ ಅಪ್ಪ, ಅಮ್ಮ ಅವಳ ಮದುವೆಗಾಗಿ ನೋಡಿದ ಸಂಬಂಧಗಳೆಲ್ಲ ಏನೋ ಒಂದು ಕಾರಣದಿಂದ ಮುರಿದು ಬೀಳುತ್ತಿದ್ದವು. ಈ ಬಾರಿಯಂತೂ ಲಗ್ನಪತ್ರಿಕೆಯ ಶಾಸ್ತ್ರ ಕೂಡ ಮುಗಿದಿತ್ತು. ಆದರೂ ಲಗ್ನ ಕೂಡಿಬಂದಿರಲಿಲ್ಲ. ಪಿಯುಸಿ ಓದಿ, ನೋಡಲು ಲಕ್ಷಣವಾಗಿದ್ದ ರಾಜಿಗೆ ಆಘಾತವಾಗಿತ್ತು. ಅವಳ ಮನ ಒಡೆದುಹೋಗಿತ್ತು. ತಾನು ಅಪ್ಪ, ಅಮ್ಮನಿಗೆ ಸಮಸ್ಯೆಯಾಗುತ್ತಿದ್ದೇನೆ ಎಂಬ ಭಾವ ಅವಳಲ್ಲಿ ಸುಳಿದುಹೋದಾಗ ‘ಟಿಕ್ ಟ್ವೆಂಟಿ’ ಎಂಬ ವಿಷವನ್ನು ಉದರಕ್ಕೆ ಸೇರಿಸಿ ಬದುಕಿಗೆ ವಿದಾಯ ಹೇಳಲು ಹೊರಟಿದ್ದಳು.

ಅವಳ ತಂದೆ ತಾಯಿಯ ಗೋಳು ನೋಡಲಾಗುತ್ತಿರಲಿಲ್ಲ. ಡಾಕ್ಟರುಗಳ ಸತತ ಪ್ರಯತ್ನದಿಂದ, ದೇವರ ದಯೆಯಿಂದ ಯಮನಪಾಶ ಬಿಡಿಸಿಕೊಂಡು ಬದುಕಿ ಬಂದಿದ್ದಳು ರಾಜಿ. ಮನೆಗೆ ಬಂದ ರಾಜಿ ಬದುಕಿನಲ್ಲಿ ಉತ್ಸಾಹ ಕಳೆದುಕೊಂಡಿದ್ದಳು. ತಾನೆಲ್ಲೋ, ತನ್ನ ಲೋಕವೆಲ್ಲೋ ಎಂಬಂತೆ ಒಂದೇ ಕಡೆ ಕುಳಿತಿರುತ್ತಿದ್ದಳು. ಯಾರ ಜೊತೆಯೂ ಮಾತಿಲ್ಲ, ಕಥೆಯಿಲ್ಲ. ಬಟ್ಟೆ, ಊಟ ಏನೊಂದರಲ್ಲೂ ಆಸಕ್ತಿಯಿಲ್ಲ.

ADVERTISEMENT

ನನ್ನ ಮದುವೆಯೇನೋ ಮುಂದಿನ ವರ್ಷ ಎಂದು ನಿಷ್ಕರ್ಶೆಯಾಗಿತ್ತು. ಆದರೆ ರಾಜಿಯನ್ನು ಈ ರೀತಿ ಬಿಟ್ಟುಹೋಗುವುದು ನನಗೆ ಸಮ್ಮತವಾಗಲಿಲ್ಲ.

ಇಲ್ಲ ರಾಜಿಯನ್ನು ಹೀಗೆ ಇರಲು ಬಿಡುವುದಿಲ್ಲ. ಹೇಗಾದರೂ ಮಾಡಿ ಮೊದಲಿನಂತೆ ಮಾಡಬೇಕು ಆಕೆಯನ್ನು ಎಂದು ನಿರ್ಧರಿಸಿದೆ. ಅವಳನ್ನು ಹೊರಗೆ ಕರೆದೊಯ್ಯಲು ಸತತ ಪ್ರಯತ್ನ ಮಾಡುತ್ತಿದ್ದೆ. ಮೊದಮೊದಲು ಮೊಂಡಾಟ ಮಾಡುತ್ತಿದ್ದರೂ ಆಕೆಯನ್ನು ಕ್ರಮೇಣ ನನ್ನ ಜೊತೆ ಹೊರ ಪ್ರಪಂಚಕ್ಕೆ ಕರೆತಂದು ಪಾರ್ಕು, ಶಾಪಿಂಗ್, ಸಿನಿಮಾ, ದೇವಸ್ಥಾನ ಎಂದು ಎಡಬಿಡದಂತೆ ಸುತ್ತಿಸುತ್ತಿದ್ದೆ. ಹೊರಗಿನ ಗಿಡ, ಮರ, ಪ್ರಕೃತಿಗೆ ತೆರೆದುಕೊಳ್ಳುತ್ತಿದ್ದ ಅವಳ ಮನಸ್ಸು ಮೆಲ್ಲಮೆಲ್ಲನೆ ಸಮಾಧಾನಗೊಳ್ಳತೊಡಗಿತು.

ಹಾಗೇ ಶಿಶಿರ ಋತುವಿನ ಮಂಜು ಕರಗುತ್ತಾ ಹೊಸ ವರ್ಷಕ್ಕೆ ನಾಂದಿ ಹಾಡತೊಡಗಿತು. ರಾಜಿಯೂ ಮೊದಲಿನಂತೆ ಬದಲಾಗತೊಡಗಿದಳು. ಉಡುಗೆ, ತೊಡುಗೆಯಲ್ಲಿ ಆಸಕ್ತಿ ತೋರತೊಡಗಿದಳು. ಹೋಟೆಲಿನ ತಿಂಡಿಗಳನ್ನು ಇಷ್ಟಪಟ್ಟು ತಿನ್ನುತ್ತಿದ್ದಳು. ಬದುಕಿನಲ್ಲಿ ಆತ್ಮವಿಶ್ವಾಸ ತೋರಿಸಹತ್ತಿದಳು. ನಾವು ಪ್ರತಿದಿನವೂ ತಿರುಗಾಡುತ್ತಿದ್ದ ಮಾರ್ಗದಲ್ಲಿ ಹಸ್ತ ಸಾಮುದ್ರಿಕೆ ಎಂಬ ಬೋರ್ಡನ್ನು ನೋಡುತ್ತಿದ್ದೆವು. ನೋಡೋಣವೆಂದು ಆ ದಿನ ಒಳಗೆ ಹೋದೆವು.

ಸಾತ್ವಿಕ ವಾತಾವರಣದಲ್ಲಿ ತ್ರಿಪುಂಡ್ರ ಧರಿಸಿ ಕಣ್ಣುಮುಚ್ಚಿ ಕುಳಿತಿದ್ದವರನ್ನು ಕಂಡು ನಮಸ್ಕರಿಸಿದೆವು. ಅವರು ಕಣ್ಣು ತೆರೆದು ರಾಜಿಯನ್ನೇ ನೋಡುತ್ತಾ, ‘ಮಗಳೇ, ನೀನು ಬಹಳ ನೊಂದಿರುವಂತಿದೆ. ನಿನ್ನ ಕೈ ತೋರಿಸು’ ಎಂದು ಅವಳ ಅಂಗೈ ಹಸ್ತದ ರೇಖೆಗಳನ್ನೇ ನೋಡುತ್ತ ‘ಮಗಳೆ, ಮುಂಬರುವ ಹೊಸ ವರ್ಷದಲ್ಲಿ ನಿನಗೆ ಒಳ್ಳೆಯ ವಿದ್ಯಾವಂತ ಗಂಡು ದೊರೆತು ನಿನ್ನ ಕಲ್ಯಾಣವಾಗುತ್ತದೆ’ ಎಂದರು. ನೂರು ರೂಪಾಯಿ ಕಾಣಿಕೆಯಿತ್ತು ಹೊರಗೆ ಬಂದೆವು.

ರಾಜಿಯಲ್ಲಿ ನೋಡನೋಡುತ್ತಿದ್ದಂತೆಯೇ ಲವಲವಿಕೆ ಮೂಡತೊಡಗಿತು. ಶ್ರದ್ಧೆಯಿಂದ ತನ್ನನ್ನು ಅಲಂಕರಿಸಿಕೊಳ್ಳುತ್ತಿದ್ದ ಅವಳಲ್ಲಿ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಒಮ್ಮೆ ಅಮ್ಮ, ಅಪ್ಪನ ಜೊತೆ ನೆಂಟರ ಮದುವೆಗೆಂದು ಹೋದ ರಾಜಿಗೆ ಲಗ್ನ ಕೂಡಿಬಂದಿತ್ತು! ಮದುವಣಗಿತ್ತಿಯ ಚಿಕ್ಕಮ್ಮನ ಮಗ ರಾಜಿಯನ್ನು ಇಷ್ಟಪಟ್ಟಿದ್ದ. ಸುಂದರನಾದ ವಿದ್ಯಾವಂತ ಹುಡುಗನೊಡನೆ ಹೊಸ ವರ್ಷದ ಹೊಸ್ತಿಲಲ್ಲಿ ರಾಜಿಯ ಮದುವೆ ನಡೆದಿತ್ತು. ಜಗತ್ತನ್ನೇ ಬಿಟ್ಟು ಹೊರಟಿದ್ದ ರಾಜಿಯ ಜೀವನ ಮತ್ತೆ ಅರಳಿ ರಾಜಿಗೀಗ ಮುದ್ದಾದ ಎರಡು ಮಕ್ಕಳು.

ಅಂದು ನುಡಿದಿದ್ದು ಹಸ್ತರೇಖೆಯ ನುಡಿಯಾದರೂ ಅದು ಅವಳನ್ನು ಭರವಸೆಯ ಕಡೆ ನಡೆಸಿತ್ತು. ಅವಳ ಬದುಕು ಮತ್ತೆ ಚಿಗುರೊಡೆಯಲು ಒಂದು ಒಳ್ಳೆಯ ಮಾತು ಬೊಗಸೆ ತುಂಬ ನೀರೆರೆದಿತ್ತು.

–ಎಸ್. ವಿಜಯಗುರುರಾಜ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.